ಚಿನ್ನ ಗೆದ್ದುಬಂದು ಗುರುವಿನ ಆಶೀರ್ವಾದ ಪಡೆದ ನೀರಜ್ ಚೋಪ್ರ
ಪುಣೆ: ಟೊಕಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದ ನಮ್ಮ ಹೆಮ್ಮೆಯ ಯೋಧ ನೀರಜ್ ಚೋಪ್ರ ಅವರು, ಬುಧವಾರ ತಮ್ಮ ಮೊದಲ ಗುರು ಕಾಶೀನಾಥ್ ಅವರನ್ನು ಅರಸಿ ಬಂದಿದ್ದರು.
ಪುಣೆಯಲ್ಲಿನ ಅವರ ನಿವಾಸಕ್ಕೆ ಬಂದ ನೀರಜ್ ಬಹಳ ಹೊತ್ತು ಗುರು ಮನೆಯಲ್ಲಿದ್ದರಲ್ಲದೆ, ಕುಟುಂಬ ಸದಸ್ಯರ ಜತೆ ಕಾಲ ಕಳೆದರು.
ನೀರಜ್ ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಅದುವರೆಗೆ ಅಜ್ಞಾತದಲ್ಲಿದ್ದ ಕೋಚ್ ಕಾಶಿನಾಥರನ್ನು ಮಾಧ್ಯಮಗಳು ಪತ್ತೆ ಹಚ್ಚಿದ್ದವು. ತಮ್ಮ ಪಾಡಿಗೆ ತಾವಿದ್ದ ಕಾಶಿನಾಥರು ಮಾಧ್ಯಮಗಳಿಂದ ದೂರವೇ ಇದ್ದರು. ಆದರೆ, ಶಿಷ್ಯ ನೀರಜ್ ಮಾತ್ರ ಗುರುವನ್ನು ಮರೆಯದೇ ಹುಡುಕಿಕೊಂಡು ಬಂದು ಗುರು ನಮನ ಸಲ್ಲಿಸಿದ್ದಾರೆ.
ನೀರಜ್ ಸರಳತೆ, ಗುರು ಪ್ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಅವರು ಮತ್ತು ಕಾಶೀನಾಥ್ ಅವರ ಜತೆಯಲ್ಲಿರುವ ಫೊಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ಗುರುವಲ್ಲ ಎಂದವರಿಗೆ ಉತ್ತರ ಕೊಟ್ಟ ನೀರಜ್
ಕಾಶೀನಾಥ್ ಅವರು ನೀರಜ್ ಗುರುವಲ್ಲ, ಚಿನ್ನದ ಹುಡುಗನಿಗೆ ಅವರು ಕೋಚಿಂಗ್ ಕೊಟ್ಟಿಲ್ಲ ಎಂದು ಹುಯಿಲೆಬ್ಬಿಸಿ ಅಪಪ್ರಚಾರ ನಡೆಸಿದ್ದವರಿಗೆ ಸ್ವತಃ ನೀರಜ್ ಉತ್ತರ ಕೊಟ್ಟಿದ್ದಾರೆ. ಅಲ್ಲದೆ, ಕರ್ನಾಟಕ ಸರಕಾರವು ಕಾಶೀನಾಥ್ ಅವರಿಗೆ ಹತ್ತು ಲಕ್ಷ ಬಹುಮಾನ ಘೋಷಣೆ ಮಾಡಿದ್ದನ್ನೂ ಕೆಲವರು ಟೀಕಿಸಿದ್ದರು.
ಅದರಲ್ಲೂ ಕಾಶಿನಾಥ್ ಅವರು ನೀರಜ್ ಕೋಚ್ ಅಲ್ಲವೇ ಅಲ್ಲ ಎಂದು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ನೀಡಿದ್ದ ಹೇಳಿಕೆ ಬಹಳ ಟೀಕೆಗೆ ಗುರಿಯಾಗಿತ್ತು. ಈಗ ಎಲ್ಲ ಟೀಕೆ ಟಿಪ್ಪಣಿಗಳಿಗೆ ತೆರೆ ಬಿದ್ದಿದೆ.
ಅಂದ ಹಾಗೆ, ಕಾಶೀನಾಥ್ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರು.
- ನೀರಜ್ ಚೋಪ್ರ ಕುರಿತ ಈ ಲೇಖನ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..