ದೇವರ ಹೆಸರಿನಲ್ಲಿ ಯಾಮಾರಿಸಿದ ಖತರ್ನಾಕ್ ವಂಚಕ
by GS Bharath Gudibande
ಚಿಕ್ಕಬಳ್ಳಾಪುರ: ಇಲ್ಲೊಬ್ಬ ಐನಾತಿ ಕಿಲಾಡಿಯೊಬ್ಬ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹಾಗೂ ಅಲ್ಲಿ ವಸತಿ ವ್ಯವಸ್ಥೆಗೆ ನಕಲಿ ಟಿಕೆಟ್ ನೀಡಿ ಸುಮಾರು 10 ಲಕ್ಷ ರೂಪಾಯಿಗೂ ಹೆಚ್ಚು ವಂಚಿಸಿರುವ ಪ್ರಕರಣವೊಂದು ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.
ನಗರದಲ್ಲಿ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಂಜಾ ವೇಮವರಂ ಗ್ರಾಮದ ರಮಣ ಪ್ರಸಾದ್ ಎಂಬಾತ ಸೈಬರ್ ಸೆಂಟರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಜನರೂ ಕೂಡ ಈತನ ಸೈಬರ್ ಸೆಂಟರ್ʼಗೆ ಹೋಗುತ್ತಿದ್ದರು. ಚೆನ್ನಾಗಿ ನಡೆಯುತ್ತಿದ್ದ ಬಿಸ್ನೆಸ್ ನಡುವೆಯೇ ಇವನು ಜನರಿಗೆ ಟೋಪಿ ಹಾಕುವ ಕೆಲಸ ಮಾಡಿದ್ದ.
10 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಚಿಕ್ಕಬಳ್ಳಾಪುರದ ಟ್ರಾವೆಲ್ ಏಜೆನ್ಸಿ ಮಾಲಕಿಯೊಬ್ಬರ ಎರಡು ಲಕ್ಷ ರೂ. ಸೇರಿದಂತೆ ಜಿಲ್ಲೆಯ 143 ಜನರಿಂದ ತಲಾ 900 ರೂ.ನಂತೆ 1,28,700 ರೂ. ವಂಚನೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೈಬರ್ ಸೆಂಟರ್ ಇಟ್ಟುಕೊಂಡು ಸೈಲಂಟಾಗಿ ಯಾಮಾರಿಸುತ್ತಿದ್ದ ಇವನ ಖತರ್ನಾಕ್ ವಂಚನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ.

ಇವನಿಂದ ಟಿಕೆಟ್ ಪಡೆದು ತಿರುಪತಿಗೆ ಹೋದವರೂ ದರ್ಶನಕ್ಕೆ ಪಡಿಪಾಟಲು ಪಟ್ಟಿದ್ದಾರೆ. ಕೊನೆಗೆ ಧರ್ಮದರ್ಶನಕ್ಕೆ ತೆರಳಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ದರ್ಶನ ಪಡೆದಿದ್ದಾರೆ.
ಬಾಲಾಜಿ ದರ್ಶನಕ್ಕೆ ನಕಲಿ ಟಿಕೆಟ್
ತಿರುಮಲದ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಕೊಡುವುದಾಗಿ ಜಿಲ್ಲೆಯ ನೂರಾರು ಜನರಿಗೆ ವಂಚನೆ ಈತ ಮಾಡಿದ್ದಾನೆ. ಇವನು ಕೊಟ್ಟ ಟಿಕೆಟ್ ಪಡೆದು ತಿರುಮಲಕ್ಕೆ ಹೋದವರಿಗೆ ಶಾಕ್ ಆಗಿದೆ. ಇವನು ಕೊಟ್ಟ ನಕಲಿ ಟಿಕೆಟ್‌ನಿಂದ ಭಗವಂತನ ದರ್ಶನಕ್ಕೆ ಹೋದವರು ಸಿಟ್ಟಿನಿಂದ ವಾಪಸ್ ಬಂದಿದ್ದಾರೆ. ಇವರಷ್ಟೇ ಅಲ್ಲದೆ, ಇನ್ನೂ ಹಲವರಿಗೆ 10 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ರಮಣ ಪ್ರಸಾದ್ ವಂಚಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಗ ವಂಚಕ ರಮಣ ಪ್ರಸಾದ್ ವಿರುದ್ಧ ಚಿಕ್ಕಬಳ್ಳಾಪುರ ಸೈಬರ್ ಪೊಲೀಸರಿಗೆ ದೂರು ನೀಡಿರುವ ಟ್ರಾವೆಲ್ ಏಜೆನ್ಸಿ ಒಡತಿ ಪ್ರಿಯದರ್ಶಿನಿ ಅವರು ಕೂಡಲೇ ಆತನನ್ನು ಬಂಧಿಸಿ ಹಣ ವಾಪಸ್ ಕೊಡಿಸುವಂತೆ ಹಾಗೂ ವಂಚಕನಿಗೆ ತಕ್ಕ ಶಾಸ್ತಿ ಮಾಡುವಂತೆ ಮನವಿ ಮಾಡಿದ್ದಾರೆ.



















