ಜಲ ವಿಜ್ಞಾನದ ಮರು ಅಧ್ಯಯನಕ್ಕೆ ಹೆಚ್.ಡಿ.ಕುಮಾರಸ್ವಾಮಿ & ಹೆಚ್.ಡಿ.ದೇವೇಗೌಡರು ಕೇಂದ್ರವನ್ನು ಒತ್ತಾಯಿಸಲಿ ಎಂದು ಆಗ್ರಹಿಸಿದ ಆರ್.ಆಂಜನೇಯ ರೆಡ್ಡಿ
ಬೆಂಗಳೂರು: ಬರಪೀಡಿತ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಎತ್ತಿನಹೊಳೆ ಯೋಜನೆಯ ಭೈರಗೊಂಡ್ಲು ಜಲಾಶಯದ ಬಗ್ಗೆ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದ ಬಗ್ಗೆ ಎರಡೂ ಜಿಲ್ಲೆಗಳಲ್ಲಿ ಈಗ ವ್ಯಾಪಕ ಚರ್ಚೆ ಆಗುತ್ತಿದೆ.
ಯೋಜನೆಯ ಕಾಮಗಾರಿ ತೆವಳುತ್ತಾ ಸಾಗುತ್ತಿದ್ದು, ಮತ್ತೊಮ್ಮೆ ಹೊಸ ಸಮಗ್ರ ಯೋಜನಾ ವರದಿ (ಡಿಪಿಆರ್) ಮಾಡಿಕೊಂಡು ಯೋಜನಾ ವೆಚ್ಚವನ್ನು 23,000 ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ಹಾಗೂ ಈ ಯೋಜನೆಗೆ ರಾಷ್ಟ್ರೀಯ ಯೋಜನಾ ಸ್ಥಾನಮಾನಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕಿ ಮತ್ತಷ್ಟು ಹಣವನ್ನು ಕೊಳ್ಳೆ ಹೊಡೆಯುವ ಹುನ್ನಾರವನ್ನು ಸಿಕೆನ್ಯೂಸ್ ನೌ ಬಯಲಿಗೆಳೆದ ಬೆನ್ನಲ್ಲಿಯೇ ಸಿಎಂಗೆ ಪತ್ರ ಬರೆದಿದ್ದಾರೆ ಕುಮಾರಸ್ವಾಮಿ.
ಅವರು, ಯೋಜನೆಯ ವಿಳಂಬ ಅಥವಾ ಭೈರಗೊಂಡ್ಲು ಜಲಾಶಯದ ಬಗ್ಗೆ ಪ್ರಸ್ತಾಪ ಮಾಡುವುದೇನೋ ಸರಿ. ಆದರೆ, ನೀರೇ ಇಲ್ಲದ ಕಾಗದದ ಮೇಲಿನ ಹುಲಿಯಂತಾಗಿರುವ ಈ ಯೋಜನೆಯ ʼಜಲ ವಿಜ್ಞಾನʼದ (ಹೈಡ್ರಾಲಜಿ) ಮರು ಅಧ್ಯಯನಕ್ಕೆ ಕೇಂದ್ರದ ಸರಕಾರದ ಮೇಲೆ ಒತ್ತಡ ಹೇರಬೇಕು. ಈ ನಿಟ್ಟಿನಲ್ಲಿ ಅವರು ತಮ್ಮ ತಂದೆಯೂ ಆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜತೆಗೂಡಿ ದನಿ ಎತ್ತಲಿ ಎಂಬ ಒತ್ತಾಯ ಎರಡೂ ಜಿಲ್ಲೆಗಳಲ್ಲಿ ಕೇಳಿಬಂದಿದೆ.
ಎಚ್ಡಿಕೆ ಬರೆದ ಪತ್ರದಲ್ಲೇನಿದೆ?
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದೇವರಾಯನದುರ್ಗದ ಬಳಿಯ ಭೈರಗೊಂಡ್ಲುವಿನಲ್ಲಿ ನಿರ್ಮಾಣ ಮಾಡಲಾಗುತ್ತಿರುವ 5.78 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದ ಬಗ್ಗೆ ಪತ್ರದಲ್ಲಿ ಕುಮಾರಸ್ವಾಮಿ ಗಂಭೀರ ಪ್ರಶ್ನೆ ಎತ್ತಿದ್ದಾರೆ.
ಮೊದಲು ಇಲ್ಲಿ 10 ಟಿಎಂಸಿ ಕೆಪಾಸಿಟಿಯ ಜಲಾಶಯ ನಿರ್ಮಾಣ ಮಾಡುವ ಉದ್ದೇಶವಿತ್ತು ಸರಕಾರಕ್ಕೆ. ಆದರೆ, ಅರಣ್ಯ ಹಾಗೂ ವನ್ಯ ಸಂಪತ್ತು ಮುಳುಗಡೆಯಾಗುತ್ತದೆ ಎಂಬ ಕಾರಣಕ್ಕೆ ನೀರಿನ ಸಂಗ್ರಹ ಪ್ರಮಾಣವನ್ನು 10ರಿಂದ 5.78 ಟಿಎಂಸಿಗೆ ಕುಗ್ಗಿಸಿ ಸರಕಾರ ಅನಮೋದನೆ ನೀಡಿತ್ತು. ಈಗ ನೋಡಿದರೆ, ಭೂ ಸ್ವಾಧೀನಕ್ಕೆ ಕಷ್ಟವಾಗುತ್ತಿದೆ ಎಂಬ ನೆಪವೊಡ್ಡಿ ನೀರಿನ ಸಂಗ್ರಹ ಪ್ರಮಾಣವನ್ನು ಕೇವಲ 2 ಟಿಎಂಸಿಗೆ ಇಳಿಸುವ ಹುನ್ನಾರವನ್ನು ವಿಶ್ವೇಶ್ವರಯ್ಯ ಜಲ ನಿಗಮ ನಡೆಸುತ್ತಿದೆ ಎಂಬ ಅಂಶವನ್ನು ಕುಮಾರಸ್ವಾಮಿ ಅವರು ಪ್ರಸ್ತಾಪ ಮಾಡಿದ್ದಾರಲ್ಲದೆ, ಕೂಡಲೇ ಈ ಕ್ರಮವನ್ನು ಕೈಬಿಡಬೇಕು ಎಂದು ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.
ಪತ್ರದ ಬಗ್ಗೆ ಹೋರಾಟಗಾರರು ಹೇಳುವುದೇನು?
ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗೆ ಬರೆದ ಪತ್ರವಾಗಲಿ ಅಥವಾ ಅದರಲ್ಲಿ ಪ್ರಸ್ತಾಪ ಮಾಡಿದ ಅಂಶಗಳ ಬಗ್ಗೆ ಆಗಲಿ ನಮ್ಮ ತಕರಾರಿಲ್ಲ ಎಂದಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, “ಕುಮಾರಸ್ವಾಮಿ ಅವರು ಯೋಜನೆಯ ಇತರೆ ಅಂಶಗಳ ಬಗ್ಗೆ ದನಿ ಎತ್ತುವುದಕ್ಕಿಂತ ಎತ್ತಿನಹೊಳೆ ಯೋಜನೆಯಿಂದ ನಿಜವಾಗಿಯೂ ನೀರು ಸಿಗುತ್ತದಾ? ಸರಕಾರ ಮತ್ತು ಗುತ್ತಿಗೆದಾರರು ಹೇಳುವಷ್ಟು ನೀರು ಅಲ್ಲಿ ಲಭ್ಯವಾಗುತ್ತದಾ? ಎಂದು ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಪ್ರಶ್ನೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಎತ್ತಿನಹೊಳೆ ಯೋಜನೆಯ ಬಗ್ಗೆ 2012ರಲ್ಲೇ ಕೇಂದ್ರಿಯ ಜಲ ಆಯೋಗ (Central Water Commission-CWC) ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ದಿನಾಂಕ 9-5-2012ರಂದು ರಾಜ್ಯ ಸರಕಾರಕ್ಕೆ ಮಹತ್ತ್ವದ ಪತ್ರ ಬರೆದು ಕಠಿಣ ಎಚ್ಚರಿಕೆ ನೀಡಿತ್ತು.
“ಯೋಜನೆಯಲ್ಲಿ ಅನೇಕ ಲೋಪದೋಷಗಳಿದ್ದು, ಪ್ರತಿಕೂಲಕರ ಫಲಿತಾಂಶ ಕಟ್ಟಿಟ್ಟ ಬುತ್ತಿ. ಕನಿಷ್ಠ ಒಂದು ಮಳೆ ವರ್ಷದಲ್ಲಾದರೂ ಯೋಜನಾ ಪ್ರದೇಶದ ಮಳೆಯ ಪ್ರಮಾಣದ ಅಧ್ಯಯನ, ಮಳೆ ನೀರಿನ ಇಳುವರಿ, ಸಂಗ್ರಹಗಾರಗಳ ಸಾಮರ್ಥ್ಯ, ಪಶ್ಚಿಮ ಇಳಿಜಾರಿನಿಂದ ಪೂರ್ವಕ್ಕೆ ಸಾಗಿಸಬಹುದಾದ ನೀರಿನ ಪ್ರಮಾಣದ ನಿಖರ ಅಧ್ಯಯನ ಮಾಡದೇ ಯೋಜನೆಯನ್ನು ಜಾರಿಗೆ ತರುವುದು ಸೂಕ್ತವಲ್ಲ. ಯೋಜನೆ ಹಾಗೂ ಯೋಜನೆಯ ಸಮಗ್ರ ಜಲವಿಜ್ಞಾನ (Hydrology)ದ ಮರು ಅಧ್ಯಯನ ಮಾಡಲೇಬೇಕು” ಎಂಬ ಅಂಶಗಳನ್ನು ಆ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿತ್ತು. ಜತೆಗೆ, ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ (NIH) ಕೂಡ ಕೆಲ ಆಕ್ಷೇಪಗಳನ್ನು ಎತ್ತಿತ್ತು ಎಂಬ ಅಂಶವನ್ನು ರೆಡ್ಡಿ ಅವರು ಎಚ್‌ಡಿಕೆಗೆ ನೆನಪು ಮಾಡಿದ್ದಾರೆ.
ಕೇಂದ್ರಿಯ ಜಲ ಆಯೋಗ ನೀರಿನ ಲಭ್ಯತೆಯ ಬಗ್ಗೆಯೇ ಎತ್ತಿದ್ದ ಪ್ರಶ್ನೆಯನ್ನು ಅಲಕ್ಷಿಸಿ ಈಗಾಗಲೇ ಎರಡು ಸಲ ಡಿಪಿಆರ್ ಮಾಡಿಕೊಂಡ ಯೋಜನೆಯೊಳಗಿನ ಒಳಸುಳಿಗಳ ಬಗ್ಗೆ ಹೆಚ್‌ಡಿಕೆ ಮಾತನಾಡಬೇಕು ಎಂದು ಒತ್ತಾಯ ಮಾಡಿದ ಆಂಜನೇಯ ರೆಡ್ಡಿ, ಅತಿ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿಯಾದ ನೀವು ಹಾಗೂ ಮಾಜಿ ಪ್ರಧಾನಿಯೂ ಆಗಿರುವ ನಿಮ್ಮ ತಂದೆಯವರಾದ ಹೆಚ್.ಡಿ.ದೇವೇಗೌಡರು ಕೇಂದ್ರ ಸರಕಾರಕ್ಕೆ ಪತ್ರ ಬರೆದು ಅಥವಾ ವಿಧಾನಸಭೆ, ಸಂಸತ್ತಿನಲ್ಲಿ ಇಡೀ ಯೋಜನೆಯ ʼಜಲ ವಿಜ್ಞಾನʼದ ಸಮಗ್ರ ಮರು ಅಧ್ಯಯನಕ್ಕೆ ಒತ್ತಾಯ ಮಾಬೇಕು ಎಂದು ಆಗ್ರಹಪಡಿಸಿದ್ದಾರೆ.
ಬರಪೀಡಿತ ಜಿಲ್ಲೆಗಳ ಪರವಾಗಿ ನೀವಿಬ್ಬರೂ ದನಿಯೆತ್ತಿದರೆ ನ್ಯಾಯ ಸಿಗುವ ಸಾಧ್ಯತೆ ಇದೆ. ಏಕೆಂದರೆ, ಎತ್ತಿನಹೊಳೆ ಕಾಂಗ್ರೆಸ್ & ಬಿಜೆಪಿ ಸರಕಾರಗಳ ಪಾಪದ ಕೂಸು. ನಿಮ್ಮ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಲ್ಲಾದರೂ ಈ ಯೋಜನೆ ಒಳಸುಳಿಗಳ ಬಗ್ಗೆ ನೀವು ಕ್ರಮ ವಹಿಸುವ ನಿರೀಕ್ಷೆ ನಮಗಿತ್ತು. ಆದರೆ, ನೀವು ಕೂಡ ಅಲಕ್ಷ್ಯ ಮಾಡಿದಿರಿ. ಈಗ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದರೆ ಉಪಯೋಗ ಇಲ್ಲ. ಇಡೀ ಯೋಜನೆಯಲ್ಲಿ ಲಭ್ಯವಾಗುವ ನೀರಿನ ಬಗ್ಗೆ ಖಾತರಿ ಮಾಡಿಕೊಳ್ಳಿ. ಈ ಬಗ್ಗೆ ಕೇಂದ್ರಿಯ ಜಲ ಆಯೋಗದಿಂದ ಜಲ ವಿಜ್ಞಾನದ ಮರು ಅಧ್ಯಯನ ಮಾಡಿಸಲು ನಿಮ್ಮ ತಂದೆಯವರ ಜತೆ ಸೇರಿ ನೀವೂ ಒತ್ತಾಯ ಮಾಡಿ. ಸದನದ ಹೊರಗೆ ಮತ್ತು ಒಳಗೆ ದನಿ ಎತ್ತಿ.
ಆರ್.ಆಂಜನೇಯ ರೆಡ್ಡಿ, ಅಧ್ಯಕ್ಷ, ಶಾಶ್ವತ ನೀರಾವರಿ ಹೋರಾಟ ಸಮಿತಿ
ಗುತ್ತಿಗೆದಾರರು ಹಾಗೂ ಸರಕಾರ ಹೇಳಿದಷ್ಟು ನೀರು ಎತ್ತಿಹೊಳೆ ಯೋಜನೆಯಿಂದ ಸಿಗುವುದಿಲ್ಲ ಎಂಬುದು ಈಗಾಗಲೇ ಅನೇಕ ವೈಜ್ಞಾನಿಕ ಅಧ್ಯಯನಗಳು ಹಾಗೂ ವೈಜ್ಞಾನಿಕ ಸಂಸ್ಥೆಗಳ ಪರಿಶೋಧನೆಯಿಂದ ಸ್ಪಷ್ಟವಾಗಿ ಗೊತ್ತಾಗಿದೆ. ಆದರೆ, ಈ ವೈಜ್ಞಾನಿಕ ಅಭಿಪ್ರಾಯವನ್ನು ಸರಕಾರವು ಗುತ್ತಿಗೆದಾರರ ಮರ್ಜಿಗೆ ಒಳಪಟ್ಟು ಅಲಕ್ಷ್ಯ ಮಾಡುತ್ತಿದೆ. ಗುತ್ತಿಗೆದಾರರ ಧನದಾಹ, ರಾಜಕಾರಣಿಗಳು ಮತ್ತು ಅಧಿಕಾರಶಾಹಿಯ ಭ್ರಷ್ಟಾಚಾರದಿಂದ ಈ ಯೋಜನೆ ಹಳ್ಳ ಹಿಡಿಯುತ್ತಿದೆ. ಈಗಲಾದರೂ ರಾಜಕೀಯವನ್ನು ಬದಿಗಿಟ್ಟು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಎರಡೂ ಜಿಲ್ಲೆಗಳ ಜನರ ಬಗ್ಗೆ ಬದ್ಧತೆ ಇದ್ದರೆ ʼಜಲ ವಿಜ್ಞಾನʼದ ಮರು ಅಧ್ಯಯನದ ಬಗ್ಗೆ ಒತ್ತಾಯಿಸಲಿ. ಆ ಮೂಲಕ ಎತ್ತಿನಹೊಳೆ ಬಗ್ಗೆ ಭರವಸೆ ಕಳೆದುಕೊಂಡಿರುವ ಜಿಲ್ಲೆಗಳಿಗೆ ಅನ್ಯಾಯವಾಗುವುದನ್ನು ತಪ್ಪಿಸಲಿ ಎಂದು ಆಂಜನೇಯ ರೆಡ್ಡಿ ಒತ್ತಾಯ ಮಾಡಿದ್ದಾರೆ.
ಎತ್ತಿನಹೊಳೆ ಯೋಜನೆ ಶುರುವಾಗಿ ಇಷ್ಟು ವರ್ಷಗಳಾದರೂ ಯೋಜನೆಯ ಫಲದ ಬಗ್ಗೆ ಜನರಿಗೆ ನಂಬಿಕೆ ಬಂದಿಲ್ಲ. ಕೇಂದ್ರ ಸರಕಾರದ ಪ್ರತಿಷ್ಟಿತ ಕೇಂದ್ರಿಯ ಜಲ ಆಯೋಗದ ವರದಿಯನ್ನೇ ಕಸದ ಬುಟ್ಟಿಗೆ ಹಾಕಿ ಕೇವಲ ಖಾಸಗಿ ಏಜೆನ್ಸಿಗಳ ವರದಿ, ಗುತ್ತಿಗೆದಾರರ ಮೇಲೆ ರಾಜ್ಯದ ಅವಲಂಬನೆಯಾಗಿದ್ದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿರುವ ರೆಡ್ಡ ಅವರು, ಈಗಲಾದರೂ ಆಯೋಗದಿಂದ ಯೋಜನೆಯ ಆತ್ಮವಾದ ಹೈಡ್ರಾಲಜಿ ಅಧ್ಯಯನ ಮಾಡಿಸಿ ಬರಪೀಡಿತ ಜಿಲ್ಲೆಗಳಿಗೆ ಆಗುವ ಮಹಾಮೋಸವನ್ನು ತಪ್ಪಿಸಲು ಶ್ರಮಿಸಬೇಕು ಎಂದು ಕುಮಾರಸ್ವಾಮಿ ಅವರನ್ನು ಒತ್ತಾಯ ಮಾಡಿದ್ದಾರೆ.
ಯಡಿಯೂರಪ್ಪ ಸಂಶಯಾಸ್ಪದ ಹೆಜ್ಜೆ
ಎತ್ತಿನಹೊಳೆ ಯೋಜನೆಯನ್ನು ವೇದಾವತಿ ವ್ಯಾಲಿಗೆ ತಿರುಗಿಸಲು ಇದೇ ಸಭೆಯಲ್ಲಿ ಯಡಿಯೂರಪ್ಪ ಸೂಚಿಸಿದ್ದರು!!
ಮುಖ್ಯಮಂತ್ರಿಯಾಗಿ ಜಲ ಸಂಪನ್ಮೂಲ ಖಾತೆಯನ್ನೂ ತಮ್ಮ ಬಳಿಯೇ ಇಟ್ಟುಕೊಂಡಿದ್ದ ಯಡಿಯೂರಪ್ಪ ಅವರು ಅಧಿಕಾರದಿಂದ ನಿರ್ಗಮಿಸುವುದಕ್ಕೆ ಕೆಲ ದಿನಗಳ ಹಿಂದೆ ಸಮಗ್ರ ಯೋಜನಾ ವರದಿಯಲ್ಲೇ ಇಲ್ಲದ ವೇದಾವತಿ ವ್ಯಾಲಿಗೆ ಎತ್ತಿಹೊಳೆಯನ್ನು ತಿರುಗಿಸಬೇಕು ಎಂದು ಅಧಿಕಾರಿಗಳಿಗೆ ಡೆಡ್‌ಲೈನ್ ಹಾಕಿದ್ದರು. ಲಭ್ಯವಿರುವ ಮಾಹಿತಿ ಪ್ರಕಾರ ಅವರು 1,500 ಕೋಟಿ ರೂ. ಬಿಡುಗಡೆ ಮಾಡಿ ಹೋಗಿದ್ದಾರೆ ಎಂಬ ಅನುಮಾನವಿದೆ. ಈ ಬಗ್ಗೆಯೇ ಬಹಿರಂಗವಾಗಿ ಕುಮಾರಸ್ವಾಮಿ ಮಾತನಾಡಬೇಕು ಎಂಬುದು ಆಂಜನೇಯ ರೆಡ್ಡಿ ಆಗ್ರಹ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ವೇದಾವತಿ ವ್ಯಾಲಿಯ ಪ್ರಸ್ತಾಪ ಇಡೀ ಎತ್ತಿನಹೊಳೆ ಯೋಜನೆ ಸಾಚಾತನದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದೆ. ಕೇವಲ ಚಿಕ್ಕಬಳ್ಳಾಪುರ, ಕೋಲಾರದ ಜನರ ಕುಡಿಯುವ ನೀರಿನ ಉದ್ದೇಶಕ್ಕಾಗಿ ರೂಪುಗೊಂಡ ಈ ಯೋಜನೆ ಕ್ರಮೇಣ ಅನೇಕ ಅಡ್ಡದಾರಿಗಳತ್ತ ಹೊರಳುತ್ತಿದೆ. ನೀರಿನ ಲಭ್ಯತೆಯೇ ಇಲ್ಲದ, ಕೇಂದ್ರಿಯ ಜಲ ಆಯೋಗ ಒಪ್ಪಿಕೊಳ್ಳದ ಈ ಯೋಜನೆಗೆ ಸಾವಿರಾರು ಕೋಟಿ ರೂ. ಹಣ ಸುರಿದು, ಅಂತಿಮವಾಗಿ ನಿಗದಿತ ಭಾಗಕ್ಕೆ ನೀರನ್ನೇ ಕೊಡದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆಯ ವೇದಾವತಿ ವ್ಯಾಲಿಯಲ್ಲಿ ಯೋಜನೆಯನ್ನು ಸಮಾಧಿ ಮಾಡಲು ಹುನ್ನಾರ ನಡೆದಿದೆ ಎಂದು ಆಂಜನೇಯ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ವತಃ ನೀರಾವರಿ ವಿಚಾರಗಳಲ್ಲಿ ನೈಪುಣ್ಯತೆ ಹೊಂದಿದವರಾಗಿದ್ದು, ಅವರು ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಪ್ರದಾನಿ ಮೇಲೆ ಒತ್ತಡ ತರಬೇಕು ಹಾಗೂ ಸಂಸತ್ತಿನಲ್ಲೂ ದನಿ ಎತ್ತಬೇಕು ಎಂದು ಅವರ ಒತ್ತಾಯವಾಗಿದೆ.