800 ರೈತರು, 440 ರಸಗೊಬ್ಬರ ಚೀಲ; ಯಾರಿಗೆ ಕೊಡಬೇಕೆಂಬ ಗೊಂದಲ
by GS Bharath Gudibande
ಗುಡಿಬಂಡೆ: ಜುಲೈ ಮತ್ತು ಅಗಸ್ಟ್ ಮಾಹೆಗಳಿಗೆ ರೈತರಿಗೆ ರಸಗೊಬ್ಬರ (ಯೂರಿಯ) ವಿತರಣೆ ಮಾಡಬೇಕಾಗಿತ್ತು. ಆದರೆ, ತಾಲೂಕಿಗೆ 250 ಮೆಟ್ರಿಕ್ ಟನ್ ಅವಶ್ಯಕತೆ ಇದ್ದು, ಬಂದಿರುವುದು ಕೇವಲ 55 ಮೆಟ್ರಿಕ್ ಟನ್.
ಕೊನೆಗೆ ಯೂರಿಯಾ ಲಭ್ಯವಾಗದ ಕಾರಣಕ್ಕೆ ರೈತರು ರಸ್ತೆಗಿಳಿದು ಪ್ರತಿಭಟನೆ ಮಾಡಿದರು. ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಟಿಎಪಿಎಂಸಿ ನ್ಯಾಯಬೆಲೆ ಅಂಗಡಿ ಮುಂದೆ ತಾಲೂಕಿನ ವಿವಿಧ ಹಳ್ಳಿಗಳಿಂದ ಬಂದಿದ್ದ ರೈತರು ಮಕ್ಕಳ ಜತೆ 5-6 ಗಂಟೆಯಿಂದ ಕಾಯುತ್ತಿದ್ದರು. ಆದರೆ, ಕೆಲವರಿಗೆ ಮಾತ್ರ ಗೊಬ್ಬರ ಸಿಗುತ್ತದೆ ಎಂಬ ಸುದ್ದಿ ಕೇಳಿ ರೊಚ್ಚಿಗೆದ್ದ ರೈತರು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
800 ರೈತರಿಗೆ 440 ಚೀಲ ಲಭ್ಯ
ತಾಲೂಕಿನಾದ್ಯಂತ ಮಳೆ ಚೆನ್ನಾಗಿ ಆಗಿ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ರೈತರಿಗೆ ರಸಗೊಬ್ಬರ (ಯೂರಿಯ) ತ್ವರಿತವಾಗಿ ಅವಶ್ಯಕತೆ ಹೆಚ್ಚಾಗಿತ್ತು, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘದಿಂದ ರಸಗೊಬ್ಬರ ನೀಡುತ್ತಾರೆ ಎಂಬ ಮಾಹಿತಿಯಿಂದ ಸಾವಿರಾರು ರೈತರು ಪಟ್ಟಣಕ್ಕೆ ಬಂದಿದ್ದರು. ಆದರೆ, ಕೇವಲ 440 ರೈತರಿಗಷ್ಟೇ ರಸಗೊಬ್ಬರ ನೀಡಲಾಗುವುದು ಎಂದಾಗ ಸಿಟ್ಟಿಗೆದ್ದ ರೈತರು, ನೀಡುವ ಹಾಗಿದ್ದರೆ ಎಲ್ಲರಿಗೂ ನೀಡಿ ಎಂದು ಪ್ರತಿಭಟಿಸಿದರು.
ರೈತರು ರಸ್ತೆಗಿಳಿದು ಪ್ರತಿಭಟಿಸಲು ಆರಂಭಿಸಿದ ತಕ್ಷಣ ತಹಶೀಲ್ದಾರ್ ಸಿಬ್ಗತ್ ವುಲ್ಲಾ ಹಾಗೂ ಆರಕ್ಷಕ ವೃತ್ತ ನಿರೀಕ್ಷಕ ಲಿಂಗರಾಜು ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸಿ ಸಮಾಧಾನ ಮಾಡಿದರು.
ಕೃಷಿ ಅಧಿಕಾರಿಗೆ ಸ್ಥಳದಲ್ಲಿ ಕ್ಲಾಸ್
ತಾಲೂಕಿನ ಎಲ್ಲಾ ರೈತರಿಗೆ ರಸಗೊಬ್ಬರ ವ್ಯವಸ್ಥೆ ಮಡಲು ವಿಫಲರಾದ ಕೃಷಿ ಅಧಿಕಾರಿ ಶಂಕರಯ್ಯಗೆ ತಹಶೀಲ್ದಾರ್ ಸಿಬ್ಗತ್ ವುಲ್ಲಾ ಕ್ಲಾಸ್ ತೆಗೆದುಕೊಂಡು ಸಮಸ್ಯೆಯನ್ನು ಬಗೆಹರಿಸಿ ಮುಂದೆ ಈ ರೀತಿಯ ಸಮಸ್ಯೆ ಆಗದಂತೆ ಎಚ್ಚರ ವಹಿಸಲು ಸೂಚಿಸಿದರು.
ತಾಲೂಕಿನ ರೈತರು ರಸಗೊಬ್ಬರ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಹಾಗೂ ಒಬ್ಬ ರೈತ ಒಂದು ಆಧಾರ್ ಕಾರ್ಡ್ ನೀಡಿ ಒಂದು ರಸಗೊಬ್ಬರದ ಪ್ಯಾಕೆಟ್ ಪಡೆಯಬಹುದು ಎಂದು ಕೃಷಿ ಅಧಿಕಾರಿ ಶಂಕರಯ್ಯ ಮಾಹಿತಿ ನೀಡಿದರು.
Comments 2