ನಮ್ಮ ಆಯ್ಕೆಗಳು ಮುಕ್ತವಾಗಿವೆ; ಯಾವ ಸಮಯದಲ್ಲಿ? ಎಲ್ಲಿ? ಹೇಗೆ? ಉಗ್ರರನ್ನು ಹೊಡೆದುರುಳಿಸುತ್ತೇವೆ ಎಂದ ಅಧ್ಯಕ್ಷ ಜೋ ಬೈಡನ್
ಕಾಬೂಲ್: ನಗರದ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಐಸಿಸ್-ಕೆ (ಐಸಿಸ್ ಖೊರಾಸಾಸ್) ಉಗ್ರರು ನಡೆಸಿರುವ ಪೈಶಾಚಿಕ ದಾಳಿ ಹಿನ್ನೆಲೆಯಲ್ಲಿ ಕುದಿಯುತ್ತಿರುವ ಅಮೆರಿಕ, ಆಫ್ಘಾನಿಸ್ತಾನದ ಬಗ್ಗೆ ತನ್ನ ವರಸೆಯನ್ನು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಉಗ್ರರ ದಾಳಿಯಲ್ಲಿ ಅಮೆರಿಕದ 13 ಯೋಧರು ಸೇರಿ ಒಟ್ಟು 90ಕ್ಕೂ ಹೆಚ್ಚು ಮುಗ್ಧ ಆಫ್ಘನ್ನರು ಸಾವನ್ನಪ್ಪಿದ್ದಾರೆ. ಇದರಿಂದ ಅಮೆರಿಕದ ಬೋ ಬೈಡನ್ ಆಡಳಿತ ಇದೀಗ ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮತ್ತೊಂದೆಡೆ, ಅಮೆರಿಕ ಸೇನೆ ಯಾವುದೇ ಕ್ಷಣದಲ್ಲಿ ಉಗ್ರರ ಮೇಲೆ ಮುಗಿಬೀಳುವ ಸಾಧ್ಯತೆ ನಿಶ್ಚಳವಾಗಿದೆ. ಯಾವ ಸಮಯದಲ್ಲಿ? ಎಲ್ಲಿ? ಹೇಗೆ? ಉಗ್ರರನ್ನು ಹೊಡೆದುರುಳಿಸುತ್ತೇವೆ ಎಂಬುದನ್ನು ತಾನು ತಳ್ಳಿ ಹಾಕುವಂತಿಲ್ಲ. ನಮ್ಮ ಆಯ್ಕೆಗಳು ಮುಕ್ತಾಗಿವೆ ಎಂದು ಬೈಡನ್ ಸ್ಪಷ್ಟವಾಗಿ ಹೇಳಿದ್ದಾರೆ.
ದಾಳಿಯ ಹೊಣೆಯನ್ನು ಐಸಿಸ್-ಕೆ ಸಂಘಟನೆ ಹೊತ್ತುಕೊಳ್ಳುವ ಮುನ್ನವೇ ಅಮರಿಕ ದಾಳಿಕೋರರು ಯಾರು ಎಂಬುದನ್ನು ಪತ್ತೆ ಹಚ್ಚಿತ್ತು. ಅಲ್ಲಿನ ಬೇಹುಗಾರಿಕೆ ದಳಕ್ಕೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆ ರೊಚ್ಚಿಗೆದಿರುವ ಬೈಡನ್, ಅಮಾಯಕರ ಸಾವಿಗೆ ಕಾರಣರಾದವರನ್ನು ಬಿಡಲ್ಲ. ನಮ್ಮವರ ಸಾವಿಗೆ ಕಾರಣರಾದವರನ್ನು ಹುಡುಕಿ ಹುಡುಕಿ ಕೊಲ್ಲುತ್ತೇವೆ ಎಂದು ಗುಡುಗಿದ್ದಾರೆ.
ಅಫ್ಘಾನಿಸ್ತಾನದಿಂದ ಅಗಸ್ಟ್ 31ರೊಳಗೆ ಎಲ್ಲ ನಮ್ಮ ಸೈನಿಕರನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಜೋ ಬೈಡನ್ ಹೇಳಿದ್ದು, ಈ ಕಾರ್ಯಾಚರಣೆ ಎಲ್ಲ ಮುಗಿದ ಮೇಲೆ ಹೊಸ ಕ್ರಮಕ್ಕೆ ಅಮೆರಿಕ ಮುಂದಾಗುತ್ತಾ ಎನ್ನುವ ಅನುಮಾನ ಜಾಗತಿಕ ಸಮುದಾಯವನ್ನು ಕಾಡುತ್ತಿದೆ.
ತನ್ನೆಲ್ಲ ಪ್ರಜೆಗಳು ಆಫ್ಘಾನ್ನಿಂದ ಹೊರಬಂದ ಮೇಲೆ ತಾಲಿಬಾನ್ ಮತ್ತು ಐಸಿಸ್ʼಗಳ ಮೇಳೆ ಕ್ರಮಕ್ಕೆ ಅಮೆರಿಕ ಮುಂದಾಗಬಹುದಾ ಎನ್ನುವ ಶಂಕೆ ಕೆಲ ಅರಬ್ ದೇಶಗಳು ವ್ಯಕ್ತಪಡಿಸಿವೆ. ಏಕೆಂದರೆ, ಈಗಾಗಲೇ ಇಸ್ರೇಲ್ ಸೇನೆ ಜತೆ ಅಮೆರಿಕ ಸಮಾಲೋಚನೆಯಲ್ಲಿದೆ. ಕುವೈತ್, ಸೌದಿ ಸೇರಿ ಅರಬ್ ವಲಯದ್ಲಲಿರುವ ಅದರ ಸೇನಾ ನೆಲೆಗಳಲ್ಲಿ ಚಟುವಟಿಕೆಗಳು ಹೆಚ್ಚಾಗಿವೆ.
ಮತ್ತೊಂದೆಡೆ, ಕಾಬೂಲ್ ಅಕ್ಷರಶಃ ನರಕವಾಗಿದ್ದು, ವಿಮಾನ ನಿಲ್ದಾಣದ ಬಳಿ ಹೆಣಗಳ ರಾಶಿಯೇ ಇದೆ. ಛಿದ್ರಗೊಂಡ ದೇಹಗಳು ಎಲ್ಲೆಲ್ಲೂ ಕಾಣುತ್ತಿವೆ. 150-200 ಜನರಿಗೆ ತೀವ್ರ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಜಾಗತಿಕ ಸಮುದಾಯ ಖಂಡನೆ
ಘಟನೆಯನ್ನು ಭಾರತವೂ ಸೇರಿದಂತೆ ಇಡೀ ಜಗತತು ಖಂಡಿಸಿದೆ. ಭಾರತವಂತೂ, ಇದೊಂದು ಪೈಶಾಚಿಕ ಘಟನೆಯಾಗಿದ್ದು, ಮುಗ್ಧ ಆಫ್ಘನ್ನರನ್ನು ರಕ್ಷಣೆ ಮಾಡಬೇಕಿದೆ ಎಂದು ಹೇಳಿದೆ. ಉಳಿದಂತೆ ಬ್ರಿಟನ್, ಜರ್ಮನಿ ಸೇರಿ ಯುರೋಪಿಯನ್ ಒಕ್ಕೂಟದ ದೇಶಗಳು, ಆಸ್ಟ್ರೇಲಿಯಾ, ಕೆನಡಾ, ಜಪಾನಿನಂಥ ಬಲಿಷ್ಠ ದೇಶಗಳು ಉಗ್ರರ ಕೃತ್ಯವನ್ನು ಖಂಡಿಸಿವೆ.
ಇನ್ನೊಂದೆಡೆ, ದಾಳಿಗೂ ನಮಗೂ ಸಂಬಂಧವಿಲ್ಲ ಎಂದ ತಾಲಿಬಾನ್ ನಾಯಕರು ನಾಟಕ ಮಾಡುತ್ತಿದ್ದಾರೆ. .ಇನ್ನು, ಆಫ್ಘನ್ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕಿರುವ ಚೀನಾ ಮತ್ತು ರಷ್ಯಾ ದೇಶಗಳ ನಡೆ ಬಗ್ಗೆ ತೀವ್ರ ಕುತೂಹಲವಿದ್ದು, ಈಗಾಗಲೇ ತಾಲಿಬಾನ್ ಪರ ಎರಡೂ ದೇಶಗಳು ನಿಂತಿವೆ.
ಸೋಮವಾರ ಭದ್ರತಾ ಮಂಡಳಿ ಸಭೆ
ಕಾಬೂಲ್ ಸರಣಿ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ವಿಶ್ವಸಂಸ್ಥೆ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿದೆ. ಸೋಮವಾರ ಭದ್ರತಾ ಮಂಡಳಿ ಸಭೆ ನಡೆಯಲಿದ್ದು, ನಿಶ್ಚಿತವಾಗಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಉಗ್ರರ ವಿರುದ್ಧ ಕಠಿಣ ನಿಲುವು ತಳೆಯುವುದರಲ್ಲಿ ದೌಟೇ ಇಲ್ಲ. ಆದರೆ, ಗೊಸುಂಬೆಗಳಂತೆ ವರ್ತಿಸುತ್ತಿರುವ ರಷ್ಯ, ಚೀನಾಗಳು ಏನು ಮಾಡುತ್ತವೆ ಎಂಬುದೇ ಪ್ರಶ್ನೆಯಾಗಿದೆ.