ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ ಎಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜವಳಿ ಉದ್ಯಮ, ಫಾರ್ಮಾ ಉದ್ಯಮಗಳನ್ನು ಆರಂಭಿಸಿ ಯುವಜನರಿಗೆ ಹೆಚ್ಚೆಚ್ಚು ಉದ್ಯೋಗ ನೀಡುವ ಪ್ರಯತ್ನ ಸರಕಾರದ ಮಟ್ಟದಲ್ಲಿ ನಡೆದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲಾಡಳಿತದಿಂದ ಭಾನುವಾರ ನಡೆದ ʼಮಿನಿ ಉದ್ಯೋಗ ಮೇಳʼ ಉದ್ಘಾಟಿಸಿ ಮಾತನಾಡಿದ ಸಚಿವರು, “ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ ಗುರುತಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕುರಿತು ಕೇಂದ್ರದ ಮಟ್ಟದಲ್ಲಿ ಚರ್ಚಿಸಿದ್ದು, ಈ ಭಾಗದಲ್ಲಿ ಟೆಕ್ಸ್ಟೈಲ್ ಪಾರ್ಕ್ ನಿರ್ಮಿಸಲು ಸಲಹೆ ಸಿಕ್ಕಿದೆ. ಟೆಕ್ಸ್ ಟೈಲ್ ಜತೆಗೆ ಫಾರ್ಮಾ ಉದ್ಯಮವನ್ನೂ ಆರಂಭಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಜಾರಿಯಲ್ಲಿದೆ. ವಿದ್ಯಾರ್ಥಿಗಳು ಸಂಶೋಧನಾ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಶಿಕ್ಷಕರು ಮಾರ್ಗದರ್ಶನ ನೀಡಬೇಕು” ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬರಡು ಜಿಲ್ಲೆ ಎನ್ನಲಾಗುತ್ತದೆ. ಆದರೂ ಗುಣಮಟ್ಟದ ತರಕಾರಿ, ಹಣ್ಣು, ಹೂಗಳನ್ನು ಕೃಷಿಕರು ರಫ್ತು ಮಾಡುತ್ತಿದ್ದಾರೆ. ಇದನ್ನು ಯುವಜನರೇ ಮಾಡುತ್ತಿದ್ದಾರೆ. ಅನೇಕರು ಉನ್ನತ ಶಿಕ್ಷಣ ವ್ಯಾಸಂಗ ಮಾಡಿ, ಪಾಲಿಹೌಸ್ ಮಾಡಿ ಯಶಸ್ವಿಯಾಗಿದ್ದಾರೆ. ಈ ಶತಮಾನದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ. ವಿದ್ಯಾವಂತರು ಕೃಷಿ ಮಾಡುವುದಿಲ್ಲ ಎಂಬ ಮಾತು ನಿಜವಲ್ಲ. ಐಟಿ, ಎಂಜಿನಿಯರ್ʼಗಳು ಕೂಡ ಕೃಷಿಯಲ್ಲಿ ತೊಡಗಿ ಹೆಚ್ಚು ಹಣ ಗಳಿಸುತ್ತಿದ್ದಾರೆ. ಉದ್ಯೋಗ ಮಾಡುವ ಜತೆಗೆ, ಸ್ವಯಂ ಉದ್ಯೋಗ ಮಾಡಿ ಬೇರೆಯವರಿಗೆ ಉದ್ಯೋಗ ನೀಡಬಹುದು ಎಂದರು.
ರಾಜ್ಯದಲ್ಲಿ ಅನೇಕ ಯುವಜನರಿಗೆ ಕೌಶಲ್ಯ ತರಬೇತಿ ಮುಖ್ಯ. ಕೌಶಲ್ಯವಿಲ್ಲದಿದ್ದರೆ ವಿದ್ಯಾಭ್ಯಾಸ ಪೂರ್ಣವಾಗುವುದಿಲ್ಲ. ಉದ್ಯೋಗದಾತರಿಗೆ ಬೇಕಾದ ಕೌಶಲ್ಯವನ್ನು ಯುವಜನರಿಗೆ ನೀಡಬೇಕು. ಕೈಗಾರಿಕಾ ಸಂಸ್ಥೆಗಳು ಹಾಗೂ ಕಾಲೇಜುಗಳ ನಡುವೆ ಈಗ ಒಪ್ಪಂದಗಳಾಗುತ್ತಿವೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕೌಶಲ್ಯ ತರಬೇತಿ ಕೂಡ ನಡೆಯುತ್ತಿದೆ ಎಂದರು ಸಚಿವರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆಗೆ ಒತ್ತು ನೀಡಿ ಆಥಿಕ ನೆರವು ಪ್ರಕಟಿಸಿದ್ದಾರೆ. ಆರೋಗ್ಯ ಇಲಾಖೆಯಡಿ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೆ ಕ್ರಮ ವಹಿಸಲಾಗಿದೆ. ಆರೋಗ್ಯ ಇಲಾಖೆಗೆ ನರ್ಸಿಂಗ್ʼಗೆ ಬೇಡಿಕೆ ಇದೆ. ಇಂಥ ಬೇಡಿಕೆಯನ್ನು ಪ್ರತಿ ಕ್ಷೇತ್ರದಲ್ಲಿ ಅರ್ಥ ಮಾಡಿಕೊಂಡು ಆ ಶಿಕ್ಷಣ ಪಡೆಯಬೇಕು. ಉದ್ಯೋಗ ಮೇಳ ಸತತವಾಗಿ ನಡೆಯಬೇಕು. ಇನ್ನೂ ದೊಡ್ಡಮಟ್ಟದ ಉದ್ಯೋಗ ಮೇಳ ನಡೆಸಬೇಕು ಎಂದು ಡಾ.ಸುಧಾಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರೂ ಹಾಜರಿದ್ದರು.