ಉಸ್ತುವಾರಿ ವಿರುದ್ಧವೇ ಸೇಡು ತೀರಿಸಿಕೊಳ್ಳಲು ಮುಂದಾದರಾ ಹಳೇ ರೆಬೆಲ್ಗಳು?
ಬೆಂಗಳೂರು/ನವದೆಹಲಿ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಬದಲಾಯಿಸುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ಪಾಳೆಯದಲ್ಲಿ ಈ ಸುದ್ದಿ ಜೋರಾಗಿದೆ.
ಸದ್ಯಕ್ಕೆ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಮೈಸೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಗೆ ಅವರು ಭೇಟಿ ನೀಡುತ್ತಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಅವರ ದಿಢೀರ್ ಸಕ್ರಿಯತೆ ಬಗ್ಗೆ ಎಲ್ಲರಿಗೂ ಅಚ್ಚರಿ ಉಂಟಾಗಿದ್ದು, ನಿರ್ಗಮನಕ್ಕೆ ಮೊದಲು ಸಿಂಗ್ ಮಿಂಚಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
ಇಂದು ಬೆಳಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿದ್ದ ಸಿಂಗ್ ಉಪಾಹಾರ ಸೇವಿಸುವ ನೆಪದಲ್ಲಿ ಬಹಳ ಹೊತ್ತು ಮಾತುಕತೆ ನಡೆಸಿದ್ದಾರೆ. ಇವರಿಗೂ ಮುನ್ನ ರಾಜ್ಯದ ವಿವಿಧ ನಾಯಕರನ್ನು ಅವರು ಭೇಟಿಯಾಗಿದ್ದಾರೆ.
ಈ ಹಿಂದೆಯೇ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಯಡಿಯೂರಪ್ಪ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ನಾಯಕರ ವಿರೋಧ ಕಟ್ಟಿಕೊಂಡಿದ್ದ ಅರುಣ್ ಸಿಂಗ್ ವಿರುದ್ಧ ಅನೇಕ ದೂರುಗಳು ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೂ ಹೋಗಿದ್ದವು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅರುಣ್ ಸಿಂಗ್ ಒಂದೇ ಕಡೆ ವಾಲಿದ್ದರು. ನಮ್ಮ ಅಭಿಪ್ರಾಯಕ್ಕೆ ಕಿಮ್ಮತ್ತು ಕೊಡುತ್ತಿರಲಿಲ್ಲ. ಹೀಗಾಗಿ ಅವರನ್ನು ರಾಜ್ಯ ಪ್ರಭಾರಿ ಹೊಣೆಯಿಂದ ಬದಲಾಯಿಸಬೇಕು ಎಂದು ಯತ್ನಾಳ್ ಬಹಿರಂಗವಾಗಿಯೇ ಒತ್ತಾಯ ಮಾಡಿದ್ದರು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಸಿಂಗ್ ಕಳೆದ ಜುಲೈನಲ್ಲಿ ಬಿಜೆಪಿ ಶಾಸಕರ ಜತೆ ನಡೆಸಿದ ಚರ್ಚೆಯ ವೇಳೆ ಯತ್ನಾಳ್ ಭೇಟಿಗೆ ನಿಗದಿಯಾಗಿದ್ದ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಿ ಸೇಡು ತೀರಿಸಿಕೊಂಡಿದ್ದರು.
ಅರುಣ್ ಸಿಂಗ್ ಈ ನಡೆಯ ಬಗ್ಗೆ ಯತ್ನಾಳ್ ಕೂಡ ಅಷ್ಟೇ ತೀವ್ರವಾಗಿ ಟೀಕೆ ಮಾಡಿದ್ದರಲ್ಲದೆ, ಬಂಡಾಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದವರೂ ಕೂಡ ಸಿಂಗ್ ನಡೆಯಲ್ಲಿ ತಪ್ಪು ಹುಡುಕಿ ಕಟುವಾಗಿ ಟೀಕಿಸಿದ್ದರು. ಹೀಗಾಗಿ ರಾಜ್ಯದಲ್ಲಿ ಸ್ವತಃ ಸಿಂಗ್ ವಿರುದ್ಧವೇ ಅತೃಪ್ತಿ ಹೊಗೆಯಾಡುತ್ತಿದೆ. ರಾಜಿ ಮಾಡಿಸಲೆಂದು ರಾಜ್ಯಕ್ಕೆ ಬಂದು ರಾಜಾಹುಲಿ ಪರ ನಿಂತ ಸಿಂಗ್ʼಗೆ ಬುದ್ಧಿ ಕಲಿಸಲೇಬೇಕೆಂದು ಹಲೆಯ ರೆಬೆಲ್ಗಳು ಈಗ ಸ್ಕೆಚ್ ಹಾಕಿ ಕೂತಿದ್ದಾರೆ.
ಇನ್ನೊಂದೆಡೆ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆಯೂ ಸಿಂಗ್ ವರಸೆ ಬದಲಾಗಿಲ್ಲ. ಸಮಯ ಸಿಕ್ಕಾಗಲೆಲ್ಲ ಅವರು ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವುದು ಪಕ್ಷದ ಹಿರಿಯರಿಗೆ ಇಷ್ಟವಾಗುತ್ತಿಲ್ಲ. ಅರುಣ್ ಸಿಂಗ್ ನೀಡುತ್ತಿರುವ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು ಎಂದು ಅವರು ಹೇಳುತ್ತಿದ್ದಾರೆ.
ಹೇಳಿಕೇಳಿ ಅರುಣ್ ಸಿಂಗ್ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಂಬಂಧಿ. ಈ ಕಾರಣಕ್ಕೆ ದಿಲ್ಲಿಗೆ ಹೋಗುವ ಪ್ರತಿಯೊಬ್ಬ ರಾಜ್ಯ ಮುಖಂಡನೂ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಅರುಣ್ ಸೀಂಗ್ ಮೇಲೆ ಪ್ರಭಾವ ಬೀರಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಹೊಸ ಆರೋಪ. ಇದು ದಿಲ್ಲಿ ವರಿಷ್ಠರಿಗೂ ಗೊತ್ತಿಲ್ಲದ ವಿಚಾರವೇನಲ್ಲ.
ರಾಜ್ಯದಲ್ಲಿ, ಅತ್ತ ದಿಲ್ಲಿಯಲ್ಲಿ ಬೇರೆ ಬೇರೆ ಪವರ್ ಸೆಂಟರ್ʼಗಳು ಸೃಷ್ಟಿಯಾಗುವುದು ಹೈಕಮಾಂಡ್ʼಗೆ ಇಷ್ಟವಿಲ್ಲ. ಈ ಕಾರಣಕ್ಕೆ ಅರುಣ್ ಸಿಂಗ್ ಜಾಗಕ್ಕೆ ಬೇರೊಬ್ಬರನ್ನು ತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಅರುಣ್ ಸಿಂಗ್ ಜಾಗಕ್ಕೆ ಯಾರು?
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮುಂಚೂಣಿಯಲ್ಲಿದೆ. ಈ ಹಿಂದೆಯೂ ರಾಜ್ಯ ಉಸ್ತುವಾರಿ ಆಗಿದ್ದ ಪ್ರಧಾನ್ ಅವರು, ರಾಜ್ಯ ಬಿಜೆಪಿ ಎಲ್ಲ ಆಗು ಹೋಗುಗಳನ್ನು ಬಲ್ಲವರು. ಇವರ ಜತೆಗೆ, ತೆಲಂಗಾಣದ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಹೆಸರೂ ಹೈಕಮಾಂಡ್ ಪರಿಶೀಲನೆಯಲ್ಲಿದೆ.
ತಮ್ಮ ವಿರುದ್ಧ ಕರ್ನಾಟಕದಲ್ಲೇ ದಾಳ ಉರುಳುತ್ತಿದೆ ಎಂದು ಗೊತ್ತಾದ ಕೂಡಲೇ ಅರುಣ್ ಸಿಂಗ್ ಪುನಾ ರಾಜ್ಯಕ್ಕೆ ಧಾವಿಸಿ ಬಂದಿದ್ದಾರೆ ಎನ್ನುತ್ತಾರೆ ಬಿಜೆಪಿ ಮುಖಂಡರೊಬ್ಬರು.