ಗಣೇಶೋತ್ಸವ ಆಚರಣೆಗೆ ಮಾರ್ಗಸೂಚಿ ತಿಳಿಸಿದ ಸಿಪಿಐ ಲಿಂಗರಾಜು
by GS Bharath Gudibande
ಗುಡಿಬಂಡೆ: ಗಣೇಶೋತ್ಸವ ಆಚರಿಸಲು ಪಟ್ಟಣ ಹಾಗೂ ತಾಲೂಕಿನ ಜನರು ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಪಟ್ಟಣದಲ್ಲಿ ಒಂದು ವಾರ್ಡ್ʼಗೆ ಒಂದು ಹಾಗೂ ಒಂದು ಹಳ್ಳಿಗೆ ಒಂದೇ ಗಣೇಶ ಮೂರ್ತಿಯನ್ನಿಟ್ಟು ಹಬ್ಬ ಆಚರಿಸಲು ಅನುಮತಿ ನೀಡಲಾಗಿದೆ ಎಂದು ಗುಡಿಬಂಡೆ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಲಿಂಗರಾಜು ತಿಳಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶೋತ್ಸವ ಹಬ್ಬದ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ಜನರಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಸರಕಾರದ ನಿಯಮ ಪಾಲನೆ ಕಡ್ಡಾಯ
ಸರಕಾರ ಈಗಾಗಲೇ ರಾಜ್ಯದ ಜನರಿಗೆ ಸ್ಪಷ್ಟ ಮಾರ್ಗಸೂಚಿ ನೀಡಿದೆ. ಅದರಂತೆ ಗಣೇಶೋತ್ಸವ ಆಚರಿಸಬೇಕು. ಯಾರಾದರೂ ಅನಧಿಕೃತವಾಗಿ ಗಣೇಶ ಮೂರ್ತಿಯನ್ನು ಇಟ್ಟು ಡಿಜೆ, ಮನರಂಜನೆ, ಆರ್ಕೆಸ್ಟ್ರಾ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿಪತ್ತು ನಿರ್ವಹಣಾ ಕಾಯ್ದೆಯನುಸಾರ ಪ್ರಕರಣ ದಾಖಲಿಸಲಾಗುವುದು ಎಂದು ಲಿಂಗರಾಜು ಅವರು ಎಚ್ಚರಿಕೆ ನೀಡಿದರು.
ಆಯೋಜಕರಿಗೆ ಲಸಿಕೆ ಕಡ್ಡಾಯ
ಪಟ್ಟಣ ಹಾಗೂ ತಾಲೂಕಿನ ಹಳ್ಳಿಗಳಲ್ಲಿ ಗಣೇಶೋತ್ಸವ ಆಯೋಜನೆ ಮಾಡುವವರು, ಗನೇಶ ಮೂರ್ತಿ ಇಡುವವರು ಸರಕಾರದ ನಿಯಮದಂತೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು. ಅಂಥವರಿಗೆ ಮಾತ್ರ ಗಣೇಶ ಮೂರ್ತಿ ಇಡಲು ಅನುಮತಿ ನೀಡಲಾಗುವುದು.
ಮೆರವಣಿಗೆ ಮತ್ತು ಡಿಜೆಗೆ ಬ್ರೇಕ್
ಗಣೇಶೋತ್ಸವ ಮಾಡುವವರು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಜನ ಸಂಚಾರ ಮಾಡುವ ರಸ್ತೆ, ಬೀದಿಗಳಲ್ಲಿ ಇಡುವಂತಿಲ್ಲ. ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜನೆ ಮಾಡುವಾಗ ವಿಜೃಂಭಣೆ, ಅದ್ಧೂರಿ, ರಸಸಂಜೆ ಇತ್ಯಾದಿ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ.
ಗಣೇಶೋತ್ಸವಕ್ಕೆ ಮಾರ್ಗಸೂಚಿ: ಏನು? ಎತ್ತ?
- ಗಣೇಶೋತ್ಸವವನ್ನು ಸರಳ ಮತ್ತು ಭಕ್ತಿಪೂರ್ವಕವಾಗಿ ದೇವಸ್ಥಾನದ ಒಳಗೆ ಮತ್ತು ತಮ್ಮ ಮನೆಗಳಲ್ಲಿ ಅಥವಾ ಸರಕಾರಿ/ಖಾಸಗಿ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆ ಜನರೊಂದಿಗೆ ಆಚರಿಸಬೇಕು.
- ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಗಣೇಶ ಮೂರ್ತಿಯನ್ನು ಇಡಬಾರದು.
- ಸಮಿತಿಗಳು, ಮಂಡಳಿಗಳು ಗಣೇಶ ಮೂರ್ತಿಯನ್ನು ಇಡಲು ಮುನಿಸಿಪಲ್ ಕಾರ್ಪೊರೇಷನ್, ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು.
- 20 ಜನರಿಗೆ ಸಮೀತವಾದ ಜಾಗದಲ್ಲಿ ಮಾತ್ರ ಇಡಬೇಕು.
- ಆಯೋಜಕರ ನೆಗೆಟಿವ್ ವರದಿ ಹಾಗೂ ಎರಡೂ ಡೋಸ್ ಲಸಿಕೆಯ ಪ್ರಮಾಣ ಪತ್ರ ನೀಡಬೇಕು.
- ಸಾರ್ವಜನಿರ ಸಂಚಾರಕ್ಕೆ ಅಡ್ಡಿ ಆಗದಂತೆ ಪ್ರತಿಷ್ಠಾಪನೆ ಮಾಡಬೇಕು.
- ಸಾಂಸ್ಕೃತಿಕ, ಸಂಗೀತ, ನೃತ್ಯ, ಡಿಜೆ ಸೇರಿದಂತೆ ಯಾವುದೇ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ಇಲ್ಲ.
- ಗಣೇಶ ಮೂರ್ತಿ ತರುವಾಗ, ವಿಸರ್ಜಿಸುವಾಗ ಮೆರವಣಿಗೆ ಮಾಡುವಂತಿಲ್ಲ.
- ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯನ್ನು ಮನೆಯಲ್ಲಿಯೇ ವಿಸರ್ಜಿಸಬೇಕು.
- ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸಿರುವ ಗಣೇಶ ಮೂರ್ತಿಗಳನ್ನು ಕನಿಷ್ಠ ಜನಸಂಖ್ಯೆಯೊಂದಿಗೆ ಸಮೀಪವಾಗುವ ಮಾರ್ಗ ಬಳಿಸಿ ವಿಸರ್ಜಿಸಬೇಕು.
ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ಸ್ಯಾನಿಟೈಸ್ ಮಾಡಿ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು.ಈ ಸಂದರ್ಭದಲ್ಲಿ ಪೆರೇಸಂದ್ರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್, ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜಶೇಖರ್ ಸೇರಿದಂತೆ ಪಟ್ಟಣ ಹಾಗೂ ವಿವಿಧ ಹಳ್ಳಿಗಳ ಮುಖಂಡರು ಭಾಗವಹಿಸಿದ್ದರು.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..