• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಸ್ವಾಮಿ ಮತ್ತೊಮ್ಮೆ ಹುಟ್ಟಿಬನ್ನಿ, ವಿವೇಕ ಕಲಿಸಲು..

cknewsnow desk by cknewsnow desk
September 11, 2023
in EDITORS'S PICKS, GUEST COLUMN
Reading Time: 2 mins read
0
ಸ್ವಾಮಿ ಮತ್ತೊಮ್ಮೆ ಹುಟ್ಟಿಬನ್ನಿ, ವಿವೇಕ ಕಲಿಸಲು..
1.3k
VIEWS
FacebookTwitterWhatsuplinkedinEmail

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 130 ವರ್ಷ

ನಮ್ಮ ನೆಲ ಕಂಡ ಮಹಾನ್‌ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಅಮೆರಿಕದ ಚಿಕಾಗೋ ನಗರದಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ ಈಗ 130 ವರ್ಷ. ಧರ್ಮ, ಜಾತಿ, ಭಾಷೆ ಇತ್ಯಾದಿಗಳಿಂದ ಬಡಿದಾಡಿಕೊಳ್ಳುತ್ತಿರುವ ಈ ಸಂಕ್ರಮಣ ಕಾಲದಲ್ಲಿ ಸ್ವಾಮೀಜಿ ಅವರ ಸಂದೇಶ ಚಿರಸ್ಮರಣೀಯ. ಆ ಮಹಾಪುರುಷರನ್ನು ಮತ್ತೊಮ್ಮೆ ಸ್ಮರಿಸಿದ್ದಾರೆ ನಮ್ಮ ಅಂಕಣಕಾರ ಡಾ.ಗುರುಪ್ರಸಾದ್‌ ಹವಲ್ದಾರ್


ಜಾಗತಿಕ ಇತಿಹಾಸದಲ್ಲಿ ಈ ದಿನ ಅತ್ಯಂತ ಮಹತ್ವದ್ದು.1893ನೇ ಸಪ್ಟೆಂಬರ್‌ 11ರಂದು ಜಗತ್ತಿನ ಯಾರೆಲ್ಲ ಧರ್ಮದವರು ಅಸಡ್ಡೆಯಿಂದ ಪರಿಭಾವಿಸುತ್ತಿದ್ದವರೋ ಅವರೇ ನಮ್ಮ ಧರ್ಮವನ್ನು ಒಪ್ಪಿಕೊಂಡು ಮನ್ನಣೆ ನೀಡಿದರು. ಪೂರ್ವ-ಪಶ್ಚಿಮ ಗೋಳಗಳನ್ನು ಧರ್ಮದ ಪೀಠದಲ್ಲಿ ಸಾಮೀಪ್ಯಕ್ಕೆ ತಂದ ವಿಶ್ವಧರ್ಮ ಸಮ್ಮೇಳನವು ಸ್ವಾಮಿ ವಿವೇಕಾನಂದರ ಮೂಲಕ ಭಾರತದತ್ತ ಬೆಕ್ಕಸ ಬೆರಗಾಗಿ ನೋಡಿತು..

“ಮನುಷ್ಯನಿಗೆ ಶಾಂತಿ, ನೆಮ್ಮದಿ ತರುವುದೇ ಧರ್ಮದ ಉದ್ದೇಶ” ಎಂದಿದ್ದ ವೀರ ಸಂನ್ಯಾಸಿ ವಿವೇಕಾನಂದರು,  ಅಮೆರಿಕದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣ ಹತ್ತೊಂಭತ್ತನೇ ಶತಮಾನದಲ್ಲಿ ಜಗತ್ತಿನ ಸನಾತನ ಧರ್ಮದ ಸತ್ಯವನ್ನು ಎತ್ತಿಹಿಡಿಯಲು ಭಾರತದಲ್ಲಿ ಅವತರಿಸಿದ ಮಹಾಪುರುಷರಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದರರಿಬ್ಬರೂ ಅತ್ಯಂತ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಅದರಲ್ಲಿಯೂ ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಸಾವಿರಾರು ಕಿ.ಮೀ. ದೂರದ ಅಮೆರಿಕದ ಚಿಕಾಗೋದಲ್ಲಿ ಮಾಡಿದ ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿ ಅಳಿಸಲಾಗದ್ದು. ಇದು ಕೇವಲ ವಿವೇಕಾನಂದರ ವಿಜಯ ಯಾತ್ರೆಯಲ್ಲ, ಭಾರತದ, ಹಿಂದೂ ಧರ್ಮದ ಸಾಹಸ ಯಾತ್ರೆಯೇ ಆಗಿತ್ತು. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿ ಅವರು ಮಾಡಿದ ಭಾಷಣ ಭಾರತೀಯರಲ್ಲಿ ಸ್ವಾಭಿಮಾನ, ಧರ್ಮಜಾಗೃತಿಯನ್ನು ಬಡಿದೆಬ್ಬಿಸಿತ್ತು.

ಭಾರತದಿಂದ ವಿವೇಕಾನಂದರಷ್ಟೇ ಅಲ್ಲದೆ, ಬ್ರಹ್ಮ ಸಮಾಜ ಪ್ರತಿನಿಧಿಯಾಗಿ ಪ್ರತಾಪ್ ಚಂದ್ರ ಮಜೂಮ್ದಾರ್ ಸಹ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಜೈನ, ಬೌದ್ಧ ಮತ ಪ್ರತಿನಿಧಿಗಳು ಸಹ ಆಗಮಿಸಿದ್ದರು. ಶ್ರೀಲಂಕಾದಿಂದ ಬೌದ್ಧ ಧರ್ಮ ಪ್ರತಿನಿಧಿ ಧರ್ಮಪಾಲ ಅವರೂ ಹಾಜರಿದ್ದರು.

ಮೈಸೂರು ಒಡೆಯರ್ ಅವರ ನೆರವು

ವಿಶೇಷವೆಂದರೆ ವಿವೇಕಾನಂದರಿಗೆ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಬೇರೆ ಪ್ರತಿನಿಧಿಗಳಂತೆ ಮುಂಚಿತವಾಗಿ ಆಹ್ವಾನ ಬಂದಿರಲಿಲ್ಲ. ಕಡೆಯ ಎರಡು ದಿನಗಳಿರುವಾಗ ಸಿಕ್ಕಿದ ಅವಕಾಶವನ್ನೇ ಬಳಸಿಕೊಂಡು ಪ್ರತಿನಿಧಿತ್ವ ದೊರಕಿಸಿಕೊಂಡಿದ್ದರು. ಇದಕ್ಕೆ ಮುನ್ನ ಅಮೆರಿಕಕ್ಕೆ ತೆರಳಲು ಸಜ್ಜಾಗುತ್ತಿದ್ದ ವಿವೇಕಾನಂದರ ಬಳಿ ಅಗತ್ಯಕ್ಕೆ ತಕ್ಕಷ್ಟು ಹಣವಿರಲ್ಲಿಲ್ಲ. ವಿಶ್ವಧರ್ಮ ಸಮ್ಮೇಳನದಲ್ಲಿ ವಿಶ್ವಕ್ಕೆ ಭಾರತದ ಜ್ಞಾನ ಸಂಪತ್ತನ್ನು ಪರಿಚಯಿಸಬೇಕೆನ್ನುವ ಹಂಬಲದಿಂದ ಹೊರಟಿದ್ದ ವಿವೇಕಾನಂದರಿಗೆ ಸಹಾಯ ಹಸ್ತ ಚಾಚಿದ್ದು ಮೈಸೂರಿನ 10ನೇ  ಚಾಮರಾಜೇಂದ್ರ ಒಡೆಯರ್ ಅವರು.

ಸ್ವಾಮಿ ವಿವೇಕಾನಂದರ ವಿದೇಶ ಪ್ರವಾಸದ ಸಂಪೂರ್ಣ ಪ್ರಾಯೋಜಕರು ಮೈಸೂರಿನ ಒಡೆಯರು. 1868ರಲ್ಲಿ  ಸಿಂಹಾಸನವೇರಿದ 10ನೇ ಚಾಮರಾಜೇಂದ್ರ ಒಡೆಯರ್ ಅವರ ಬಳಿಗೆ ಆಗಮಿಸಿದ್ದ ವಿವೇಕಾನಂದರಿಗೆ ತಾವು ಅಮೆರಿಕಗೆ ತೆರಳಿ ಧರ್ಮಸಭೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದರಲ್ಲದೆ, ಅದಕ್ಕೆ ತಗುಲುವ ಅಷ್ಟೂ ಖರ್ಚನ್ನು ತಾವೇ ನೀಡಿ ಉದಾರತೆ ಮೆರೆದಿದ್ದರು.

ಖ್ಯಾತ ಫ್ರೆಂಚ್ ಲೇಖಕ ರೊಮೈನ್ ರೊಲ್ಯಾಂಡ್ ಬರೆದಿರುವ ‘ಲೈಫ್ ಆಫ್ ವಿವೇಕಾನಂದ ಅಂಡ್ ಯುನಿವರ್ಸಲ್ ಗಾಸ್ಪೆಲ್’ ಪುಸ್ತಕದಲ್ಲಿ ಸ್ವಾಮೀಜಿ ಜೀವನದ ಕೆಲವು ಆಸಕ್ತಿಕರ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಸ್ವಾಮಿ ವಿವೇಕಾನಂದರು ಚಿಕಾಗೋ ತೆರಳಲು ಸಹಾಯ ಮಾಡಿದ ಮಹಾರಾಜರ ಹೆಸರನ್ನು ಬರೆದಿದ್ದಾರೆ. ಸರ್ವಧರ್ಮ ಸಮ್ಮೇಳನಕ್ಕೆ ವಿಶೇಷವಾಗಿ ಆಹ್ವಾನಿತರಾಗಿದ್ದ ಸ್ವಾಮಿ ವಿವೇಕಾನಂದರಿಗೆ ಅಮೆರಿಕಕ್ಕೆ ತಲುಪಬೇಕಾದಷ್ಟು ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಇದನ್ನರಿತ ರಾಜಸ್ಥಾನದ ಖೆತಡಿಯ ರಾಜ ಅಜಿತ್ ಸಿಂಗ್ ಸ್ವಾಮೀಜಿ ಅವರನ್ನು ತಮ್ಮ ಆಸ್ಥಾನಕ್ಕೆ ಕರೆಸಿಕೊಂಡಿದ್ದರು. ಅಲ್ಲದೆ ಭಾರತದಿಂದ ಚಿಕಾಗೋ ತಲುಪಲು ತಗಲುವ ವೆಚ್ಚವನ್ನು ಭರಿಸಿ, ಹೊಸ ರೇಷ್ಮೆಯ ಉಡುಪುಗಳನ್ನು ನೀಡಿ ಕಳುಹಿಸಿ ಕೊಟ್ಟಿದ್ದರು. ಅಂದು ರಾಜ ಮಾಡಿದ ಧನ ಸಹಾಯ ಇಂದು ಸ್ವಾಮಿ ವಿವೇಕಾನಂದರ ಹೆಸರಿನೊಂದಿಗೆ ರಾಜ ಅಜಿತ್ ಸಿಂಗ್ ಅವರ ಹೆಸರು ಕೂಡ ಇತಿಹಾಸ ಪುಟಗಳಲ್ಲಿ ಉಳಿಯುವಂತೆ ಆಗಿದೆ.

ವಿಶ್ವಧರ್ಮ ಸಮ್ಮೇಳನ

1893ರ ಸೆಪ್ಟೆಂಬರ್ 11ರಿಂದ 27ರವರೆಗೆ ಚಿಕಾಗೋದ “ಕೊಲಂಬಿಯನ್ ಜಾಗತಿಕ ಮೇಳ”ದ ಅಂಗವಾಗಿ ನಡೆದ ವಿಶ್ವಧರ್ಮ ಸಮ್ಮೇಳನ ಪ್ರಪಂಚದ ಇತಿಹಾಸದಲ್ಲೇ ಮಹತ್ವಪೂರ್ಣ ಘಟನೆ. ಹಿಂದೂ ಧರ್ಮದ ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಿದ ಸಂದರ್ಭ. ಪ್ರಪಂಚದ ಸಕಲ ಮತಧರ್ಮಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಗಳಾಗಿದ್ದರು. ಇದೊಂದು ಮಾನವತೆಯ ಆದರ್ಶಗಳ ಒಗ್ಗೂಡಿಸುವಿಕೆಯ ಸಮ್ಮೇಳನವಾಗಿತ್ತು.

ಜಗತ್ತಿನ ಮಾನವರೆಲ್ಲರಿಗೆ ಸಂಬಂಧಿಸಿದ ಎಲ್ಲಾ ಮುಖ್ಯ ವಿಷಯಗಳ ಮೇಲೆ ಸಮ್ಮೇಳನದಲ್ಲಿ ಚರ್ಚೆಯಾಗಬೇಕು ಎಂದು ಓರ್ವ ವಕೀಲ ಚಾರ್ಲ್ಸ್ ಬಾನಿ ಎಂಬುವವರು ಸಲಹೆ ನೀಡಿದ್ದು ಎಲ್ಲರಿಂದ ಸರ್ವಸಮ್ಮತಿ ದೊರಕಿಸಿಕೊಂಡಿತ್ತು. ಅಲ್ಲದೆ ಈ ಜಾಗತಿಕ ಮಹಾ ಸಮ್ಮೇಳನಕ್ಕೆ ಬಾನಿ ಅವರನ್ನೇ ಮಹಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಾರಂಭದಲ್ಲಿ ಕೆಲ ಕ್ರೈಸ್ತ ಬಿಷಪ್ಪರು “ಸರ್ವಧರ್ಮ ಸಮ್ಮೇಳನಕ್ಕೆ ವಿರೋಧ ವ್ಯಕ್ತಪಡಿಸಿದರೂ ಕಡೆಗೆ ಅದು ನಡೆಯಲೇಬೇಕು ಎಂದು ತೀರ್ಮಾನವಾಗಿ ಚಿಕಾಗೋದ ಮಿಚಿಗನ್ ಅವೆನ್ಯೂದಲ್ಲಿ ಅದೇ ತಾನೆ ನೂತನವಾಗಿ ನಿರ್ಮಾಣವಾಗಿದ್ದ “ಆರ್ಟ್ ಇನ್ ಸ್ಟಿಟ್ಯೂಟ್” ಎನ್ನುವ ಭವ್ಯ ಕಟ್ಟಡದಲ್ಲಿ ನಡೆಸಲು ನಿರ್ಧರಿಸಲಾಯಿತು. ಸಮ್ಮೇಳನದಲ್ಲಿ ಎಲ್ಲಾ ರಂಗದ ಪ್ರಮುಖರು, ಜಾಗತಿಕ ಗಣ್ಯ ವ್ಯಕ್ತಿಗಳು, ಪಾಶ್ಚಾತ್ಯ ತತ್ತ್ವಶಾಸ್ತ್ರ ಪ್ರವೀಣರು, ಕ್ರೈಸ್ತ ಧರ್ಮದ ಉನ್ನತ ಧರ್ಮಾಧಿಕಾರಿಗಳು.. ಎಲ್ಲರೂ ಭಾಗವಹಿಸಿದ್ದರು.

ಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು

1893ರ ಸೆಪ್ಟೆಂಬರ್ 11 ಸೋಮವಾರ ಬೆಳಗ್ಗೆ 10ಕ್ಕೆ ಸರಿಯಾಗಿ ಐತಿಹಾಸಿಕ ವಿಶ್ವಧರ್ಮ ಸಮ್ಮೇಳನ ಉದ್ಘಾಟನೆಯಾಗಿತ್ತು. ಸಾವಿರಾರು ಜನರಿಂದ ಕಿಕ್ಕಿರಿದಿದ್ದ ಸಭಾಸದನದ ವೇದಿಕೆಯ ನಟ್ಟ ನಡುವೆ ಅಮೆರಿಕದ ಕ್ಯಾಥೋಲಿಕ್ ಕ್ರೈಸ್ತರ ಅತ್ಯಂತ ಶ್ರೇಷ್ಠ ಧರ್ಮಗುರುಗಳಾದ ಕಾರ್ಡಿನಲ್ ಗಿಬ್ಬನ್ಸ್ ಕುಳಿತಿದ್ದರು. ಅವರ ಎರಡೂ ಬದಿ ವೊವೊದ ಧರ್ಮಗಳ ಪ್ರತಿನಿಧಿಗಳು ಆಸೀನರಾಗಿದ್ದರು. ಅವರೆಲ್ಲರ ನಡುವೆ ಕಿತ್ತಲೆ ಬಣ್ಣದ ನಿಲುವಂಗಿ, ಪೀತ ವರ್ಣದ ಪೇಟ ಧರಿಸಿ ರಾಜ ಗಾಂಭೀರ್ಯದಿಂದ ಕುಳಿತಿದ್ದ ಸ್ವಾಮಿ ವಿವೇಕಾನಂದರು ವಿಶಿಷ್ಟ ಉಡುಪು, ಗಂಭೀರ ವ್ಯಕ್ತಿತ್ವದಿಂದ ಸಭಿಕರ ಗಮನ ಸೆಳೆದಿದ್ದರು.

ಮೊದಲಿಗೆ ಸ್ವಾಗತ ಸಮಿತಿಯ ಅಧಿಕಾರಿಗಳು ಮಾತನಾಡಿದರು. ಬಳಿಕ ಒಬ್ಬೊಬ್ಬ ಪ್ರತಿನಿಧಿಗಳು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಾಗಿದ್ದರು. ಆದರೆ ವಿವೇಕಾನಂದರು ತಾವು ಎಲ್ಲವನ್ನೂ ಗಮನಿಸುತ್ತಾ ಮೌನವಾಗಿದ್ದರು. ಒಂದೆರಡು ಬಾರಿ ಅವರಿಗೆ ಭಾಷಣಕ್ಕಾಗಿ ಕರೆ ಬಂದರೂ “ಮತ್ತೆ ಮಾಡುತ್ತೇನೆ” ಮುಂದೆ ಹಾಕಿಸಿದ್ದರು. ಕಡೆಗೊಮ್ಮೆ ಸಭಾಧ್ಯಕ್ಷರಾದ ಚಾರ್ಲ್ಸ್ ಬಾನಿ ಅವರೇ ಸ್ವಾಮಿ ವಿವೇಕಾನಂದರಿಗೆ ಭಾಷಣ ಮಾಡಬೇಕೆಂದು ಕೇಳಿದರು. ಅದಕ್ಕೆ ವಿವೇಕಾನಂದರ ಪಕ್ಕದಲ್ಲೇ ಕುಳಿತಿದ್ದ ಫ್ರೆಂಚ್ ಪಾದ್ರಿಗಳಾದ ಬಾನೆಟ್ ಮಾರಿ ಸಹ ಪ್ರೋತ್ಸಾಹ ನೀಡಿದರು.

ಸ್ವಾಮಿ ವಿವೇಕಾನಂದರು ಯಾವ ಪೂರ್ವ ತಯಾರಿಗಳಾಗಲಿ, ಭಾಷಣವನ್ನು ಸಿದ್ದಪಡಿಸಿಕೊಂಡಾಗಲಿ ಸಭೆಯ ಎದುರು ನಿಲ್ಲಲಿಲ್ಲ, ಅವರು ಸಭೆ ಎದುರು ನಿಂತು ಕ್ಷಣ ಮಾತ್ರ ಸಮಸ್ತ ಸಭೆಯನ್ನೊಮ್ಮೆ ಅವಲೋಕಿಸಿದರು. ಸರಸ್ವತೀ ದೇವಿಗೆ ವಂದನೆ ಸಲ್ಲಿಸಿದರು. ನಂತರ ಸಣ್ಣ ಭಾಷಣ ಪ್ರಾರಂಭಿಸಿದರು. “ಅಮೆರಿಕದ ಸೋದರಿಯರೇ ಮತ್ತು ಸೋದರರೇ” ಎಂದು ಹೇಳಿದ್ದೇ ತಡ ಕಿವಿ ಕಿವುಡಾಗುವಂತೆ ಕರತಾಡನ ನಡೆಯಿತು. ಪ್ರತಿಯೊಬ್ಬರೂ ಎದ್ದು ನಿಂತು ಜಯಘೋಷ ಮಾಡಿದರು, ತಮ್ಮ ತಮ್ಮ ಕರವಸ್ತ್ರ, ಹ್ಯಾಟುಗಳನ್ನು ಬೀಸಿ ಹರ್ಷ ವ್ಯಕ್ತಪಡಿಸಿದರು!

ಕರತಾಡನ, ಜಯಘೋಷಗಳು ಮುಗಿದ ಮೇಲೆ ಭಾಷಣ ಮುಂದುವರಿಸಿದ ವಿವೇಕಾನಂದರು; “ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

“ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕಾರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದು ಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ” ಎಂದರು.

ಚಿಕಾಗೋ ವಿಶ್ವಧರ್ಮ ಸಮ್ಮೇಳನ ಉದ್ಘಾಟನಾ ದಿನದ ಸ್ವಾಮಿ ವಿವೇಕಾನಂದರ ಭಾಷಣ ಮರುದಿನ ಎಲ್ಲ ಪತ್ರಿಕೆಗಳಲ್ಲಿ ಅಗ್ರಸುದ್ದ್ದಿಯಾಗಿತ್ತು. ಹೀಗೆ ಭಾರತದಲ್ಲಿ ಸಾಮಾನ್ಯ ಸಂನ್ಯಾಸಿ, ಬೈರಾಗಿಯಾಗಿದ್ದ ಓರ್ವ ವ್ಯಕ್ತಿ ರಾತ್ರಿ ಬೆಳಗಾಗುವಷ್ಟರಲ್ಲಿ ಜಗತ್ತಿನ ಕಣ್ಮಣಿಯಾಗಿ ಬದಲಾಗಿದ್ದರು. ಸ್ವಾಮೀಜಿ ಮಾಡಿದ್ದ ಪುಟ್ಟ ಭಾಷಣ ಅಮರಿಕನ್ನರ ಮೇಲೆ ಗಾಢ ಪರಿಣಾಮ ಬೀರಿತ್ತು. ಅದರಲ್ಲಿಯೂ ಅವರು ಪ್ರಾರಂಭದಲ್ಲಿ ಉದ್ಘರಿಸಿದ ಸಾಲುಗಳು “ಅಮೆರಿಕದ ಸೋದರಿಯರೆ, ಸೋದರರೇ” ಎಂಬ ಯಾವ ನಾಟಕೀಯತೆ ಇಲ್ಲದ ಮೂರು ಸರಳ ಶಬ್ದಗಳಿಗೆ ಇಡೀ ಅಮೆರಿಕವೇ ತಲೆದೂಗಿತ್ತು.

ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಒಟ್ಟು ಆರು ಭಾಷಣಗಳನ್ನು ಮಾಡಿದ್ದರು. “ಹಿಂದೂ ಧರ್ಮ” ಎನ್ನುವ ವಿಚಾರದ ಕುರಿತಂತೆ ಮಾಡಿದ್ದ ಭಾಷಣ ಸಹ ಅಮೋಘವಾದುದಾಗಿತ್ತು. ಸಮ್ಮೇಳನದ ಕಡೆಯ ದಿನ ಸಮಾರೋಪ ಸಮಾರಂಭದಂದು ಸಹ ವಿವೇಕಾನಂದರು ತಮ್ಮ ಚುಟುಕಾದ ಭಾಷಣದ ಮೂಲಕ ಸಮತ್ವದ ಸಾರವನ್ನು ತಿಳಿಸಿದ್ದರು.

“ಯಾರು ಯಾವ ಧರ್ಮವನ್ನು ಮತಾಂತರಗೊಳ್ಳುವದು ಅಗತ್ಯವಿಲ್ಲ. ಆದರೆ ಉಳಿದವರ ಉನ್ನತ ಭಾವನೆಗಳನ್ನು ಮೈಗೂಡಿಸಿಕೊಂಡು ವಿವೇಕವನ್ನು ಕಳೆದುಕೊಳ್ಳದೆ ತಾನೇ ತಾನಾಗಿ ಬೆಳೆಯಬೇಕು. ಪಾವಿತ್ರ್ಯತೆ, ಪರಿಶುದ್ಧತೆ ಹಾಗೂ ಅನುಕಂಪವು ಜಗತ್ತಿನ ಯಾವೊಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲ ಧರ್ಮದಲ್ಲಿ ಅತ್ಯಂತ ಶೀಲವಂತರಾದ ಸ್ತ್ರೀ ಪುರುಷರು ಆಗಿ ಹೋಗಿದ್ದಾರೆ. ಇಷ್ಟಾಗಿಯೂ ನಮ್ಮ ಧರ್ಮವೇ ಉಳಿಯುತ್ತದೆ ಎನ್ನುವವರ ವಾದ ಕೇಳಿದಾಗ ನನಗೆ ಕನಿಕರ ಮೂಡುತ್ತದೆ” ಎಂದಿದ್ದರು.

ಭಾರತದಿಂದ ಅನೇಕರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅವರಿಗೆ ಆಮಂತ್ರಣವೂ ಬಂದಿತ್ತು. ಬ್ರಹ್ಮ ಸಮಾಜ, ಜೈನ ಧರ್ಮ, ಥಿಯಾಸೊಫಿಕಲ್‌ ಸೊಸೈಟಿಯ ಪ್ರತಿನಿಧಿಗಳು ಅಲ್ಲಿ ಬಂದಿದ್ದರು. ಶ್ರೀಮತಿ ಅನಿಬೆಸೆಂಟ್‌ ಕೂಡ ಈ ಸಮ್ಮೇಳನದಲ್ಲಿ ಪಾಲುಗೊಂಡಿದ್ದರು. ಇನ್ನು ಹಲವಾರು ಪಂಥದ ಅನುಯಾಯಿಗಳು ಭಾರತದಿಂದ ಲೇಖನಗಳನ್ನು ಕಳಿಸಿದ್ದರು.

ವಿಶೇಷ ಆಮಂತ್ರಣ ಪಡೆಯದ, ಕೊನೆಯ ಗಳಿಗೆಯಲ್ಲಿ ಅವಕಾಶದೊಡನೆ ಪ್ರವೇಶ ಪಡೆದ ವಿವೇಕಾನಂದರು ಮಾತ್ರ ಸನಾತನ ಧರ್ಮದ, ಸರ್ವಧರ್ಮ ಸಮನ್ವಯದ, ಪತಾಕೆಯನ್ನು ಅಲ್ಲಿ ಹಾರಿಸಿದರು, ಅಷ್ಟೇ ಅಲ್ಲ, ಭಾರತದ ಗೌರವದ ಪಾಂಚಜನ್ಯದ ಧ್ವನಿಯನ್ನು ದಶದಿಶೆಗಳಲ್ಲಿ ಮೊಳಗಿಸಿದ ಕೀರ್ತಿಗೆ ಭಾಜನರಾದರು.

ಸಭೆ ಪ್ರಾರಂಭಗೊಂಡದ್ದು ಚಿಕಾಗೋದ ‘ಆರ್ಟ್‌ ಪ್ಯಾಲೇಸ್‌’ ಎಂಬ ವಿಶಾಲ ಸಭಾಂಗಣದಲ್ಲಿ. ಆ ಸಭೆ ವಿದ್ಯಾವಂತರಿಂದ, ಬುದ್ಧಿವಂತರಿಂದ, ವಿಚಾರವಾದಿಗಳಿಂದ ತುಂಬಿತ್ತು. ಸಭೆಯಲ್ಲಿ ಹೆಚ್ಚಿನವರು ಕ್ರೈಸ್ತ ಮತೀಯರೇ ಆಗಿದ್ದರು. ಆ ಸಭೆಯಲ್ಲಿ ವಿವೇಕಾನಂದರು ಮಾತನಾಡಿದರು. ಸಭೆಯಲ್ಲಿ ನಡೆದುದೆಲ್ಲವನ್ನೂ ಶಿಷ್ಯ ಅಳಸಿಂಗರಿಗೆ ಸುದೀರ್ಘ ಪತ್ರ ಬರೆದು ಬಣ್ಣಿಸಿದರು. ಅಲ್ಲಿ ನಡೆದದ್ದು ವಿವೇಕಾನಂದರ ಮಾತಿನಲ್ಲಿಯೇ ತಿಳಿಯುವುದು ಕೂಡ ರೋಮಾಂಚಕಾರಿ ಅನುಭವ ನೀಡ ಬಲ್ಲದು. ಅವರು ಅಳಸಿಂಗರಿಗೆ ಬರೆದ ಪತ್ರದಲ್ಲಿ ಹೀಗೆ ಬರೆಯುತ್ತಾರೆ :

‘‘ಹುಟ್ಟಿದಾರಭ್ಯ ಬಹಿರಂಗ ಸಭೆಯಲ್ಲಿ ಮಾತನಾಡದಿದ್ದ ನಾನು, ಆ ವಿದ್ವಾನ್‌ ಮಂಡಳಿಯೆದುರು ಭಾಷಣ ಮಾಡುವುದೆಂದರೇನು? ಸಾಂಪ್ರದಾಯಿಕ ವಿಧಿ ಸಂಗೀತಗಳಿಂದ, ಪರಿಚಯ ಭಾಷಣಗಳಿಂದ ಸಭೆ ಆರಂಭವಾಯಿತು. ವೇದಿಕೆಯ ಮೇಲಿದ್ದವರು ತಮ್ಮ ತಮ್ಮನ್ನು ಸಭೆಗೆ ಪರಿಚಯ ಮಾಡಿಕೊಟ್ಟ ನಂತರ ಮುಂದೆ ಬಂದು ಭಾಷಣ ಮಾಡಿದರು. ನನ್ನ ಎದೆ ಕಂಪಿಸುತ್ತಿತ್ತು. ನಾಲಗೆ ಒಣಗುತ್ತಿತ್ತು. ನನಗೇಕೋ ಅಂಜಿಕೆಯಾಯಿತು. ಬೆಳಗಿನ ಸಭೆಯಲ್ಲಿ ಮಾತನಾಡಲು ಧೈರ್ಯ ಬರಲಿಲ್ಲ. ಬ್ರಹ್ಮ ಸಮಾಜದ ಮುಜುಂದಾರರು ಸುಂದರ ಭಾಷಣ ಮಾಡಿದರು. ಥಿಯಾಸೊಫಿಸ್ಟರಾದ ಚಕ್ರವರ್ತಿಗಳ ಭಾಷಣ ಅದಕ್ಕಿಂತ ಸುಂದರವಾಗಿತ್ತು. ಪ್ರೇಕ್ಷಕರು ಅವುಗಳನ್ನು ಕೊಂಡಾಡಿದರು.

ಅವರೆಲ್ಲರೂ ತಮ್ಮತಮ್ಮ ಭಾಷಣಗಳನ್ನು ಮೊದಲೇ ಸಿದ್ಧಪಡಿಸಿಕೊಂಡು ಬಂದಿದ್ದರು. ನಾನೊಬ್ಬ ಹೆಡ್ಡ! ನನ್ನಲ್ಲಿ ಪೂರ್ವ ಸಿದ್ಧತೆಯೇನೂ ಇರಲಿಲ್ಲ. ಸರಸ್ವತೀ ದೇವಿಗೆ ವಂದನೆ ಸಲ್ಲಿಸಿ ಮುಂದೆ ಬಂದೆನು. ಸಭಾಧ್ಯಕ್ಷರಾದ ಡಾ.ಬ್ಯಾರೋನ್‌ ನನ್ನನ್ನು ಸಭೆಗೆ ಪರಿಚಯ ಮಾಡಿಕೊಟ್ಟರು. ಆ ನಂತರ ನಾನು ನನ್ನ ಸಣ್ಣ ಭಾಷಣವನ್ನು ಆರಂಭಿಸಿದೆ. ‘‘ಅಮೆರಿಕೆಯ ಸೋದರಿಯರೇ ಮತ್ತು ಸೋದರರೇ’’ ಎಂದು ನಾನು ಆರಂಭಿಸಿದಾಕ್ಷಣ ಕಿವಿ ಕಿವುಡಾಗುವಂತೆ ಕರತಾಡನ ನಡೆಯಿತು. ಅದು ನಿಂತ ಮೇಲೆ ನನ್ನ ಭಾಷಣ ಪ್ರಾರಂಭಿಸಿದೆ. ಭಾಷಣ ಮುಗಿದ ಮೇಲೆ ಉದ್ವೇಗದಿಂದ ಸಾಕಾಗಿ ಕುಳಿತುಬಿಟ್ಟೆ. ಮಾರನೆಯ ದಿನ ಪತ್ರಿಕೆಗಳು ಎಲ್ಲ ಉಪನ್ಯಾಸಗಳಿಗಿಂತ ನನ್ನ ಭಾಷಣವೇ ಚೆನ್ನಾಗಿತ್ತೆಂದು ಪ್ರಶಂಸೆ ಮಾಡಿದ್ದವು. ‘ಮೂಕಂ ಕರೋತಿ ವಾಚಾಲಂ’ ಎಂದು ಶ್ರೀಧರನು ತನ್ನ ಗೀತಾಭಾಷ್ಯದಲ್ಲಿ ಹೇಳಿರುವುದು ನಿಜವಾಗಿಯೂ ಸತ್ಯ. ಹೇ ಭಗವಾನ್‌ ನಿನ್ನ ನಾಮಕ್ಕೆ ಜಯವಾಗಲಿ! ಅಂದಿನಿಂದ ನಾನು ಪ್ರಖ್ಯಾತನಾದೆನು.’’

ಹಿಂದೊಮ್ಮೆ ನೊಬೆಲ್ ಪುರಸ್ಕೃತ ರಾಷ್ಟ್ರಕವಿ ರವೀಂದ್ರನಾಥ್‌ ಠಾಗೋರ್‌ ಅವರು, ನೀವು ಭಾರತದ ಬಗ್ಗೆ ತಿಳಿಯ ಬೇಕಿದ್ದರೆ ಸ್ವಾಮಿ ವಿವೇಕಾನಂದರ ಬಗ್ಗೆ ಓದಿಕೊಳ್ಳಿ ಅಂದಿದ್ದರು. ಏಕೆಂದರೆ ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿ ಸಕಾರಾತ್ಮಕ ವಿಷಯಗಳಿರುತ್ತಿತೇ ಹೊರತು ನಕರಾತ್ಮಕ ಅಂಶಗಳಿರುವುದಿಲ್ಲ ಎಂದು ರಾಷ್ಟ್ರಕವಿ ತಿಳಿಸಿದ್ದರು. ಇದು ಸ್ವಾಮೀಜಿಯವರು ಸಣ್ಣ ಪ್ರಾಯದಲ್ಲಿ ಬೀರಿದ ಪ್ರಭಾವವನ್ನು ಸೂಚಿಸುತ್ತದೆ.

ಸರ್ವಧರ್ಮ ಸಮ್ಮೇಳನದ ಮೂಲಕ ಭಾರತದ ಓರ್ವ ಪರಿವ್ರಾಜಕ ಸನ್ಯಾಸಿ ವಿಶ್ವಮಾನ್ಯತೆ ಗಳಿಸಿಕೊಂಡಿದ್ದರು. ಅಮೆರಿಕ ಪ್ರವಾಸ ವಿವೇಕಾನಂದರ ಜೀವನದಲ್ಲಿ ಮಹತ್ವದ ತಿರುವು ದೊರಕಿಸಿಕೊಟ್ಟಿತು. ಇಂತಹ ಚಿಕಾಗೋ ಧರ್ಮಸಮ್ಮೇಳನ ನಡೆದು ಇದೀಗ 128 ವರ್ಷಗಳಾಗಿದ್ದು ನಮ್ಮ ನಡುವೆ ಇಂದಿಗೂ ಕುದಿಯುತ್ತಿರುವ ಧರ್ಮ ವೈಷಮ್ಯ, ಮಾರಣಾಂತಿಕ ಭಯೋತ್ಪಾದನೆ ಕೃತ್ಯಗಳನ್ನು ಕಂಡಾಗ ಮತ್ತೆ ಮತ್ತೆ ವಿವೇಕಾನಂದರ ಸಂದೇಶ ನೆನಪಿಸಿಕೊಳ್ಳಬೇಕು ಎನಿಸುತ್ತದೆ.

Photos Courtesy: Wikipedia


Dr.Guruprasad Hawaldar

  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.
Tags: 1893 September 11americaChicagoChicago cityindiaParliament of the World's Religionsswami vivekananda
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

by cknewsnow desk
December 14, 2024
0

ಅರೆಸ್ಟ್ ಆದ 24 ಗಂಟೆಗಳಲ್ಲೇ ಜೈಲಿನಿಂದ ರಿಲೀಸ್; ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ ಪುಷ್ಪಾ - 2

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

by cknewsnow desk
July 23, 2024
0

ಪ್ರಧಾನಿ ಕನಸಿನ 'ವಿಕಸಿತ ಭಾರತ' ನಿರ್ಮಾಣಕ್ಕೆ ಶಕ್ತಿ ತುಂಬುವ ಬಜೆಟ್

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

by cknewsnow desk
May 6, 2024
0

ನಾಗಮಂಗಲದ ಎಲ್.‌ಆರ್.‌ಶಿವರಾಮೇಗೌಡ ಮಧ್ಯಸ್ಥಿಕೆ; ಮೊಬೈಲ್‌ ಸಂಭಾಷಣೆ ಆಡಿಯೋ ಬಿಡುಗಡೆ

ಶ್ರೀರಾಮ ನವಮಿ ಶುಭಾಶಯಗಳು

ಶ್ರೀರಾಮ ನವಮಿ ಶುಭಾಶಯಗಳು

by cknewsnow desk
April 17, 2024
0

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ | ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ || ಶ್ರೀ ರಾಮ ಜಾನಕೀನಾಥ ತಾಟಕಾಸುರ ಮರ್ದನ | ಇಕ್ಷ್ವಾಕುಕುಲಸಂಭೂತ ರಣಪಂಡಿತ ರಾಘವಃ...

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

by cknewsnow desk
April 16, 2024
0

ಕುಮಾರಸ್ವಾಮಿ ಅವರನ್ನು ದಾರಿ ತಪ್ಪಿದ ಮಗ ಎಂದ ನಟನಿಗೆ ತಿರುಗೇಟು ಕೊಟ್ಟ ದಳ

Next Post
ಗುಡಿಬಂಡೆ: ಎಲ್ಲೆಡೆ ಪರಿಸರ ಜಪ, ಮಣ್ಣಿನ ಗಣಪ

ಗುಡಿಬಂಡೆ: ಎಲ್ಲೆಡೆ ಪರಿಸರ ಜಪ, ಮಣ್ಣಿನ ಗಣಪ

Leave a Reply Cancel reply

Your email address will not be published. Required fields are marked *

Recommended

ಹೋಸಪೇಟೆ ವಕೀಲರೊಬ್ಬರ ಕೋಲೆ ಖಂಡಿಸಿ ನ್ಯಾಯಾಲಯ ಕಲಾಪ ಬಹಿಷ್ಕಾರ; ವಕೀಲರ ರಕ್ಷಣೆಗೆ ಕಾಯ್ದೆ ಜಾರಿಗೆ ಆಗ್ರಹ

ಹೋಸಪೇಟೆ ವಕೀಲರೊಬ್ಬರ ಕೋಲೆ ಖಂಡಿಸಿ ನ್ಯಾಯಾಲಯ ಕಲಾಪ ಬಹಿಷ್ಕಾರ; ವಕೀಲರ ರಕ್ಷಣೆಗೆ ಕಾಯ್ದೆ ಜಾರಿಗೆ ಆಗ್ರಹ

5 years ago
4 ಶೋಗಳಿಗೆ 154 ಪ್ರೇಕ್ಷಕರು! ಟೋಟಲ್‌ ಕಲೆಕ್ಷನ್‌ 5ರಿಂದ  6 ಸಾವಿರ ಮಾತ್ರ!!

4 ಶೋಗಳಿಗೆ 154 ಪ್ರೇಕ್ಷಕರು! ಟೋಟಲ್‌ ಕಲೆಕ್ಷನ್‌ 5ರಿಂದ 6 ಸಾವಿರ ಮಾತ್ರ!!

6 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ