ಲಕ್ಷ್ಮೀಸಾಗರವನ್ನು ಸಂಸತ್‌ವರೆಗೂ ಕೊಂಡೊಯ್ದ ನಾಯಕ
By GS Bharath Gudibande
ಗುಡಿಬಂಡೆ: ಕಡು ಬಡತನದಲ್ಲಿ ಹುಟ್ಟಿ ಬೆಳೆದು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪ್ರೊ.ಎ.ಲಕ್ಷ್ಮೀಸಾಗರ್ ಅವರು ನಮ್ಮನ್ನಗಲಿ ಇಂದಿಗೆ 13 ವರ್ಷ. ಅವರು 2008 ಸೆಪ್ಟೆಂಬರ್ 12ರಂದು ನಿಧನರಾಗಿದ್ದರು.
ಹುಟ್ಟಿದ್ದು (1927 ಡಿಸೆಂಬರ್ 8) ಗುಡಿಬಂಡೆ ತಾಲೂಕಿನ ವರಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀಸಾಗರ ಗ್ರಾಮದಲ್ಲಿ. ತಮ್ಮ 81 ವರ್ಷಗಳ ತುಂಬು ಜೀವನದಲ್ಲಿ ಜ್ಞಾನದ ತುಂಬಿದ ಕೊಡವಾಗಿದ್ದ ಅವರು ನಾಡಿಗೆ ಸಲ್ಲಿಸಿದ ಸೇವೆ ಅನನ್ಯ. ಕಾಂಗ್ರೆಸ್ಸೇತರ ನಾಯಕನಾಗಿ, ಮೌಲ್ಯಾಧಾರಿತ, ಪ್ರಾಮಾಣಿಕ ರಾಜಕಾರಣ ಮಾಡಿದ ಅವರನ್ನು ನಾಡಿನ ಜನರು ʼಗಾಂಧಿನಗರದ ಗಾಂಧಿʼ(ಬೆಂಗಳೂರಿನ ಗಾಂಧೀನಗರ) ಎಂದೇ ನೆನಪಿಸಿಕೊಳ್ಳುತ್ತಾರೆ. ಇಂಥ ಮಹಾನ್ ವ್ಯಕ್ತಿಯ ಬಗ್ಗೆ ಗುಡಿಬಂಡೆ ತಾಲೂಕಿನ ಸಾಕಷ್ಟು ಜನರಿಗೆ ವಿವರವಾಗಿ ಗೊತ್ತಿಲ್ಲ ಎಂಬುದು ದುರ್ದೈವದ ಸಂಗತಿ.
ಈ ನಿಟ್ಟಿನಲ್ಲಿ ಸಿಕೆನ್ಯೂಸ್ ನೌ ಜಿಲ್ಲೆಯ ಮತ್ತು ತಾಲೂಕಿನ ಜನತೆಗೆ ಅವರ ಬಗ್ಗೆ ಒಂದಿಷ್ಟು ಮಾಹಿತಿ ನೀಡಲು ಪ್ರಯತ್ನಿಸಿದೆ.
ಯಾರೀ ಪ್ರೊ.ಎ.ಲಕ್ಷ್ಮೀಸಾಗರ್?
ಪ್ರೊ.ಎ.ಲಕ್ಷ್ಮೀಸಾಗರ್ ಅವರು ಸರಳ, ಸಜ್ಜನಿಕೆಯ ಸಾಕಾರಮೂರ್ತಿ. ವರಲಕೊಂಡ ಸಮೀಪದ ಲಕ್ಷ್ಮೀಸಾಗರ ಗ್ರಾಮದಲ್ಲಿ ಜನಿಸಿದ ಅವರ ಮೂಲ ಹೆಸರು ಚಿಕ್ಕಕೊಂಡಪ್ಪ. ನಂತರ ಬೆಂಗಳೂರಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುವ ವೇಳೆ ಆ ಹೆಸರು ಲಕ್ಷ್ಮೀಸಾಗರ್ ಎಂದೇ ಬದಲಾಯಿತು. ಹುಟ್ಟಿದ ಊರಿನ ಹೆಸರೇ ಅವರ ಹೆಸರಾಯಿತು!
ಬಡತನದಲ್ಲಿ ಬೆಂದ ಲಕ್ಷ್ಮೀಸಾಗರ್ ಅವರು ತಮ್ಮ ಜ್ಞಾನದಿಂದಲೇ ಉನ್ನತ ಮಟ್ಟಕ್ಕೆ ಬೆಳೆಯುತ್ತಾ ಹೋದರು. ಜನ್ಮ ತಳೆದಿದ್ದು ಅವಿಭಜಿತ ಕೋಲಾರ ಜಿಲ್ಲೆಯಲ್ಲಾದರೂ ಅವರು ರಾಜಕೀಯ ಕಾರ್ಯಕ್ಷೇತ್ರನ್ನಾಗಿ ಮಾಡಿಕೊಂಡಿದ್ದು ಬೆಂಗಳೂರನ್ನೇ. 1972-1975ರಲ್ಲಿ ರಾಜಕೀಯ ರಂಗ ಪ್ರವೇಶ ಮಾಡಿ ಚಿಕ್ಕಪೇಟೆ ವಾರ್ಡ್ʼನಿಂದ ಬೆಂಗಳೂರು ಸಿಟಿ ಮುನ್ಸಿಫಲ್ ಕೌನ್ಸಿಲರ್ ಆಯ್ಕೆಯಾದರು.
ಬಳಿಕ 1978, 1983 & 1985ರಲ್ಲಿ ಚಿಕ್ಕಪೇಟೆಯಿಂದ ಸ್ಪರ್ಧಿಸಿ ಸತತವಾಗಿ ಮೂರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1982ರಿಂದ 1983ರ ಅವಧಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದರು. ಆಗ ಆರ್.ಗುಂಡೂರಾವ್ ಅವರ ಸರಕಾರವಿತ್ತು. ಅಲ್ಲದೆ, 1996ರಿಂದ 2002ರವರೆಗೆ ವಿಧಾನ ಪರಿಷತ್ ಸದಸ್ಯರಾಗಿಯೂ ಕೆಲಸ ಮಾಡಿದ್ದರು.
ಇನ್ನು; ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಅತ್ಯಂತ ಮಹತ್ತ್ವದ್ದಾದ ನಗರಾಭಿವೃದ್ಧಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರಾಗಿ ಸಮರ್ಥವಾಗಿ ಕೆಲಸ ಮಾಡಿದ್ದ ಲಕ್ಷ್ಮೀಸಾಗರ್ ಅವರು, ಒಮ್ಮೆ ರಾಮಕೃಷ್ಣ ಹೆಗಡೆ ಅವರು ಅಧಿಕೃತ ವಿದೇಶ ಪ್ರವಾಸ ಕೈಗೊಂಡಾಗ ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ಆ ಸ್ಥಾನದ ಜವಬ್ದಾರಿ ನಿರ್ವಹಿಸಿದ್ದರು. ಅಂದರೆ, ಹಂಗಾಮಿ ಸಿಎಂ ಅಗಿ ಕರ್ತವ್ಯ ನಿರ್ವಹಿಸಿದ್ದರು.
1998-2002ರ ಅವಧಿಯಲ್ಲಿ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು ಅವರು. ಅಲ್ಲದೆ, ಅದೇ ಪಕ್ಷದ ಕಾರ್ಯಾಧ್ಯಕ್ಷರಾಗಿಯೂ 1996-1998ರವರೆಗೆ ಕೆಲಸ ಮಾಡಿದ್ದರು. ಜನತಾ ಪರಿವಾರದಲ್ಲಿ ರಾಜಕೀಯ ಅಗ್ರನಾಯಕರಾಗಿ ಬೆಳೆದ ಅವರು ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಸ್.ಆರ್.ಬೊಮ್ಮಾಯಿ ಮುಂತಾದ ದಿಗ್ಗಜರ ಜತೆ ಜತೆ ರಾಜಕೀಯ ಹೆಜ್ಜೆಗಳನ್ನು ಇಟ್ಟವರು.
ಬ್ರಹ್ಮಚಾರಿ ಮತ್ತು ಪರಮ ಪ್ರಾಮಾಣಿಕ
ಪ್ರೊ.ಲಕ್ಷ್ಮೀಸಾಗರ್ ಅವರು ತಮ್ಮ ಜ್ಞಾನ, ಪ್ರಾಮಾಣಿಕತೆ, ಬದ್ಧತೆ ನಂಬಿ ಮೇಲೆ ಬಂದವರು. ಸ್ವಜನ ಪಕ್ಷಪಾತ, ಅಪ್ರಾಮಾಣಿಕತೆ, ಸ್ವಾರ್ಥ ಎನ್ನುವ ಪದಗಳು ಅವರ ಮನೆ ಹೊಸಲಿಗೂ ಬರದಂತೆ ನೋಡಿಕೊಂಡರು. ಸಾಂಸಾರಿಕ ಜೀವನದ ಜಂಜಾಟಕ್ಕೆ ಸಿಗದೆ ಬ್ರಹ್ಮಚಾರಿಯಾಗಿಯೇ ಉಳಿದರಲ್ಲದೆ ಜನರ ಮಧ್ಯೆ ಸಂನ್ಯಾಸಿಯಂತೆ ಬದುಕಿದರು. ಜಾತಿ, ಧರ್ಮ, ಪ್ರಾಂತೀಯ ಭಾವನೆಗಳಿಗೆ ಅತೀತರಾಗಿದ್ದರು.
ಅವಿರತ ಓದು, ಜ್ಞಾನಾರ್ಜನೆ
ಪ್ರೊ.ಲಕ್ಷ್ಮೀಸಾಗರ್ ನಿರಂತರವಾಗಿ ಓದುತ್ತಿದ್ದರು. ಸಂವಿಧಾನ ಅವರ ನಾಲಗೆಯ ಮೇಲೆ ನಲಿಯುತ್ತಿತ್ತು. ವರ್ಲಕೊಂಡ ಹಾಗೂ ಬೀಚಗಾನಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರು, ಉನ್ನತ ಮತ್ತು ಕಾನೂನು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದರು. ಆ ಸಂದರ್ಭದಲ್ಲಿ ಬಡತನದಿಂದ ಬೇಯುತ್ತಿದ್ದ ಅವರು ಶಿಕ್ಷಣ ಮತ್ತು ಊಟ-ವಸತಿಗಾಗಿ ಪಾರ್ಟ್ ಟೈಂ ಕೆಲಸ ಮಡುತ್ತಿದ್ದರು. ಕಾಲೇಜು ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿ ಬಂದ ಹಣದಲ್ಲಿ ವಿದ್ಯಾಭ್ಯಾಸ ಮಾಡಿದ್ದರು.
ಕಾನೂನು ಪದವಿ ಮುಗಿಸಿದ ಮೇಲೆ ಕೆಲ ಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಅವರು, ನಿರಂತರವಾಗಿ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಲೇ ಇದ್ದರು. ತಮ್ಮ ನಿತ್ಯದ ಖರ್ಚಿಗಾಗಿ ಯಾರನ್ನೂ ಒಂದು ಪೈಸೆಯನ್ನೂ ಕೇಳುತ್ತಿರಲಿಲ್ಲ ಎಂದು ಅನೇಕರು ಈಗಲೂ ಹೇಳುತ್ತಾರೆ.
- ಪ್ರೊ.ಲಕ್ಷ್ಮೀಸಾಗರ್ ಅವರು ತಮ್ಮ ಸಂಸದರ ಅನುದಾನದಿಂದ ಲಕ್ಷ್ಮೀಸಾಗರ, ವರಲಕೊಂಡ ಗ್ರಾಮಗಳಿಗೆ ನೀಡಿರುವ ಕೊಡುಗೆಗಳು.
ಊರಿನ ಋಣ ತೀರಿಸಿದ ಹೃದಯವಂತ
ರಾಜಕೀಯ ಬದುಕಿಗಾಗಿ ಬೆಂಗಳೂರು ಕಾರ್ಯಕ್ಷೇತ್ರವಾದರೂ ಅವರು ಯಾವಾಗಲೂ ತಮ್ಮ ಜನ್ಮಸ್ಥಳದ ಬಗ್ಗೆ ಮಿಡಿಯುತ್ತಿದ್ದರು. ಲಕ್ಷ್ಮೀಸಾಗರಕ್ಕೆ, ಗುಡಿಬಂಡೆ ತಾಲೂಕಿಗೆ ಹಾಗೂ ಅವಿಭಜಿತ ಕೋಲಾರ ಜಿಲ್ಲೆಗೆ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.
ಮುಖ್ಯವಾಗಿ ಬಡಮಕ್ಕಳು ಚೆನ್ನಾಗಿ ಕಲಿಯಬೇಕು ಎಂದು ತಪಿಸುತ್ತಿದ್ದ ಅವರು, ಶಿಕ್ಷಣದಲ್ಲಿ ಯಾವ ಮಗುವೂ ಹಿಂದೆ ಬೀಳಬಾರದು ಎಂಬ ದೂರದೃಷ್ಟಿಯಿಂದ ವರ್ಲಕೊಂಡ ಗ್ರಾಮದಲ್ಲಿ 73 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಪ್ರೌಡಶಾಲೆ ಕಟ್ಟಡಕ್ಕೆ ಅನುದಾನ ನೀಡಿದ್ದರು. ಆ ಶಾಲಾ ಕಟ್ಟಡ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇದೆ. ಮಂಡಿಕಲ್, ನಾರೆಮದ್ದೇಪಲ್ಲಿ, ಸೋಮೇನಹಳ್ಳಿ ಶಾಲೆಗಳ ಕೆಲ ಕಟ್ಟಡಗಳನ್ನು ರಾಜ್ಯಸಭಾ ಸದಸ್ಯರ ನಿಧಿಯಿಂದ ಕಟ್ಟಿಸಿದ್ದರು. ಲಕ್ಷ್ಮೀಸಾಗರ ಗ್ರಾಮದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನವನ್ನು ಕೂಡ ನಿರ್ಮಿಸಿದ್ದರು.
ವರ್ಲಕೊಂಡ ಗ್ರಾಮವನ್ನು ಶಿಕ್ಷಣ ಹಬ್ ಮಾಡುವುದು ಲಕ್ಷ್ಮೀಸಾಗರ್ ಅವರ ಕನಸಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಈ ಗ್ರಾಮದಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಬೆಲೆ ಬಾಳುವ ಭೂಮಿಯಲ್ಲಿ ಶಾಲೆ ನಿರ್ಮಿಸಿ ಪ್ರತಿಯೊಬ್ಬ ವಿದ್ಯಾರ್ಥಿ ದೇಶದ ಸೇವೆ ಮಾಡುವ ನಿಟ್ಟಿನಲ್ಲಿ ಬೆಳೆಸಬೇಕೆಂಬ ಗುರಿ ಅವರದಾಗಿತ್ತು. ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಲಕ್ಷ್ಮೀಸಾಗರ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪುಣ್ಯಸ್ಮರಣೆ ನಿಮಿತ್ತ ವರಲಕೊಂಡ ಹಾಗೂ ಲಕ್ಷ್ಮೀಸಾಗರದ ಗ್ರಾಮಸ್ಥರು ಪ್ರೊ.ಲಕ್ಷ್ಮೀಸಾಗರ್ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಲಕ್ಷ್ಮೀಸಾಗರ ಗ್ರಾಮದಲ್ಲಿ ಹುಟ್ಟಿ ಬೆಳೆದು, ಬೆಂಗಳೂರು ಸಿಟಿ ಮುನಿಸಿಫಲ್, ವಿಧಾನಸಭೆ ಹಾಗೂ ಸಂಸತ್ತಿನವರೆಗೂ ಸಾಗಿದ ಪ್ರೊ.ಲಕ್ಷ್ಮೀಸಾಗರ್ ಅವರು ನಡೆದ ದಾರಿ ಬಹುದೊಡ್ಡದು. ಅವರು ತಾವು ಹುಟ್ಟಿದ ಗ್ರಾಮಕ್ಕೆ ನೀಡಿರುವ ಕೊಡುಗೆಗಳು ಅನನ್ಯ. ಅವರ ಪುಣ್ಯಸ್ಮರಣೆ ನಮ್ಮೆಲ್ಲರ ಹೊಣೆಗಾರಿಕೆ. ಶೈಕ್ಷಣಿಕವಾಗಿ ನಮ್ಮ ಗ್ರಾಮಕ್ಕೆ ಕೊಡುಗೆ ನೀಡಿದ ಅವರನ್ನು ಸದಾ ಸ್ಮರಿಸುತ್ತೇವೆ.
ಎಲ್.ಎ.ಬಾಬು, ಉಪಾಧ್ಯಕ್ಷ, ವರ್ಲಕೊಂಡ ಗ್ರಾಮ ಪಂಚಾಯತಿ