ಅಡುಗೆ ಅನಿಲ ದರ ಹೆಚ್ಚಳ, ಜನ ವಿಲವಿಲ
ಬೆಂಗಳೂರು: ಕೋವಿಡ್ ನಡುವೆ ಹೈರಾಣವಾಗಿರುವ ಜನರು ಪೆಟ್ರೋಲ್-ಡೀಸೆಲ್ ಬೆಲೆ ನಿರಂತರ ಏರಿಕೆಯಿಂದ ಕಂಗೆಟ್ಟು ಹೋಗಿದ್ದರೆ, ಅಡುಗೆ ಅನಿಲದ ಬೆಲೆಯೂ ಪದೇಪದೆ ಏರಿಕೆಯಾಗುತ್ತಿರುವ ಕಾರಣದಿಂದ ಬಡಜನರ ಪಾಡು ನರಕ ಸದೃಶವಾಗಿದೆ.
ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬರುತ್ತಿದ್ದಂತೆ ತೈಲ ಬೆಲೆಗಳ ಮೇಲೆ ನಿಯಂತ್ರಣ ತೆಗೆದುಹಾಕಿ, ಅದರ ಹೊಣೆಗಾರಿಕೆಯನ್ನು ಕಂಪನಿಗಳ ಕೈಗೆ ಕೊಟ್ಟ ನಂತರ ಜನಸಾಮಾನ್ಯರ ಪಾಡು ಶೋಚನೀಯ ಸ್ಥಿತಿಗೆ ಹೋಗಿ ತಲುಪಿದೆ.
ಈಗ ಮತ್ತೆ ಬುಧವಾರ ಕಂಪೆನಿಗಳು ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು ಪುನಾ 25 ರೂ. ಹೆಚ್ಚಳ ಮಾಡಿದ್ದು, ಇದರಿಂದ ದೇಶದೆಲ್ಲೆಡೆ ಬೆಲೆ ಹೆಚ್ಚಾಗಿದೆ. ನವದೆಹಲಿಯಲ್ಲಿ ಈಗ ಸಬ್ಸಿಡಿಯೇತರ 14.2 ಕೆಜಿ ತೂಕದ ಅಡುಗೆ ಅನಿಲ ಸಿಲೆಂಡರ್ ಬೆಲೆ 886.50 ರೂ. ಆಗಿದೆ. ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಸಬ್ಸಿಡಿಯೇತರ ಅಡುಗೆ ಅನಿಲ ಸಿಲಿಂಡರ್ ದರ 887. 50 ರೂ. ಆಗಿದೆ.
ಇನ್ನು, ಹೊಸ ದರ ಇಂದಿನಿಂದಲೇ ಜಾರಿಗೆ ಬಂದಿದ್ದು, ಗ್ರಾಹಕರು ಹೊಸ ದರವನ್ನು ಪಾವತಿಸಿ ಸಿಲಿಂಡರ್‌ಪಡೆಯುತ್ತಿದ್ದಾರೆ.
19 ಕೆಜಿ ತೂಕದ ಕಮರ್ಷಿಯಲ್ ಸಿಲೆಂಡರ್ ಬೆಲೆಯಲ್ಲಿ ಏಕಾಎಕಿ 75 ರೂ. ಹೆಚ್ಚಳ ಮಾಡಲಾಗಿದ್ದು, ಅದರ ಬೆಲೆ ಈಗ 1,693 ರೂ. ಆಗಿದೆ.
ಹತೋಟಿ ಇಲ್ಲದೆ ಏರಿಕೆಯಾಗುತ್ತಿರುವ ಅಡುಗೆ ಅನಿಲ ಬೆಲೆಯಿಂದ ಜನರು ಕಂಗಾಲಾಗಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ತಲಾ 25 ರೂ.ನಂತೆ ಎರಡು ಸಲ 14.2 ಕೆಜಿ ತೂಕದ ಸಿಲಿಂಡರ್ ಬೆಲೆ ಹೆಚ್ಚಳವಾಗಿದ್ದು, ಮಹಿಳೆಯರು ಕೇಂದ್ರ ಸರಕಾರ ಮತ್ತು ತೈಲ ಕಂಪನಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆಘಾತಕಾರಿ ಸಂಗತಿ ಎಂದರೆ, ಕಳೆದ ಜನವರಿ 1ರಿಂದ ಅಡುಗೆ ಅನಿಲ ಬೆಲೆಯಲ್ಲಿ ಬರೋಬ್ಬರಿ 169 ರೂ. ಹೆಚ್ಚಳವಾಗಿದೆ. ಇನ್ನು, ಇದೇ ರೀತಿಯಲ್ಲಿ ಹಂತ ಹಂತವಾಗಿ ಗ್ಯಾಸ್ ದರವನ್ನು 25 ರೂ.ನಂತೆ ಏರಿಕೆ ಮಾಡುತ್ತಾ ಹೋಗಿ 1,000 ರೂ. ಮಟ್ಟಕ್ಕೆ ಬೆಲೆ ಮುಟ್ಟಿಸುವ ಎಲ್ಲ ಸಾಧ್ಯತೆ ನಿಚ್ಚಳವಾಗಿ ಗೊತ್ತಾಗುತ್ತಿದೆ.
ಬರೆಯ ಮೇಲೆ ಬರೆ
ಈಗಾಗಲೇ ಕೋವಿಡ್ ಕಾರಣದಿಂದ ಆರ್ಥಿಕತೆ ನೆಲಕಚ್ಚಿದೆ. ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಹೊಸ ಉದ್ಯೋಗ ಸೃಷ್ಟಿ ಶೂನ್ಯವಾಗಿದೆ. ಆದರೆ, ತೈಲ ಬೆಲೆ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯಿಂದ ಜನಸಾಮಾನ್ಯರ ಸ್ಥಿತಿ ಬರ್ಬರವಾಗಿದೆ. ಈಗ ಅಡುಗೆ ಅನಿಲ ಬೆಲೆ ಹೆಚ್ಚಳದಿಂದ ಹೊಟೇಲುಗಳಲ್ಲಿ ಆಹಾರ, ತಿಂಡಿ ಬೆಲೆ ಇನ್ನಷ್ಟು ಜಾಸ್ತಿಯಾಗಲಿದೆ.
ವ್ಯವಸ್ಥಿತ ತಂತ್ರ ಹೂಡಿದ ಮೋದಿ
ಮೋದಿ ದೇಶದ ಪ್ರಧಾನಿ ಆಗುತ್ತಿದ್ದಂತೆ ಹಂತ ಹಂತವಾಗಿ ಜನರಿಗೆ ನೀಡಲಾಗುತ್ತಿದ್ದ ಸಬ್ಸಿಡಿಗಳ ಮೇಲೆ ಕಾಕದೃಷ್ಟಿ ಬೀರಲಾಯಿತು. ಮುಖ್ಯವಾಗಿ ತೈಲ ಬೆಲೆಗಳ ಮೇಲಿದ್ದ ನಿಯಂತ್ರಣವನ್ನು ತೆಗೆಯಲಾಯಿತು. ಬಳಿಕ ಶ್ರೀಮಂತರು, ಸಿಲಿಂಡರ್ʼಗಳ ಮೇಲೆ ಪಡೆಯುವ ಸಬ್ಸಿಡಿಯನ್ನು ʼದೊಡ್ಡ ಮನಸ್ಸುʼ ಮಾಡಿ ಬಿಟ್ಟುಕೊಡಬೇಕು ಎಂದು ಮೋದಿ ಕರೆ ನೀಡಿದರು.
ಅದರಂತೆ, ಕೆಲ ಉಳ್ಳವರು ಸಬ್ಸಿಡಿಯನ್ನು ಬಿಟ್ಟುಕೊಟ್ಟರು. ಕರ್ನಾಟಕದಲ್ಲಿ ಅಂದಿನ ಕೇಂದ್ರ ಮಂತ್ರಿ ಆಗಿದ್ದ ಅನಂತ್ ಕುಮಾರ್ ಅವರು ಎಲ್‌ಪಿಜಿ ಸಬ್ಸಿಡಿ ತೊರೆದವರಲ್ಲಿ ಪ್ರಮುಖರು.
ಬಳಿಕ, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಾ ಹೊಗೆಯಲ್ಲಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಹೇಳುತ್ತಾ ಕೇಂದ್ರವು ʼಉಜ್ವಲʼ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯಡಿ 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಕೇವಲ 8 ಕೋಟಿ ಬಡ, ಗ್ರಾಮೀಣ ಜನರಿಗಷ್ಟೇ ಅಡುಗೆ ಅನಿಲ ಸಂಪರ್ಕ ನೀಡಲು ಸಾಧ್ಯವಾಯಿತು.
ಇದಾದ ಮೇಲೆ 2019ರಲ್ಲಿ ಕೋವಿಡ್ ಬಂದು ವಕ್ಕರಿಸುತ್ತಿದ್ದಂತೆ ಜನರ ಗಮನವೆಲ್ಲ ವೈರಸ್ ವಿರುದ್ಧ ಹೋರಾಡುವುದೇ ಆಯಿತು. ಹತ್ತಾರು ಸಂದರ್ಭಗಳಲ್ಲಿ ಭಾವನಾತ್ಮಕ ಮಾತುಗಳ ಸುಳಿಗೆ ಸಿಕ್ಕಿದ ಜನರಿಗೆ ಅಡುಗೆ ಅನಿಲ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಕೇಂದ್ರ ಹಿಂಪಡೆದಿದ್ದು ಗೊತ್ತಾಗಲೇ ಇಲ್ಲ. ಪೂರ್ಣ ಹಣ ಕೊಟ್ಟ ಸಿಲಿಂಡರ್ ಪಡೆಯುತ್ತಿದ್ದ ಜನರಿಗೆ ತಮ್ಮ ಖಾತೆಗೆ ಜಮೆ ಆಗುತ್ತಿದ್ದ ಹೆಚ್ಚುವರಿ ಹಣ ಕ್ರಮೇಣ ನಿಂತು ಹೋಯಿತು.
ಹತೋಟಿ ಇಲ್ಲದೆ ಅಡುಗೆ ಅನಿಲ ಮತ್ತು ತೈಲ ಬೆಲೆ ಏರಿಕೆ ಮಾಡುತ್ತಿರುವ ನರೇಂದ್ರ ಮೋದಿ ಸರಕಾರ ಪ್ರತಿಪಕ್ಷಗಳು ಮತ್ತು ಜನರ ಆಕ್ರೋಶವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಜನರ ಕಷ್ಟವನ್ನು ಕಡೆಗಣೆಸಿ ಏಕಪಕ್ಷೀಯವಾಗಿ ವರ್ತಿಸುತ್ತಿದೆ.
ಇನ್ನೊಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ನಾಗಾಲೋಟದಲ್ಲಿದ್ದು, ಈಗ ಪೆಟ್ರೋಲ್ ಬೆಲೆ ಲೀಟರಿಗೆ 104.98 ರೂ. ಹಾಗೂ ಡೀಸೆಲ್ ಬೆಲೆ ಲೀಟರಿಗೆ 94.34 ರೂ. ಆಗಿದೆ.
Comments 1