By Ra Na Gopala Reddy Bagepalli
ಬಾಗೇಪಲ್ಲಿಯಲ್ಲಿ ಶಿಕ್ಷಕರ ದಿನಾಚರಣೆ
ಬಾಗೇಪಲ್ಲಿ: ರಾಜಕೀಯ ಮಾಡುವುದನ್ನು ಬಿಟ್ಟು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುವ ಮೂಲಕ ನವ ಸಮಾಜವನ್ನು ನಿರ್ಮಾಣ ಮಾಡುವ ಕೆಲಸಕ್ಕೆ ಮುಂದಾಗುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತರತ್ನ ಡಾ.ಎಸ್.ರಾಧಾಕೃಷ್ಣನ್ ಅವರ 134ನೇ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ಜಗತ್ತಿನಲ್ಲಿ ಶಿಕ್ಷಕ ವೃತ್ತಿಯಲ್ಲಿ ಸಿಗುವಂತಹ ಗೌರವ ಯಾವುದೇ ವೃತ್ತಿಯಲ್ಲಿ ಸಿಗಲು ಸಾಧ್ಯವಿಲ್ಲ ಎಂದ ಅವರು, ಈ ಹಿಂದಿನ ದಿನಗಳಲ್ಲಿ ಶಿಕ್ಷಕರು ಮಕ್ಕಳನ್ನು ಹೊಡೆದು- ಬಡಿದು ವಿದ್ಯೆ ಬುದ್ಧಿ ಹೇಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯೇ ಬದಲಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಕೈ ಮಾಡುವಂತಿಲ್ಲ. ಕೈ ಮಾಡಿದರೆ ತಕ್ಷಣ ಆ ವಿದ್ಯಾರ್ಥಿಗಳ ಪೋಷಕರು ಪೊಲೀಸರಿಗೆ ದೂರು ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಶಿಕ್ಷಕರು ರಾಜಕೀಯ ಮಾಡಬಾರದು, ರಾಜಕೀಯ ಮಾಡುವುದರಿಂದ ನೀವು ಯಾವುದೇ ಕಾರಣಕ್ಕೂ ಉತ್ತಮ ಶಿಕ್ಷಕರು ಎನಿಸಿಕೊಳ್ಳಲು ಸಾಧ್ಯವೇ ಇಲ್ಲ. ರಾಜಕೀಯದಲ್ಲಿ ಸಮತೋಲನ ಮಾಡಲು ಸಾಧ್ಯವಿಲ್ಲ. ರಾಜಕೀಯ ಎಂದರೆ ದ್ವೇಷ, ಪಕ್ಷಪಾತ ಹೆಚ್ಚಾಗಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಪ್ರೀತಿ, ಪ್ರೇಮ, ವಾತ್ಸಲ್ಯ ನೀಡಲು ಸಾಧ್ಯವಿಲ್ಲ, ಎಲ್ಲರನ್ನು ಸಮಾನತೆಯಿಂದ ನೋಡಬೇಕಾಗಿರುವ ಶಿಕ್ಷಕರು ರಾಜಕೀಯದಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರಿಗೆ ಸನ್ಮಾನ
ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರು ಹಾಗೂ ನಿವೃತ್ತಿ ಹೊಂದಿರುವ ಶಿಕ್ಷಕರನ್ನು ಇದೇ ವೇಳೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ದಿವಾಕರ್, ಬಾಗೇಪಲ್ಲಿ ತಾಲೂಕು ಬಿಇಓ ಎಸ್.ಸಿದ್ದಪ್ಪ, ತಾ.ಪಂ ಇಒ ಮಂಜುನಾಥಸ್ವಾಮಿ, ಪುರಸಭೆ ಉಪಾಧ್ಯಕ್ಷ ಎ.ಶ್ರೀನಿವಾಸ್, ಸದಸ್ಯ ನಂಜುಂಡಪ್ಪ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಹನುಮಂತರೆಡ್ಡಿ, ಬಾಗೇಪಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣ ರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ಡಿವೈಪಿಸಿ ಡಿ.ಎನ್.ಸುಕನ್ಯಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟರಮಣ,ಶಿಕ್ಷಣ ಸಮನ್ವಯ ಅಧಿಕಾರಿ ವೆಂಕಟರಾಮಪ್ಪ ಮತ್ತಿತರರು ಇದ್ದರು.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..