ಅಂಬಾನಿ ಆಸ್ತಿ ಹೆಚ್ಚಿದ್ದೆಷ್ಟು? ಅವರ ಸಾಲ ಮನ್ನಾ ಆಗಿದ್ದೆಷ್ಟು?; ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ ಕಠೋರ ಸತ್ಯಗಳು
ನಗರ ಜನರ ಬದುಕು ನರಕ ಮಾಡಿದ ಮೋದಿ ಎಂದು ದೂರಿದ ಮಾಜಿ ಸಿಎಂ
ಬೆಂಗಳೂರು: ನಗರದ ಮಧ್ಯಮ ವರ್ಗದ ಮಂದಿಗೆ ನಕಲಿ ದೇಶಭಕ್ತಿಯನ್ನು ಹೇಳುತ್ತಿದ್ದ ಬಿಜೆಪಿ ಈಗ ನಗರ ವಾಸಿಗಳ ಮತ್ತು ತೆರಿಗೆದಾರರ ಬದುಕನ್ನು ನರಕ ಮಾಡಿಟ್ಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದರು.
ವಿಪರೀತ ಬೆಲೆ ಏರಿಕೆ ಮತ್ತು ಪರೋಕ್ಷ ಹಾಗೂ ಪ್ರತ್ಯಕ್ಷ ತೆರಿಗೆಗಳ ಭಾರಕ್ಕೆ ನಗರ ಪ್ರದೇಶಗಳಲ್ಲಿರುವ ಜನರು, ಮಧ್ಯಮ ವರ್ಗದ ಮಂದಿ ಹೈರಾಣಾಗಿ, ಬೇಸತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಹೇಳಿದ್ದು ಹೀಗಿದೆ:
- ಕೆಲವರಿಗೆ ತಮ್ಮಲ್ಲಿ ಯಾವುದರ ಕೊರತೆ ಇರುತ್ತದೋ ಅದರ ಬಗ್ಗೆಯೇ ಹೆಚ್ಚೆಚ್ಚು ಮಾತನಾಡುವ ಚಟ ಇರುತ್ತದೆ. ಬಿಜೆಪಿ ಮತ್ತು ಪರಿವಾರದ ಮಂದಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲ. ಇಡೀ ದೇಶದ ಜನ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾಗ ಬಿಜೆಪಿ ಮತ್ತು ಪರಿವಾರ ದೇಶದ ಜನತೆಯ ಜತೆಗೆ ನಿಲ್ಲಲಿಲ್ಲ. ಹೀಗಾಗಿ ಬೆಜೆಪಿಗೆ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಇಲ್ಲ ಮತ್ತು ಬಿಜೆಪಿಯಲ್ಲಿ ಹುತಾತ್ಮರಾದವರು ಯಾರೂ ಇಲ್ಲ. ಅದಕ್ಕೇ ಬಿಜೆಪಿ ಹೆಚ್ಚೆಚ್ಚು ದೇಶಭಕ್ತಿಯ ಬಗ್ಗೆ ಮಾತನಾಡುತ್ತದೆ.
- ವಂದೇ ಮಾತರಂ, ಜೈ ಜವಾನ್-ಜೈ ಕಿಸಾನ್, ಸ್ವದೇಶಿ ಘೋಷಣೆಗಳೆಲ್ಲಾ ಸ್ವಾತಂತ್ರ್ಯ ಹೋರಾಟದ ನಾಯಕರುಗಳು ಕೊಟ್ಟಿದ್ದು. ಈ ಘೋಷಣೆಗಳಿಗೂ ಬಿಜೆಪಿಗೂ ಯಾವ ಸಂಬಂಧವೂ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು, ದೇಶದ ಜನರ ಹೋರಾಟದ ಜತೆಗೆ ನಿಂತಿದ್ದು ಕಾಂಗ್ರೆಸ್ ಪಕ್ಷ.
- ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ನಗರವಾಸಿಗಳ ಬದುಕು ನರಕವಾಗಿದೆ. ವಿದ್ಯುತ್ ಬಿಲ್‌ಗಳು ಶೇ.30ರಷ್ಟು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಮೋದಿ ಅವರು ಪ್ರಧಾನಿ ಆಗಿರುವವರೆಗೂ ಇಳಿಯುವಂತೆ ಕಾಣುತ್ತಿಲ್ಲ. ಒಂದು ವಾರದಲ್ಲಿ ಅಡುಗೆ ಸಿಲಿಂಡರ್ ಬೆಲೆ 50 ರೂ. ಹೆಚ್ಚಾಗಿ ನಗರದಲ್ಲಿ 886 ರೂಪಾಯಿ ಗ್ರಾಮೀಣ ಭಾಗದಲ್ಲಿ 900 ರೂಪಾಯಿ ತಲುಪಿದೆ. ಮನೆಗಳ ಆಸ್ತಿ ತೆರಿಗೆ ವಿಪರೀತ ಹೆಚ್ಚಾಗಿರುವುದು ಮಾತ್ರವಲ್ಲದೆ ಖಾಲಿ ಜಾಗಗಳಿಗೂ ತೆರಿಗೆ ವಿಧಿಸುತ್ತಿದ್ದಾರೆ. ಕಬ್ಬಿಣ, ಸಿಮೆಂಟ್ ಸೇರಿ ದಿನನಿತ್ಯ ಬಳಕೆಯ ಎಲ್ಲಾ ವಸ್ತುಗಳ ಬೆಲೆಯೂ ಆಕಾಶ ಮುಟ್ಟುತ್ತಿದೆ. ಅಚ್ಛೆ ದಿನ್ ಅಂದರೆ ಇದೇನಾ?
- ಕೇಂದ್ರ ಸರ್ಕಾರ ನಗರ ಪ್ರದೇಶಗಳಿಗೆ ಕೊಡುತ್ತಿದ್ದ ಅನುದಾನ ಕಡಿತಗೊಳಿಸಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಬಜೆಟ್ ಗಾತ್ರ ಕಡಿಮೆ ಇದ್ದಾಗಲೂ 15 ಸಾವಿರ ಕೋಟಿ ಅನುದಾನ ನೀಡಿದ್ದೆ. ಈಗ ಬಜೆಟ್ ಗಾತ್ರ ಹೆಚ್ಚಾಗಿದ್ದರೂ ಬಿಜೆಪಿ ಸರ್ಕಾರ ನೀಡಿರುವುದು 14 ಸಾವಿರ ಕೋಟಿ ಮಾತ್ರ. ಹೀಗಾಗಿ ನಮ್ಮ ಸರ್ಕಾರದ ಅವಧಿಯಲ್ಲೇ ಅತಿ ಹೆಚ್ಚು ಹಣ ನಗರ ಅಭಿವೃದ್ಧಿಗೆ ನೀಡಿದ್ದು ಬಿಟ್ಟರೆ ಬಿಜೆಪಿಯವರು ಮಾಡಿದ್ದು ಬರೀ ಭಜನೆ ಅಷ್ಟೆ.
ಅಂಬಾನಿ ಆಸ್ತಿ ಹೆಚ್ಚುತ್ತಿದೆ! ಹೇಗೆ?
- ತೆರಿಗೆದಾರರ, ನಗರ ವಾಸಿಗಳ, ಗ್ರಾಮೀಣ ಜನರನ್ನು ಬೆಲೆ ಏರಿಕೆಯ ನರಕದಲ್ಲಿ ನರಳಿಸುತ್ತಿರುವ ಬಿಜೆಪಿ ಸರ್ಕಾರ ಕಾರ್ಪೋರೇಟ್ ಶ್ರೀಮಂತರ ಆಸ್ತಿ ಪ್ರತೀ ವರ್ಷ ಲಕ್ಷ ಲಕ್ಷ ಕೋಟಿಗಳ ಗಡಿ ದಾಟಿಸುತ್ತಿದೆ. ಬಿಜೆಪಿಯ ರಾಷ್ಟ್ರೀಯ ನಾಯಕ ಸುಬ್ರಮಣ್ಯ ಸ್ವಾಮಿ ಅವರೇ ಇತ್ತೀಚಿಗೆ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿ ಟ್ವೀಟ್ ಮಾಡುತ್ತಲೇ ಇದ್ದಾರೆ. “2016ರಿಂದ ಅಂಬಾನಿಯ ಖಾಸಗಿ ಆಸ್ತಿ ಪ್ರತೀವರ್ಷ ದುಪ್ಪಟ್ಟಾಗುತ್ತಲೇ ಇದೆ. ಅಂಬಾನಿಯ ಆಸ್ತಿ ಎರಡೂವರೆ ವರ್ಷದಲ್ಲಿ 12.5 ಲಕ್ಷ ಕೋಟಿ ಹೆಚ್ಚಾಗಿದೆ. ಆದರೆ ಇದೇ ಅಂಬಾನಿ ಮಾಡಿದ್ದ 4.5 ಲಕ್ಷ ಕೋಟಿ ಬ್ಯಾಂಕ್ ಸಾಲವನ್ನು ವಸೂಲಾಗದ ಸಾಲ ಎಂದು ತೀರ್ಮಾನಿಸಿ ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ತಾನು ಸಾಲ ಮಾಡಿದ್ದ ಬ್ಯಾಂಕ್‌ಗಳನ್ನೇ ಖರೀದಿ ಮಾಡುವ ಮಟ್ಟಕ್ಕೆ ಬೆಳೆದಿರುವ ಅಂಬಾನಿಯ ಆಸ್ತಿ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚುತ್ತಿದ್ದರೂ ಈತ ಏಕೆ ಬ್ಯಾಂಕ್ ಸಾಲವನ್ನು ತೀರಿಸುತ್ತಿಲ್ಲ?” ಎಂದು ಸುಬ್ರಮಣ್ಯಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಇದು ಇಡಿ ದೇಶದ ಜನರ ಪ್ರಶ್ನೆಯೂ ಆಗಿದೆ. ರೈತರು ಸಾಲ ತೀರಿಸಿಲ್ಲ ಎಂದು ಅವರ ಟ್ರಾಕ್ಟರ್‌ಗಳನ್ನು ಜಪ್ತಿ ಮಾಡುವ ಬಿಜೆಪಿ ಸರ್ಕಾರ, ಮೋದಿ ಪ್ರಧಾನಿ ಆದ 7 ವರ್ಷಗಳಲ್ಲಿ 7 ಲಕ್ಷ ಕೋಟಿಯಷ್ಟು ಕಾರ್ಪೋರೇಟ್ ಶ್ರೀಮಂತರ ಸಾಲವನ್ನು ಮನ್ನಾ ಮಾಡಿದೆ. ಇದರಲ್ಲಿ ಅಂಬಾನಿ ಒಬ್ಬರದ್ದೇ 4.5 ಲಕ್ಷ ಕೋಟಿ ಸೇರಿದೆ.
- ವಿಶ್ವದ ಪ್ರಸಿದ್ಧ ಆರ್ಥಿಕ ತಜ್ಞ ಕೌಶಿಕ್ ಬಸು ಅವರ ಪ್ರಕಾರ ಡಾ.ಮನಮೋಹನ ಸಿಂಗ್ ಅವರು ಪ್ರದಾನಿ ಆಗಿದ್ದ ಅವಧಿಯಲ್ಲಿ ಆರ್ಥಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಆದರೆ ಈಗ 193 ದೇಶಗಳಲ್ಲಿ ಭಾರತದ ಸ್ಥಾನ 164ಕ್ಕೆ ಜಾರಿದೆ. ಜಿಡಿಪಿಯಲ್ಲಿ ಭಾರತಕ್ಕಿಂತ ಎಷ್ಟೋ ಹಿಂದಿದ್ದ ಬಾಂಗ್ಲಾದೇಶ ಈಗ ನಮ್ಮನ್ನು ದಾಟಿಕೊಂಡು ಬಹಳ ಮುಂದೆ ಹೋಗಿದೆ. ವಿಶ್ವದ ಉಳಿದೆಲ್ಲಾ ದೇಶಗಳಲ್ಲಿ ಜನರ ಮೇಲೆ ಹೇರುವ ನೇರ ತೆರಿಗೆಗಳ ಪ್ರಮಾಣ ಹೆಚ್ಚಾಗಿ ಪರೋಕ್ಷ ತೆರಿಗೆಗಳ ಪ್ರಮಾಣ ಕಡಿಮೆ ಇರುತ್ತದೆ. ಆದರೆ ಭಾರತದಲ್ಲಿ ಉಲ್ಟಾ ಆಗಿದೆ. ಪರೋಕ್ಷ ತೆರಿಗೆಯಲ್ಲೂ ವಿಪರೀತ ಸುಲಿಗೆ ಮಾಡಲಾಗುತ್ತಿದೆ.
- ಆಸ್ತಿ ನಗದೀಕರಣ ಹೆಸರಿನಲ್ಲಿ ಭಾರತದ ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಸೇರಿ ಪ್ರತಿಯೊಂದನ್ನೂ ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ.
- ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿ ಅವರು, ಈಗ ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದೆಲ್ಲಾ ಯಾರ ಅವಧಿಯಲ್ಲಿ ಆಗಿದ್ದು? ದೇಶದ ಜನ ಕಳೆದ 70 ವರ್ಷಗಳಲ್ಲಿ ಸೃಷ್ಟಿಸಿದ 6 ಲಕ್ಷ ಕೋಟಿ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಮೋದಿಯವರು ಈ ದೇಶದ ಜನರ ಅನುಮತಿ, ಒಪ್ಪಿಗೆ ಪಡೆದಿದ್ದಾರಾ?
- ಒಂದು ಕಡೆ ತೆರಿಗೆ ಮೂಲಕ ಸುಲಿಗೆ-ಬೆಲೆ ಏರಿಕೆ ಮೂಲಕ ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರಗಳು ಜನರ ರಕ್ತ ಹೀರುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೂ ಆಕರ್ಷಕ ಘೋಷಣೆಗಳಲ್ಲೇ ಜನರನ್ನು ಮರಳು ಮಾಡಬಹುದು ಎನ್ನುವ ನಂಬಿಕೆ ಬಿಜೆಪಿಯವರದ್ದು.
- “ಮೇಕ್ ಇನ್ ಇಂಡಿಯಾ” ಎನ್ನುವ ಘೋಷಣೆ ನೀಡಿದರು. ಈ ಘೋಷಣೆಯಂತೆ ಭಾರತದ ಉತ್ಪನ್ನಗಳ ರಫ್ತು ಹೆಚ್ಚಾಗಿ, ವಿದೇಶದಿಂದ ಭಾರತಕ್ಕೆ ಬರುವ ಉತ್ಪನ್ನಗಳ ಆಮದು ಪ್ರಮಾಣ ಕಡಿಮೆ ಆಗಬೇಕಿತ್ತು. ಆದರೆ 2013-14 ರಲ್ಲಿ ಭಾರತದ ರಫ್ತು ಆದಾಯ 25.52 ಲಕ್ಷ ಕೋಟಿ ಇದ್ದದ್ದು ಮೋದಿ ಕಾಲದ 2019-2020ರ ವೇಳೆಗೆ 23.02 ಲಕ್ಷ ಕೋಟಿಗೆ ಇಳಿದಿದೆ. ಅಂದರೆ “ಮೇಕ್ ಇನ್ ಇಂಡಿಯಾ” ಎಲ್ಲಿ ಹೋಯ್ತು?
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಕೇಂದ್ರ ಸುಲಿಗೆ ಮಾಡಿದ್ದು 1.20 ಲಕ್ಷ ಕೋಟಿ!!
- 7 ವರ್ಷಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿ ಜನರಿಂದ ಸುಲಿಗೆ ಮಾಡಿದ ಹಣದ ಪ್ರಮಾಣ 22 ಲಕ್ಷ ಕೋಟಿ. ಇದರಲ್ಲಿ ಕರ್ನಾಟಕವೊಂದರಿಂದಲೇ ಸುಲಿಗೆ ಮಾಡಿದ್ದು 1.20 ಲಕ್ಷ ಕೋಟಿ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ದೇಶಕ್ಕೆ ಆಹಾರ ಭದ್ರತೆ ಒದಗಿಸಿ, ಸಾರ್ವಜನಿಕ ಉದ್ದಿಮೆಗಳನ್ನು ಸೃಷ್ಟಿಸಿ ಲಕ್ಷಾಂತರ ಕೋಟಿ ಆಸ್ತಿಯನ್ನು ಸೃಷ್ಟಿಸಿದ್ದು ಕಾಂಗ್ರೆಸ್. ಇದನ್ನೆಲ್ಲಾ ಒಂದೊಂದಾಗಿ ಮಾರಾಟ ಮಾಡುತ್ತಾ ಕುಳಿತಿರುವ ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಸಾವಿರಾರು ಸುಳ್ಳುಗಳನ್ನು ಹಿಂದೆ ಮುಂದೆ ನೋಡದೆ ಹೇಳುತ್ತಲೇ ಹೋಗುತ್ತಿದ್ದಾರೆ.
- ನಾನು ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಕಾಂಗ್ರೆಸ್ ಸರ್ಕಾರ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಿತ್ತು. ಈ ಬಿಜೆಪಿ ಸರ್ಕಾರ ಎರಡು ವರ್ಷದಲ್ಲಿ ಒಂದೇ ಒಂದು ಮನೆ ಕಟ್ಟಿಸಿದ್ದರೆ ತೋರಿಸಲಿ. ನಮ್ಮ ಕಾಂಗ್ರೆಸ್ ಅವಧಿಯಲ್ಲಿ ನೀಡಿದ ಬಡವರ ಮನೆಗಳಿಗೆ ಕಟ್ಟಲು ಬಾಕಿ ಇದ್ದ 2786 ಕೋಟಿ ರೂಪಾಯಿಯನ್ನು ಮನ್ನಾ ಮಾಡಿ ಬಡವರಿಗೆ ನೆರವಾದೆವು.
- ಆದರೆ ಈ ಬಿಜೆಪಿ ಕಟ್ಟಿಸಿದ ಮನೆಗಳ ಬಾಕಿ ಬಿಲ್ ಕೂಡ ಕೊಟ್ಟಿಲ್ಲ. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೂ ಒಂದೂ ಮನೆ ಕೊಟ್ಟಿಲ್ಲ. ವಿರೋಧ ಪಕ್ಷದ ನಾಯಕನಾಗಿ ನನಗೇ ನನ್ನ ಬಾದಾಮಿ ಕ್ಷೇತ್ರಕ್ಕೆ ಒಂದೇ ಒಂದು ಮನೆ ಕೊಡಿಸಲು ಸಾಧ್ಯವಾಗಿಲ್ಲ.
- ಹೀಗಾಗಿ ನಗರಪಾಲಿಕೆ ಚುನಾವಣೆಗಳಲ್ಲಿ ನಗರವಾಸಿಗಳು, ತೆರಿಗೆದಾರರು ತಮಗೆ ಸಂಕಷ್ಟ ತಂದಿಟ್ಟಿರುವ, ನರಕ ಸೃಷ್ಟಿ ಮಾಡಿರುವ ಬಿಜೆಪಿಯನ್ನು ತಿರಸ್ಕರಿಸಬೇಕು.
- ವಿಪರೀತ ಬೆಲೆ ಏರಿಕೆ, ತೆರಿಗೆಯ ಸುಲಿಗೆ ನಡೆಯುತ್ತಿದ್ದರೂ ಕಾಂಗ್ರೆಸ್ ವಿರೋಧ ಪಕ್ಷವಾಗಿ ದೊಡ್ಡ ಮಟ್ಟದ ಹೋರಾಟ ಮಾಡುವಲ್ಲಿ ವಿಫಲವಾಗಿದ್ದು ಏಕೆ ಎನ್ನುವ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, “ನಾವೇನು ಬಿಜೆಪಿಯವರ ಕಪಾಳಕ್ಕೆ ಹೊಡೆಯಲು ಸಾಧ್ಯವಾ ?’ ಎಂದು ಪ್ರಶ್ನಿಸಿದ್ದಲ್ಲದೆ, ನಾವು ಬೀದಿಗಿಳಿದು ಹೋರಾಟ ಮಾಡಿದರೆ ಕೋವಿಡ್ ನಿಯಮ ಉಲ್ಲಂಘನೆ ಎಂದು ಕೇಸು ಹಾಕುತ್ತಾರೆ. ಅರೆಸ್ಟ್ ಮಾಡುತ್ತಾರೆ. ಆದರೆ ಬಿಜೆಪಿ ಕೇಂದ್ರ ಮಂತ್ರಿಗಳು ‘ಜನಾಶೀರ್ವಾದ ಯಾತ್ರೆ” ಹೆಸರಿನಲ್ಲಿ ಸಾವಿರಾರು ಮಂದಿಯನ್ನು ಸೇರಿಸಿ ಮೆರವಣಿಗೆ ಮಾಡಬಹುದು. ಅವರಿಗೆ ಮಾತ್ರ ಕೋವಿಡ್ ನಿಮಯ ಅನ್ವಯ ಆಗುವುದಿಲ್ಲ. ಆದರೆ ಬೆಲೆ ಏರಿಕೆ, ತೆರಿಗೆ ಸುಲಿಗೆ ವಿರೋಧಿಸಿ ಜನಪರವಾದ ಪ್ರತಿಭಟನೆ ಮಾಡಲೂ ಅವಕಾಶ ಆಗುತ್ತಿಲ್ಲ ಎಂದರು.