ಕೊಂಚ ಎಚ್ಚರ ತಪ್ಪಿದ್ದರೆ ಇನ್ನೊಂದು ವಿಶಾಖಪಟ್ಟಣ ಆಗುತ್ತಿತ್ತು ಗುಡಿಬಂಡೆ!
by GS Bharath Gudibande
ಗುಡಿಬಂಡೆ: ತಾಲೂಕಿನ ಮೀಸಲು ಅರಣ್ಯ ಪ್ರದೇಶ ಹಾಗೂ ವಾಟದಹೊಸಳ್ಳಿ ಕೆರೆ, ಕಣಿವೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಲವು ದಿನಗಳಿಂದ ಕೆಮಿಕಲ್ ದುರ್ವಾಸನೆಯಿಂದ ತತ್ತರಿಸಿದ್ದಾರೆ.
ಅನೇಕ ದಿನಗಳಿಂದ ಬರುತ್ತಿದ್ದ ವಿಷವಾಯುವನ್ನು ದುರ್ವಾಸನೆ ಎಂದೇ ನಂಬಿಕೊಂಡಿದ್ದ ಮುಗ್ಧ ಹಳ್ಳಿಗರಿಗೆ, ಅದು ಕೈಗಾರಿಕೆಗಳು ಕಕ್ಕುತ್ತಿರುವ ವಿನಾಶಕಾರಿ ಜಲವಿಷ ಅಥವಾ ರಾಸಾಯನಿಕ ತ್ಯಾಜ್ಯ ಎಂಬ ಅರಿವೇ ಇರಲಿಲ್ಲ. ಆದರೂ ಅದೇ ರಸ್ತೆಯಲ್ಲಿ ಓಡಾಡುತ್ತಲೇ ಇದ್ದರು. ಜಾನುವಾರುಗಳನ್ನು ಮೇಯಿಸುತ್ತಾ ಇದ್ದುಬಿಟ್ಟಿದ್ದರು.
ಆದರೆ, ಅಗಸ್ಟ್ 29ರಂದು ಇಂಥದ್ದೇ ವಿಷತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದ ಬೃಹತ್ ಟ್ಯಾಂಕರ್ ಚಿಮುಕಲಹಳ್ಳಿಯವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕೂಡಲೇ ತಮ್ಮ ಹಳ್ಳಿಯ ಪಕ್ಕದಲ್ಲಿ ನಡೆಯುತ್ತಿದ್ದ ಕೈಗಾರಿಕೆಗಳ ದುಷ್ಕೃತ್ಯದ ಬಗ್ಗೆ ಜನರು ಬೆಚ್ಚಿಬಿದ್ದಿದ್ದಾರೆ.
ಅಗಸ್ಟ್ 29ರಂದು ಅಷ್ಟೇ ಅಲ್ಲ, ಅದಕ್ಕೂ ಹಿಂದಿನಿಂದ ಮೀಸಲು ಅರಣ್ಯ ಪ್ರದೇಶದ ನಿರ್ಜನ ಪ್ರದೇಶಗಳಲ್ಲಿ, ವಾಟದಹೊಸಹಳ್ಳಿ ಕೆರೆಯ ಆಸುಪಾಸಿನಲ್ಲಿ ಅದೇ ಗೌರಿಬಿದನೂರು ಕೈಗಾರಿಕೆ ಪ್ರದೇಶದ ವಿಷ ತ್ಯಾಜ್ಯವನ್ನು ಅವ್ಯಾಹತವಾಗಿ ವಿವೇವಾರಿ ಮಾಡುತ್ತಿರುವುದು ಕೂಡ ಬೆಳಕಿಗೆ ಬಂದಿದೆ.
ಗುಡಿಬಂಡೆ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಕಣಿವೆ, ಚಿಮುಕಲಹಳ್ಳಿ, ಕೃಷ್ಣರಾಜಪುರ, ವಾಟದಹೊಸಳ್ಳಿ ಕೆರೆ, ಹೀಗೆ ಸುತ್ತಮುತ್ತಲಿನ ಹಳ್ಳಿಗಳ ಜನರು ಈ ವಿಷಗಾಳಿ ಸಮಸ್ಯೆ ಎದುರಿಸುತ್ತಿದ್ದರು. ಇನ್ನು ಟ್ಯಾಂಕರ್ ವಿಷತ್ಯಾಜ್ಯ ವಿಲೇವಾರಿ ಮಾಡಿರುವ ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ದುಷ್ಕರ್ಮಿಗಳು ಇಂಥದ್ದೇ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದಾರೆಂಬ ಆತಂಕದ ವಿಷಯವನ್ನು ಹಳ್ಳಿಯ ಜನ ಹೊರಗೆಡವಿದ್ದಾರೆ.
ಆ ಭಾಗಗಳಿಂದ ಇನ್ನೂ ದುರ್ವಾಸನೆ ಬರುತ್ತಲೇ ಇದ್ದು, ಆ ಪ್ರದೇಶದಲ್ಲಿ ಸಂಚರಿಸಲು ಜನ ಭಯಪಡುತ್ತಿದ್ದಾರೆ. ಏಕೆಂದರೆ, ನೀರಿನ ರೂಪದ ವಿಷತ್ಯಾಜ್ಯ ಸುರಿದ ಕೂಡಲೇ ಭೂಮಿ ಸುಟ್ಟುಹೋಗಿದೆ. ಅಕ್ಕಪಕ್ಕದ ಗಿಡಮರಗಳು ಸುಟ್ಟಿವೆ. ಅದೇ ಜನರ ಮೈಮೇಲೆ ಬಿದ್ದರೆ, ಅಥವಾ ಅದನ್ನು ತುಳಿದತೆ ಜೀವದ ಕಥೆ ಏನು? ಅಲ್ಲಿ ಕೆಟ್ಟ ವಾಸನೆಗೆ ನಿಲ್ಲಲೇ ಆಗುತ್ತಿರಲಿಲ್ಲ ಎಂದು ಹೇಳುತ್ತಾರೆ ಚಿಮುಕಲಹಳ್ಳಿ ಗ್ರಾಮದ ಯುವಕ ಧನಂಜಯ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ವಿಶಾಖಪಟ್ಟಣ ದುರಂತದ ಕರಾಳತೆ
ಕೊಂಚ ಯಾಮಾರಿದ್ದರೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಅನಿಲ ದುರಂತವನ್ನು ಮೀರಿಸುವಂಥ ದೊಡ್ಡ ದುರಂತವಾಗಿಬಿಡುತ್ತಿತ್ತು. ಕಳೆದ ಹಲವು ದಿನಗಳಿಂದ ಮನೆ ಮುಂದೆ ಕೂತಿದ್ದಾಗ, ರಸ್ತೆಯಲ್ಲಿ ಓಡಾಡುವಾಗ ಏನೋ ಒಂಥರಾ ವಾಸನೆ ಬರುತ್ತಿತ್ತು. ನಾವು ಅಷ್ಟು ಗಮನ ಹರಿಸಿರಲಿಲ್ಲ. ಕಳೆದ ತಿಂಗಳು 29ರಂದು ರೆಡ್ ಹ್ಯಾಂಡ್ ಆಗಿ ಕೆಮಿಕಲ್ ಲಾರಿ ಸಿಕ್ಕಿಬಿದ್ದಾಗ ಭಯಾನಕ ಸತ್ಯ ಹೊರಬಂತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ವಿಶಾಖಪಟ್ಟಣದ ಹೊರವಲಯದಲ್ಲಿರುವ ಗೋಪಾಲಪಟ್ಟಣಂ ಬಳಿಯ ಆರ್.ಆರ್.ವೆಂಕಟಪುರಂ ಗ್ರಾಮದ ಎಲ್.ಜಿ. ಪಾಲಿಮರ್ಸ್ ರಾಸಾಯನಿಕ ಸ್ಥಾವರದಲ್ಲಿ ೨೦೨೦ ಮೇ ೭ರ ಮುಂಜಾನೆ ಸಂಭವಿಸಿದ ಅನಿಲ ದುರಂತದಲ್ಲಿ 13 ಜನ ಧಾರುಣವಾಗಿ ಮೃತಪಟ್ಟಿದ್ದರು. ಸುಮಾರು 1000ಕ್ಕೂ ಹೆಚ್ಚು ಜನ ಅನಿಲ ಸುಳಿಗೆ ಸಿಕ್ಕಿ ವಿವಿಧ ಸಮಸ್ಯೆಗಳಿಗೆ ಒಳಗಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಆಂಧ್ರ & ಗೌರಿಬಿದನೂರು ಕೈಗಾರಿಕೆಗಳ ಮೇಲೆ ಕಣ್ಣಿಡಿ
ಗುಡಿಬಂಡೆ ಮೀಸಲು ಅರಣ್ಯಕ್ಕೆ ಹತ್ತಿರದಲ್ಲಿ ಕೆಲ ಕೈಗಾರಿಕೆಗಳಿವೆ. ಪಕ್ಕದ ಆಂಧ್ರ ಪ್ರದೇಶ ಹಾಗೂ ಗೌರಿಬಿದನೂರು ತಾಲೂಕಿನಲ್ಲಿ ಹೆಚ್ಚು ಕೈಗಾರಿಕೆಗಳಿವೆ. ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಈ ಎಲ್ಲ ಕೈಗಾರಿಕೆಗಳನ್ನು ಪರಿಶೀಲಿಸಬೇಕು ಹಾಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸರಕಾರಿ ಕೈಗೊಳ್ಳಬೇಕು ಎಂದು ಚಿಮುಕಲಹಳ್ಳಿ ಗ್ರಾಮಸ್ಥರು ಆಗ್ರಹಿಸಿದರು.
ಮುಂದೆ ಯಾರಾದರೂ ಹೀಗೆ ವಿಷತ್ಯಾಜ್ಯವನ್ನು ವಿಲೇವಾರಿ ಮಾಡಿದರೆ, ವಾತಾವರಣವನ್ನು ಕಲುಷಿತಗೊಳಿಸಿ ಆರೋಗ್ಯಕ್ಕೆ ಹಾನಿ ಮಾಡಿದ್ದು,
ವಿಷಕಾರಿ ವಸ್ತುಗಳ ಬಗ್ಗೆ ನಿರ್ಲಕ್ಷ್ಯ, ಬೆಂಕಿ ಮತ್ತು ಬೆಂಕಿ ಹರಡುವ ವಸ್ತುವಿನ ಬಗ್ಗೆ ನಿರ್ಲಕ್ಷ್ಯ, ಉದಾಸೀನತೆಯಿಂದ ಸಾರ್ವಜನಿಕರ ಜೀವಕ್ಕೆ ಹಾನಿ, ನಿರ್ಲಕ್ಷ್ಯದಿಂದ ನರಹತ್ಯೆ ಇತ್ಯಾದಿ ಪ್ರಕರಣಳಡಿ ಕೇಸು ದಾಖಲಿಸಬೇಕು ಎಂದು ತಜ್ಞರು ಒತ್ತಾಯ ಮಾಡಿದ್ದಾರೆ.
ಯಾರು ಏನೆಂದರು?
ಆರ್. ಆಂಜನೇಯ ರೆಡ್ಡಿ
ವಿಷಕಾರಿ ತ್ಯಾಜ್ಯವನ್ನು ತಂದು ಅರಣ್ಯ ಪ್ರದೇಶಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ, ಜಲಮೂಲಗಳ ಅಕ್ಕಪಕ್ಕ ಅಥವಾ ಕೆರೆ, ಹಳ್ಳಕೊಳ್ಳಗಳಲ್ಲಿ ತಂದು ವಿಲೇವಾರಿ ಮಾಡುತ್ತಿರುವುದು ನಿಜಕ್ಕೂ ಆತಂಕಕಾರಿ. ಸಕಾಲಕ್ಕೆ ಅಧಿಕಾರಿಗಳು ಟ್ಯಾಂಕರ್ ಹಿಡಿದು ಪ್ರಕರಣ ದಾಖಲು ಮಾಡಿರುವುದು ಒಳ್ಳೆಯ ಕ್ರಮ. ಚೆಂಡು ಈಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಂಗಳದಲ್ಲಿದೆ. ಕೂಡಲೇ ಈ ವಿಷತ್ಯಾಜ್ಯ ಎಲ್ಲಿಂದ ಬಂದಿದೆ? ಅದರಲ್ಲಿ ಏನೇನಿದೆ? ಯಾವ ಕೈಗಾರಿಕೆ ಇದನ್ನು ವಿಲೇವಾರಿ ಮಾಡಲು ಪ್ರಯತ್ನಿಸಿದೆ? ಇದರ ಹಿಂದೆ ಯಾರು ಯಾರು ಇದ್ದಾರೆ ಎಂಬ ಅಂಶವನ್ನು ಮಂಡಳಿ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಗುಡಿಬಂಡೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಬೇಕು ಹಾಗೂ ಮುಂದೆ ಕೈಗಾರಿಕೆಗಳು ಇಂಥ ದುಸ್ಸಾಹಸ ಮಾಡದಂತೆ ಕಟ್ಟೆಚ್ಚರ ವಹಿಸಬೇಕು. ಮುಖ್ಯವಾಗಿ ಚಿಮುಕಲಹಳ್ಳಿ ಗ್ರಾಮಸ್ಥರ ಧೈರ್ಯಕ್ಕೆ ನಾವೆಲ್ಲರೂ ಮೆಚ್ಚಿಕೊಳ್ಳಲೇಬೇಕಿದೆ.
ಆರ್.ಆಂಜನೇಯ ರೆಡ್ಡಿ, ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ
ಕರೆ ಸ್ವೀಕರಿಸದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ
ಚಿಕ್ಕಬಳ್ಳಾಪುರದಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇಒ ವಿಜಯಲಕ್ಷ್ಮೀ ಅವರ ನೇತೃತ್ವದಲ್ಲಿ ಅಧಿಕಾರಿಗಳು ಗುಡಿಬಂಡೆಗೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು ವಿಜಯಲಕ್ಷ್ಮೀ ಅವರಿಗೇ ಸಿಕೆನ್ಯೂಸ್ ನೌ ಕರೆ ಮಾಡಿದರೆ, ಅವರು ಕಾಲ್ ಪಿಕ್ ಮಾಡಲಿಲ್ಲ. ಹಲವು ಸಲ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಈ ಸುದ್ದಿಗಳನ್ನು ಓದಲು ಕೆಳಗಿನ ಲಿಂಕ್ʼಗಳನ್ನು ಕ್ಲಿಕ್ ಮಾಡಿ..