ಜಾಲ ಪತ್ತೆ ಮಾಡಿದ ಕೃಷಿ ವಿಚಕ್ಷಣಾ ದಳ
ಬೆಂಗಳೂರು/ಬಳ್ಳಾರಿ: “ಧನಲಾಭ” ಹೆಸರಿನಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಜಾಲವನ್ನು ಕೃಷಿ ವಿಚಕ್ಷಣಾ ದಳ ಪತ್ತೆ ಮಾಡಿದೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ಕುಡಿತಿನಿ ರಸ್ತೆಯಲ್ಲಿ ಅನಧಿಕೃತವಾಗಿ ಲಾರಿಯಲ್ಲಿ ರಸಗೊಬ್ಬರವಲ್ಲದ ಪದಾರ್ಥವನ್ನು ರಸಗೊಬ್ಬರವೆಂದು ಮಾರಾಟ ಮಾಡುತ್ತಿದ್ದ “ಧನಲಾಭ” ಹೆಸರಿನ ನಕಲಿ ರಸಗೊಬ್ಬರವನ್ನು ಬಳ್ಳಾರಿ ಜಿಲ್ಲೆಯ ಕೃಷಿ ವಿಚಕ್ಷಣಾ ದಳ ಪತ್ತೆ ಮಾಡಿದೆ.
ಶಿವಯೋಗಿ ಅಗ್ರಿ ಸೈನ್ಸ್ ಪ್ರೈವೇಟ್ ಲಿಮಿಟೆಡ್ ವಿಜಯಪುರ ಎಂಬ ಹೆಸರಿನ ಕಂಪೆನಿಯು ತಯಾರಿಸಿದ “ಧನಲಾಭ” ಹೆಸರಿನ ರಸಗೊಬ್ಬರವಲ್ಲದ ಪದಾರ್ಥವನ್ನು ಹುಬ್ಬಳ್ಳಿಯ ಜೈ ಕಿಸಾನ್ ಗ್ರೀನ್ ಕೇರ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪೆನಿಯು ರಸ್ತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು ದಾಳಿ ನಡೆಸಿ, ಸುಮಾರು 91 ಸಾವಿರ ರೂ.ಮೌಲ್ಯದ 50 ಕೆ.ಜಿ.ಯಷ್ಟು 260 ಚೀಲ ನಕಲಿ ರಸಗೊಬ್ಬರ ಹಾಗೂ ನಕಲಿ ರಸಗೊಬ್ಬರ ಸಾಗಾಣಿಕೆಗೆ ಬಳಸಲ್ಪಡುತ್ತಿದ್ದ ಕೆ.ಎ.25 ಡಿ. 9873 ಸಂಖ್ಯೆಯ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಹೀಗೆ ನಕಲಿ ರಸಗೊಬ್ಬರ ತಯಾರಿಸುತ್ತಿದ್ದ ಹಾಗೂ ಮಾರಾಟ ಮಾಡುತ್ತಿದ್ದ ಕಂಪೆನಿಗಳ ಮೇಲೆ ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ರ್ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಕುರಗೊಡು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ದೇವರಾಜ, ಬಳ್ಳಾರಿ ಸಹಾಯಕ ಕೃಷಿ ನಿರ್ದೇಶಕ ಬಿ.ಆರ್.ಪಾಲಾಕ್ಷಿಗೌಡ, ಕೃಷಿ ವಿಚಕ್ಷಣಾ ದಳದ ನಾಗರಾಜ್, ಸಹಾಯಕ ಕೃಷಿ ನಿರ್ದೇಶಕ ಗವಿಸಿದ್ದಪ್ಪ ಸೇರಿದಂತೆ ಮತ್ತಿತ್ತರ ಅಧಿಕಾರಿಗಳು ಪಾಲ್ಗೊಂಡಿದ್ದರು.