ವರ್ಲಕೊಂಡ ಪಿಡಿಒ ವಿರುದ್ಧ ಬಂಡೆದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ & ಸದಸ್ಯರು: ಪಿಡಿಒ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?
By GS Bharath Gudibande
ಗುಡಿಬಂಡೆ/ಬೆಂಗಳೂರು: ತಾಲೂಕಿನ ವರ್ಲಕೊಂಡ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಭಿವೃದ್ಧಿಗೆ ಸ್ಪಂದಿಸದೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಹಣ ದುರುಪಯೋಗ ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸ್ವತಃ ಪಂಚಾಯಿತಿ ಅಧ್ಯಕ್ಷೆ ಹಾಗೂ ಸದಸ್ಯರೇ ಗ್ರಾಮ ಪಂಚಾಯತಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ.
ವರ್ಲಕೊಂಡ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶ್ರೀನಿವಾಸ್ ವಿರುದ್ಧ ಬಂಡೆದ್ದಿರುವ ಗ್ರಾಪಂ ಅಧ್ಯಕ್ಷೆ ಹಾಗೂ ಎಲ್ಲಾ ಸದಸ್ಯರು ಕಚೇರಿಗೆ ಬೀಗ ಹಾಕಿ, ಕೂಡಲೇ ಪಿಡಿಒ ಅವರನ್ನು ಬದಲಾಯಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಎಲ್ಲೆಡೆ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತಗಳು ಅನೇಕ ಕ್ರಮಗಳನ್ನು ಕೈಗೊಂಡಿವೆ. ಆದರೆ, ವರ್ಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಪಿಡಿಓ ನಿರ್ಲಕ್ಷ್ಯ& ಸರ್ವಾಧಿಕಾರಿ ಧೋರಣೆಯಿಂದ ಅಭಿವೃದ್ಧಿ ಸಂಪೂರ್ಣವಾಗಿ ಕುಠಿತವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಸದಸ್ಯರು ದೂರಿದ್ದಾರೆ.
ಮಹಾಮಾರಿ ಸೋಂಕು ಎಲ್ಲರನ್ನೂ ಸಂಕಷ್ಟಕ್ಕೀಡು ಮಾಡಿದೆ. ಇಂಥ ಸಂದರ್ಭದಲ್ಲೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಅವರಲ್ಲಿರುವ ಭಯ ಹೋಗಲಾಡಿಸಲು ಪಿಡಿಒ ಶ್ರಮಿಸಬೇಕಿತ್ತು. ಹಳ್ಳಿಗಳಿಗೆ ಭೇಟಿ ನೀಡಿ ಜನರ ಕುಂದುಕೊರತೆಗಳನ್ನು ವಿಚಾರಿಸಿ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಪಿಡಿಒ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳ್ಳಿಗಳಲ್ಲಿ ಕೊರೋನಾ ವಿರುದ್ಧ ಸಾರ್ವಜನಿಕರು ಇನ್ನೂ ಹೋರಾಟ ನಡೆಸುತ್ತಿದ್ದಾರೆ. ಹೀಗಿರುವಾಗ ಹಳ್ಳಿಗಳಲ್ಲಿ ಸ್ವಚ್ಚತೆ ಕಾಪಾಡುವತ್ತ ಗ್ರಾಮಾಭಿವೃದ್ಧಿ ಅಧಿಕಾರಿ ಹೆಚ್ಚು ಗಮನ ಕೊಡಬೇಕಿತ್ತು. ಆ ಕೆಲಸವನ್ನು ಮಾಡದೇ ಪಿಡಿಒ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ವರ್ಲಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಜನರೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ..
ಅಧ್ಯಕ್ಷೆ, ಸದಸ್ಯರ ಆಕ್ರೋಶ
ಇತ್ತೀಚೆಷ್ಟೇ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಆಯ್ಕೆಯಾಗಿದ್ದಾರೆ, ಅವರು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿ ತಮ್ಮ ಕ್ಷೇತ್ರದ ಜನರಿಗೆ ಸಹಾಯ ಮಾಡಬೇಕು. ಧೈರ್ಯ ತುಂಬಬೇಕು. ಎಲ್ಲೆಡೆ ಸ್ವಚ್ಚತೆ ಕಾಪಾಡಿ ಕೊರೋನಾ ವಿರುದ್ದ ಹೋರಾಡಲು ಸಹಕರಿಸಬೇಕು ಎಂದು ಹಲವು ಸಲ ಹೇಳಿದರೂ ಪಂಚಾಯತಿ ಪಿಡಿಒ ಕೇಳುತ್ತಿಲ್ಲ. ಜನ ಪ್ರತಿನಿಧಿಗಳಿಗೆ ಅವರು ಸಹಕಾರ ನೀಡದೇ ಇರುವುದು ಸರಿಯಲ್ಲ ಎಂದು ಅಧ್ಕಕ್ಷೆ ಆನಂದಮ್ಮ ನಾರಾಯಣಸ್ವಾಮಿ ದೂರಿದರು.
ಗ್ರಾಮ ಪಂಚಾಯಿತಿ ಅಬೀವೃದ್ಧಿಗೆ ಸದಸ್ಯಋು ಇಷ್ಟೆಲ್ಲಾ ಗಲಾಟೆ ಮಾಡುತ್ತಿದ್ದರೆ ಪಿಡಿಒ ಶ್ರೀನಿವಾಸ್ ಮಾತ್ರ ಇದಕ್ಕೂ-ನನಗೂ ಸಂಬಂಧಿವಿಲ್ಲ ಎಂಬಂತೆ ಇದ್ದಾರೆ. ಈ ಹಿಂದೆಯೂ ವರು ಅಕ್ರಮದಲ್ಲಿ ಭಾಗಿಯಾಗಿ ಎಸಿಬಿ ಬಲೆಗೂ ಬಿದ್ದಿದ್ದರು. ಕಾರ್ಯ ನಿರ್ವಹಣಾಧಿಕಾರಿಗೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಈಶ್ವರಪ್ಪ ಹೇಳಿದ್ದೇನು?
ಸಚಿವ ಕೆ.ಎಸ್.ಈಶ್ವರಪ್ಪ
ಪಿಡಿಒ ವರ್ತನೆ ಖಂಡಿಸಿ ವರ್ಲಕೊಂಡ ಗ್ರಾಮ ಪಂಚಾಯಿತಿ ಕಚೇರಿಗೆ ಅಧ್ಯಕ್ಷೆ ಬೀಗ ಹಾಕಿದ ಬಗ್ಗೆ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಿಷ್ಟು.
“ಪಂಚಾಯಿತಿ ಎಂದರೇ ಅದೇ ಒಂದು ಸರಕಾರ. ಪಿಡಿಒ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ ಕೂಡಲೇ ಸಭೆಯಲ್ಲಿ ಒಂದು ನಿರ್ಣಯ ಅಂಗೀಕಾರ ಮಾಡಿ ಅದನ್ನು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕಳಿಸಿ. ಆರೋಪ ನಿಜವಾದರೆ, ಕೂಡಲೇ ಅವರನ್ನು ಅಮಾನತು ಅಥವಾ ವರ್ಗಾವಣೆ ಮಾಡುವ ಅಧಿಕಾರ ಸಿಇಒಗೆ ಇರುತ್ತದೆ. ಅಲ್ಲೂ ಕೆಲಸ ಆಗಲಿಲ್ಲ ಎಂದರೆ ನಿರ್ಣಯದ ಒಂದು ಪ್ರತಿಯನ್ನು ನನ್ನ ಕಚೇರಿಗೆ ಮುಟ್ಟಿಸಿ. ಆತನಿಗೆ ಮನೆ ದಾರಿ ನಾನು ತೋರಿಸುತ್ತೇನೆ” ಎಂದಿದ್ದಾರೆ ಸಚಿವರು.
ಪಿಡಿಒಗಳು ಜನರ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಕೋವಿಡ್ ಸಂದರ್ಭದಲ್ಲಿ ಅವರು ಕರ್ತವ್ಯ ಪಾಲನೆ ಮಾಡಿಲ್ಲವೆಂದರೆ ಕ್ಷಮೆಯೇ ಇಲ್ಲ ಎಂದು ಸಚಿವ ಈಶ್ವರಪ್ಪ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಹೇಳಿದರು.
ಪಿಡಿಒ ಅವರು ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಲು ನಮಗೆ ಯಾವುದೇ ರೀತಿಯ ಸಹಕಾರ ನೀಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪಿಡಿಒ ಬದಲಾವಣೆ ಮಾಡಿ ಒಬ್ಬ ದಕ್ಷ ಅಧಿಕಾರಿಯನ್ನು ನಿಯೋಜನೆ ಮಾಡಬೇಕು.
ಆನಂದಮ್ಮ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ
ನಾನು ಇಂದು ಬೆಳಗ್ಗೆ ಪಂಚಾಯಿತಿಗೆ ಭೇಟಿ ನೀಡಿದ್ದೆ. ಯಾವುದೇ ರೀತಿಯ ಸಮಸ್ಯೆ ಕಾಣಲಿಲ್ಲ, ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕೆಲಸಗಳು ನಡೆಯುತ್ತಿದೆ. ಲಸಿಕೀಕರಣ ಸೇರಿದಂತೆ ಎಲ್ಲವೂ ನಡೆಯುತ್ತಿದೆ. ಪಂಚಾಯತಿ ಪಿಡಿಒ ಬದಲಾವಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ರವೀಂದ್ರ, ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯತಿ
Comments 1