ಮೂವರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಲು ಆದೇಶಿಸಿದ ಸಚಿವ ಸುನೀಲ್ ಕುಮಾರ್
ಬೆಂಗಳೂರು: ವಿದ್ಯುತ್ ಬಿಲ್ʼನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಮುಳಬಾಗಿಲು ಉಪ ವಿಭಾಗದ ಕಿರಿಯ ಸಹಾಯಕ ಮೆಹಬೂಬ್ ಪಾಷ, ಕಿರಿಯ ಸಹಾಯಕಿಯರಾದ ಗಾಯತ್ರಮ್ಮ ಹಾಗೂ ಸುಜಾತಮ್ಮ ಎಂಬುವವರನ್ನು ಇಂಧನ ಸಚಿವ ಸುನೀಲ್ ಕುಮಾರ್ ಸಸ್ಪೆಂಡ್ ಮಾಡಿದ್ದಾರೆ.
ಇವರು ಪ್ರತಿ ತಿಂಗಳು ಗ್ರಾಹಕರಿಗೆ ವಿದ್ಯುತ್ ಬಿಲ್ಲು ವಿತರಿಸುವ ವೇಳೆಯಲ್ಲಿ ಕೆಲ ಬಿಲ್ಲುಗಳನ್ನು ಮಾರ್ಪಾಟು ಮಾಡಿ ಅದರ ಮೊತ್ತವನ್ನು ಕಡಿಮೆ ಮಾಡಿ ಆ ಮೂಲಕ ಬೆಸ್ಕಾಂಗೆ ಬರಬೇಕಾದ ವಾಸ್ತವಿಕ ಆದಾಯದಲ್ಲಿ ನಷ್ಟ ಉಂಟಾಗಲು ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಮೇಲೆ ಕೋಲಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಅವರು ಶನಿವಾರ ತಿಳಿಸಿದ್ದಾರೆ.
ತಾವು ಇಲಾಖೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಅಕ್ರಮ ಎಸಗಿ ಆ ಮೂಲಕ ಇಲಾಖೆಗೆ ನಷ್ಟವುಂಟು ಮಾಡುವ ಯಾವುದೇ ಅಧಿಕಾರಿ, ಸಿಬ್ಬಂದಿ ಇರಲಿ ಅವರ ಮೇಲೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಪ್ರಸ್ತುತ ಈ ಮೂವರು ಸಿಬ್ಬಂದಿ ಬೇರೆ, ಬೇರೆ ಐಪಿ ವಿಳಾಸಗಳ ಗಣಕಯಂತ್ರಗಳಲ್ಲಿ ʼಐಡಿʼಗಳನ್ನು ಉಪಯೋಗಿಸಿ ವಂಚನೆ ಎಸಗಿರುವುದು ದೃಢವಾಗಿರುವುದರಿಂದ ಹಾಗೂ 8 ಆರ್ ಆರ್ ಸಂಖ್ಯೆಗಳಲ್ಲಿ ಒಟ್ಟು 444966 ರೂ.ಗಳಷ್ಟು ಮೊತ್ತ ಸಂಸ್ಥೆಗೆ ನಷ್ಟವಾಗಿರುವುದರಿಂದ ಇವರ ಮೇಲೆ ಇಲಾಖಾ ವಿಚಾರಣೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ, ಜತೆಗೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಹ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.