ಎಲ್ಲರೂ ನಮ್ಮವನು ಎಂದು ನಂಬಿ ನಡೆದುಕೊಳ್ಳುವ ಕೃಷ್ಣಾಷ್ಟಮಿ ಇಂದು. ಅಂದರೆ, ಶ್ರೀಕೃಷ್ಣನ ಹುಟ್ಟಿದ ಹಬ್ಬ. ಪರಮ ಪುರುಷನು, ಲೋಕಪೂಜಿತನೂ ಆದ ಕೃಷ್ಣನ ಬಗ್ಗೆ ಹಾಗೂ ಅಷ್ಟಮಿ ಬಗ್ಗೆ ನಮ್ಮಅಂಕಣಕಾರ ಡಾ.ಗುರುಪ್ರಸಾದ್ ರಾವ್ ಹವಲ್ದಾರ್ ಬರೆದಿದ್ದಾರೆ.
ಐದು ಸಾವಿರ ವರ್ಷಗಳ ಹಿಂದೆ ಕಾಣಿಸಿಕೊಂಡು ಮಾನವನಂತೆ ನಡೆದು ದೈವತ್ವಕ್ಕೇರಿ ಜನಮಾನಸದಲ್ಲಿ ನೆಲೆಯಾದವನು ಅಲ್ಲದೇ ಪರಮ ಪುರುಷನಾಗಿ ಉಳಿದುಕೊಂಡವನು.
ಕೃಷ್ಣ ಎಂದರೆ ಏನೋ ಸೆಳೆತ, ಸಂಭ್ರಮ, ಸಡಗರ, ಸಂತೋಷ, ಆತ್ಮೀಯತೆ, ನಮ್ಮವನೆಂಬ ವ್ಯಾಮೋಹ ಸಹಜವಾಗಿ ಆವರಿಸುತ್ತದೆ. ಶೋಷಿತರ ಪಕ್ಷಪಾತಿಯಾಗಿ, ಸಮಷ್ಟಿಯ ಸುಖವನ್ನು ಬಯಸಿದ ಶ್ರೀಕೃಷ್ಣ ‘ಅವನ ಲೀಲಾ ವಿನೋದಗಳನ್ನು ಕೀರ್ತನೆಗಳನ್ನು ಭಜನಾರೂಪದಲ್ಲಿ ಹಾಡುವ ಸಂದರ್ಭವೇ ಶ್ರೀಕೃಷ್ಣ ಜನ್ಮಾಷ್ಟಮಿ.
ಈ ಪರಮಪುರುಷ ವಾಸುದೇವನನ್ನು ಕಾಯಾವಾಚಾಮನಸಾ ನಮ್ಮನ್ನು ನಾವು ಸಮರ್ಪಿಸಿಕೊಂಡು ಅವನಿಗೆ ಅರ್ಪಿಸುವ ಕಲೆಯೇ ಕೃಷ್ಣ ಪ್ರಜ್ಞೆ. ಇಂತಹ ಜಗದೋದ್ಧಾರಕನ ಜನ್ಮದಿನವಾದ ಶ್ರಾವಣ ಮಾಸದ ಕೃಷ್ಣ ಅಷ್ಟಮಿಯ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ ರೂಪದಲ್ಲಿ ಆಚರಿಸಲಾಗುತ್ತದೆ.
ಪ್ರತಿಯೊಬ್ಬರ ಹೃದಯ ಕಮಲದಲ್ಲಿ ನೆಲೆನಿಂತ ಯೋಗೇಶ್ವರ ಶ್ರೀಕೃಷ್ಣ ಜಗತ್ತಿಗೆ ಗೀತೋಪದೇಶ ನೀಡಿದವನು. ಶ್ರೀಕೃಷ್ಣ ಪರಮಾತ್ಮನ ಗೀತಾಶಾಸ್ತ್ರವನ್ನು ಓದುವ ಹಾಗೂ ಕೇಳುವವರ ಪುಣ್ಯವನ್ನು ಹೆಚ್ಚಿಸುವಂತಹುದು. ಸಮಸ್ತ ದುಃಖಗಳನ್ನು ದೂರ ಮಾಡುವವನು.
ಮನೆ, ಮಡದಿ, ಮಕ್ಕಳು, ಸಂಪತ್ತು ಇವುಗಳಲ್ಲಿ ಯಾವುದೂ ಶಾಶ್ವತವಾದುದದಲ್ಲ. ಶಾಶ್ವತ ಸುಖವು ನಮಗೆ ದೊರೆಯಬೇಕಾದರೆ ನಮ್ಮನ್ನು ನಾವು ಕೃಷ್ಣ ಪರಮಾತ್ಮನಿಗೆ ಒಪ್ಪಿಸಿಕೊಳ್ಳಬೇಕು. ಅನಂತ ಗುಣ ಪರಿಪೂರ್ಣನಾದ ಸಕಲ ದೋಷ ವಿವರ್ಜಿತನಾದ ಶ್ರೀಕೃಷ್ಣನ ಕಾರುಣ್ಯಕ್ಕೆ ಪಾತ್ರರಾಗಲು ನಮಗೆ ಬೇಕಿರುವುದು ನಿರ್ಮಲ ಭಕ್ತಿ. ದೀನ ದಲಿತರ ಮೇಲೆ ತೋರುವ ಕರುಣೆ, ಸಮಾನರಲ್ಲಿ ತೋರುವ ಪ್ರೀತಿ, ಹಿರಿಯರಲ್ಲಿ ಮಾಡುವ ಭಕ್ತಿ ಆ ಶ್ರೀಕೃಷ್ಣನಿಗೇ ಸಲ್ಲುತ್ತದೆ.
‘ಆಡಿಸಿದಳೆಶೋದೆ ಜಗದೋದ್ಧಾರನ’ ಎಂಬುದಾಗಿ ಯಶೋದೆಯ ಮಾತೃಪ್ರೇಮವನ್ನು ಮತ್ತು ‘ದಾಸನ ಮಾಡಿಕೊ ಎನ್ನ …’ ಪುರಂದರದಾಸರು ಹೇಳಿದರೆ, ಕನಕದಾಸರು ‘ದಾಸ ದಾಸರ ಮನೆಯ ದಾಸಿಯರ ಮಗ ನಾನು’ ಎಂದು ಕೃಷ್ಣನಲ್ಲಿ ನಿವೇದನೆ ಮಾಡಿಕೊಳ್ಳುತ್ತಾರೆ. ‘ಎಲ್ಲಾಡಿ ಬಂದ್ಯೊ ಎನ್ನ ರಂಗಯ್ಯ! ಎನ್ನ ಕಣ್ಣ ಮುಂದಾಡದೆ..’ ಎಂಬುದಾಗಿ ಮಹಿಪತಿದಾಸರು ಶ್ರೀಕೃಷ್ಣನನ್ನು ಪ್ರಶ್ನಿಸಿದರೆ, ಶ್ರೀಪಾದರಾಯರು ಯಶೋದೆಯು ಕೇಳುವಂತೆ ‘ಬೆರಳ ಉಂಗುರವೆಲ್ಲಿ ಹೋಗಿದೆ? ನಿನ್ನ ಕೊರಳ ಪದಕವೆಲ್ಲಿ ನೀಗಿದೆ? ಕಳ್ಳತನವ ಹೀಗೆ ಮಾಡಿದೆ ನಿನ್ನ ಸುಳ್ಳು ಕಡೆಗೆ ನಾ ನೋಡಿದೆ’ ಪ್ರಶ್ನಿಸುವಂತಾಗಿದೆ. ಇಲ್ಲವೇ ‘ಪೋಗದಿರೆಲೋ ರಂಗ, ಬಾಗಿಲಿಂದಾಚೆ ಭಾಗವತರು ಬಂದು ಕರೆದೆತ್ತಿಕೊಂಡೊಯ್ಯುವರೋ’ ಎಂದು ಆತಂಕವೂ ದಾಸರೊಳಗಿನ ಪದದಲ್ಲಿ ಇದೆ. ಶ್ರೀಕೃಷ್ಣನ ಹೆಸರಲ್ಲಿ ರಚಿಸಿದ ಅಷ್ಟೂ ಹಾಡುಗಳಲ್ಲಿ ನಾವು ಶ್ರೀಕೃಷ್ಣ ವ್ಯಕ್ತಿತ್ವವನ್ನು ಕಣ್ತುಂಬಿಕೊಳ್ಳಬಹುದು.
ಕೃಷ್ಣಂ ನಾರಾಯಣಂ ವಂದೇ ಕೃಷ್ಣಂ ವಂದೇ ವ್ರಜಪ್ರಿಯಮ್||
ಕೃಷ್ಣಂ ದ್ವೈಪಾಯನಂ ವಂದೇ ಕೃಷ್ಣಂ ವಂದೇ ಪ್ರಧಾಸುತಮ್||
ಜಗತ್ತಿನ ಉತ್ಪತ್ತಿ, ಸ್ಥಿತಿ, ವಿನಾಶ ಮಾಡಬಲ್ಲ ಹಾಗೂ ಆಧ್ಯಾತ್ಮಿಕ, ಆದಿ ದೈವಿಕ, ಆದಿ ಭೌತಿಕ ತ್ರಿತಾಪಗಳನ್ನು ನಾಶಮಾಡುವಂತಹಾ ಸಚ್ಚಿದಾನಂದ ಸ್ವರೂಪನಾದವನು..
ಮನ್ವಂತರಾಧಿಪ, ಜಗದಧಿಪತಿ, ಗೀತಾಬೋಧಕ, ಪರಮಪಾವನ ಪರಮಾತ್ಮನು ಮನುಜರೂಪದಲ್ಲಿ ಈ ಧರೆಗಿಳಿದ ಮಂಗಲ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿಯ ಭಗವಾನ್ ಶ್ರೀಕೃಷ್ಣನಿಗೆ ನಮಸ್ಕರಿಸೋಣ.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.