ಕೋಳಿಗೆ ಅರ್ಧ ಟಿಕೆಟ್ ಹರಿದ ನಿರ್ವಾಹಕ!!
by Gs Bharath Gudibande
ಗುಡಿಬಂಡೆ: ಇತ್ತೀಚಿನ ದಿನಗಳಲ್ಲಿ Ksrtc ಬಸ್ ಪ್ರಯಾಣ ಜನಸಾಮಾನ್ಯರಿಗೆ ದುಬಾರಿಯಾಗುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರ ಪಾಲಿಗೆ ʼಕರ್ನಾಟಕ ಸಾರಿಗೆʼ ಗಗನ ಕುಸುಮದಂತೆ ಆಗುತ್ತಿದೆ.
ಇದು ಹೀಗಿದ್ದರೆ, ಜನ ಸಂಚಾರ ಮಾಡುವ ಬಸ್ಸಿನಲ್ಲಿ ಪ್ರಯಾಣಿಕನೊಬ್ಬಸಂತೆಯಲ್ಲಿ ಖರೀದಿಸಿ ಜತೆಯಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ನಾಟಿ ಕೋಳಿಗೂ ಅರ್ಧ ಟಿಕೆಟ್ ಕೊಟ್ಟ ಸರಕಾರಿ ಬಸ್ ನಿರ್ವಾಹಕನೊಬ್ಬ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾನೆ, ಮಾತ್ರವಲ್ಲದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾನೆ.
ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯ ಪೆರೇಸಂದ್ರದಲ್ಲಿ ಸೋಮವಾರ ಸಂತೆಯಲ್ಲಿ ವ್ಯಕ್ತಿಯೊಬ್ಬ ಶ್ರಾವಣ ಮುಗಿಯುತ್ತಿರುವಂತೆ ಮನೆಯಲ್ಲಿ ಮಾಂಸದ ಅಡುಗೆ ಮಾಡಲು ನಾಟಿ ಕೋಳಿ ಖರೀದಿಸಿದ್ದ. ಕೊಂಡುಕೊಂಡ ಕೋಳಿ ಜತೆಯಲ್ಲಿ ತನ್ನ ಊರು ಸೋಮೇಶ್ವರಕ್ಕೆ ತೆರಳಲು ಸರಕಾರಿ ಬಸ್ ಹತ್ತಿದ್ದ. ಖುಷಿಯಾಗಿ ಕೋಳಿಯ ಮೈದಡವುತ್ತಾ ಸೀಟಿನಲ್ಲಿ ಕೂತಿದ್ದ ಆತನಿಗೆ ಕಂಡಕ್ಟರ್ ಬಂದು ತನ್ನ ಜತೆಗೆ ತನ್ನೊಂದಿಗೆ ಇದ್ದ ಕೋಳಿಗೂ ಟಿಕೆಟ್ ಕೇಳಿದಾಗ ಸಿಕ್ಕಾಪಟ್ಟೆ ಚಕಿತನಾದ.
ಕಂಡಕ್ಟರ್ ಕೋಳಿಗೂ ಟಿಕೆಟ್ ಕೊಡಿ ಎಂದ. ಆತ ಕೊಡಲ್ಲ ಎಂದ. ಮಾತಿಗೆ ಮಾತು ಬೆಳೆಯಿತು. ಕೊನೆಗೆ ಕಂಡಕ್ಟರ್ ಕೋಳಿಗೂ ಹತ್ತು ರೂಪಾಯಿ ಟಿಕೆಟ್ ಹರಿದೇಬಿಟ್ಟ. ಇನ್ನು, ಕೋಳಿ ಕೊಂಡವ ಸುಮ್ಮನಿರುತ್ತಾನೆಯೇ. ಕೋಳಿಯನ್ನೂ ತನ್ನ ಪಕ್ಕದ ಸೀಟಿನಲ್ಲಿ ಕೂರಿಸಿಕೊಂಡ.
ಪೆರೇಸಂದ್ರದಿಂದ ಸೋಮೇಶ್ವರಕ್ಕೆ ಒಬ್ಬ ಪ್ರಯಾಣಿಕನಿಗೆ ಹತ್ತು ರೂ. ಟಿಕೆಟ್. ಕೋಳಿಗೆ ಐದು ರೂ. ಟಿಕೆಟ್.
ಪೆರೇಸಂದ್ರದಿಂದ ಸೋಮೇಶ್ವರಕ್ಕೆ ಹೋಗುವಾಗ ಸರಕಾರಿ ಬಸ್ಸಿನಲ್ಲಿ ನಡೆದ ಈ ಪ್ರಸಂಗ ವಾಟ್ಸಾಪು ಮತ್ತಿತರೆ ಜಾಲ ತಾಣಗಳಲ್ಲಿ ಭಾರೀ ಟ್ರೋಲ್ ಆಗುತ್ತಿದೆ. ಇನ್ನು ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರಂತೂ ಕಂಡಕ್ಟರ್ ಮತ್ತು ಕೋಳಿ ಕೊಂಡ ವ್ಯಕ್ತಿಯ ಪ್ರಸಂಗವನ್ನು ಕಂಡು ಮುಸಿ ಮುಸಿ ನಕ್ಕರು. ಅಂದಹಾಗೆ, ಈ ಪೆರೇಸಂದ್ರ ನಮ್ಮ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ತವರೂರು.