ಅಮಿತ್ ಶಾ ಹೇಳಿಕೆಯಿಂದ ರಾಜ್ಯ ಬಿಜೆಪಿಯಲ್ಲಿ ಕಂಪನವಲ್ಲ, ಪ್ರಕಂಪನ ಆರಂಭ
ಬೆಂಗಳೂರು: ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳ ಚುನಾವಣೆಗೆ ಇನ್ನೂ ಕೆಲ ಗಂಟೆಗಳು ಬಾಕಿ ಇರುವಾಗಲೇ ಮುಂದಿನ ವಿಧಾನಸಭೆ ಚುನಾವಣೆಯನ್ನು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ ಮಾತು ಬಿಜೆಪಿ ಆಳದಲ್ಲಿ ಭಾರೀ ಪ್ರಕಂಪನಗಳನ್ನು ಸೃಷ್ಟಿ ಮಾಡಿದೆ.
ನಿನ್ನೆ (ಗುರುವಾರ) ದಾವಣಗೆರೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಶಾ, ದಾವಣಗೆರೆ ಪಕ್ಕದ ಜಿಲ್ಲೆಯಲ್ಲೇ ಬೆಳಗ್ಗೆ ಮಹತ್ವದ ಚುನಾವಣೆ ಇದೆ ಎಂದು ಗೊತ್ತಿದ್ದೂ ಕೊಟ್ಟ ಹೇಳಿಕೆ ಚುಣಾವಣೆ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.
ಉತ್ತರ ಕರ್ನಾಟಕ ಮಾತ್ರವಲ್ಲದೆ, ಸಮಸ್ತ ಲಿಂಗಾಯತರ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮೂರೂ ಪಾಲಿಕೆಗಳ ಚುನಾವಣೆ ಕಾಂಗ್ರಸ್ʼಗಿಂತ ಬಿಜೆಪಿಗೇ ಹೆಚ್ಚು ಮುಖ್ಯ. ಶತಾಯಗತಾಯ ಗೆಲ್ಲಲು ಬೊಮ್ಮಾಯಿ ಕಸರತ್ತು ನಡೆಸಿದ್ದಾರೆ. ಈ ಚುನಾವಣೆ ಅವರಿಗೆ ಪ್ರತಿಷ್ಠೆಯೂ ಹೌದು. ಹೀಗಿದ್ದರೂ ಅಮಿತ್ ಶಾ ಉರುಳಿಸಿರುವ ಈ ದಾಳ ಸೆಪ್ಟೆಂಬರ್ 6ರಂದು ಹೊರಬೀಳಲಿರುವ ಫಲಿತಾಂಶದ ದಿಕ್ಕನ್ನು ಬದಲಿಸುತ್ತದಾ? ಎನ್ನುವ ಚರ್ಚೆಗೆ ನಾಂದಿ ಹಾಡಿದೆ.
ಯಡಿಯೂರಪ್ಪ ಪಾಳೆಯಕ್ಕೆ ಶಾಕ್
ಕೇವಲ ಒಂದೂ ಮುಕ್ಕಾಲು ವರ್ಷಕ್ಕಷ್ಟೇ ಬೊಮ್ಮಾಯಿ ಮುಖ್ಯಮಂತ್ರಿ. ಆ ನಂತರದ ನಾಯಕತ್ವ ಬೇರೆಯವರದ್ದು. ಹೊಸ ನಾಯಕನ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲಾಗುವುದು ಎಂದು ನಂಬಿದ್ದ ಪಕ್ಷದ ʼಕೆಲವರಿಗೆʼ, ಅದರಲ್ಲೂ ಯಡಿಯೂರಪ್ಪ ಪಾಳೆಯಕ್ಕೆ ಶಾ ಅವರ ಹೇಳಿಕೆ ದೊಡ್ಡ ಶಾಕ್ ನೀಡಿದೆ.
ಮುಂದಿನ ಅಸೆಂಬ್ಲಿ ಚುನಾವಣೆ ಹೊತ್ತಿಗೆ ತಮ್ಮ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದಲ್ಲಿ ಮುನ್ನಲೆಗೆ ತರಲೇಬೇಕು ಎನ್ನುವ ಲೆಕ್ಕಾಚಾರದಲ್ಲಿರುವ ಯಡಿಯೂರಪ್ಪ ಅವರಿಗೆ ಶಾ ಹೇಳಿಕೆ ದೊಡ್ಡ ಹಿನ್ನಡೆ ಎಂದು ʼಕೆಲವರುʼ ವ್ಯಾಖ್ಯಾನ ಮಾಡುತ್ತಿದ್ದಾರೆ.
ಯಡಿಯೂರಪ್ಪ ಅವರ ಪುತ್ರ ವ್ಯಾಮೋಹಕ್ಕೆ ಈ ಮೂಲಕ ಹೈಕಮಾಂಡ್ ಬ್ರೇಕ್ ಹಾಕಿಬಿಟ್ಟಿದೆ ಎನ್ನಲಾಗಿದ್ದು, ಪಕ್ಷದಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ವಿಜಯೇಂದ್ರ ಅವರನ್ನು ಪ್ರತಿಷ್ಠಾಪನೆ ಮಾಡುವ ಅವರ ಪ್ರಯತ್ನಕ್ಕೆ ತಣ್ಣೀರೆರಚಿದಂತೆ ಆಗಿದೆ ಎಂದು ಬಿಜೆಪಿ ನಾಯಕರೊಬ್ಬರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಹೇಳಿದರು.
ಅಲ್ಲದೆ, ಬೊಮ್ಮಾಯಿ ಸರಕಾರದಲ್ಲಿ ವಿಜಯೇಂದ್ರ ಮಂತ್ರಿ ಆಗುವ ಅವಕಾಶಕ್ಕೂ ಅಮಿತ್ ಶಾ ತಡೆಯೊಡ್ಡಿದ್ದು, ಯಾವಾಗ? ಏನು? ಹೇಗೆ? ಮಾಡಬೇಕು ಎಂಬುದನ್ನು ನಾವೇ ಸೂಚನೆ ನೀಡುತ್ತೇವೆ ಎಂದು ಅಮಿತ್ ಶಾ ಹೇಳಿದ್ದಕ್ಕೆ ಮುಖ್ಯಮಂತ್ರಿಳು ʼಹ್ಞೂಂʼ ಎಂದಿದ್ದಾರೆ ಎಂದು ಗೊತ್ತಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪುತ್ರಿಯ ವಿವಾಹಕ್ಕೆ ಬಂದಿದ್ದ ಶಾ, ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಸರಕಾರದ ಆಗುಹೋಗುಗಳು, ಯಡಿಯೂರಪ್ಪ ಪ್ರವಾಸ ಇತ್ಯಾದಿಗಳ ಬಗ್ಗೆ ಕ್ಲುಪ್ತವಾಗಿ ಮಾಹಿತಿ ಪಡೆದುಕೊಂಡಿದ್ದಾರೆಂದು ಹುಬ್ಬಳ್ಳಿಯ ಅತ್ಯಂತ ಪ್ರಮುಖ ಮೂಲವೊಂದು ಸಿಕೆನ್ಯೂಸ್ ನೌ ವೆಬ್ʼತಾಣಕ್ಕೆ ತಿಳಿಸಿದೆ.
ಬಿ.ವೈ.ವಿಜಯೇಂದ್ರ
ಹಿಂಬಾಗಿಲಿನಿಂದ ಬಂದವರು ಹಿಂದೆಯೇ!
ರಾಜಕೀಯ ಹಿನ್ನೆಲೆ, ಹಣ ಬಲ ಅಥವಾ ಮತ್ತಾವುದೋ ಶಕ್ತಿಯ ಕಾರಣಕ್ಕೆ ಮುನ್ನಲೆಗೆ ಬಂದು ಅಧಿಕಾರಕ್ಕೇರುವ ಪರಿಪಾಠಕ್ಕೆ ಹೈಕಮಾಂಡ್ ಈ ಮೂಲಕ ಚೆಕ್ʼಮೇಟ್ ಇಟ್ಟಿದೆ. ಸಂಘಟನೆಯಿಂದ ಬಂದವರಿಗೆ ಮಾತ್ರ ಅವಕಾಶ. ಕುಟುಂಬ ರಾಜಕಾರಣದ ವರ್ಚಸ್ಸಿಗೆ ಮುಂದೆ ಚಾನ್ಸ್ ಇಲ್ಲ ಎಂಬ ಕಠಿಣ ಸಂದೇಶವನ್ನು ಸಂಬಂಧಪಟ್ಟವರಿಗೆ ಈ ಮೂಲಕ ಹೈಕಮಾಂಡ್ ರವಾನಿಸಿದೆ.
ಪಕ್ಷದಲ್ಲಿ ಅತ್ಯಂತ ತಳಮಟ್ಟದಿಂದ ಹಂತ ಹಂತವಾಗಿ ಬೆಳೆದವರಿಗೆ ಸೂಕ್ತ ಸಮಯದಲ್ಲಿ ಅವಕಾಶ ನೀಡಬೇಕು. ಅದನ್ನು ಹೊರತುಪಡಿಸಿದರೆ ಮಾಜಿ ಮುಖ್ಯಮಂತ್ರಿ ಪುತ್ರನೆಂಬ ಕಾರಣಕ್ಕೆ ಅಧಿಕಾರದ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳದಂತೆ ಸ್ಪಷ್ಟ ಮಾಹಿತಿಯನ್ನು ಮಾಜಿ ಸಿಎಂಗೆ ರವಾನಿಸಿದಂತೆ ಆಗಿದೆ.
ದಾವಣಗೆರೆಯಲ್ಲಿ ಅಮಿತ್ ಶಾ ಅವರು ಯಾರಿಗೆ? ಏನೆಲ್ಲ ಹೇಳಬೇಕೋ ಅದನ್ನೇ ಹೇಳಿದ್ದಾರೆ. ಮಾತ್ರವಲ್ಲದೆ, ಕಾಂಗ್ರೆಸ್ ಮತ್ತು ಜೆಡಿಎಸ್ʼನಂತೆ ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ ಎಂಬ ಸಂದೇಶವನ್ನು ನೇರವಾಗಿಯೇ ಹೊರಡಿಸಿದ್ದಾರೆ.
ಸಾಮೂಹಿಕ ನಾಯಕತ್ವ
ಬಿಜೆಪಿ ಬದಲಾಗಿದೆ. ಆಧುನಿಕ ದೃಷ್ಟಿಕೋನದಿಂದ ವೇಗವಾಗಿ ಬೆಳೆಯುತ್ತಿದೆ. ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಇದೇ ಕಾಲಕ್ಕೆ ಕುಟುಂಬದ ರಾಜಕೀಯದ ಸುಳಿಗೆ ಸಿಕ್ಕಿ ಕಾಂಗ್ರೆಸ್ ನೆಲಕಚ್ಚಿದೆ.
ಈ ಕಾರಣಕ್ಕೆ ತಳಮಟ್ಟದಿಂದಲೇ ಸಾಮೂಹಿಕ ನಾಯಕತ್ವಕ್ಕೆ ಅವಕಾಶ ನೀಡಲಾಗುತ್ತಿದ್ದು, ಏಕವ್ಯಕ್ತಿ ಪಾರುಪತ್ಯಕ್ಕೆ ಕೊನೆ ಹಾಡಲಾಗಿದೆ ಎಂದು ಹೇಳಲಾಗಿದೆ. ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕತ್ವ ಇಲ್ಲ ಎಂಬ ವ್ಯಾಖ್ಯಾನವನ್ನು ಪಕ್ಕಕ್ಕೆ ಸರಿಸಿ ಪಕ್ಷದಲ್ಲಿ ಸದೃಢ ನಾಯಕತ್ವ ಇದೆ ಎಂಬ ಸಂದೇಶವನ್ನು ಹೈಕಮಾಂಡ್, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ನೀಡಿದೆ. ಶಾ ಕೊಟ್ಟ ಸಂದೇಶ ಕಾರ್ಯಕರ್ತರಲ್ಲೂ ಹೊಸ ಹುರುಪು ಮೂಡಿಸಿದೆ.
ಯಡಿಯೂರಪ್ಪ ಅವರು ಪಕ್ಷದಲ್ಲಿ ಈಗ ಮಾರ್ಗದರ್ಶಕರಾಗಿರುತ್ತಾರಷ್ಟೇ. ಅಗತ್ಯಬಿದ್ದಾಗ ಮಾತ್ರ ಪಕ್ಷ ಅವರ ಅಭಿಪ್ರಾಯ ಪಡೆಯಲಿದೆ. ಬಿಜೆಪಿ ರಾಷ್ಟ್ರೀಯ ಪಕ್ಷ, ಕಾರ್ಯಕರ್ತರ ಪಕ್ಷ. ಹೀಗಾಗಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ನಡೆಯಲ್ಲ. ಯಾರೇ ಆಗಲಿ ಸಂಘಟನೆ ಮೂಲಕವೇ ಬರಬೇಕೆಂಬುದು ಹೈಕಮಾಂಡ್ ಆಶಯ. ಈ ನಿಟ್ಟಿನಲ್ಲಿ ವಿಜಯೇಂದ್ರ ಕೂಡ ಹೊರತಲ್ಲ. ಏಕಾಎಕಿ ಸರ್ಕಾರದಲ್ಲಿ ಯಾವುದೇ ಹುದ್ದೆ ನೀಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಸಾರ್ವಜನಿಕ ವೇದಿಕೆಯಲ್ಲೇ ಶಾ ಅವರು ಸುಳಿವು ನೀಡಿರುವುದು ಪಕ್ಷದಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದೆ.
ಅಮಿತ್ ಶಾ ಅವರು ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಘೋಷಿಸಿದ ಬೆನ್ನಲ್ಲೇ ಕಂಗಾಲಾಗಿರುವ ಯಡಿಯೂರಪ್ಪ, ಮತ್ತವರ ಬೆಂಬಲಿಗರು ಸದ್ಯಕ್ಕೆ ಮೌನದಿಂದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಪುತ್ರನ ರಾಜಕೀಯ ಭವಿಷ್ಯ ಅತಂತ್ರ ಆಗುವ ಆತಂಕ ರಾಜಾಹುಲಿಯನ್ನು ಕಾಡುತ್ತಿದೆ ಎಂಬುದಂತೂ ಸುಳ್ಳಲ್ಲ.