ಮೈಸೂರು: ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನೋರ್ವ ಯುವತಿಯೋರ್ವಳನ್ನು ಪ್ರೀತಿಸಿ ನಿಶ್ಚಿತಾರ್ಥವನ್ನೂ ಅದ್ಧೂರಿಯಾಗಿ ಮಾಡಿಕೊಂಡ ಬಳಿಕ ಮದುವೆಗೆ ಒಲ್ಲೆ ಎಂದಿರುವ ಪ್ರಸಂಗ ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ.
ವಿವಾಹ ಬೇಡ ಎಂದಿದ್ದಲ್ಲದೆ, ಪ್ರೀತಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ ಘಟನೆಯೂ ನಡೆದಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನದ ಅನಿಲ್ (ಹೆಸರು ಬದಲಿಸಲಾಗಿದೆ) ಎಂಬಾತನೇ ಭಾರತೀಯ ಸೇನೆದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯುವಕನಾಗಿದ್ದು, ಈತ ಮೈಸೂರಿನ ಕೆ.ಬ್ಲಾಕ್ ನಿವಾಸಿಯಾದ ಯುವತಿಯೊಬ್ಬರನ್ನು ಪ್ರೀತಿಸಿದ್ದ.
ಇವರಿಬ್ಬರೂ ಕ್ರೀಡಾಪಟುಗಳಾಗಿದ್ದು ಕ್ರೀಡಾಕೂಟಗಳ ಸಂದರ್ಭದಲ್ಲಿ ಹೊರಗಡೆ ಭೇಟಿಯಾಗಿದ್ದಾಗ ಇವರಿಗೆ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಪ್ರೇಮಾಂಕುರವೂ ಆಗಿತ್ತು. ಬಳಿಕ ವಿವಾಹಕ್ಕೆ ತನ್ನ ಮನೆಯವರನ್ನೂ ಯುವಕ ಒಪ್ಪಿಸಿದ್ದ.
ಆದರೆ ಯುವಕನ ತಾಯಿ ಹುಡುಗಿ ಸರಕಾರಿ ಕೆಲಸದಲ್ಲಿಯೇ ಇರಬೇಕೆಂದು ಷರತ್ತು ವಿಧಿಸಿದ್ದರು ಎನ್ನಲಾಗಿದೆ. ಆದರೆ, ಆ ಯುವಕ ಆಕೆ ಸರಕಾರಿ ಕೆಲಸದಲ್ಲಿದ್ದಾಳೆ ಎಂದೇ ತನ್ನ ತಾಯಿಯನ್ನು ನಂಬಿಸಿದ್ದ. ಬಳಿಕ ಇಬ್ಬರ ಮನೆಯಲ್ಲೂ ಒಪ್ಪಿಗೆ ಪಡೆದು ಮೈಸೂರಿನ ಸುಮುಖ ಜಂಕ್ಷನ್ ಹಾಲ್ʼನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿಸಲಾಗಿತ್ತು.
ನಿಶ್ಚಿತಾರ್ಥದ ವೇಳೆ ವಿವಾಹಕ್ಕೆ ಹತ್ತು ಲಕ್ಷರೂ ಹಾಗೂ 500 ಗ್ರಾಂ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ವರದಕ್ಷಿಣೆಯಾಗಿ ನೀಡುವಂತೆ ಹುಡುಗನ ಕಡೆಯವರು ಬೇಡಿಕೆ ಇರಿಸಿದ್ದರು. ಹಾಸನದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ವಿವಾಹವನ್ನೂ ನಿಶ್ಚಿಸಲಾಗಿತ್ತು.
ನಿಶ್ಚಿತಾರ್ಥದ ಬಳಿಕ ಹುಡುಗಿಯ ಮನೆಯವರು ಹುಡುಗನ ಮನೆಯವರಿಗೆ ಮೂರು ಲಕ್ಷ ರೂ. ನೀಡಿದ್ದರು. ಇನ್ನೂ ಹೆಚ್ಚಿನ ಹಣಕ್ಕೆ ಹುಡುಗನ ಮನೆಯವರು ಬೇಡಿಕೆ ಇರಿಸಿದ್ದು, ಸದ್ಯಕ್ಕೆ ಇಲ್ಲ ಮತ್ತೆ ನೀಡುವುದಾಗಿ ಹುಡುಗಿಯ ಮನೆಯವರು ತಿಳಿಸಿದ ಕಾರಣ ಯುವತಿಯ ಮನೆಯರಿಗೆ ಅವಾಚ್ಯವಾಗಿ ಬೈದು, ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿದ್ದಾರೆ. ಈ ಕುರಿತು ಯುವತಿಯ ಮನೆಯವರು ಮೈಸೂರಿನ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯುವತಿಯ ಮನೆಯವರೂ ತಮಗೆ ಹಲ್ಲೆ ನಡೆಸಿದ್ದಾರೆಂದು ಯುವಕನ ಕಡೆಯವರೂ ಕೂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಸತ್ಯಾಸತ್ಯತೆಗಳನ್ನು ಪರಿಶೀಲಿಸಿದ ನಂತರ ಪೊಲೀಸರ ಮುಂದಿನ ನಡೆಯೇನು ಎಂಬುದು ತಿಳಿದು ಬರಬೇಕಿದೆ. ಎರಡೂ ಕಡೆಯವರ ದೂರುಗಳನ್ನು ಪೊಲೀಸರು ಸ್ವೀಕರಿಸಿ ತನಿಖೆ ಆರಂಭಿಸಿದ್ದಾರೆ.