ಗಿರಿಧಾಮಕ್ಕೆ ಸಂಪರ್ಕ ಸಂಪೂರ್ಣ ಬಂದ್: ರಸ್ತೆಗೆ ಅಡ್ಡಲಾಗಿ ಉರುಳಿದ ಕಲ್ಲು, ಮಣ್ಣು; ವಿದ್ಯುತ್ ಸಂಪರ್ಕ ಕಡಿತ, ಇಪ್ಪತ್ತು ದಿನ ಬೆಟ್ಟ ಬಂದ್!
by GS Bharath Gudibande
ಚಿಕ್ಕಬಳ್ಳಾಪುರ: ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಭೂ ಕುಸಿತ ಉಂಟಾಗಿ ಅಪಾರ ಆಸ್ತಿ ಹಾನಿ ಹಾಗೂ ಪ್ರಾಣ ನಷ್ಟವಾಗಿದ್ದ ಕರಾಳ ಘಟನೆಗಳನ್ನು ಮರೆಯುವ ಮುನ್ನವೇ ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಭಾರೀ ಭೂ ಕುಸಿತ ಉಂಟಾಗಿದೆ.
ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಭೂ ಕುಸಿತ ಉಂಟಾಗಿದ್ದು, ಬೆಟ್ಟದ ತಪ್ಪಲಿನಲ್ಲಿ ವಾಸ ಜನರು ತೀವ್ರ ಆತಂಕಕ್ಕೆ ಗುರಿಯಾಗಿದ್ದಾರೆ. ಅಪರೂಪದ ವನ್ಯ ಸಂಪತ್ತು ಹಾಗೂ ವಿಶಿಷ್ಟವಾದ ಜೀವ ವೈವಿಧ್ಯಕ್ಕೆ ಹೆಸರಾಗಿರುವ ಈ ಗಿರಿಧಾಮದ ಸುತ್ತ ಇತ್ತೀಚೆಗಿನ ದಿನಗಳಲ್ಲಿ ಭಾರೀ ಒತ್ತುವರಿ, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಭೂ ದಂಧೆ ಇತ್ಯಾದಿಗಳಿಗೆ ಈ ಭೂ ಕುಸಿತ ಸ್ಪಷ್ಟ ಸಾಕ್ಷ್ಯದಂತೆ ಇದೆ.
ಏಲ್ಲಿ ಆಗಿದೆ ಭೂ ಕುಸಿತ?
ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತವಾಗಿದ್ದು, 10 ಅಡಿಗೂ ಹೆಚ್ಚು ಆಳಕ್ಕೆ ಮುಖ್ಯರಸ್ತೆಯೇ ಕುಸಿದಿದೆ. ಇದರಿಂದಾಗಿ ನಂದಿಬೆಟ್ಟದ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ರಸ್ತೆಗೆ ಅಡ್ಡಲಾಗಿ ಬಂಡೆಗಳು ಉರುಳಿ ಬಂದು ಬಿದ್ದಿದ್ದು, ರಸ್ತೆ ಬಂದ್ ಆಗಿದ್ದರಿಂದ ನಂದಿಬೆಟ್ಟಕ್ಕೆ ಬಂದಿರುವ ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ.
ಮಂಗಳವಾರ ರಾತ್ರಿ ನಂದಿಬೆಟ್ಟದ ಮೇಲೆ ಭಾರೀ ಮಳೆಯಾಗಿದ್ದು, ಮೇಲ್ಭಾಗದಿಂದ ಮಣ್ಣು ಕೊಚ್ಚಿಕೊಂಡು ಬಂದಿದೆ. ರಭಸವಾಗಿ ಸುರಿದ ಮಳೆಯ ನೀರಿನ ಜೊತೆ ಮಣ್ಣು, ಬೃಹತ್ ಬಂಡೆ, ಮರ ಗಿಡಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ರಂಗಪ್ಪ ವೃತ್ತದ ಬಳಿ ಗುಡ್ಡ ಕುಸಿದಿದೆ. ಇನ್ನೂ ವಿದ್ಯುತ್ ಕಂಬಗಳು ಧರೆಗೆ ಉಳಿದಿರುವ ಕಾರಣ ನಂದಿ ಗಿರಿಧಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ನಂದಿಬೆಟ್ಟದ ಚೆಕ್ ಪೋಸ್ಟ್ʼನ ಸ್ವಲ್ಪ ದೂರದಲ್ಲೇ ರಸ್ತೆಗೆ ಅಡ್ಡಲಾಗಿ ಮಣ್ಣು ಶೇಖರಣೆಯಾಗಿದ್ದರಿಂದ, ಮೊದಲೇ ರೆಸಾರ್ಟ್ ಬುಕ್ ಮಾಡಿಕೊಂಡು ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಮೇಲ್ಭಾಗದಲ್ಲಿಯೇ ಸಿಲುಕಿಕೊಂಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದು, ಮಣ್ಣು ತೆರವು ಕೆಲಸದಲ್ಲಿ ನಿರತರಾಗಿದ್ದಾರೆ.
ನಂದಿ ಬೆಟ್ಟದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಭಾರೀ ಪ್ರಮಾಣದ ಭೂ ಕುಸಿತವಾಗಿದ್ದು, ಭೂ ಕುಸಿತದ ದೃಶ್ಯಗಳು ಜನರನ್ನು ತಲ್ಲಣಗೊಳಿಸಿವೆ. ಬೆಟ್ಟದ ಬುಡದಲ್ಲಿ ವಾಸ ಮಾಡುತ್ತಿರುವ ಸ್ಥಳೀಯರಂತೂ ಆತಂಕಕ್ಕೀಡಾಗಿದ್ದಾರೆ. ಇದೇ ವೇಳೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೆರವು ಕಾರ್ಯಾಚರಣೆ
ಇದೇ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರಸ್ತೆಯಿಂದ ಮಣ್ಣು, ಬಂಡೆಗಳನ್ನು ತೆರವು ಕಾರ್ಯಾಚರಣೆ ಶುರು ಮಾಡಿದ್ದು, ಈ ಕಾರ್ಯಾಚರಣೆ ಮುಗಿಯಲು ಕೊನೆಯ ಪಕ್ಷ ಎರಡು ವಾರವಾದರೂ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಿರಿಧಾಮವನ್ನು ಇಪ್ಪತ್ತು ದಿನಗಳ ಕಾಲ ಪ್ರವಾಸಿಗರಿಗೆ ಮುಚ್ಚುವ ಸಾಧ್ಯತೆ ಇದ್ದು, ಮಳೆಗಾಲದಲ್ಲಿ ನಂದಿಬೆಟ್ಟದ ಪ್ರಾಕೃತಿಕ ಸೊಬಗು ಸವಿಯಬೇಕೆಂದಿದ್ದ ಜನರಿಗೆ ನಿರಾಶೆಯಾಗಿದೆ.