ಬೆಂಗಳೂರು: ಎಂವಿಜೆ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಏರೋನಾಟಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ತಂಡ ರಾಷ್ಟ್ರೀಯ ಏರೋಸ್ಪೇಸ್ ಪರಿಕಲ್ಪನಾ ವಿನ್ಯಾಸ ಸ್ಪರ್ಧೆ (National Aerospace Conceptual Design Competition) ಯಲ್ಲಿ ಮೊದಲ ಬಹುಮಾನ ಪಡೆದಿರುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅವರು, ಐವರು ವಿದ್ಯಾರ್ಥಿಗಳ ಈ ಸಾಧನೆ ನನಗೆ ಬಹಳ ಸಂತೋಷ ಉಂಟು ಮಾಡಿದ್ದು, ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಆವಿಷ್ಕಾರಗಳನ್ನು ಮಾಡಲಿ ಎಂದು ಹಾರೈಸಿದ್ದಾರೆ.
ಸಂಚಾರ ದಟ್ಟಣಿಯನ್ನು ತಪ್ಪಿಸುವ ಹಾಗೂ ತುರ್ತು ಸಂದರ್ಭಗಳೂ ಸೇರಿ ವಿವಿಧ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಏರ್‌ಟ್ಯಾಕ್ಸಿಯನ್ನು ವಿದ್ಯಾರ್ಥಿಗಳ ತಂಡ ವಿನ್ಯಾಸ ಮಾಡಿರುವುದು ಶ್ಲಾಘನಾರ್ಹ. ದೇಶದ 26 ತಂಡಗಳನ್ನು ಹಿಂದಿಕ್ಕಿ ಈ ತಂಡ ಪ್ರಥಮ ಬಹುಮಾನ ಪಡೆದಿರುವುದು ಸಂತಸದ ಸಂಗತಿ ಎಂದು ಸಚಿವರು ಹೇಳಿದ್ದಾರೆ.
ವೈಮಾನಿಕ ಕ್ಷೇತ್ರದಲ್ಲಿ ಬೆಂಗಳೂರು ಅಗಾಧವಾಗಿ ಬೆಳೆದಿದೆ. ಇನ್ನೂ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಕ್ರಿಯರಾಗುತ್ತಿರುವುದು ಹಾಗೂ ಆ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿರುವುದು, ಅದಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಗಳಿಸುವುದು ಸ್ವಾಗತಾರ್ಹವೆಂದ ಅವರು, ಈಗಾಗಲೇ ಕರ್ನಾಟಕವು ಆವಿಷ್ಕಾರ ಕ್ಷೇತ್ರದಲ್ಲಿ ಇಡೀ ದೇಶದಲ್ಲೇ ನಂ.1 ರಾಜ್ಯವಾಗಿದೆ. ಸಂಶೋಧನೆ-ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದೆ ಎಂದಿದ್ದಾರೆ.
ಎಡದಿಂದ ಬಲಕ್ಕೆ: ಕೌಶಿಕ್, ಅಯೂಬ್ ಹಕೀಂ, ಮಿಥುನ್ ಪ್ರಾನ್ಸಿಸ್, ಅಮೃತಾಂಶು
ವಾಹನ ದಟ್ಟಣಿ ಹಾಗೂ ವಾಯುಮಾಲಿನ್ಯವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಗುಡಿಬಂಡೆಯ ವಿದ್ಯಾರ್ಥಿನಿ ಕೀರ್ತಿ ಸೇರಿ ಕೌಶಿಕ್, ಅಯೂಬ್ ಹಕೀಂ, ಮಿಥುನ್ ಪ್ರಾನ್ಸಿಸ್, ಅಮೃತಾಂಶು ಅವರಿದ್ದ ತಂಡ ʼಏರ್ಟ್ಯಾಕ್ಸಿ-ಐಸ್ ವೀ ಟೋಲಾʼ (ಇಂಟರ್ಸಿಟಿ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಅಂಡ್ ಲ್ಯಾಂಡಿಂಗ್- Inter-city Electric Vertical Take-off and Landing Aircraft (ICeVTOLA) ಎಂಬ ಪ್ರಾಜೆಕ್ಟ್ ಮಾಡಿ ಯಶಸ್ವಿಯಾಗಿ ಹಾರಾಟ ನಡೆಸಿದೆ. ಅತಿ ಕಿರಿದಾದ ಲಘು ವಿಮಾನಾಕಾರದ ಈ ಏರ್ಟ್ಯಾಕ್ಸಿಯಲ್ಲಿ ನಾಲ್ವರು ಪ್ರಯಾಣಿಕರು ಹಾಗೂ ಓರ್ವ ಪೈಲಟ್ ಹಾರಾಟ ನಡೆಸಬಹುದು. 10,000 ಅಡಿ ಎತ್ತರದಲ್ಲಿ 500 ಕಿ.ಮೀ. ದೂರ ಕ್ರಮಿಸಬಹುದು. ಈ ಯೋಜನೆಗೆ ಈ ವಿದ್ಯಾರ್ಥಿಗಳ ತಂಡ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಕೀರ್ತಿ ಅವರಿದ್ದ ಐವರು ವಿದ್ಯಾರ್ಥಿಗಳ ತಂಡ ಏರ್‌ಟ್ಯಾಕ್ಸಿ ವಿನ್ಯಾಸ ಮಾಡಿ ಪ್ರಶಸ್ತಿ ಪಡೆದ ಸುದ್ದಿಯನ್ನು ಸಿಕೆನ್ಯೂಸ್ ನೌ ಅಗಸ್ಟ್ 24ರಂದು ಮೊತ್ತ ಮೊದಲಿಗೆ ವಿವರವಾಗಿ ಪ್ರಕಟಿಸತ್ತು.
ಈ ಸುದ್ದಿ ಓದಲು ಕೆಳಗಿನ ಲೀಂಕ್ ಕ್ಲಿಕ್ ಮಾಡಿ..