ಪಟ್ಟಣ & ತಾಲೂಕಿನಲ್ಲಿ 34 ವಿನಾಯಕ ಮೂರ್ತಿಗಳಿಗಷ್ಟೇ ಅವಕಾಶ
by GS Bharath Gudibande
ಗುಡಿಬಂಡೆ: ಈ ವರ್ಷ ಪಟ್ಟಣ ಹಾಗೂ ತಾಲೂಕಿನಲ್ಲಿ ಗಣೇಶೋತ್ಸವ ಆಚರಣೆ ಕಳೆಗುಂದಿತ್ತು. ಕೋವಿಡ್ ಸೇರಿದಂತೆ ಜನರ ಆರ್ಥಿಕ ಸಮಸ್ಯೆ ಕಾರಣಗಳಿಂದ ಹಬ್ಬದ ಸಂಭ್ರಮ ಮಾಯವಾಗಿತ್ತು. ಸರಕಾರದ ಮಾರ್ಗಸೂಚಿಯಂತೆ ಅಲ್ಲಲ್ಲಿ ಗಣಪನ ಮೂರ್ತಿಗಳು ಕಂಡು ಬಂದಿದ್ದು ಬಿಟ್ಟರೆ, ಗಣೇಶ ಚತಯರ್ಥಿಯೂ ಮನೆಗಳಿಗೇ ಸೀಮಿತವಾಗಿತ್ತು.
ತಾಲೂಕಿನಾದ್ಯಂತ ಈ ಸಲ ಕೇವಲ 34 ಗಣೇಶ ಮೂರ್ತಿಗಳನ್ನಷ್ಟೇ ಇಡಲಾಗಿತ್ತು ಎಂಬ ಮಾಹಿತಿ ಪೊಲೀಸ್ ಇಲಾಖೆಯಿಂದ ಲಭ್ಯವಾಗಿದೆ. ಪರಿಸರ ಸಂರಕ್ಷಣೆ, ಗಣೇಶ ಮೂರ್ತಿ ಇಡುವ ಸ್ಥಳಗಳಲ್ಲಿ ಲಸಿಕೀಕರಣ ಇತ್ಯಾದಿ ಕಾರ್ಯಕ್ರಮಗಳು ಗಮನ ಸೆಳೆದವು.
ಪರಿಸರ ಸ್ನೇಹಿ ಗಣೇಶೋತ್ಸವ
ಪಟ್ಟಣ, ತಾಲೂಕಿನ ಸಾರ್ವಜನಿಕ ಸ್ಥಳಗಳು ಹಾಗೂ ಮನೆಗಳಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಹೆಚ್ಚು ಒತ್ತು ನೀಡಿದ್ದರು ಜನ. ಎಲ್ಲರಲ್ಲೂ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಬಂದಿರುವುದು ಪರಿಸರವಾದಿಗಳಿಗೂ ಸಂತಸ ತಂದಿದೆ. ಮಣ್ಣಿನ ಗಣಪನನ್ನು ಬಿಟ್ಟರೆ ಎಲ್ಲೂ ಪಿಒಪಿ, ರಾಸಾಯನಿಕಗಳನ್ನು ಬಳಕೆ ಮಾಡಿದ ಒಂದು ಮೂರ್ತಿಯೂ ಕಾಣದಿರುವುದು ಇನ್ನೊಂದು ವಿಶೇಷ.
ಮನೆಗಳಲ್ಲಿ ಮಕ್ಕಳ ಸಂಭ್ರಮ
ಕೋವಿಡ್ ಕಾರಣ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿತ್ತು ಹಾಗೂ ಪೋಷಕರು ಮಕ್ಕಳನ್ನು ಹೊರಗೆ ಕಳುಹಿಸಬೇಕು ಎಂಬ ಭಯದಿಂದ ಮನೆಯಲ್ಲೇ ಗಣೇಶೋತ್ಸವ ಆಚರಿಸುವ ಮೂಲಕ ಮಕ್ಕಳನ್ನು ಮನೆಯಲ್ಲಿ ಲಾಕ್ ಮಾಡಿದ್ದರು ಪೋಷಕರು. ಆದರೆ, ಮಕ್ಕಳು ಮನೆಗಳಲ್ಲಿ ವಿಭಿನ್ನವಾಗಿ ಹಬ್ಬ ಮಾಡಿದರು. ಕೆಲ ಮಕ್ಕಳು ಮಣ್ಣಿಂದ ಗಣಪನನ್ನು ಮಾಡಿದರೆ, ಇನ್ನು ಕೆಲವರು ಪೇಂಟಿಂಗ್ ಮಾಡಿ ಖುಷಿ ಪಟ್ಟರು.
ಉಳಿದಂತೆ; ಪಟ್ಟಣ ಹಾಗೂ ತಾಲೂಕಿನ ವಿವಿಧ ಹಳ್ಳಿಗಳ ಮುಖಂಡರ ಜತೆ ಹಬ್ಬದ ಪೂರ್ವಭಾವಿ ಶಾಂತಿ ಸಭೆಯನ್ನು ನಡೆಸಿ ಎಲ್ಲರಿಗೂ ಸರಕಾರದ ಸ್ಪಷ್ಟ ಮಾರ್ಗಸೂಚಿಯನ್ನು ನೀಡಿದ್ದ ಆರಕ್ಷಕ ವೃತ್ತ ನಿರೀಕ್ಷಕ ಲಿಂಗರಾಜು ಅವರು ಎಲ್ಲಿಯೂ ಜನ ಕೋವಿಡ್ ನಿಯಮ ಮೀರದಂತೆ ನಿಗಾ ವಹಿಸಿದ್ದರು.
ಯಾರು ಏನಂತಾರೆ?
ಗಣೇಶೋತ್ಸವ ಆಚರಣೆಯನ್ನು ಸರಳವಾಗಿ ಕುಟುಂಬದೊಂದಿಗೆ ಆಚರಿಸಿದೆವು. ನಾವು ಹೆಚ್ಚು ಪರಿಸರ ಸಂರಕ್ಷಣೆ ಮಾಡುವತ್ತ ಗಮನ ಹರಿಸಿದ್ದೆವು. ಹೀಗಾಗಿ ಮಣ್ಣಿನ ಗಣಪನನ್ನೇ ಪೂಜಿಸಿದೆವು. ಪರಿಸರ ಸ್ನೇಹಿ ಗಣೇಶೋತ್ಸವ ಮಕ್ಕಳಿಗೆ ಬಹಳ ಸಂತೋಷ ನೀಡಿದೆ.
ಪ್ರಕಾಶ್, ಶಿಕ್ಷಕರು, ಗೌರಿಬಿದನೂರು
ಪ್ರತಿ ವರ್ಷದಂತೆ ಈ ವರ್ಷವೂ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಆಚರಿಸಿದ್ದು ವಿಶೇಷವಾಗಿತ್ತು. ಗಣೇಶೋತ್ಸವ ಆಚರಣೆಗೆ ಸರಕಾರ ಮಾರ್ಗಸೂಚಿ ಪ್ರಕಟಿಸಿ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದು ಸರಿಯಾದ ಕ್ರಮ.
ಸುನೀಲ್, ಬೆಂಗಳೂರು
ಹಿಂದಿನ ವರ್ಷ ಗಣೇಶೋತ್ಸವ ಆಚರಣೆಗೆ ಸರಕಾದ ನಿರ್ಬಂಧ ಇತ್ತು, ಆದರೆ ಈ ವರ್ಷ ಕೊರೋನಾ ಪಾಸಿಟಿವಿಟಿ ದರ ಕಡಿಮೆಯಾದ ಕಾರಣ ಮಾರ್ಗಸೂಚಿ ಪಾಲಿಸಿ ಆಚರಿಸಲು ಅವಕಾಶ ನೀಡಿರುವುದು ಶ್ಲಾಘನೀಯ. ಜತೆಗೆ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹಬ್ಬ ಆಚರಿಸಲಾಗಿದೆ.
ಡಾ.ಗುಂಪುಮರದ ಆನಂದ್, ಪರಿಸರ ಪ್ರೇಮಿ, ಗುಡಿಬಂಡೆ