ಬೆಂಗಳೂರು: ಕರ್ನಾಟಕ ಭೂ ಕಂದಾಯ ಕಾಯ್ದೆ 94-C ಅಡಿಯಲ್ಲಿ ಸಾರ್ವಜನಿಕರು ಭೂ ಮಂಜೂರಾತಿ ಫಲಾನುಭವಿಗಳಾಗಿ ಅರ್ಹತೆ ಗಳಿಸಲು ಈಗಿರುವ ವಾರ್ಷಿಕ ಗರಿಷ್ಠ ಆದಾಯದ ಮಿತಿಯನ್ನು ರೂ. 30,000ದಿಂದ ರೂ. 1,20,000ಕ್ಕೆ ಹೆಚ್ಚಿಸಬೇಕೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪತ್ರ ಬರೆದಿರುವ ಅವರು, ಗರಿಷ್ಠ ಆದಾಯದ ಮಿತಿಯನ್ನು ಹೆಚ್ಚಿಸುವುದಕ್ಕೆ ಕರ್ನಾಟಕ ಭೂ ಕಂದಾಯ ಕಾಯಿದೆ-1964(ಕರ್ನಾಟಕ ಕಾಯಿದೆ-12-1964)ಗೆ ತಿದ್ದುಪಡಿ ತರಬೇಕೆಂದು ಕೋರಿದ್ದಾರೆ.
ಹಾಗೆಯೇ, ಆಹಾರ ಇಲಾಖೆಯಲ್ಲಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಾಗಲು ಪ್ರಸ್ತುತ 1,20,000 ರೂ. ಆದಾಯದ ಮಿತಿ ಇರುವುದನ್ನು ಗೃಹ ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.