ಒತ್ತಡಕ್ಕೆ ಮಣಿದ ಒಪ್ಪಿಗೆ ಕೊಟ್ಟ ಸರಕಾರ, ಆತಂಕದಲ್ಲಿ ಆರೋಗ್ಯ ಇಲಾಖೆ
ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಬಾರದು ಎಂದು ಆರೋಗ್ಯ ಇಲಾಖೆ ಹೇಳಿದ್ದ ಮೇಲೂ ʼಕೆಲʼ ಒತ್ತಡಗಳಿಗೆ ಮಣಿದ ರಾಜ್ಯ ಸರಕಾರ ಕೊನೆಯೂ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.
ಐದು ದಿನಗಳ ಗಣೇಶೋತ್ಸವಕ್ಕೆ ಅನುಮತಿ ನೀಡಿರುವ ಸರಕಾರವು, ಕೋವಿಡ್ಸೋಂಕು ಇರುವ ಜಿಲ್ಲೆಗಳಲ್ಲೂ ವಿನಾಯಕ ಚತುರ್ಥಿಗೆ ಅವಕಾಶ ನೀಡಿದೆ. ಅಲ್ಲದೆ, ಹಬ್ಬಕ್ಕಾಗಿ ಹೊಸ ಎಸ್ಒಪಿ ಹೊರಡಿಸುವುದಾಗಿ ಹೇಳಿದೆ.
ಭಾನುವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಬ್ಬದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕೋವಿಡ್ನಿಯಮಗಳನ್ನು ಉಲ್ಲಂಘನೆ ಮಾಡುವಂತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ಸಭೆಯ ಬಳಿಕ ತಿಳಿಸಿದರು.
ಈ ಪ್ರಕಾರವಾಗಿ ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ, ಮಂಗಳವಾರ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದ್ದು, ಮಂಗಳವಾರದೊಳಗೆ ಮೂರ್ತಿಗಳ ವಿಸರ್ಜನೆಮಾಡಬೇಕು ಎಂದು ತಿಳಿಸಲಾಗಿದೆ.
ಐದು ದಿನ ಮಾತ್ರ ಗಣೇಶೋತ್ಸವಕ್ಕೆ ಅವಕಾಶ ನೀಡಿರುವ ಸರಕಾರವು, ಸ್ಥಳೀಯ ಪೊಲೀಸ್ಇಲಾಖೆ & ಸ್ಥಳೀಯ ಆಡಳಿತ ಸಂಸ್ಥೆಗಳು ಹೇಳುವ ಎಲ್ಲ ನಿಯಮ, ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ, ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿಷೇಧ ವಿಧಿಸಲಾಗಿದೆ. ಒಂದು ವೇಳೆ ಯಾರಾದರೂ ತಪ್ಪಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು, ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಐದು ದಿನ ಮಾತ್ರ ಗಣೇಶೋತ್ಸವ ಆಚರಣೆಗೆ ಅನುಮತಿ ಇದೆ. ಅದಕ್ಕಿಂತ ಹೆಚ್ಚಿನ ದಿನ ಗಣಪತಿಯನ್ನು ಕೂರಿಸುವಂತಿಲ್ಲ. ಇನ್ನು; ನಗರ ಪ್ರದೇಶಗಳಲ್ಲಿ ಪ್ರತಿ ವಾರ್ಡ್ಗೆ ಒಂದು ಕಡೆ ಮಾತ್ರ ಗಣಪತಿಯನ್ನು ಕೂರಿಸಬಹುದು ಎಂದು ಅಶೋಕ್ ತಿಳಿಸಿದರು.
ಸರಕಾರ ವಿಧಿಸಿದ ಷರತ್ತುಗಳು
- ಐವತ್ತು ಜನಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ.
- ಗಣೇಶನ ವಿಸರ್ಜನೆಗೂ ಇಷ್ಟೇ ಜನ
- ಗನೇಶನ ಮೆರವಣಿಗೆ ಮಾಡುವಂತಿಲ್ಲ
- ಗರಿಷ್ಠ ಐದು ದಿನ ಮಾತ್ರ ಗಣೇಶೋತ್ಸವ ಆಚರಣೆ
- ಆರ್ಕೆಸ್ಟ್ರಾ, ಡಿಜೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ
- ಕೋವಿಡ್ ನಿಯಮ ಪಾಲನೆ ಕಡ್ಡಾಯ.
- ಕೋವಿಡ್ ನಿಯಮ ತಪ್ಪಿದರೆ ಕಠಿಣ ಕ್ರಮ
- ಕೋವಿಡ್ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಹೊಣೆ ಪೊಲೀಸರು & ಸ್ಥಳೀಯ ಅಧಿಕಾರಿಗಳದ್ದು
- ಬೆಂಗಳೂರಿನಲ್ಲಿ ಇದರ ಉಸ್ತುವಾರಿ ನಗರ ಪೊಲೀಸರು & ಬಿಬಿಎಂಪಿಯದ್ದು
- ಆಯೋಜಕರುಪೊಲೀಸರ ಅನುಮತಿ ಪಡೆಯಬೇಕು
- ದಟ್ಟ ಜನಜಂಗುಳಿ ಇರುವ ಕಡೆ ಗಣೇಶನನ್ನು ಕೂರಿಸುವಂತಿಲ್ಲ
- 50 × 50 ಜಾಗದಲ್ಲಿ ಮಾತ್ರ ಪೆಂಡಾಲ್ ಹಾಕಬೇಕು
- ಒಂದು ವಾರ್ಡ್ಗೆ ಒಂದೇ ಗಣೇಶ
- ಪಾಸಿಟಿವಿಟಿ ದರ 2%ಗಿಂಥ ಕಡಿಮೆ ಇರುವ ಗಡಿ ಜಿಲ್ಲೆಗಳಲ್ಲಿ ಗಣೇಶೋತ್ಸವಕ್ಕೆ ಅವಕಾಶ
- ರಾತ್ರಿ 9 ಗಂಟೆ ನಂತರ ಗಣೇಶ ವಿಸರ್ಜನೆ ಇಲ್ಲ
- ವಸತಿ ಸಮುಚ್ಛಯಗಳಲ್ಲಿ ಕೂರಿಸುವುದಿದ್ದರೆ ಇಪ್ಪತ್ತು ಜನ ಮಾತ್ರ ಸೇರಬೇಕು