ಕಟ್ಟಿದ ಕಟ್ಟಡಕ್ಕೆ ಹೆಜ್ಜೆಯನ್ನೂ ಇಡದೇ ನಿರ್ಗಮಿಸಿದರು ಕೆಂಗಲ್
ಕೆಂಗಲ್ ಹನುಮಂತಯ್ಯ ಅವರನ್ನು ಸಿಎಂ ಮಾಡಿ, ಹಿಂದೆ ಅವರೇ ಕಟ್ಟಿದ ಆ ಕಟ್ಟಡದಲ್ಲಿ ಕೂರಿಸಲು ನಡೆದಿದ್ದ ರೋಚಕ ಕತೆ ನಿಮಗೆ ಗೊತ್ತಾ? ಅಂತ ಅವರು ಕೇಳಿದರು.
ಮುಖ್ಯಮಂತ್ರಿಯಾಗಿ ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಇನ್ನೇನು ಆ ಕಟ್ಟಡ ಉದ್ಘಾಟನೆಯಾಗುವ ಕಾಲ ಹತ್ತಿರ ಬಂತು ಎನ್ನುವಾಗ ಅಧಿಕಾರದಿಂಧ ಇಳಿದ ಕತೆ ನನಗೆ ಗೊತ್ತು. ಆದರೆ, ಈ ಕತೆ ಗೊತ್ತಿಲ್ಲ ಸಾರ್ ಎಂದೆ.
ವಾಟಾಳ್ ನಾಗರಾಜ್ ತಮ್ಮ ನೆನಪಿನ ಕೋಶಗಳಲ್ಲಿ ಮಡಚಿಕೊಂಡು ಕುಳಿತಿದ್ದ ಆ ಕತೆಯನ್ನು ಹೊರಗೆಳೆದು ವಿವರಿಸತೊಡಗಿದರು.
ವಿಠ್ಠಲಮೂರ್ತಿ, ಇದು ನಡೆದಿದ್ದು ಸುಮಾರು 1960ರ ಸುಮಾರಿಗೆ. ಆಗ ಮುಖ್ಯಮಂತ್ರಿಯಾಗಿದ್ದವರು ಬಿ.ಡಿ.ಜತ್ತಿ. ಅಷ್ಟೊತ್ತಿಗಾಗಲೇ ರಾಜ್ಯ ರಾಜಕಾರಣದಲ್ಲಿ ನಿಜಲಿಂಗಪ್ಪ ಅವರದು ಬಹುದೊಡ್ಡ ಹೆಸರು.
ಆದರೆ ಹಲವು ಕಾರಣಗಳಿಂದ ನಿಜಲಿಂಗಪ್ಪ ಹಾಗೂ ಬಿ.ಡಿ.ಜತ್ತಿ ಪರಸ್ಪರ ಕತ್ತಿ ಮಸೆಯುತ್ತಿದ್ದರು. ಒಬ್ಬರನ್ನು ಕಂಡರೆ ಒಬ್ಬರಿಗಾಗುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಈ ಇಬ್ಬರು ನಾಯಕರ ಜತೆ ನಿಂತ ಗುಂಪುಗಳು ಕೂಡಾ ಹಗೆ ಕಾರುತ್ತಲೇ ಇದ್ದವು.
ಇಂತಹ ಕಾಲದಲ್ಲೇ ಒಂದು ಸಲ ನಿಜಲಿಂಗಪ್ಪ ಅವರ ಬೆಂಬಲಿಗರ ಪಡೆ ಒಂದು ತೀರ್ಮಾನಕ್ಕೆ ಬಂತು. ಹೇಗಾದರೂ ಮಾಡಿ ಬಿ.ಡಿ.ಜತ್ತಿ ಅವರನ್ನು ಸಿಎಂ ಹುದ್ದೆಯಿಂದ ಪದಚ್ಯುತಗೊಳಿಸಬೇಕು ಎಂಬುದು ಅ ತೀರ್ಮಾನ.
ಸರಿ, ಕದನ ಶುರುವಾಯಿತು. ನೋಡ ನೋಡುತ್ತಿದ್ದಂತೆಯೇ ಬಿ.ಡಿ.ಜತ್ತಿ ಅವರ ವಿರುದ್ಧ ಒಂದರ ಹಿಂದೊಂದರಂತೆ ಆರೋಪಗಳು ಕೇಳಿ ಬಂದವು. ಆಗೆಲ್ಲ ಅದು ಬಹುದೊಡ್ಡ ವಿಷಯ.
ಹಗರಣಗಳ ಮೇಲೆ ಹಗರಣಗಳನ್ನು ಮಾಡಿಕೊಂಡ ಬಿ.ಡಿ.ಜತ್ತಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿ ಎಂಬ ಕೂಗು ಪ್ರಬಲವಾಯಿತು.
ನಿಜಲಿಂಗಪ್ಪ ಬೆಂಬಲಿಗರ ಕೂಗು ಎಷ್ಟು ಪ್ರಬಲವಾಗಿತ್ತು ಎಂದರೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕಿವಿಗೆ ಈ ವಿಷಯ ತಲುಪಿತು.
ಯಾವಾಗ ಬಿ.ಡಿ.ಜತ್ತಿ ಅವರ ವಿರುದ್ಧದ ಆರೋಪಗಳು ದಿಲ್ಲಿ ಮಟ್ಟದಲ್ಲಿ ಸದ್ದು ಮಾಡಿದವೋ? ಆಗ ಪ್ರಧಾನಿ ನೆಹರೂ ಅವರು ತಮ್ಮ ಪರಮಾಪ್ತರೊಬ್ಬರನ್ನು ಕರ್ನಾಟಕಕ್ಕೆ ಕಳಿಸಿದರು. ಜತ್ತಿ ಅವರ ವಿರುದ್ಧದ ಅರೋಪಗಳ ಕುರಿತು ತನಿಖೆ ಮಾಡಿಕೊಂಡು ಬನ್ನಿ ಎಂದರು.
ಈಗೆಲ್ಲ ಆರೋಪಗಳ ತನಿಖೆ ಎಂದರೆ ಸಂಬಂಧಪಟ್ಟ ಕಡತವನ್ನು ಮುಚ್ಚುವ ಕ್ರಿಯೆ.ಆದರೆ ಆಗೆಲ್ಲ ತನಿಖೆ ಎಂದರೆ ಸಂಬಂಧಪಟ್ಟ ಕಡತಗಳನ್ನು ಬಿಚ್ಚುವ ಕ್ರಿಯೆ.
ಯಾವಾಗ ಜತ್ತಿ ವಿರುದ್ಧದ ಆರೋಪಕ್ಕೆ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ಕಿವಿಗೊಟ್ಟರೋ? ಆಗ ನಿಜಲಿಂಗಪ್ಪ ಅವರ ಬೆಂಬಲಿಗರು ಹುರುಪಿನಿಂದ ಜತ್ತಿ ಜಾಗಕ್ಕೆ ಯಾರು ಬರಬೇಕು? ಅನ್ನುವ ಸಂಬಂಧ ಒಂದು ನಿರ್ಣಯಕ್ಕೆ ಬಂದರು.
ಕರ್ನಾಟಕದ ಏಕೀಕರಣಕ್ಕೆ ಒತ್ತಾಸೆ ನೀಡಿದ, ವಿಧಾನಸೌಧ ಕಟ್ಟಿಸಿದರೂ ಮುಖ್ಯಮಂತ್ರಿಯಾಗಿ ಒಳಗೆ ನುಗ್ಗಲಾಗದ ಕೆಂಗಲ್ ಹನುಮಂತಯ್ಯ ಅವರನ್ನು ಮರಳಿ ಮುಖ್ಯಮಂತ್ರಿ ಹುದ್ದೆಗೆ ಏರಿಸಬೇಕು ಅನ್ನುವುದು ಈ ತೀರ್ಮಾನ.
ಅಂದ ಹಾಗೆ 1956ರಲ್ಲಿ ನಡೆದ ಏಕೀಕರಣದ ಕತೆ ನಿಮಗೆ ಗೊತ್ತಿದೆ. ಆದರೆ ಆ ಏಕೀಕರಣಕ್ಕೆ ಹಳೆ ಮೈಸೂರು ಭಾಗದ ಬಹುತೇಕ ನಾಯಕರ ವಿರೋಧವಿತ್ತು. ಒಂದು ಸಲ ಏಕೀಕರಣ ಅಂತಾದರೆ ನಾಡಿನ ಅಧಿಕಾರ ಸೂತ್ರ ಉತ್ತರ ಕರ್ನಾಟಕ ಭಾಗದ ನಾಯಕರ ಕೈಗೆ ಹೋಗುತ್ತದೆ ಎಂಬುದು ಇಂತಹ ವಿರೋಧಕ್ಕೆ ಮುಖ್ಯ ಕಾರಣವಾಗಿತ್ತು.
ಹೀಗಾಗಿಯೇ ಅವತ್ತು ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಏಕೀಕರಣಕ್ಕೆ ವಿರೋಧ ವ್ಯಕ್ತಪಡಿಸಿದರು. ಯಾವ ಕಾರಣಕ್ಕೂ ಏಕೀಕರಣಕ್ಕೆ ಬೆಂಬಲ ಕೊಡಬಾರದು ಎಂದು ಅವತ್ತು ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರ ಮೇಲೂ ಒತ್ತಡ ಹೇರಿದರು.
ಆದರೆ ಹನುಮಂತಯ್ಯ ಅವರು ಈ ವಾದವನ್ನು ಒಪ್ಪಲಿಲ್ಲ. ಕೇವಲ ಅಧಿಕಾರಕ್ಕಾಗಿ ನಮ್ಮದೇ ನಾಡಿನ ಒಂದು ಭಾಗ ಪ್ರತ್ಯೇಕವಾಗಿರುವುದು ಸರಿಯಲ್ಲ, ಗೌರವವೂ ಅಲ್ಲ ಎಂಬುದು ಅವರ ವಾದವಾಗಿತ್ತು.
ಪರಿಣಾಮ? ಅದಾಗಲೇ ಹಲವು ಕಾರಣಗಳಿಂದ ವಿವಿಧ ಶಕ್ತಿಗಳ ವಿರೋಧ ಕಟ್ಟಿಕೊಂಡಿದ್ದ ಹನುಮಂತಯ್ಯ ಅವರ ವಿರುದ್ಧ ಸ್ವಪಕ್ಷೀಯರೇ ದೊಡ್ಡ ಮಟ್ಟದಲ್ಲಿ ತಿರುಗಿಬಿದ್ದರು. ಮುಖ್ಯಮಂತ್ರಿ ಹುದ್ದೆಯಿಂದ ಅವರು ಪದಚ್ಯುತರಾಗುವಂತೆ ಮಾಡಿದರು.
ಅಂದ ಹಾಗೆ ಹನುಮಂತಯ್ಯ ಅವರ ಬಗ್ಗೆ ಪ್ರಧಾನಿ ನೆಹರೂ ಅವರಿಗೂ ಅಸಮಾಧಾನವಿತ್ತು. ಯಾವ ಕಾರಣಕ್ಕಾಗಿ ನೆಹರೂ ಅವರಲ್ಲಿ ಈ ಅಸಮಾಧಾನ ಬೇರೂರಿತ್ತು ಎಂದು ಹೇಳಲು ಹೊರಟರೆ ಅದೇ ದೊಡ್ಡ ಕತೆ.
ಅದೇನೇ ಇರಲಿ, ಒಟ್ಟಿನಲ್ಲಿ ಕರ್ನಾಟಕ ಏಕೀಕರಣವಾಗಬೇಕು ಎಂದು ಒತ್ತಾಸೆ ನೀಡಿದ ಕೆಂಗಲ್ ಹನುಮಂತಯ್ಯ ಅದರ ಪ್ರತಿಫಲವಾಗಿ ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಳ್ಳಬೇಕಾಯಿತು.
ಹೀಗೆ ವಿಧಾನಸೌಧದಂತಹ ಅದ್ಭುತ ಕಟ್ಟಡವನ್ನು ಕಟ್ಟಿಸಿ, ಇನ್ನೇನು ಅದರ ಉದ್ಘಾಟನೆಯಾಗಬೇಕು ಅನ್ನುವ ಕಾಲಕ್ಕೆ ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರಲ್ಲ?
ಅಂತಹ ಕೆಂಗಲ್ ಹನುಮಂತಯ್ಯ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತೊಮ್ಮೆ ಅವರನ್ನುಮುಖ್ಯಮಂತ್ರಿ ಹುದ್ದೆಗೇರಿಸಬೇಕು ಎಂಬುದು ನಿಜಲಿಂಗಪ್ಪ ಅವರ ಗುಂಪಿನ ಆಸೆಯಾಗಿತ್ತು. ಅದರಲ್ಲಿದ್ದ ಬಹುತೇಕರು ಉತ್ತರ ಕರ್ನಾಟಕ ಭಾಗದವರು ಎಂಬುದನ್ನು ನಾವು ವಿಶೇಷವಾಗಿ ಗುರುತಿಸಬೇಕು.
ಸರಿ, ನಿಜಲಿಂಗಪ್ಪ ಹಾಗೂ ಬಿ.ಡಿ.ಜತ್ತಿ ನಡುವಣ ಕದನ ತಾರಕಕ್ಕೇರಿತು.ಕೊನೆಗೆ ನೆಹರೂ ಅವರಿಗೆ ಆಪ್ತರಾಗಿದ್ದವರೇ ಬಂದು ಬಿ.ಡಿ.ಜತ್ತಿ ಸಮ್ಮುಖದಲ್ಲಿ ಕುಳಿತು ಅವರ ವಿರುದ್ಧದ ಆರೋಪಗಳ ಬಗ್ಗೆ ಪರಿಶೀಲನೆ ಮಾಡಿದರು. ಸಂಬಂಧಪಟ್ಟ ಕಡತಗಳನ್ನು ಇಂಚಿಂಚೂ ಬಿಡದೆ ಗಮನಿಸಿದರು.
ಒಬ್ಬ ಮುಖ್ಯಮಂತ್ರಿಯನ್ನು ಎದುರುಗಡೆ ಕೂರಿಸಿಕೊಂಡು ಅವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ಮಾಡುವುದು ಎಂದರೆ ಅದೇನು ಸಣ್ಣ ಸಂಗತಿಯೇ? ಆದರೆ ಜತ್ತಿ ಅಂತಹ ತನಿಖೆಯನ್ನು ಎದುರಿಸಬೇಕಾಯಿತು.
ಆದರೆ ತನಿಖೆಯನ್ನು ಪೂರ್ಣಗೊಳಿಸಿದ ನೆಹರೂ ಅವರ ಪರಮಾಪ್ತರು ಜತ್ತಿ ವಿರುದ್ಧದ ಆರೋಪದಲ್ಲಿ ಹೇಳಿಕೊಳ್ಳುವಂತಹ ತಪ್ಪೇನೂ ಆಗಿಲ್ಲ ಎಂಬ ತೀರ್ಮಾನಕ್ಕೆ ಬಂದರು.
ಹಾಗೆಯೇ ಮತ್ತೊಂದು ಅಂಶ ಜತ್ತಿ ಅವರಿಗೆ ನೆರವಾಯಿತು. ಅದೆಂದರೆ ಜತ್ತಿ ಅವರ ಜಾಗಕ್ಕೆ ಯಾರನ್ನು ತರಬೇಕು ಅಂತ ನಿಜಲಿಂಗಪ್ಪ ಅವರ ಬಣ ನಿರ್ಧರಿಸಿತ್ತೋ? ಅಂತಹ ಕೆಂಗಲ್ ಹನುಮಂತಯ್ಯ ಅವರನ್ನು ಮತ್ತೆ ಸಿಎಂ ಮಾಡುವ ವಿಷಯದಲ್ಲಿ ನೆಹರೂ ಅವರಿಗೆ ಆಸಕ್ತಿ ಇರಲಿಲ್ಲ.
ಹೀಗಾಗಿ ಕೆಂಗಲ್ ಹನುಮಂತಯ್ಯ ಅವರನ್ನು ಮರಳಿ ಮುಖ್ಯಮಂತ್ರಿ ಹುದ್ದೆಗೆ ತರುವ ಮೂಲಕ ಜತ್ತಿ ಅವರನ್ನು ತಮ್ಮ ದಾರಿಯಿಂದ ನಿವಾರಿಸಿಕೊಳ್ಳಬೇಕು ಅನ್ನುವ, ಹಾಗೆಯೇ ಹಿಂದೆ ಆಗಿದ್ದ ಪ್ರಮಾದವನ್ನು ಸರಿಪಡಿಸಬೇಕು ಅನ್ನುವ ನಿಜಲಿಂಗಪ್ಪನವರ ಕನಸು ಈಡೇರಲೇ ಇಲ್ಲ.
- ರಾಜಚರಿತೆ
- ಲೇಖಕ:ಆರ್.ಟಿ.ವಿಠ್ಠಲಮೂರ್ತಿ
- ಪ್ರಕಾಶಕರು: ಸಾಧನ ಪಬ್ಲಿಕೇಷನ್ಸ್
- ಬೆಲೆ: ರೂ. 175