ರಾಜ್ಯ ಬಿಜೆಪಿಯೊಳಗಿನವರ ಮನಸ್ಸಿನೊಳಗೆ ಬೊಮ್ಮಾಯಿ ಅವರ ಬಗ್ಗೆ ಇರುವ ಒಣನಿಷ್ಠೆ ಏನೆಂಬುದು ಈ ಚುನಾವಣೆಯಲ್ಲಿ ಸ್ವಲ್ಪ ಆಚೆ ಬಿದ್ದಿದೆ. ಹೀಗಾಗಿ ಬೊಮ್ಮಾಯಿ ಅವರಿಗೆ ಹೈಕಮಾಂಡ್ ಆಸರೆ ಇಲ್ಲದಿದ್ದರೆ ಕಷ್ಟ ತಪ್ಪಿದ್ದಲ್ಲ. ವರಿಷ್ಠರ ಒಲವು ಇರುವವರಿಗೂ ಬೊಮ್ಮಾಯಿ ಬಾಹುಬಲಿಯೇ. ಕಟ್ಟಪ್ಪಗಳಂತೂ ಸಾಲುಸಾಲೇ ಇದ್ದಾರೆ!
ಬೆಂಗಳೂರು: ಆಡಳಿತಾರೂಢ ಬಿಜೆಪಿ, ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಮನೆಯಲ್ಲಿ ಸಂತಸ ಮನೆ ಮಾಡಿದೆ.
ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ನೀಡಿದ್ದ, “ಮುಂದಿನ ವಿಧಾನಸಭೆ ಚುನಾವಣೆಯನ್ನು ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಹಾಗೂ ಅವರು ಸಿಎಂ ಆದ ಮೇಲೆ ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗುತ್ತಿದೆ” ಎಂಬ ಹೇಳಕೆ ನೀಡಿದ ನಂತರ ನಡೆದ ಪರೀಕ್ಷೆ ಇದು.
ಅಲ್ಲಿಗೆ ಈ ಮೊದಲ ಅಗ್ನಿಪರೀಕ್ಷೆಯಲ್ಲಿ ಬೊಮ್ಮಾಯಿ ಪಾಸಾಗಿದ್ದು, ಈ ಫಲಿತಾಂಶದೊಂದಿಗೆ ಬಿಜೆಪಿಯೊಳಗಿನ ಲೆಕ್ಕಾಚಾರಗಳಲ್ಲಿ ಏರುಪೇರಾಗಲಿದೆ ಎನ್ನುವುದು ಖಚಿತವಾಗಿದೆ. ಯಡಿಯೂರಪ್ಪ ನಂತರದ ಬಿಜೆಪಿಯಲ್ಲಿ ಬೊಮ್ಮಾಯಿ ಅವರು ಹೊಸ ಬಾಹುಬಲಿಯಾಗಿ ಅವತರಿಸಿದ್ದಾರೆ.
ತನ್ನ ಭದ್ರಕೋಟೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಭಾರಿಸಿದ್ದು, ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಅಲ್ಲೂ ಕಮಲ ಅರಳಿ ನಿಂತಿದೆ. ಇನ್ನು ಕಲಬುರಗಿಯಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗಿದ್ದು ಯಾವ ಪಕ್ಷಕ್ಕೂ ಸರಳ ಬಹುಮತವೂ ಸಿಕ್ಕಿಲ್ಲ. ಆದರೆ, ಬಿಜೆಪಿಗಿಂತ ಕಾಂಗ್ರೆಸ್ ಅಲ್ಪ ಮುನ್ನಡೆಯಲ್ಲಿದೆ.
ಬಿಜೆಪಿಗೆ ಹುಬ್ಬಳ್ಳಿ-ಧಾರವಾಡ
ಈ ಸಲವಾದರೂ ಹುಬ್ಬಳ್ಳಿ-ಧಾರವಾಡ ಪಾಲಿಕೆಯನ್ನು ತೆಕ್ಕೆಗೆ ಹಾಕಿಕೊಳ್ಳಬೇಕೆಂಬ ದಿಕ್ಕಿನಲ್ಲಿ ಕಾಂಗ್ರೆಸ್ ಪಕ್ಷ ಗಂಭೀರ ಪ್ರಯತ್ನ ನಡೆಸಿತಾದರೂ ಯಶ ಕಾಣಲಿಲ್ಲ. ಈ ಪಾಲಿಕೆಯನ್ನು ಉಳಿಸಿಕೊಳ್ಳುವುದು ಬಿಜೆಪಿಗೂ ಬಹಳ ಮುಖ್ಯವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಬ್ಬರಿಗೂ ಇಲ್ಲಿನ ಗೆಲುವು ನಿರ್ಣಾಯಕವಾಗಿತ್ತು.
ಒಟ್ಟು 82 ವಾರ್ಡುಗಳ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲು 42 ಸ್ಥಾನ ಗೆಲ್ಲಬೇಕು. ಇನ್ನು, ಬಿಜೆಪಿ 39, ಕಾಂಗ್ರೆಸ್ 33, ಜೆಡಿಎಸ್ 01, ಇತರರು 09 ಕಡೆ ಜಯ ಗಳಿಸಿದ್ದಾರೆ. ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿದೆಯಾದರೂ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಉಳಿದಂತೆ, ಜೆಡಿಎಸ್ ಪಕ್ಷದ್ದು ಇಲ್ಲಿ ಶೂನ್ಯ ಸಂಪಾದನೆ. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಸಾಕಷ್ಟು ಜನಪ್ರತಿನಿಧಿಗಳು ಇರುವುದರಿಂದ ಕಮಲ ಪಾಳೆಯಕ್ಕೆ ಸಮಸ್ಯೆ ಇಲ್ಲ. ಬಹು ಮುಖ್ಯ ಬೆಳವಣಿಗೆ ಎಂದರೆ ಈ ಪಾಲಿಕೆ ಚುನಾವಣೆಯಲ್ಲಿ ಎಂಐಎಂಐಎಂ ಮೂರು ವಾರ್ಡುಗಳಲ್ಲಿ ಗೆದ್ದಿದೆ. ಇದು ಬಿಜೆಪಿಗೆ ಸವಾಲೇ ಸರಿ.
ಬೆಳಗಾವಿಯಲ್ಲೂ ಬಿಜೆಪಿ
ಕಳೆದ ಲೋಕಸಭೆ ಉಪ ಚುನಾವಣೆ ಕಷ್ಟಪಟ್ಟು ಗೆದ್ದಿದ್ದ ಬಿಜೆಪಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ʼಗೆ ಅಚ್ಚರಿಯ ಅಘಾತ ನೀಡಿದೆ. 58 ವಾರ್ಡುಗಳ ಬೆಳಗಾವಿ ಪಾಲಿಕೆಯಲ್ಲಿ 31 ಮ್ಯಾಜಿಕ್ ನಂಬರ್. ಇನ್ನು, ಬಿಜೆಪಿ 35, ಕಾಂಗ್ರೆಸ್ 10, ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) 01 ಸೇರಿ ಇತರರು 12 ಕಡೆ ಗೆದ್ದಿದ್ದು, ಎಂಇಎಸ್ ಧೂಳೀಪಟವಾಗಿದೆ. ಇನ್ನು, ಜೆಡಿಎಸ್ ಪಕ್ಷದ್ದು ಶೂನ್ಯ ಸಾಧನೆ. ಸಮಾಧಾನದ ಸಂಗತಿ ಎಂದರೆ, ಬೆಳಗಾವಿಯಲ್ಲಿ ಭಾಷೆ, ಗಡಿ ವಿಷಯ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದ ಎಂಇಎಸ್ ತರಗಲೆಯಾಗಿ ಹೋಗಿದೆ. ಆ ಪಕ್ಷದ ಬಹುತೇಕ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಇಲ್ಲಿನ ಗೆಲುವು ಬೊಮ್ಮಾಯಿ ಅವರ ವರ್ಚಸ್ಸು ಹೆಚ್ಚಿಸುವುದು ಕಾಯಂ.
ಕಲಬುರಗಿಯಲ್ಲಿ ಅತಂತ್ರ
ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಕಲಬುರಗಿಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಇಲ್ಲಿನ ಪಾಲಿಕೆಯಲ್ಲಿ 55 ವಾರ್ಡುಗಳಿದ್ದು, ಮ್ಯಾಜಿಕ್ ನಂಬರ್ 34. ಆದರೆ, ಯಾವ ಪಕ್ಷವೂ ಸರಳ ಬಹುಮತದ ಹತ್ತಿರಕ್ಕೂ ಬಂದಿಲ್ಲ.
ಇಲ್ಲಿ ಕಾಂಗ್ರೆಸ್ ಪಕ್ಷ 27 ವಾರ್ಡುಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಬಿಜೆಪಿ 23, ಜೆಡಿಎಸ್ 04, ಎಂಐಎಂ 01 ಕಡೆ ಜಯ ಸಾಧಿಸಿದೆ. ಇಲ್ಲಿ ಯಾವುದೇ ಪಕ್ಷಕ್ಕೂ ಅಧಿಕಾರಕ್ಕೆ ಬರುವುದು ಬಹಳ ಕಷ್ಟವಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಗೆಲುವಿನ ಅಂತರದಲ್ಲಿ ಅಷೇನೂ ದೊಡ್ಡ ಅಂತರ ಇಲ್ಲದಿರುವ ಕಾರಣ ಕೊನೆ ಕ್ಷಣದಲ್ಲಿ ಬಿಜೆಪಿ ಏನಾದರೂ ಜಾದು ಮಾಡಿ ಅಧಿಕಾರಕ್ಕೇರುತ್ತಾ ಎನ್ನುವ ಅನುಮಾವನೂ ಇದೆ. ಅಲ್ಲದೆ, ಬಿಜೆಪಿ-ಜೆಡಿಎಸ್ ಅಧಿಕಾರಕ್ಕಾಗಿ ಒಂದಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದತೆ, ಇತ್ತೀಚೆಗೆ ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ʼಒಳʼ ಸಹಕಾರದಿಂದಲೇ ಬಿಜೆಪಿ ಅಧಿಕಾರ ಹಿಡಿದಿತ್ತು. ಅದೃಷ್ಟಕ್ಕೆ ಓರ್ವ ಸಂಸದ, ಶಾಸಕರು, ವಿಧಾನ ಪರಿಷತ್ ಸದಸ್ಯರ ಮತಗಳು ಸೇರಿ ಬಿಜೆಪಿಗೆ ಹೆಚ್ಚುವರಿಯಾಗಿ 6 ಮತಗಳು ಸೇರಲಿವೆ. ಹೀಗಾಗಿ ಕಲಬುರಗಿಯಲ್ಲಿ ಬಿಜೆಪಿ ಪಟ್ಟಕ್ಕೇರುವುದು ಖಚಿತ. ಈ ಲೆಕ್ಕದಲ್ಲೂ ಬೊಮ್ಮಾಯಿ ಬಗ್ಗೆ ವರಿಷ್ಠರಿಗೆ ಒಲವು ಹೆಚ್ಚಲಿದೆ.
ಕಾಂಗ್ರೆಸ್ ಪಕ್ಷಕ್ಕೆ ಆಘಾತ, ಅದು ನಿರೀಕ್ಷಿತ!
ಮೂರು ಪಾಲಿಕೆಗಳ ಚುನಾವಣೆಯಲ್ಲಿ ಹೀನಾಯ ಸೋಲು ಕಾಂಗ್ರೆಸ್ ಪಕ್ಷವನ್ನು ಕಂಗೆಡಿಸಿದೆ. ನಾಯಕರ ನಡುವಿನ ಭಿನ್ನಾಭಿಪ್ರಾಯದಿಂದ ಫಲಿತಾಂಶ ಉಲ್ಟಾ ಹೊಡೆದಿದ್ದು, ಬಿಜೆಪಿಗೆ ಲಾಭವಾಗಿದೆ. ಬೆಳಗಾವಿಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳ ನಡುವೆ ನಡೆದ ಪವರ್ ಪಾರುಪತ್ಯ, ಟಿಕೆಟ್ ಹಂಚಿಕೆಯಲ್ಲಾದ ಗೊಂದಲವು ಬಿಜೆಪಿಗೆ ವರವಾಗಿದೆ. 10 ವಾರ್ಡು ಗೆಲ್ಲಲು ಕಾಂಗ್ರೆಸ್ ಹರಸಾಹಸ ಪಡಬೇಕಾಯಿತು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
ಇನ್ನು, ಕಲಬುರಗಿಗೆ ಬಂದರೆ, ಇಲ್ಲಿಯೂ ಕಾಂಗ್ರೆಸ್ ಸಂಘಟಿತವಾಗಿ ಕೆಲಸ ಮಾಡಲಿಲ್ಲ. ಸ್ಥಳೀಯ ನಾಯಕರು ಶ್ರಮಿಸಿದರೂ ರಾಜ್ಯ ಮಟ್ಟದ ನಾಯಕರು ನಿರಾಸಕ್ತಿ ತೋರಿದ್ದು ಬಿಜೆಪಿ ಕೊಂಚ ಅನುಕೂಲವಾಯಿತು. ಹೀಗಾಗಿ ಗೆಲುವಿಗೆ ಹತ್ತಿರದಲ್ಲಿದ್ದ ಕಾಂಗ್ರೆಸ್ ಕ್ರಮೇಣ ಹಿಂದೆ ಬೀಳುತ್ತಾ ಹೋಯಿತು. ಹುಬ್ಬಳ್ಳಿ-ಧಾರವಾಡದಲ್ಲೂ ಕಾಂಗ್ರೆಸ್ ನಾಯಕರ ಪರಸ್ಪರ ತಿಕ್ಕಾಟ, ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಲ್ಲಿದ್ದ ಕಾರಣಕ್ಕೆ ಕಾಂಗ್ರೆಸ್ ಬೆಲೆ ತೆತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆ ಹೊತ್ತಿನಲ್ಲೇ ಜಿಂದಾಲ್ ಸೇರಿಕೊಂಡರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇವಲ ಸಭೆಗಳಿಗೇ ಸೀಮಿತರಾದರು. ಉಳಿದಂತೆ ಪಕ್ಷದ ಮೂವರು ಕಾರ್ಯಾಧ್ಯಕ್ಷರು ಅತ್ತಲೂ ಇಲ್ಲದ, ಇತ್ತಲೂ ಇಲ್ಲದ ಅತಂತ್ರಕ್ಕೆ ಸಿಲುಕಿ ಪಕ್ಷವೂ ಶ್ರಿಶಂಕು ಸ್ಥಿತಿಯಲ್ಲೇ ಉಳಿಯಿತು.
ಬಿಜೆಪಿ ಹೈ ಜೋಶ್
ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವನ್ನೇ ಸಾಧಿಸಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜೀನಾಮೆ ನಂತರ ನಡೆದ ಈ ಚುನಾವಣೆಯಲ್ಲಿ ʼಕೆಲವರಿಗೆʼ ಪಕ್ಷ ಗೆಲ್ಲುವುದು ಇಷ್ಟವಿರಲಿಲ್ಲ. ಹೊಸ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮೂರು ಪಾಳಿಕೆಗಳು ಮೂರು ಭರ್ಜಿಗಳಂತೆ ಇದ್ದವು. ಇರಿಯಲು ಕೆಲವರು ಸಿದ್ಧ ಮಾಡಿಟ್ಟುಕೊಂಡಿದ್ದರು. ಈ ಪರೀಕ್ಷೆಯಲ್ಲಿ ಅವರು ಫಸ್ಟ್ ಕ್ಲಾಸ್ʼನಲ್ಲೇ ಪಾಸಾಗಿದ್ದಾರೆ. ಕಲಬುರಗಿಯಲ್ಲೂ ಬಿಜೆಪಿ ಮ್ಯಾಜಿಕ್ ನಡೆದಿದ್ದರೆ ಬೊಮ್ಮಾಯಿ ಡಿಸ್ಟಿಂಗ್‌ಷನ್‌ನಲ್ಲಿ ತೇರ್ಗಡೆಯಾಗುತ್ತಿದ್ದರು. ಆದರೂ ಅಲ್ಲೂ ಬಿಜೆಪಿ ದಡ ಸೇರದಂತೆ ಆಗಿದೆ.
ಆದರೆ, ಹುಬ್ಬಳ್ಳಿಯವರೊಬ್ಬರು, ಅದರಲ್ಲೂ ಉತ್ತರ ಕರ್ನಾಟಕದವರೊಬ್ಬರು ಸಿಎಂ ಆಗಿದ್ದನ್ನು ಮತದಾರರು ಗುರುತಿಸಿದ್ದಾರೆ ಎಂದು ಹೇಳಬಹುದು. ಉತ್ತರ ಕರ್ನಾಟಕದ ಮುಖ್ಯಮಂತ್ರಿ ಎನ್ನುವ ಫ್ಯಾಕ್ಟರ್ ಕೆಲಸ ಮಾಡಿದೆ. ದಾವಣಗೆರೆಯಲ್ಲಿ ಅಮಿತ್ ಶಾ ಬಿಟ್ಟ ಬಾಣ ಎಲ್ಲಿ ಹೋಗಿ ಮುಟ್ಟಬೇಕೋ ಮುಟ್ಟಿದೆ. ಅವರ ಈ ಡೈಲಾಗ್ ಬಿಜೆಪಿಗೆ ಮತ ಫಸಲು ತಂದಿಟ್ಟಿದೆ.
ಜತೆಗೆ, ಬೆಳಗಾವಿಯಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಚಿಹ್ನೆಯ ಮೇಲೆ ಸ್ಪರ್ಧಿಸಿ ಗೆದ್ದಿದೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಆಧಾರ ಸ್ತಂಭವಾಗಿದ್ದ ಸುರೇಶ್ ಅಂಗಡಿ ಅವರ ನಿಧನದ ನಂತರ ಪಾಲಿಕೆಯಲ್ಲಿ ಕೇಸರಿ ಭಾವುಟ ಹಾರಿದೆ. ಒಂದೆಡೆ ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡಿದ ಕಮಲ ಪಾಳೆಯ ಇನ್ನೊಂದಡೆ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಗಳನ್ನೂ ಮಣ್ಣು ಮುಕ್ಕಿಸಿದೆ. ಅಲ್ಲದೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪ್ರಮೇಯವೇ ಇಲ್ಲದೆ ಉತ್ತಮ ಸಾಧನೆ ಮಾಡಿದೆ.
ಇದೆಲ್ಲ, ಹೀಗಿದ್ದರೆ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸಾಧನೆಯಂತೂ ಅತ್ಯಂತ ಕಳಪೆಯಾಗಿದೆ. ಬಿಜೆಪಿ ವೇಗದಲ್ಲಿ ಅದು ಪಕ್ಕಕ್ಕೆ ಸರಿದಿದೆ ಅನ್ನಬಹುದು ಅಥವಾ ತೆನೆ ಹೊತ್ತ ಮಹಿಳೆ ಕಮಲವನ್ನು ಮುಡಿದುಕೊಂಡಳಾ ಎನ್ನುವ ಅನುಮಾನ ದಟ್ಟವಾಗಿದೆ.
ಬಿ ಎಸ್ ಯಡಿಯೂರಪ್ಪ ಮತ್ತು ಆರ್ ಅಶೋಕ್
ಇನ್ನು, ಫಲಿತಾಂಶ ಹೊರಬಿದ್ದ ಮೇಲೆ ಮುಖ್ಯಮಂತ್ರಿ ಬೊಮ್ಮಾಯಿ ಗೆಲುವನ್ನು ಆಯಾ ಜಿಲ್ಲೆಗಳ ಕಾರ್ಯಕರ್ತರು, ಮುಖಂಡರು, ಸಚಿವರು, ಶಾಸಕರಿಗೆ ಅರ್ಪಣೆ ಮಾಡಿದರೆ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತ್ರ ಯಡಿಯೂರಪ್ಪ ಅವರಿಗೂ ಕ್ರೆಡಿಟ್ಟು ಕೊಟ್ಟು, ತಮಗೂ ಒಂದಿಷ್ಟು ಕ್ರೆಡಿಟ್ ತೆಗೆದುಕೊಂಡು ಬೊಮ್ಮಾಯಿ ಅವರಿಗೆ ಕಡೇ ಪಾಲು ನೀಡಿದರು.
ಉಳಿದೆಲ್ಲರ ಪೈಕಿ, ಹಿರಿಯ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಜಯಕ್ಕೆ ನಳೀನ್ ಕುಮಾರ್ ಕಟೀಲ್ ಸಂಘಟನಾ ಶಕ್ತಿ ಕಾರಣ ಎಂದು ಜೋಕ್ ಹೊಡೆದರೆ, ಆರ್.ಅಶೋಕ್ ಅವರಂತೂ ಮೊದಲು ಯಡಿಯೂರಪ್ಪ, ನಂತರ ಕಟೀಲ್ ಅವರಿಗೆ ಕ್ರೆಡಿಟ್ ಹಂಚಿ ಕೊನೆಗೆ ಬೊಮ್ಮಾಯಿಗೂ ಕೊಂಚ ಕೊಸರು ಕೊಟ್ಟರು.
ಅಲ್ಲಿಗೆ ರಾಜ್ಯ ಬಿಜೆಪಿಯೊಳಗಿನವರ ಮನಸ್ಸಿನೊಳಗೆ ಬೊಮ್ಮಾಯಿ ಅವರ ಬಗ್ಗೆ ಇರುವ ಒಣನಿಷ್ಠೆ ಏನೆಂಬುದು ಈ ಚುನಾವಣೆಯಲ್ಲಿ ಸ್ವಲ್ಪ ಆಚೆ ಬಿದ್ದಿದೆ. ಹೀಗಾಗಿ ಬೊಮ್ಮಾಯಿ ಅವರಿಗೆ ಹೈಕಮಾಂಡ್ ಆಸರೆ ಇಲ್ಲದಿದ್ದರೆ ಕಷ್ಟ ತಪ್ಪಿದ್ದಲ್ಲ. ವರಿಷ್ಠರ ಒಲವು ಇರುವವರಿಗೂ ಬೊಮ್ಮಾಯಿ ಬಾಹುಬಲಿಯೇ. ಕಟ್ಟಪ್ಪಗಳಂತೂ ಸಾಲುಸಾಲೇ ಇದ್ದಾರೆ!