ಢಿಕ್ಕಿ ರಭಸಕ್ಕೆ ಆಡಿ Q3 ಛಿಧ್ರ, ಒಳಗಿದ್ದವರೂ ನಜ್ಜುಗುಜ್ಜು; ಕೋರಮಂಗಲದಲ್ಲಿ ಭೀಕರ ಅಪಘಾತ
ಬೆಂಗಳೂರು: ಪೊಲೀಸರ ಎಚ್ಚರಿಕೆಯ ಮಾತನ್ನೂ ಕೇಳಲಿಲ್ಲ. ಅತಿ ವೇಗವನ್ನೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಕೊನೆಗೆ ಬ್ರೇಕ್ ತುಳಿಯುವ ಬದಲು ಎಕ್ಸಿಲೇಟರ್ ತುಳಿದು ಈ ಘೋರ ದುರಂತಕ್ಕೆ ಶಾಸಕರ ಪುತ್ರ ಕಾರಣನಾದನಾ?
ತಡರಾತ್ರಿ ನಗರದ ಕೋರಮಂಗಲದ 80 ಅಡಿ ರಸ್ತೆಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ನೆರೆಯ ತಮಿಳುನಾಡಿನ ಹೊಸೂರು ಕ್ಷೇತ್ರದ ಶಾಸಕ ವೈ.ಪ್ರಕಾಶ್ ಅವರ ಪುತ್ರ ಕರುಣಾಸಾಗರ್, ಭಾವೀ ಸೊಸೆ ಸೇರಿ ಏಳು ಜನ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ ಘಟನೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ವೇಗವಾಗಿ ನುಗ್ಗಿಬಂದ ಆಡಿ Q3 ಐಶಾರಾಮಿ ಕಾರು ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ʼನಿಂದ ಹಾರಿಬಂದು ಗೋಡೆಗೆ ಬಲವಾಗಿ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಕಾರಿನಲ್ಲಿದ್ದ 7 ಯುವಜನರು ಸಾವನ್ನಪ್ಪಿದ್ದು, ಮೃತರಲ್ಲಿ ಮೂವರು ಮಹಿಳೆಯರು, ನಾಲ್ವರು ಪುರುಷರು ಇದ್ದಾರೆ.
ಅಪಘಾತದಿಂದ ಇಡೀ ಬೆಂಗಳೂರು ಬೆಚ್ಚಿಬಿದ್ದಿದ್ದು, ದುರಂತದ ದೃಶ್ಯಗಳು ಭೀಕರವಾಗಿವೆ. ನಗರದಲ್ಲಿ ಪದೇಪದೆ ಸಂಭವಿಸುತ್ತಿರುವ ಐಶಾರಾಮಿ ಕಾರುಗಳ ಅಪಘಾತಗಳ ಪ್ರಕರಣಗಳಿಗೆ ಈ ಘಟನೆ ಹೊಸ ಸೇರ್ಪಡೆಯಾಗಿದೆ.
ಮೃತಪಟ್ಟವರನ್ನು ಹೊಸೂರು ಶಾಸಕರ ಪುತ್ರ ಕರುಣಾಸಾಗರ್, ಅವರ ಭಾವೀ ಪತ್ನಿ ಬಿಂದು, ಇಶಿತಾ, ಡಾ.ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಎಂದು ತಿಳಿದು ಬಂದಿದೆ. ಇವರೆಲ್ಲರಿಗೂ 20ರಿಂದ 30 ವರ್ಷದ ವಯಸ್ಸು ಎಂದು ಗೊತ್ತಾಗಿದೆ. ತಡರಾತ್ರಿ 1.52ರ ಸುಮಾರಿನಲ್ಲಿ ದುರಂತ ಘಟಿಸಿದೆ.
ಕರುಣಾಸಾಗರ್ ಚಿತ್ರಗಳು
ಇವರಿದ್ದ ಕಾರು ಅತಿ ವೇಗದಿಂದ ಬಂದು ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ದುರಂತಕ್ಕೀಡಾಗಿದೆ. ಅತಿ ವೇಗದ ಕಾರಣದಿಂದ ಕಾರು ರಸ್ತೆ ಬದಿಯ ಡಿವೈಡರ್ʼಗೆ ಢಿಕ್ಕಿ ಹೊಡೆದು ಬಳಿಕ ಗೋಡೆಗೆ ಡಿಕ್ಕಿಯಾದ ಪರಿಣಾಮ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದರಲ್ಲಿದ್ದ ಎಲ್ಲರ ದೇಹಗಳು ಕೂಡ ನಜ್ಜುಗುಜ್ಜಾಗಿವೆ. ಒಳಗಿದ್ದವರ ಕೈ ಕಾಲು ಮುರಿದಿದ್ದವು. ಅಪಘಾತದ ಭಾರೀ ಶಬ್ದ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಆ ದೃಶ್ಯಗಳನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ.
ಇನ್ನು, ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಚಕ್ರಗಳು ಕಿತ್ತು ಬಂದಿವೆ. ದುರದೃಷ್ಟವಶಾತ್ ಕಾರಿನಲ್ಲಿದ್ದ ಯಾರೊಬ್ಬರೂ ಸೀಟ್ ಬೆಲ್ಟ್ ಹಾಕಿರಲಿಲ್ಲ. ಅತಿಯಾದ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಮೃತಪಟ್ಟ ಕರುಣಾಕರನ್ ಶಾಸಕ ಪ್ರಕಾಶ್ ಅವರ ಏಕೈಕ ಪುತ್ರನಾಗಿದ್ದು, ಬೆಂಗಳೂರು ಮುರುಗೇಶಪಾಳ್ಯದ ನಿವಾಸಿ, ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಂದು ಅವರ ಜತೆ ವಿವಾಹ ನಿಶ್ಚಯವಾಗಿತ್ತು. ಅಪಘಾತದ ವಿಷಯ ಗೊತ್ತಾಗುತ್ತಿದ್ದಂತೆ ಶಾಸಕ ಪ್ರಕಾಶ್ ಚೆನ್ನೈನಲ್ಲಿದ್ದರು ಎಂಬ ಮಾಹಿತಿ ಸಿಕ್ಕಿದೆ. ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಇದೇ ವೇಳೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮೃತದೇಹಗಳನ್ನು ಅವರವರ ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದೆ.
ಅಪಘಾತಕ್ಕೀಡಾದ ಕರುಣಾಸಾಗರ್ ಕಾರು.
ಡ್ರೈವ್ ಮಾಡುತ್ತಿದ್ದರು ಕರುಣಾಸಾಗರ್
ಐಶಾರಾಮಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬಗ್ಗೆ ಭಾರೀ ಕ್ರೇಜ್ ಹೊಂದಿದ್ದರೆನ್ನಲಾದ ಕರುಣಾ ಸಾಗರ್ ಅವರೇ ಸ್ವತಃ ಕಾರು ಓಡಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲಭ್ಯ ಮಾಹಿತಿಯಂತೆ ಸೋಮವಾರ ರಾತ್ರಿ 11.30ರ ಹೊತ್ತಿಗೆ ಊಟ ಮಾಡಿಕೊಂಡು ನಂತರ ಬೆಂಗಳೂರು ರೌಂಡ್ಸ್ ಹಾಕಲು ಹೊರಟ ಈ ಏಳು ಮಂದಿ ಇಡೀ ನಗರವನ್ನು ಸುತ್ತಾಡಿದ್ದಾರೆ. ಭಾವಿ ಪತ್ನಿ ಹಾಗೂ ಗೆಳೆಯ, ಗೆಳತಿಯರನ್ನು ಜತೆಯಲ್ಲಿ ಕೂರಿಸಿಕೊಂಡು ಸಂಭ್ರಮದಿಂದ ಅವರು ಕಾರು ವಿಹಾರ ನಡೆಸಿದ್ದಾರೆ. ಆದರೆ, ಇವರ ಸಂಭ್ರಮ ಅತಿ ವೇಗದ ಕಾರಣಕ್ಕೆ ಬಹಳ ಹೊತ್ತು ಉಳಿಯಲಿಲ್ಲ. ಕಾರು ಅದೇ ಭಾರೀ ವೇಗದಲ್ಲಿ ಕೋರಮಂಗಲದ ಬಳಿಗೆ ಬರುವಷ್ಟರಲ್ಲಿ ಎದುರಿಗೆ ಬಂದ ತಿರುವಿನಲ್ಲಿ ನಿಯಂತ್ರಣಕ್ಕೆ ಸಿಗದೆ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ನಂತರ ಅಷ್ಟೇ ವೇಗದಲ್ಲಿ ಗೋಡೆಗೆ ಬಡಿದಿದೆ. ಕರುಣಾ ಸಾಗರ್ ಕೂಡ ಸೀಟ್ ಬೆಲ್ಟ್ ಹಾಕದೆ ಕಾರು ಚಾಲನೆ ಮಾಡುತ್ತಿದ್ದರು. ಇಷ್ಟು ಭಾರೀ ದುರಂತ ಸಂಭವಿಸಿದರೂ ಕಾರಿನ ಏರ್ʼಬ್ಯಾಗ್ʼಗಳೂ ಬಿಚ್ಚಿಕೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ದಾಖಲು
ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ದೂರಿನ ಮೇರೆಗೆ ಆಡುಗೋಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 304ಎ ಮತ್ತು 279 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾರಿನಲ್ಲಿದ್ದವರು ಮದ್ಯ ಸೇವನೆ ಮಾಡಿದ್ದರಾ? ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರ ರಕ್ತದ ಸ್ಯಾಂಪಲ್ʼಗಳನ್ನು ಪರೀಕ್ಷೆಗೆ ಕಳಿಸಲಾಗಿದೆ.
ಕೇವಲ ಐವರು ಮಾತ್ರ ಕೂರಬಹುದಾದ ಕಾರಿನಲ್ಲಿ ಏಳು ಜನರು ಕೂತಿದ್ದರು. ಇದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಆಡುಗೋಡಿ ವ್ಯಾಪ್ತಿಯಲ್ಲಿ ವೇಗವಾಗಿ ಸುತ್ತಾಡುವಾಗ 11.50ರ ಸುಮಾರಿನಲ್ಲಿ ಒಮ್ಮೆ ಪೊಲೀಸರು ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ ಎನ್ನಲಾಗಿದ್ದು, ಆಮೇಲೂ ಅವರು ಜಾಲಿ ರೈಡ್ ಮಾಡಿ ಅಪಾಯ ತಂದುಕೊಂಡಿದ್ದಾರೆ ಎಂದು ಗೊತ್ತಾಗಿದೆ. ಬಹುಶ ನಿಯಂತ್ರಣ ತಪ್ಪಿದ ಕಾರನ್ನು ಕಂಟ್ರೋಲ್ ಮಾಡಲು ಕರುಣಾ ಸಾಗರ್ ಅವರು ಬ್ರೇಕ್ ಒತ್ತುವ ಬದಲು ಎಕ್ಸಲೇಟರ್ ತುಳಿದಿರಬಹುದು ಎಂಬ ಅನುಮಾನವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಜತೆ ನಿಕಟ ನಂಟು
ಬೆಂಗಳೂರು ಗಡಿಗೆ ಹೊಂದಿಕೊಂಡಿರುವ ಹೊಸೂರಿನ ಡಿಎಂಕೆ ಶಾಸಕ ವೈ.ಪ್ರಕಾಶ್ ಮತ್ತವರ ಕುಟುಂಬ ಮೊದಲಿನಿಂದಲೂ ಬೆಂಗಳೂರು ನಗರದ ಜತೆ ನಿಕಟವಾದ ನಂಟು ಹೊಂದಿದೆ.ರಾಜ್ಯದ ರಾಜಕಾರಣಿಗಳ ಜತೆಗೂ ಪ್ರಕಾಶ್ ಒಳ್ಳೆಯ ಬಾಂಧವ್ಯ ಹೊಂದಿದ್ದು, ಮುಖ್ಯವಾಗಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜತೆ ಒಡನಾಟ ಹೊಂದಿದ್ದಾರೆ. ಅವರ ಸೊಸೆಯಾಗಬೇಕಿದ್ದ ಬಿಂದು ಕೂಡ ಬೆಂಗಳೂರಿನವರೇ.