ಮೈಸೂರು ಗ್ಯಾಂಗ್ ರೇಪ್ ಪ್ರಕರಣ; ಎಚ್ಚೆತ್ತುಕೊಳ್ಳಲು ಸಕಾಲ
by GS Bharath Gudibande
ಗುಡಿಬಂಡೆ: ಮೈಸೂರು ಗ್ಯಾಂಪ್ ರೇಪ್ ಘಟನೆ ನಡೆದ ಬೆನ್ನಲ್ಲೇ ರಾಜ್ಯ ಪ್ರವಾಸಿ ತಾಣಗಳು, ಪ್ರತಿ ನಗರ-ಪಟ್ಟಣಗಳ್ಲಿರುವ ನಿರ್ಜನ ಪ್ರದೇಶಗಳ ಸುರಕ್ಷತೆ, ಜನ ಸಂಚಾರದ ಬಗ್ಗೆ ಈಗ ಪ್ರಶ್ನೆ ಎದುರಾಗಿದೆ.
ಪ್ರವಾಸಿ ತಾಣಗಳ ಭದ್ರತೆಯ ಜತೆಗೆ, ಪ್ರವಾಸಿಗರು, ಸ್ಥಳೀಯರು ವಾಯು ವಿಹಾರಕ್ಕೆ ತೆರಳುವ ಗುಡಿಬಂಡೆಯ ಕೆಲ ಪ್ರದೇಶಗಳಲ್ಲಿ ಕುಡುಕರು, ಪುಂಡುಪೋಕರಿಗಳ ಕಾಟ ಹೆಚ್ಚಾಗಿದೆ.
ಮುಖ್ಯವಾಗಿ; ಪಟ್ಟಣದ ಸಾರ್ವಜನಿಕರು, ಬೆಂಗಳೂರು ಸೇರಿ ರಾಜ್ಯದ ನಾನಾ ಸ್ಥಳಗಳಿಂದ ಬರುವ ಪ್ರಯಾಣಿಕರು, ಪ್ರವಾಸಿಗರು ವಾಯು ವಿಹಾರಕ್ಕಾಗಿ, ಕೆಲಕಾಲ ವಿಶ್ರಾಂತಿ ಪಡೆಯುವುಕ್ಕೆ ಮೀಸಲಾಗಿರುವ ಹೊಂಗೆ ಉದ್ಯಾನವನ ಹಾಳುಕೊಂಪೆಯಾಗಿದೆ. ಅದರತ್ತ ನೋಡುವ ದಿಕ್ಕೆ ಇಲ್ಲದಾಗಿದೆ.
ಪಟ್ಟಣದ ಐತಿಹಾಸಿಕ ಅಮಾನಿ ಭೈರಸಾಗರ ಕೆರೆ ಹಾಗೂ ಶ್ರೀ ವೈದ್ಯನಾಥೇಶ್ವರ ದೇವಾಲಯದ ತಪ್ಪಲಿನಲ್ಲಿರುವ ಹೊಂಗೆ ಉದ್ಯಾನವನವು ಈಗ ಕುಡುಕರ ತಾಣವಾಗಿ ಮಾರ್ಪಟ್ಟಿದ್ದು, ಸಂಜೆ ಆದರೆ ಅ ಭಾಗಕ್ಕೆ ಜನರು ಹೋಗುವುದೇ ಕಷ್ಟವಾಗಿದೆ.
ಪಟ್ಟಣದ ಜನರು ಹಾಗೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಪಾಲಿಗೆ ಆಹ್ಲಾದಕರ ತಾಣವಾಗಿರುವ ಈ ಉದ್ಯಾನವು ಪಟ್ಟಣದ ಹೊರವಲಯದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದಿರುವ ಹೊಂಗೆ ಉದ್ಯಾನವನದ ಸುತ್ತಲೂ ನೀರು ಸುತ್ತುವರೆದಿರುವ ಉದ್ಯಾನವನವು ಕುಡುಕರ ಅಡ್ಡೆಯಾಗಿದೆ. ವಾರಾಂತ್ಯದಲ್ಲಿ ಪ್ರವಾಸಿಗರ ದಂಡೇ ಇಲ್ಲಿಗೆ ಹರಿದುಬರುತ್ತಿದೆ.
ಪರಿಸರ ಪ್ರೇಮಿಗಳ ಹೆಸರಿಗೆ ಕಳಂಕ
ಸ್ಥಳೀಯ ಪಟ್ಟಣ ಪಂಚಾಯಿತಿ ಬೇಜವಾಬ್ದಾರಿಯಿಂದ ನ್ಯಾಯಾಲಯದ ಮುಂದಿರುವ ಹೊಂಗೆ ಉದ್ಯಾನವನದಲ್ಲಿ ಹಗಲು ರಾತ್ರಿ ಎಣ್ಣೆ ಹೊಡೆಯುವವರು ಹೆಚ್ಚಾಗುತ್ತಿದ್ದಾರೆ. ಪರಿಸರ ಪ್ರೇಮಿಗಳು ಕಷ್ಟಪಟ್ಟು ಉದ್ಯಾನವನ್ನು ಬೆಳೆಸಿದರೆ, ಇತ್ತ ಕುಡುಕರು ಮೋಜಿನ ಅಡ್ಡೆಯನ್ನಾಗಿಸಿಕೊಂಡಿದ್ದಾರೆ.
ಅಲ್ಲದೆ ನಾವೆಲ್ಲರೂ ಬಹಳ ಆಸಕ್ತಿಯಿಂದ ಬೆಳೆಸಿದ ಉದ್ಯಾನವನಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಪರಿಸರ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಭಿವೃದ್ಧಿಯಾಗದ ಉದ್ಯಾನವನ
10 ವರ್ಷಗಳಿಂದ ಹೊಂಗೆ ಉದ್ಯಾನ ಅಭಿವೃದ್ಧಿಯಾಗಿಲ್ಲ. ಕುಳಿತುಕೊಳ್ಳಲು ಆಸನಗಳು, ಹುಲ್ಲು ಹಾಸು, ಆಲಂಕಾರಿಕ ಸಸ್ಯ, ಗಿಡ ಮರ ಹಾಗೂ ಪಾರ್ಕ್‌ನಲ್ಲಿ ಅನಗತ್ಯ ಗಿಡಗಂಟಿಗಳನ್ನು ತೆಗೆದು ಸ್ವಚ್ಚಗೊಳಿಸಿಲ್ಲ. ಹೊಂಗೆ ಉದ್ಯಾನವನದ ಅಭಿವೃದ್ದಿಗೆ ಯಾರೂ ತೆಲೆಕೆಡಿಸಿಕೊಂಡಿಲ್ಲ. ಹೀಗಾಗಿ ಹೊಂಗೆ ಉದ್ಯಾನವನ ಹಾಳಾಗುತ್ತಿದೆ ಎಂಬುದು ಸಾರ್ವಜನಿಕರ ದೂರುತ್ತಿದ್ದಾರೆ.
ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ
ಪಟ್ಟಣ ಪಂಚಾಯಿತಿ ನಿರ್ಮಿಸಿರುವ ಈ ಹೊಂಗೆ ಉದ್ಯಾನವನ್ನು ಸರ್ಮಪಕವಾಗಿ ನಿರ್ವಹಿಸದ ಕಾರಣ ಪಟ್ಟಣದ ಸಾರ್ವಜನಿಕರು, ಪರಿಸರ ಪ್ರೇಮಿಗಳು ಹಾಗೂ ಪ್ರವಾಸಿರ ಉಪಯೋಗಕ್ಕೆ ಸಂಪೂರ್ಣವಾಗಿ ದೊರಕುತ್ತಿಲ್ಲ. ಉದ್ಯಾನವನದ ಮುಂದೆ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲವಿದೆ ಮತ್ತು ಉದ್ಯಾನವನದ ಪಕ್ಕ ಹೊಸದಾಗಿ ಜೀರ್ಣೋದ್ಧಾರ ಆಗಿರುವ ವೈದ್ಯಾನಾಥೇಶ್ವರ ದೇವಾಲಯವಿದೆ. ಇಂತಹ ಅಪರೂಪದ ತಾಣವನ್ನು ಸಮರ್ಪಕವಾಗಿ ಅಭಿವೃದ್ದಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವಲ್ಲಿ ಸ್ಥಳಿಯ ಪಟ್ಟಣ ಪಂಚಾಯಿತಿ ವಿಫಲವಾಗಿದೆ ಮತ್ತು ತೀವ್ರವಾಗಿ ನಿರ್ಲಕ್ಷ್ಯಿಸಿದೆ.
ಪುಂಡು-ಪೋಕರಿಗಳ ಅಡ್ಡೆ
ಹೊಂಗೆ ಉದ್ಯಾನವನವು ಪುಂಡು-ಪೋಕರಿಗಳ ಅಡ್ಡೆಯಾಗಿದೆ. ಹೀಗಾಗಿ ಸಾರ್ವಜನಿಕರು ಉದ್ಯಾನವನದಲ್ಲಿ ವಾಯು ವಿಹಾರಕ್ಕೆ ಬರಲು ಹಿಂಜರಿಯುತ್ತಾರೆ. ಹಾಡ ಹಗಲೇ ಪೋಕರಿಗಳು ಧೂಮಪಾನ ಮಾಡುತ್ತಾ ಇಸ್ಪೀಟು ಆಡುತ್ತಾ, ಕುಡಿಯುತ್ತಾ ಕೂರುವ ದೃಶ್ಯಗಳು ಸಾಮಾನ್ಯವಾಗಿವೆ. ನಸುಗತ್ತಲಾದರೆ, ಸಂಪೂರ್ಣವಾಗಿ ಕುಡುಕರ ಅಡ್ಡೆಯಾಘುತ್ತದೆ. ಇಷ್ಟೆಲ್ಲಾ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ, ಸಂಘ ಸಂಸ್ಥೆಗಳಾಗಲಿ ಅಥವಾ ಪೊಲೀಸರಾಗಲಿ ಕಾಳಜಿ ವಹಿಸಿಲ್ಲ ಎಂದು ಪರಿಸರ ಪ್ರೇಮಿಗಳು ಆರೋಪಿಸುತ್ತಿದ್ದಾರೆ.
ಪಟ್ಟಣದ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡಲಾಗುತ್ತಿದೆ ಅಲ್ಲದೆ, ಸಾರ್ವಜನಿಕ ಸ್ಥಳಗಳನ್ನು ಬಾರ್ʼಗಳನ್ನಾಗಿ ಮಾಡಿಕೊಂಡಿದ್ದಾರೆ ಪೋಕರಿಗಳು. ಪಟ್ಟಣದ ಗೌರಿಬಿದನೂರು ರಸ್ತೆ, ಅರಣ್ಯ ಇಲಾಖೆಗೆ ಹೋಗುವ ದಾರಿ, ವಾಬಸಂದ್ರ ಆಂಜನೇಯ ದೇವಸ್ಥಾನದ ದಾರಿ ಹಾಗೂ ಸುತ್ತಮುತ್ತಲಿನ ಬಂಡೆ ಮತ್ತಿತರೆ ಸಾರ್ವಜನಿಕ ಸ್ಥಳಗಳನ್ನು ಕುಡುಕರು ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಪ್ರದೇಶಗಳಲ್ಲಿ ಜನರು ಮುಕ್ತವಾಗಿ ಸಂಚರಿಸಿವುದು ಕಷ್ಟವಾಗಿದೆ.
ಕಳೆದ 10 ವರ್ಷಗಳಿಂದ ಅರಣ್ಯ ಇಲಾಖೆ ಹಾಗೂ ಪರಿಸರ ವೇದಿಕೆ ಸಹಯೋಗದಲ್ಲಿ ಕಷ್ಟಪಟ್ಟು ಹೊಂಗೆ ಗಿಡಗಳನ್ನು ಬೆಳೆಸಿ ದೊಡ್ಡ ಉದ್ಯಾನವನ ಮಾಡಿದ್ದೇವೆ. ಆದರೆ ಪುಂಡ-ಪೋಕರಿಗಳು ಸಾಯಂಕಾಲ ಆಗುತ್ತಿದಂತೆ ಉದ್ಯಾನವನವನ್ನು ಅಡ್ಡೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕಾಳಜಿ ವಹಿಸಬೇಕು. ಪರಿಸರ ರಕ್ಷಣೆಗೆ ಮುಂದಾಗಬೇಕು.
-ಗುಂಪುಮರದ ಆನಂದ್, ಜಿಲ್ಲಾಧ್ಯಕ್ಷ, ಪರಿಸರ ವೇದಿಕೆ, ಗುಡಿಬಂಡೆ
ಪಟ್ಟಣದಲ್ಲಿ ಬೆಳಗ್ಗೆ ಮತ್ತು ಸಂಜೆ ಹಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನ ವ್ಯಾಯಾಮ ಹಾಗೂ ವಾಯುವಿಹಾರ ಮಾಡಲು ಇತ್ತ ಬಂದಾಗ ಉದ್ಯಾನವನದಲ್ಲೆಲ್ಲ ಬಾಟಲಿಗಳು ಹಾಗೂ ಮದ್ಯದ ಪ್ಯಾಕೆಟ್ಟುಗಳ ಕೊಳಕು ವಾಸನೆ ಮೂಗಿಗೆ ಬಡಿಯುತ್ತದೆ. ಇದರಿಂದ ಮಕ್ಕಳನ್ನು ಉದ್ಯಾನವನದಲ್ಲಿ ಆಡವಾಡಲು ಕರೆದುಕೊಂಡು ಹೋಗಲು ಭಯವಾಗುತ್ತದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು.
-ಬಿ.ಮಂಜುನಾಥ್, ಅಧ್ಯಕ್ಷ, ಪರಿಸರ ವೇದಿಕೆ ಹಾಗೂ ಪತ್ರಕರ್ತ, ಗುಡಿಬಂಡೆ
ನ್ಯಾಯಾಲದ ಮುಂದಿರುವ ಉದ್ಯಾನದಲ್ಲಿ ಶುದ್ಧಗಾಳಿ ಹಾಗೂ ಅಮಾನಿ ಭೈರಸಾಗರ ಕೆರೆಯ ನೀರನ್ನು ಮದ್ಯವ್ಯಸನಿಗಳು ಮಲಿನ ಮಾಡುತ್ತಿದ್ದಾರೆ. ಉದ್ಯಾನವನದಲ್ಲಿ ಲೈಟುಗಳೇ ಇಲ್ಲ. ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಸರಕಾರ ಹಣ ಖರ್ಚು ಮಾಡಿರುವ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಉದ್ಯಾನವನ ಸಾರ್ವಜನಿಕರಿಗೆ ಉಪಯೋಗವಾಗದೆ ಪುಂಡ-ಪೋಕರಿಗಳ ಅಡ್ಡೆಯಾಗಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ, ಜನಪ್ರತಿನಿಧಿಗಳು ಉದ್ಯಾನವನ್ನು ಅಭಿವೃದ್ಧಿಪಡಿಸಲು, ನಿರ್ವಹಿಸಲು ಗಮನಹರಿಸಬೇಕು.
-ಜಿ.ಎನ್.ನವೀನ್, ಜಿಲ್ಲಾಧ್ಯಕ್ಷ, ಯುವ ಘಟಕ, ಜಯಕರ್ನಾಟಕ
Comments 2