ಪೊಲೀಸರು ಬಗೆದಷ್ಟೂ ಬೆಳಕಿಗೆ ಬರುತ್ತಿವೆ ಕರಾಳ ಕೃತ್ಯಗಳು
ಮೈಸೂರು: ಇಲ್ಲಿನ ಲಲಿತಾದ್ರಿ ಪುರದಲ್ಲಿ ನಡೆದ ಪೈಶಾಚಿಕ ಸಾಮೂಹಿಕ ಅತ್ಯಾಚಾರದ ತನಿಖೆಯನ್ನು ನಡೆಸಿದಂತೆಲ್ಲ ಕೃತ್ಯವೆಸಗಿದ ಕಿರಾತಕರ ಕರಾಳಮುಖ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದ್ದು, ಸ್ವತಃ ತನಿಖಾ ತಂಡವೇ ಬೆಚ್ಚಿಬೀಳುವ ಸಂಗತಿಗಳು ಹೊರಬೀಳುತ್ತಿವೆ ಎಂದು ಗೊತ್ತಾಗಿದೆ.
ತಮಿಳುನಾಡಿನ ತಿರುಪೂರ್ʼನ ರೇಪಿಸ್ಟುಗಳಲ್ಲಿ ಐವರು ಸಿಕ್ಕಿಬಿದ್ದಿದ್ದು, ಅವರಿಗೆ ಸಖತ್ತಾಗಿ ಡ್ರಿಲ್ ನಡೆದಿದೆ. ಬಂಧಿತರಲ್ಲಿ ಒಬ್ಬನಂತೂ ಪರಮ ಕ್ರೂರಿ ಎಂಬ ಅಂಶ ಬೆಳಕಿಗೆ ಬಂದಿದೆ.
ಈ ಪಾಪಿ ಯುವತಿಯೊಂದಿಗೆ ಮೃಗದಂತೆ ವರ್ತಿಸಿದ್ದನೆಂದು ಹೇಳಲಾಗಿದ್ದು, ಇವನ ಕಾಮದಾಹದ ಕಥೆ ಕೇಳಿ ಕ್ಷಣಕಾಲ ಪೊಲೀಸರೇ ಬೆಚ್ಚಿಬಿದ್ದಿದ್ದಾರೆಂದು ಮೂಲಗಳು ತಿಳಿಸಿವೆ.
ಅಗಸ್ಟ್ ೨೮ರಂದೇ ಪಾತಕಿಗಳನ್ನು ಬಂಧಿಸಿ ಮೈಸೂರಿಗೆ ಕರೆ ತಂದಿದ್ದ ಪೊಲೀಸರು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆದಿದ್ದರು. ಕಳೆದ ಐದು ದಿನಗಳಿಂದ ಕೀಚಕರನ್ನು ಎಡೆಬಿಡದೇ ಡ್ರಿಲ್ ಮಾಡುತ್ತಿರುವ ಪೊಲೀಸರು ಅನೇಕ ಕರಾಳ ಸಂಗತಿಗಳನ್ನು ಬಾಯ್ಬಿಡಿಸಿದ್ದಾರೆಂದು ಗೊತ್ತಾಗಿದೆ.
ಇನ್ನು, ಬಾಲಾಪರಾಧಿಗಳ ವಿಭಾಗದಲ್ಲಿರುವ ಇನ್ನೊಬ್ಬನೂ ಕಡಿಮೆ ಆಸಾಮಿ ಎಲ್ಲ ಎಂಬ ಸಂಗತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇವನೂ ವಿಕೃತ ಕಾಮಿಯಾಗಿದ್ದು, ವಯಸ್ಕರನ್ನು ಮೀರಿಸುವಂತೆ ಈ ಬಾಲಕ ಸಂತ್ರಸ್ಥೆಯೊಂದಿಗೆ ಅಮಾನುಷವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಸಿಕ್ಕಿರುವ ಎಲ್ಲರನ್ನು ಕೆಲವೊಮ್ಮೆ ಒಟ್ಟಿಗೆ ಕೂಡಿಸಿ, ಇನ್ನೊಮ್ಮೆ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.
ದುಷ್ಕೃತ್ಯದ ಆರನೇ ಆರೋಪಿಯನ್ನು ತಿರುಪೂರಿನಲ್ಲಿ ಬಂಧಿಸಿದ್ದೇ ರೋಚಕ ಕಥೆ. ಸಂಬಂಧಿಕರ ಮನೆಯಲ್ಲಿ ಅಡಗಿದ್ದ ಅವನನ್ನು ಬೆನ್ನಟ್ಟಿದ ಪೊಲೀಸರು ಕಡೆಗೂ ಸೆರೆ ಹಿಡಿದಿದ್ದರು. ಅವನ ಹೆಸರು ಅಪ್ಪಿ ಅಲಿಯಾಸ್ ಬೇಬಿ, ವಿಜಿ ಅಲಿಯಾಸ್ ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ.
ಇನ್ನೂ ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಏಳನೇ ರೆಪಿಸ್ಟ್ʼಗಾಗಿ ಪೊಲೀಸರು ತಮಿಳುನಾಡಿನಲ್ಲಿ ವ್ಯಾಪಕ ಬಲೆ ಬೀಸಿದ್ದಾರೆ. ಅವನು ಪೊಲೀಸರ ಕೈಗೆ ಸಿಗದೆ ತಿರುಪೂರ್ʼನಲ್ಲೇ ತಲೆಮರೆಸಿಕೊಂಡು ಅಡ್ಡಾಡುತ್ತಿದ್ದಾನೆ. ಅವನ ಹೆಸರು ಸೆಲ್ವ. ಉಳಿದವರು ಸಿಕ್ಹಾಕಿಕೊಂಡ ಮೇಲೆ ಎಚ್ಚೆತ್ತುಕೊಂಡಿರುವ ಈತ ಪೋಲಿಸರಿಗೆ ಸಿಗದೆ ಆಟವಾಡಿಸುತ್ತಿದ್ದಾನೆ.