ಪಟ್ಟಣ ಪಂಚಾಯಿತಿ & ಪೊಲೀಸ್ ಅಧಿಕಾರಿಗಳ ಭೇಟಿ: ಇದು ಸಿಕೆನ್ಯೂಸ್ ನೌ ಫಲಶ್ರುತಿ
by GS Bharath Gudibande
ಗುಡಿಬಂಡೆ: ಮಕ್ಕಳು, ಮಹಿಳೆಯರು ಮಾತ್ರವಲ್ಲದೆ, ಇಡೀ ಪಟ್ಟಣದ ಜನ ಹಾಗೂ ಪ್ರವಾಸಿಗರಿಗೂ ನೆಚ್ಚಿನ ತಾಣವಾಗಿದ್ದ ಇಲ್ಲಿನ ಹೊಂಗೆ ಉದ್ಯಾನವನದತ್ತ ಕೊನೆಗೂ ಅಧಿಕಾರಿಗಳ ನೋಟ ಹರಿದಿದೆ.
ಕುಡುಕರ ಅಡ್ಡೆಯಾಗಿ ಪಾಳುಬಿದ್ದಿದ್ದ ಉದ್ಯಾನವನದ ಕಳೆಗೆಟ್ಟ ದೃಶ್ಯಗಳೊಂದಿಗೆ ಸಿಕೆನ್ಯೂಸ್ ನೌ ಪ್ರಕಟಿಸಿದ ವರದಿಗೆ ಫಲ ಸಿಕ್ಕಿದ್ದು, ಪಟ್ಟಣ ಪಂಚಾಯಿತಿ ಸಿಬ್ಬಂದಿ ಸ್ವಚ್ಛಗೊಳಿದ್ದಾರೆ.
ಜೆಎಂಎಫ್ಸಿ ನ್ಯಾಯಾಲಯ ಎದುರು, ಶ್ರೀ ವೈದ್ಯನಾಥೇಶ್ವರ ದೇವಾಲಯದ ತಪ್ಪಲಿನಲ್ಲಿರುವ ಉದ್ಯಾನವನವನ್ನು ಕಳೆದ 10 ವರ್ಷಗಳಿಂದ ಪಟ್ಟಣದ ಪರಿಸರ ಪ್ರೇಮಿಗಳು ಹೊಂಗೆ ಗಿಡಗಳನ್ನು ನೆಟ್ಟು ಬೆಳೆಸಿದ್ದರು. ಈಗ ಗಿಡಗಳು ಮರಗಳಾಗಿ ಬೆಳೆದು ನಿಂತಿದ್ದು, ಬಂದವರಿಗೆ ನೆರಳು ನೀಡಿ ಪೊರೆಯುತ್ತಿವೆ.
ಬೆಳಗ್ಗೆ ಮತ್ತು ಸಂಜೆಯ ವಾಯುವಿಹಾರಿಗಳ ಪಾಲಿಗೆ ನೆಚ್ಚಿನ ತಾಣವಾಗಿದ್ದ ಇಲ್ಲಿ ಪ್ರಾಣಯಾಮ, ಲಘು ವ್ಯಾಯಾಮ ಮಾಡಲು ಯೋಗ್ಯವಾಗಿತ್ತು. ಹೊಂಗೆ ಮಿಶ್ರಿತ ಗಾಳಿಯಲ್ಲಿ ಎಲ್ಲರೂ ವಿಹರಿಸುತ್ತಿದ್ದರು. ಅಲ್ಲದೆ, ಅಮಾನಿ ಭೈರಸಾಗರದ ತಪ್ಪಲಿನಲ್ಲಿರುವ ಈ ಉದ್ಯಾನದಲ್ಲಿ ಬೆಳಗ್ಗೆ-ಸಂಜೆ ಕೂರುವುದೆಂದರೆ ಅದೊಂದು ಅವರ್ಣನೀಯ ಅನುಭವವಾಗಿತ್ತು ಎನ್ನುತ್ತಾರೆ ಪಟ್ಟಣದ ನಿವಾಸಿಗಳು.
ಇಂಥ ಉದ್ಯಾನವನವನ್ನು ಪಟ್ಟಣ ಪಂಚಾಯಿತಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಹಾಳಾಗಿತ್ತು. ಎಲ್ಲಡೆ ಹುಲ್ಲು, ಗಿಡಗಂಟೆ ಬೆಳೆದು ಮಕ್ಕಳು, ಮಹಿಳೆಯರು ಹಾಗೂ ವಾಯುವಿಹಾರಿಗಳು ಬರುವುದಕ್ಕೆ ಆತಂಕಪಡುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ, ಪುಂಡು ಪೋಕರಿಗಳ ಅಡ್ಡೆಯಾಗಿ ಬದಲಾಗಿ, ಅಲ್ಲಿಯೇ ತ್ಯಾಜ್ಯವೆಲ್ಲ ತುಂಬಿ ಕೊಳಕಾಗಿತ್ತು.
CkNewsNow ಇಂಪ್ಯಾಕ್ಟ್
ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ದೂರಿನ ಮೇಲೆ ಸಿಕೆನ್ಯೂಸ್ ನೌ ಉದ್ಯಾನವನದ ಹಾಳು ಸ್ಥಿತಿಯನ್ನು ಅಗಸ್ಟ್ 29ರಂದು ಸವಿವರವಾಗಿ ವರದಿ ಮಾಡಿತ್ತು. ಈ ವರದಿಗೆ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಉದ್ಯಾನವನದ ಸ್ವಚ್ಚತಾ ಕಾರ್ಯವನ್ನು ಮಾಡಿದ್ದಾರಲ್ಲದೆ, ಸಮಗ್ರ ನಿರ್ವಹಣೆಗೆ ಮುಂದಾಗಿದ್ದಾರೆ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಪಟ್ಟಣದಲ್ಲಿ ಸ್ವಚ್ಚತೆಯನ್ನು ಕಾಪಾಡುತ್ತಿರುವ ಪಪಂ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರಿಗೆ ಧನ್ಯವಾದಗಳು. ಪಟ್ಟಣದ ಹಲವು ಉದ್ಯಾನವನಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ಜವಾಬ್ದಾರಿ ಪಟ್ಟಣ ಪಂಚಾಯಿತಿ ಮೇಲಿದೆ. ಇನ್ನು ಮುಂದೆಯಾದರೂ ಎಲ್ಲ ಉದ್ಯಾನವನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು.
ಜಿ.ಎನ್.ನವೀನ್, ಪರಿಸರ ಪ್ರೇಮಿ, ಗುಡಿಬಂಡೆ
ಪಟ್ಟಣದ ಸಾರ್ವಜನಿಕರು, ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ಪಪಂ ಹಲವು ಭಾರಿ ಸ್ವಚ್ಚತೆ ಮಾಡುತ್ತಾ ಬಂದಿದೆ, ಆದರೆ, ಸಂಜೆ ವೇಳೆ ಕುಡುಕರಿಂದ ಉದ್ಯಾನವನ ಹಾಳಾಗುತ್ತಿದೆ. ಪೊಲೀಸರು ಸಂಜೆ ವೇಳೆ ಗಸ್ತು ಹೋಗುವ ಮೂಲಕ ಪುಂಡರಿಗೆ ಎಚ್ಚರಿಕೆ ನೀಡಬೇಕು.
ಶಿವಣ್ಣ, ಆರೋಗ್ಯ ನಿರೀಕ್ಷಕ, ಪಟ್ಟಣ ಪಂಚಾಯಿತಿ