ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಂದ ಭವ್ಯ ಸ್ವಾಗತ
by Ra Na Gopala Reddy Bagepalli
ಬಾಗೇಪಲ್ಲಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಗಸ್ಟ್ 22ರಂದು ಕನ್ಯಾಕುಮಾರಿಯಲ್ಲಿ ಸೈಕಲ್ ಜಾಥಾ ಪ್ರಾರಂಭಿಸಿ ದಿಲ್ಲಿಯ ರಾಜ್ʼಘಾಟ್ಗೆ ಹೋಗುವ ಮಾರ್ಗದ ನಡುವೆ ಬಾಗೇಪಲ್ಲಿಗೆ ಆಜಾದಿ ಅಮೃತ ಮಹೋತ್ಸವ ಸಿ.ಆರ್.ಪಿ.ಇ. ಸೈಕಲ್ ಜಾಥಾ ಬಂದು ತಲುಪಿದ್ದು, ಪಟ್ಟಣದ ಚಿತ್ರಾವತಿ ನದಿ ಸೇತುವೆಯ ಬಳಿ ಅಭೂತಪೂರ್ವ ಸ್ವಾಗತ ಕೋರಲಾಯಿತು.
ಪಟ್ಟಣದ ನ್ಯಾಯಾಲಯದ ಬಳಿ ನಿರ್ಮಿಸಲಾದ ವೇದಿಕೆಯ ಬಳಿ ಸಿ.ಆರ್.ಪಿ.ಎಫ್. ಸೈಕಲ್ ಜಾಥಾ ಯೋಧರಿಗೆ ಭವ್ಯ ಸ್ವಾಗತವನ್ನು ನೀಡಿದರು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು; “ಚಳಿಯನ್ನದೆ, ಮಳೆಯೆನ್ನದೆ ನಮ್ಮ ದೇಶದ ಗಡಿಯನ್ನುಕಾಪಾಡುವ ಯೋಧರ ಸೇವೆ ಆವಿಸ್ಮರಣೀಯ. ಅವರು ಅಲ್ಲಿ ಗಡಿ ಕಾಯುತ್ತಿರುವುದರಿಂದ ದೇಶದೊಳಗಿನ ನಾವು ನೆಮ್ಮದಿಯಿಂದ ಜೀವನ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದ 75 ವರ್ಷಗಳ ಸ್ಮರಣಾರ್ಥ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯೋಧರು ತಮ್ಮ ಸೈಕಲ್ ಜಾಥಾ ಮೂಲಕ ಸಂಚರಿಸಿ, ದೇಶದ ಸಾರ್ವಭೌಮತೆ, ಸಮಾನತೆ, ಜಾತ್ಯತೀತತೆ ಮತ್ತು ಪ್ರಜಾಸತ್ತಾತ್ಮಕ ಅಂಶಗಳನ್ನು ಸಾರ್ಥಕಗೊಳಿಸುತ್ತಿದ್ದಾರೆ” ಎಂದರು
ಸೈಕಲ್ನಲ್ಲಿ ಬಂದ ಯೋಧರಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೂವು ಹಣ್ಣು ನೀಡಿ ಸ್ವಾಗತ ಕೋರಿದರು. ಭಾರತ ಮಾತಾಕಿ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು. ನಂತರ ಪಟ್ಟಣದ ರಾಜಬೀದಿಯಲ್ಲಿ ಯೋಧರು ತಮ್ಮ ಸೈಕಲ್ಗಳ ಮುಖಾಂತರ ಸಂಚರಿಸಿದರು. ಪಟ್ಟಣದ ನ್ಯಾಷನಲ್ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಜಾಥಾದಲ್ಲಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ತಹಸೀಲ್ದಾರ್ ಡಿ.ಎ. ದಿವಾಕರ್, ಪೊಲೀಸ್ ಅರಕ್ಷಕ ಉಪನಿರೀಕ್ಷಕ ಗೋಪಾಲ ರೆಡ್ಡಿ, ಕೃಷಿ ಇಲಾಖೆ ನಿರ್ದೇಶಕ ಮಂಜುನಾಥ್, ನ್ಯಾಷನಲ್ ಕಾಲೇಜು ದೈಹಿಕ ಶಿಕ್ಷಕ ಶ್ರೀನಿವಾಸ್, ಮುಖಂಡರಾದ ಅಮರನಾಥ ರೆಡ್ಡಿ, ಬೂರಗುಮಡುಗು ನರಸಿಂಹಪ್ಪ, ಪ್ರಭಾಕರ ರೆಡ್ಡಿ, ವೆಂಕಟರೆಡ್ಡಿ, ರಿಜ್ವಾನ್ ಮತ್ತಿತರೆ ಮುಖಂಡರು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.