5 ಲಕ್ಷಕ್ಕೂ ಅಧಿಕ ಲಸಿಕೆ ನೀಡಲು ಕೇಂದ್ರಕ್ಕೆ ಮನವಿ, ವಾರದಲ್ಲಿ ಒಂದು ದಿನ ಲಸಿಕಾ ಉತ್ಸವ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನೀಡಲಾಗುತ್ತಿರುವ ಲಸಿಕೆ ಸಂಖ್ಯೆ 4 ಕೋಟಿಗೆ ತಲುಪಿದ್ದು, ಇನ್ನು ಮುಂದೆ ಪ್ರತಿ ದಿನ 5 ಲಕ್ಷ ಲಸಿಕೆ ನೀಡುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದಿನಕ್ಕೆ 5 ಲಕ್ಷದಂತೆ ಒಂದು ತಿಂಗಳಲ್ಲಿ ಒಂದೂವರೆ ಕೋಟಿ ಲಸಿಕೆ ನೀಡಲಾಗುವುದು. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಾನು ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಪ್ರತಿ ದಿನ 5 ಲಕ್ಷಕ್ಕೂ ಹೆಚ್ಚು ಲಸಿಕೆ ನೀಡಲು ಕೋರಲಾಗಿದೆ ಎಂದರು ಸಚಿವರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ದಿನ 30 ಸಾವಿರ ಲಸಿಕೆ ನೀಡಲಾಗಿದೆ. ಇನ್ನು ಮುಂದೆ 50 ಸಾವಿರ ಗುರಿ ನೀಡಲಾಗಿದೆ. ವಾರದಲ್ಲಿ ಒಂದು ದಿನ ಲಸಿಕಾ ಉತ್ಸವ ಮಾಡಲಾಗುವುದು. ಇದಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಆ ದಿನ 15ರಿಂದ 20 ಲಕ್ಷ ಲಸಿಕೆ ನೀಡುವ ಗುರಿ ಇರಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಕೊಳಗೇರಿಗಳಲ್ಲಿ ಇರುವವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಬೆಂಗಳೂರು ಒಂದರಲ್ಲೇ ಒಂದು ಕೋಟಿ ಲಸಿಕೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಎರಡೂ ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿ ಇಡೀ ದೇಶದಲ್ಲಿ ಲಸಿಕೆ ಕಾರ್ಯ ಪೂರ್ಣಗೊಂಡ ಮೊದಲ ಮಹಾನಗರ ಆಗಿಸಲಾಗುವುದು ಎಂದರು.
ಬೆಂಗಳೂರು ಕೋವಿಡ್ ವೇಗವಾಗಿ ಹರಡುವ ಸ್ಥಳ. ಬೇರೆ ದೇಶಗಳಿಂದಲೂ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಕೋವಿಡ್ 3ನೇ ಅಲೆಗೆ ಸಿದ್ಧತೆಯಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ನಿಗಾ ಘಟಕವನ್ನು 60-70 ಹಾಸಿಗೆ ಸಹಿತ ಅಭಿವೃದ್ಧಿಪಡಿಸಲಾಗಿದೆ ಎಂದರು ಡಾ.ಸುಧಾಕರ್.
ಶಿಡ್ಲಘಟ್ಟದ ಕೆರೆಗಳಿಗೆ ಎಚ್.ಎನ್. ವ್ಯಾಲಿ ನೀರು
ಶಿಡ್ಲಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ತಾಲೂಕಿನ 9-10 ಕೆರೆಗಳಿಗೆ ಎಚ್.ಎನ್. ವ್ಯಾಲಿಯಿಂದ ನೀರು ತುಂಬಿಸುವ ಯೋಜನೆ ಬಂದಿದೆ. ಈ ಬಗ್ಗೆ ಟೀಕೆಗಳು ಬಂದಿದ್ದು, ಪ್ರತಿ ಕೆರೆಗೆ ಈ ಭಾಗದಲ್ಲಿ ನೀರು ತುಂಬಿಸುವ ಯೋಜನೆ ಮಾಡಬೇಕಿದೆ. ಜತೆಗೆ ಶಿಡ್ಲಘಟ್ಟದಲ್ಲಿ ಕೈಗಾರಿಕಾ ವಲಯಗಳನ್ನು ನಿರ್ಮಿಸಲಾಗುವುದು ಎಂದು ಡಾ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಸಹಕಾರಿ ಸಂಘ ಮಾಡಬೇಕೆಂದು ಕೇಂದ್ರಕ್ಕೆ ಕೋರಲಾಗಿತ್ತು. ಒಂದು ತಿಂಗಳೊಳಗೆ ಈ ಯೋಜನೆ ಸಾಕಾರವಾಗಲಿದೆ. ಹೈನುಗಾರಿಕೆ, ಮಗ್ಗ, ರೇಷ್ಮೆ ಸೇರಿ ಸಣ್ಣ ಸಂಘಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಅಭಿವೃದ್ಧಿ ವಿಚಾರ ಬಂದಾಗ ರಾಜಕೀಯ ಮಾಡುವುದಿಲ್ಲ ಎಂದರು ಅವರು.
ಎತ್ತಿನಹೊಳೆ ಯೋಜನೆಗೆ ಸ್ಪಷ್ಟತೆ
ಎತ್ತಿನಹೊಳೆ ಯೋಜನೆಯಲ್ಲಿ ಭೂಸ್ವಾಧೀನ ತಡ ಆಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಅವರಿಗೂ ನೀರಾವರಿ ಬಗ್ಗೆ ಆಳ ಜ್ಞಾನವಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ನೀರು ದೊರೆಯಲಿದೆ. ಕೃಷ್ಣಾ ಮೇಲ್ದಂಡೆಯಿಂದ 156 ಟಿಎಂಸಿ ನೀರು ಪಡೆಯಬೇಕಿದೆ. ಇದಕ್ಕೆ ತಕರಾರು ನಡೆಯುತ್ತಿದ್ದು, ವಕೀಲರೊಂದಿಗೆ ಮುಖ್ಯಮಂತ್ರಿಗಳು ಚರ್ಚಿಸಿದ್ದಾರೆ. ಶೀಘ್ರ ತಡೆಯಾಜ್ಞೆ ತೆರವುಗೊಳಿಸಿ ನೀರು ಕೊಡಿಸುವ ಕೆಲಸವಾಗಬೇಕು ಎಂದು ಸಿಎಂ ಸೂಚಿಸಿದ್ದಾರೆ ಎಂದರು.
ಕಾಮಗಾರಿಗೆ ಚಾಲನೆ, ಉದ್ಘಾಟನೆ
ಶಿಡ್ಲಘಟ್ಟ ತಾಲೂಕಿನ ಸಾದಲಿ ನಾಡಕಚೇರಿಯನ್ನು ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ನಂತರ ಬಶೆಟ್ಟಿಹಳ್ಳಿ ಬಳಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿಗೆ ಚಾಲನೆ ನೀಡಿದರು. ವಸತಿ ಶಾಲೆ ಕಾಮಗಾರಿಗೆ ಚಾಲನೆ, ನಗರೋತ್ಥಾನದಡಿ 4.60 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಕಾಮಗಾರಿ, 2 ಕೋಟಿ ರೂ. ವೆಚ್ಚದ ವಿದ್ಯಾರ್ಥಿನಿಲಯ ಕಟ್ಟಡ ಉದ್ಘಾಟನೆ ಮಾಡಿದರು. ಇದೇ ವೇಳೆ ಗುಡಿಹಳ್ಳಿಯ ಅಬ್ಲೂಡು ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಸಚಿವರು ಕೆರೆಗೆ ಬಾಗಿನ ಸಮರ್ಪಿಸಿದರು.