ಖ್ಯಾತ ಭೂ ವಿಜ್ಞಾನಿ ಬಿಚ್ಚಟ್ಟ ಸ್ಫೋಟಕ ಸತ್ಯ
ನಂದಿಬೆಟ್ಟ/ಬೆಂಗಳೂರು: ವಿಶ್ವವಿಖ್ಯಾತ ಗಿರಿಧಾಮ ನಂದಿಬೆಟ್ಟದಲ್ಲಿ ಮಂಗಳವಾರ ರಾತ್ರಿ ಸಣ್ಣ ಪ್ರಮಾಣ ʼಮೇಘಸ್ಫೋಟʼ ಸಂಭವಿಸಿದೆ ಎಂದು ತಜ್ಞರು ಹೇಳಿದ್ದಾರೆ.
ವಿಚಿತ್ರವೆಂದರೆ, ನಂದಿಬೆಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮಳೆಮಾಪನ ಕೇಂದ್ರವನ್ನೇ ಹೊಂದಿಲ್ಲ! ಆದರೆ, ತಾಲೂಕಿನ ಶ್ರೀನಿವಾಸಸಾಗರ, ಮಂಡಿಕಲ್ಲು ಹಾಗೂ ಕಸಬಾದಲ್ಲಿ ಮಳೆಮಾಪನ ಕೇಂದ್ರಗಳಿದ್ದು, ಶ್ರೀನಿವಾಸಸಾಗರದಲ್ಲಿ 128 ಹಾಗೂ ಚಿಕ್ಕಬಳ್ಳಾಪುರ ಕಸಬಾದಲ್ಲಿ 108 ಮಿಲಿ ಮೀಟರ್ ಮಳೆ ಪ್ರಮಾಣ ದಾಖಲಾಗಿದೆ ಎಂದು ಚಿಕ್ಕಬಳ್ಳಾಪುರ ತಹಸೀಲ್ದಾರ್ ಗಣಪತಿ ಶಾಸ್ತ್ರಿ ಅವರು ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ಮಾಹಿತಿ ನೀಡಿದ್ದಾರೆ.
ಉಳಿದಂತೆ ಹವಾಮಾನ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳು ಇಷ್ಟು ಪ್ರಮಾಣದ ಮಳೆಯ ತೀವ್ರತೆ, ಸುರಿದ ಕಾಲಾವಧಿ ಇತ್ಯಾದಿ ಅಂಶಗಳ ಬಗ್ಗೆ ವ್ಯಾಪಕ ಪರಿಶೀಲನೆ ನಡೆಸಿದ್ದಾರೆ.
ಇನ್ನು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಗಿರುವ ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಸಣ್ಣ ಮೇಘಸ್ಫೋಟ ಆಗಿರುವ ಸಾಧ್ಯತೆ ಇದ್ದು, ಬೆಟ್ಟ ಕುಸಿದಿರುವ ತೀವ್ರತೆಯನ್ನು ಗಮನಿಸಿದರೆ ಅದೇ ನಿಜವೆನಿಸುತ್ತಿದೆ ಎಂದು ಖ್ಯಾತ ಭೂ ವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ವಿವರವಾಗಿ ಮಾತನಾಡಿದ್ದಾರೆ.
ನಂದಿಬೆಟ್ಟ ಹಾಗೂ ಭೂ ಕುಸಿತ ಉಂಟಾಗಿರುವ ಬ್ರಹ್ಮಗಿರಿ ಪ್ರದೇಶದಲ್ಲಿ ಸುಮಾರು 122-128 ಮಿಲಿ ಮೀಟರ್ (12-13 ಸೆ.ಮೀ) ಮಳೆಯಾಗಿರುವ ಅಂದಾಜಿದ್ದು, ಇದು ಮೇಘಸ್ಫೋಟಕ್ಕೆ ಸಮನಾದ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಡಾ.ವೆಂಕಟಸ್ವಾಮಿ ಅವರೇ ಹೇಳುವಂತೆ, “ಒಂದು ಗಂಟೆಯ ಅವಧಿಯಲ್ಲಿ 100 ಮಿಲಿ ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಮಳೆಯಾದರೆ ಅದನ್ನು ‘ಮೇಘಸ್ಫೋಟ’ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ, 10 ನಿಮಿಷದ ಅವಧಿಯಲ್ಲಿ 20 ಮಿಲಿ ಮೀಟರ್ (2 ಸೆ.ಮೀ.) ಮಳೆಯಾದರೂ ಅದನ್ನು ‘ಮೇಘಸ್ಫೋಟ’ ಎಂತಲೇ ಕರೆಯುತ್ತಾರೆ”.
ನಂದಿಬೆಟ್ಟದಲ್ಲಿ ಆಗಿದ್ದೇನು?
ನಂದಿಬೆಟ್ಟವು ರಾಜ್ಯದಲ್ಲಿಯೇ ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ. ಸಹಜವಾಗಿಯೇ ಅಲ್ಲಿನ ಪಂಚಗಿರಿಗಳ ಸಾಲಿನಲ್ಲಿ ಈ ವರ್ಷ ವಾರ್ಷಿಕ ಪ್ರಮಾಣಕ್ಕಿಂತ ಅಧಿಕ ಮಳೆಯಾಗುತ್ತಿದೆ. ಜಾಗತಿಕ ಹವಾಮಾನದ ವೈಪರೀತ್ಯದ ಕಾರಣದಿಂದ ಮಳೆಯ ವರ್ತನೆ ಹಾಗೂ ಸುರಿಯುವಿಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗುತ್ತಿದ್ದು, ಇಂಥ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ವೆಂಕಟಸ್ವಾಮಿ ಅವರು ಹೇಳುತ್ತಾರೆ.
ಮುಂದುವರಿದು ಡಾ.ವೆಂಕಟಸ್ವಾಮಿ ಅವರು ಹೇಳಿದ್ದಿಷ್ಟು;
- ಮೋಡಗಳು ಚಲಿಸುವಾಗ ಸಹಜವಾಗಿಯೇ ಎತ್ತರದಲ್ಲಿರುವ ನಂದಿಬೆಟ್ಟದ ಕಣಿವೆಗಳನ್ನು ತಲುಪುತ್ತಿದ್ದಂತೆ ಪಂಚಗಿರಿಗಳ ಸಾಲು ಅಡ್ಡ ಬರುತ್ತದೆ. ಆ ಬೆಟ್ಟಗಳನ್ನು ಸಮೀಪಿಸಿದಂತೆಲ್ಲ ತಂಪಾದ ಮೋಡಗಳಲ್ಲಿ ಭಾರೀ ಒತ್ತಡ ಕಾಣಿಸಿಕೊಳ್ಳುತ್ತದೆ. ಕಾರಣ, ನೆಲದ ಮೇಲ್ಮೈಯಿಂದ ತೀವ್ರವಾಗಿ ಬೀಸುವ ಉಷ್ಣಗಾಳಿಯೂ ಆ ಮೋಡಗಳ ಕೆಳಗೆ ತೂರಿದಾಗ ತಣ್ಣನೆ ಮೋಡಗಳು ಉಷ್ಣಾಂಶದಿಂದ ಮಿಶ್ರಣಗೊಂಡು ಅವು ಪರಸ್ಪರ ಘರ್ಷಣೆಗೆ ಒಳಗಾಗಿ ʼಮೇಘಸ್ಫೋಟʼಗೊಂಡಿದೆ. ನಂದಿಬೆಟ್ಟ-ಬ್ರಹ್ಮಗಿರಿಯಲ್ಲಿ ಸುರಿದಿರುವ ಭಾರೀ ಮಳೆಗೆ ಇದೇ ಕಾರಣ.
- ಇನ್ನೊಂದು ಕಾರಣವನ್ನು ಉಲ್ಲೇಖಿಸುವುದಾದರೆ; ಪಂಚಗಿರಿಗಳು ಸಂಪೂರ್ಣವಾಗಿ ಗಟ್ಟಿಶಿಲೆಗಳಿಂದ ಕೂಡಿದ್ದು, ಇವುಗಳನ್ನು ʼಅಗ್ನಿಶಿಲೆʼ (ಗ್ರಾನೈಟ್ ಶಿಲೆ)ಗಳೆಂದು ಕರೆಯಲಾಗುತ್ತದೆ. ಮುಖ್ಯವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ʼಪೆನಿಸೂಲಾರ್ʼ ಅಥವಾ ʼಪರ್ಯಾ ದ್ವೀಪʼದ ಗಟ್ಟಿಶಿಲೆಗಳಿಂದ ರೂಪುಗೊಂಡಿವೆ.
- ಇನ್ನು, ನಂದಿಬೆಟ್ಟದ ಮೇಲೆ ನಿರಂತರವಾಗಿ ಹೆಚ್ಚು ಪ್ರಮಾಣದ ಮಳೆ ಸುರಿಯುವುದರಿಂದ ಈ ಶಿಲೆಗಳು ಕಾಲಾ ನಂತರದಲ್ಲಿ ಶಿಥಿಲೀಕರಣವಾಗುತ್ತಾ ಹೋಗುತ್ತಿವೆ. ಈ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ʼವೆದರಿಂಗ್ʼ ಎಂದು ಕರೆಯಲಾಗುತ್ತದೆ. ಹೀಗೆ ಶಿಥಿಲೀಕರಣಗೊಳ್ಳುವ ಶಿಲೆಗಳು ಮಣ್ಣಾಗಿ ರೂಪಾಂತರಗೊಂಡು ಬೆಟ್ಟದ ಇಳಿಜಾರು, ಹಳ್ಳಕೊಳ್ಳದ ಪ್ರದೇಶಗಳಲ್ಲಿ ಸಂಚಯನಗೊಳ್ಳುತ್ತವೆ. ಈ ಸಂಚಯನದಲ್ಲಿ ಕಲ್ಲು ಮಣ್ಣು- ಭಾರೀ ಗಾತ್ರದ ಕಲ್ಲು ಬಂಡೆಗಳು ಇರುತ್ತವೆ. ಯಾವಾಗ ಈ ರೀತಿ ಭಾರೀ ಮಳೆಯಾಗುತ್ತದೋ ಆಗ ಅಷ್ಟೇ ಪ್ರಮಾಣದ ನೀರು ಮಣ್ಣಿನೊಳಗೆ ಇಂಗಿ ಬಿರುಕುಗೊಂಡು ಏಕಾಎಕಿ ಆ ಪ್ರದೇಶ ಒತ್ತಡಕ್ಕೆ ಸಿಲುಕಿ ಕುಸಿತಕ್ಕೆ ಒಳಗಾಗುತ್ತದೆ. ನಂದಿಬೆಟ್ಟದಲ್ಲಿ ಇದೇ ಆಗಿದೆ.
- ವೈಜ್ಞಾನಿಕವಾಗಿ ಹೇಳುವುದಾದರೆ, ನಂದಿಬೆಟ್ಟದ ಸುತ್ತಮುತ್ತಲಿನ ಹತ್ತಾರು ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ನಡೆಯುತ್ತಿರುವ ಮಿತಿಮೀರಿದ ಮಾನವ ಚಟುವಟಿಕೆಗಳು ಈ ದುರಂತಕ್ಕೆ ಕಾರಣವೂ ಆಗಿವೆ. ಕಲ್ಲು ಗಣಿಗಾರಿಕೆ, ಬೋರ್‌ವೆಲ್ ಕೊರೆತ, ಅನಗತ್ಯ ಸ್ಫೋಟಕಗಳನ್ನು ಮಾಡುವುದು, ಬೃಹತ್ ಕಟ್ಟಡಗಳ ನಿರ್ಮಾಣ, ಪರಿಸರ ಮಾಲಿನ್ಯ, ಅರಣ್ಯ ನಾಶದಂಥ ಚಟುವಟಿಕೆಗಳಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಮಾನವಜನ್ಯ ಚಟುವಟಿಕೆಗಳೂ, ಇದಕ್ಕೆ ಪೂರಕವಾಗಿ ಜಾಗತಿಕ ತಾಪಮಾನವೂ ಹೆಚ್ಚುತ್ತಿರುವುದರಿಂದ ಹಿಮಾಲಯದಲ್ಲಿ ಕಂಡು ಬರುತ್ತಿದ್ದ ʼಮೇಘಸ್ಫೋಟʼಗಳು ಚಿಕ್ಕಬಳ್ಳಾಪುರದಂಥ ಬಯಲು ಪ್ರದೇಶದಲ್ಲೂ ಈಗ ಕಂಡು ಬರುತ್ತಿವೆ. ಇದು ದೊಡ್ಡ ಎಚ್ಚರಿಕೆಯ ಘಂಟೆ.
- ಮತ್ತೊಂದು ಅಂಶವೆಂದರೆ; ಒಂದು ಗಂಟೆ ಅವಧಿಯಲ್ಲಿ ಕೊನೆಪಕ್ಷ 25 ಮಿಲಿ ಮೀಟರ್ ಮಳೆಯಾದರೆ ಒಂದು ಚದರ ಕಿ.ಮೀ. ಪ್ರದೇಶದಲ್ಲಿ 25,000 ಮೆಟ್ರಿಕ್ ಟನ್ ಮಳೆ ಸುರಿಯುತ್ತದೆ. ಅಲ್ಲಿಗೆ ಭೂಮಿಯ ಮೇಲೆ ಅದೆಷ್ಟು ಒತ್ತಡ ಸೃಷ್ಟಿಯಾಗುತ್ತದೆ ಎಂಬುದನ್ನು ನಾವು ಅಂದಾಜು ಮಾಡಬಹುದು. ನಂದಿಬೆಟ್ಟದಲ್ಲೂ ಇಂಥದ್ದೇ ಒತ್ತಡ ಆಗಿದೆ. ಈ ರಭಸದ ಮಳೆ ನೀರಿನ ಒತ್ತಡಕ್ಕೆ ಭಾರೀ ಕುಸಿತ ಉಂಟಾಗಿದೆ ಎಂದು ಡಾ.ವೆಂಕಟಸ್ವಾಮಿ ಅವರು ತಿಳಿಸಿದ್ದಾರೆ.
ಉಪಯುಕ್ತ ಮಾಹಿತಿ ನೀಡುವ ಉತ್ತಮ ವರದಿ. ಬೆಳಕು ಚೆಲ್ಲುವ ಪ್ರಯತ್ನಕ್ಕೆ ಬೆಂಬಲ.
ಧನ್ಯವಾದಗಳು.