ಪಿಡಿಒ ವಿರುದ್ಧ ಕ್ರಮಕ್ಕೆ ಇಒ ಸಮ್ಮತಿ; ಪಂಚಾಯಿತಿ ಅಧ್ಯಕ್ಷೆ, ಸದಸ್ಯರ ಜತೆ ಚರ್ಚೆ
by GS Bharath Gudibande
ಗುಡಿಬಂಡೆ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ವಿರುದ್ಧ ಸಿಡಿದೆದ್ದಿದ್ದ ವರ್ಲಕೊಂಡ ಗ್ರಾ.ಪಂ. ಅಧ್ಯಕ್ಷೆ, ಸದಸ್ಯರ ಆಕ್ರೋಶಕ್ಕೆ ಮಣಿದ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಇಂದು ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ಪಿಡಿಒ ಬಿಕ್ಕಟ್ಟಿನ ಬಗ್ಗೆ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸದಸ್ಯರ ಜತೆ ಚರ್ಚೆ ನಡೆಸಿದ ಇಒ, ಸಮಸ್ಯೆಗಳನ್ನು ಇತ್ಯರ್ಥ ಮಾಡಿದರಲ್ಲದೆ, ಆಕ್ರೋಶಕ್ಕೆ ಗುರಿಯಾಗಿರುವ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಪಿಡಿಒ ವಿರುದ್ಧ ಆರು ತಿಂಗಳ ಹಿಂದೆಯೇ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಅವರಿಗೆ ದೂರು ಸಲ್ಲಿಸಿದರು. ಅದಕ್ಕೆ ಇಒ ಸ್ಪಂದಿಸದ ಕಾರಣ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆನಂದಮ್ಮ ನಾರಾಯಣಸ್ವಾಮಿ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.
ಇಒ ಹೇಳಿದ್ದೇನು?
ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯತಿ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸದಸ್ಯರು ಭೇಟಿ ಮಾಡಿ ಪಿಡಿಒ ಬದಲಾವಣೆ ಬಗ್ಗೆ ಮಾಡಬೇಕೆಂದು ಮನವಿ ಮಾಡಿದ್ದರು. ಆಗ ಅವರಿಗೆ ಎಚ್ಚರಿಕೆ ನೀಡಿ ಪಂಚಾಯತಿ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಿಕೊಂಡು ಹೋಗುವಂತೆ ಪಿಡಿಒ ಶ್ರೀನಿವಾಸ್ʼಗೆ ಸೂಚಿಸಿದ್ದೆ. ಅಂದಿನ ಚರ್ಚೆ ಫಲಪ್ರದವಾಗಿತ್ತು. ಆದರೆ ನಿನ್ನೆ (ಬುಧವಾರ) ಪಂಚಾಯತಿ ಕಚೇರಿಗೆ ಅಧ್ಯಕ್ಷೆ, ಸದಸ್ಯರು ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇನೆ. ಪಿಡಿಒ ಬಗ್ಗೆ ಅಧಿಕೃತವಾಗಿ ದೂರುಗಳು ಬಂದರೆ ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇನೆ ಹಾಗೂ ಅವರ ಬದಲಾವಣೆ ಬಗ್ಗೆ ಜಿಪಂ ಸಿಇಒ ಅವರ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸುತ್ತೇನೆ ಎಂದು ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಅವರು ಸಿಕೆನ್ಯೂಸ್ ನೌ ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪಿಡಿಒ ಶ್ರೀನಿವಾಸ್, ಗ್ರಾಮ ಪಂಚಾಯತಿ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸದಸ್ಯರೂ ಉಪಸ್ಥಿತರಿದ್ದರು.
ಪಿಡಿಒ ಶ್ರೀನಿವಾಸ್
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..