ಗುಡಿಬಂಡೆ: ಹಬ್ಬದ ರಜೆ ಪಕ್ಕಕ್ಕಿಟ್ಟು ಮನೆ ಬಾಗಿಲಿಗೇ ಹೋಗಿ ಲಸಿಕೆ ನೀಡಿದ ಸಿಬ್ಬಂದಿ
by GS Bharath Gudibande
ಗುಡಿಬಂಡೆ: ತಾಲೂಕಿನ ಪ್ರತಿ ಹಳ್ಳಿಯ ಮನೆ ಬಾಗಿಲಿಗೇ ಆರೋಗ್ಯ ಇಲಾಖೆ, ತಹಸೀಲ್ದಾರ್, ತಾಲೂಕು ಪಂಚಾಯಿತಿ ಇಒ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಯೇ ಹೋಗಿ ಜನರಿಗೆ ವ್ಯಾಕ್ಸಿನೇಷನ್ ಮಾಡಿಸುತ್ತಿದ್ದಾರೆ.
ಆದರೆ, ಗ್ರಾಮೀಣ ಭಾಗದಲ್ಲಿ ಕೋವಿಡ್ ಲಸಿಕೆ ಪಡೆಯಲು ಕೆಲ ಮಹಿಳೆಯರು ನಿರಾಕರಿಸುತ್ತಿದ್ದು ಅವರ ಮನವೊಲಿಕೆ ಮಾಡಲು ಅಧಿಕಾರಿಗಳು ಶತ ಪ್ರಯತ್ನ ಮಾಡುತ್ತಿದ್ದಾರೆ.
ಹಬ್ಬ-ಹರಿ, ರಜೆ ಎನ್ನದೇ ತಾಲೂಕಿನ 8 ಪಂಚಾಯಿತಿಯ ಶೇ.50ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ 100% ಲಸಿಕೀಕರಣ ಯಶಸ್ವಿಯಾಗಿ ಸಾಧಿಸಿರುವುದು ಸಂತಸವಾಗಿದೆ ಎಂದು ತಹಸೀಲ್ದಾರ್ ಸಿಬ್ಗತ್ ವುಲ್ಲಾ ಅವರು ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ಮಾಹಿತಿ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಕಟ್ಟಕಡೆಯ ಹಾಗೂ ಚಿಕ್ಕ ತಾಲೂಕು ಆಗಿರುವ ಗುಡಿಬಂಡೆಯಲ್ಲಿ ಲಸಿಕೆ ಹಾಕುವುದಕ್ಕೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದ್ದು, ತಾಲೂಕು ಆಡಳಿತ ಒಟ್ಟಾಗಿ ಡ್ರೈವ್ ಮಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮದುವೇ ಮನೆಯಲ್ಲಿ ಲಸಿಕೀಕರಣ
ತಾಲೂಕಿನ ವರ್ಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದುವೆ ಮನೆಯಲ್ಲಿ ಎಲ್ಲರಿಗೂ ಲಸಿಕೀಕರಣ ಮಾಡಲಾಗಿದೆ. ವ್ಯಾಕ್ಸಿನೇಷನ್ ವಿಚಾರದಲ್ಲಿ ಭಯ, ಅಪ ಪ್ರಚಾರವನ್ನು ನಂಬದೇ ಮುಂದೆ ಬರಬೇಕು, ಲಸಿಕೀಕರಣ ಮಾಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಕೋರಿದ್ದಾರೆ.
ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಜನರಿಗೆ ಲಸಿಕೆ ಹಾಕುವ ಕೆಲಸ ಭರದಿಂದ ಸಾಗಿದೆ. ಮದುವೆ ಮನೆಗಳು, ಪೂಜಾ ಕಾರ್ಯಕ್ರಮ ಸೇರಿ ಜನ ಸೇರುವ ಪ್ರದೇಶಗಳಲ್ಲಿ ಹುಡುಕಿ-ಹುಡುಕಿ ಲಸಿಕೆ ನೀಡಲಾಗುತ್ತಿದೆ.
ಟೀ, ಪಾನಿಪುರಿ ಅಂಗಡಿ, ಬಸ್ ನಿಲ್ದಾಣದಲ್ಲಿ ಲಸಿಕೆ
ವಿಶೇಷವೆಂದರೆ ಪಟ್ಟಣ ಹಾಗೂ ತಾಲೂಕಿನಲ್ಲಿ ಹೆಚ್ಚು ಜನ ಸೇರುವ ಸ್ಥಳಗಳಾದ ಕಾಫಿ-ಟೀ, ಪಾನಿಪುರಿ ಅಂಗಡಿ, ಬಸ್ ನಿಲ್ದಾಣದಲ್ಲಿ ತಹಸೀಲ್ದಾರ್ ಸಿಬ್ಗತ್ ವುಲ್ಲಾ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಹಕಾರದಿಂದ ಲಸಿಕೀಕರಣ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಸಂಪೂರ್ಣ ಲಸಿಕೀರಣ ಮಾಡುವ ದಿಕ್ಕಿನಲ್ಲಿ ಇದೊಂದು ಗಂಭೀರ ಪ್ರಯತ್ನವಾಗಿದೆ. ಕೆಲ ದಿನಗಳ ಹಿಂದೆ ರೈತರಿಗೆ ರಸಗೊಬ್ಬರ ವಿತರಣೆ ಮಾಡುವ ಅಂಗಡಿ ಮುಂದೆಯೇ ವ್ಯಾಕ್ಸಿನೇಷನ್ ಮಾಡಲಾಯಿತು.
ಹೀಗೆ ಪ್ರತಿ ಅವಕಾಶವನ್ನು ಅಧಿಕಾರಿಗಳು ಸದುಪಯೋಗ ಮಾಡಿಕೊಂಡು ಯಾರೂ ಲಸಿಕೆಯಿಂದ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಲಸಿಕೆ ಬೇಡವೆನ್ನುತ್ತಿರುವ ಮಹಿಳೆಯರು
ಎಲ್ಲರಿಗೂ ಲಸಿಕೆ ನೀಡಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎನ್ನುವುದಕ್ಕೆ ಹಳ್ಳಿಗಳಲ್ಲಿ ಕಂಡು ಬರುತ್ತಿರುವ ದೃಶ್ಯಗಳೇ ಸಾಕ್ಷಿ.
ತಾಲೂಕಿನ ಕೆಲ ಗ್ರಾಮಗಳಲ್ಲಿ ಲಸಿಕೆ ಎಂದರೆ ಮಹಿಳೆರೆಯರು ಮಂಗಮಾಯ ಆಗುತ್ತಿದ್ದಾರೆ. ವಯೋವೃದ್ದ ಮಹಿಳೆಗೆ ಗ್ರಾಮವೊಂದರಲ್ಲಿ ಲಸಿಕೆ ನೀಡಲು ಸಿಬ್ಬಂದಿ ದೊಡ್ಡ ಸರ್ಕಸ್ ಅನ್ನೇ ಮಾಡಬೇಕಾಯಿತು.
ಪರಿಪರಿಯಾಗಿ ಕೇಳಿಕೊಂಡರೂ ಲಸಿಕೆ ಪಡೆಯಲು ಜಗ್ಗದ ಮಹಿಳೆ ಹೇಳಿದ್ದಿಷ್ಟು; ಬಾಲ್ಯದಿಂದಲೂ ಮಾತ್ರೆ, ಇಂಜೆಕ್ಷನ್ ತಗೊಂಡಿಲ್ಲ. ಈಗಲೂ ಹಾಕಿಸಿಕೊಳ್ಳೋದಿಲ್ಲ ಎಂದು ಆ ಮಹಿಳೆ ಹಠ ಹಿಡಿದರು. ಲಸಿಕೆ ಹಾಕಿಸಿಕೊಂಡರೆ ಒಂದು ದಿನದ ಕೂಲಿ ಹೋಗುತ್ತದೆ ಅಂದ ಮಹಿಳೆಗೆ ಹಣ ನೀಡಿ ಮನವೊಲಿಸುವ ಪ್ರಯತ್ನ ನಡೆಸಲಾಯಿತು. ಕೊನೆಗೆ ಲಸಿಕೆ ಹಾಕಿಸಿಕೊಂಡಿಲ್ಲಾಂದ್ರೆ ರೇಷನ್ ಕಟ್ ಮಾಡ್ತೀವಿ ಅಂದರೆ, ಕೊಡುವ 4 ಕೆ.ಜಿ. ಅಕ್ಕಿಯಿಂದ ಕೂಲಿ ಮಾಡೋದು ತಪ್ಪಿಲ್ಲ ಸ್ವಾಮಿ ಎಂದರು ಆ ಮಹಿಳೆ. ಕಡೆಗೂ ಅಧಿಕಾರಿಗಳು ಮನವೊಲಿಸಿ ಲಸಿಕೆ ನೀಡುವಲ್ಲಿ ಯಶಸ್ವಿಯಾದರು.
ತಾಲೂಕಿನಲ್ಲಿ ಲಸಿಕೀಕರಣ ಪ್ರತಿದಿನ ನಡೆಯುತ್ತಿದೆ. ಶೇ.100ರಷ್ಟು ಲಸಿಕೀಕರಣ ಪ್ರಗತಿ ಸಾಧಿಸುವ ಗುರಿ ಹೊಂದಿಲಾಗಿದ್ದು, ಈಗಾಗಲೇ ಶೇ.50ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಈ ಪ್ರಗತಿ ಸಾಧಿಸಲಾಗಿದೆ, ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಲಸಿಕೀಕರಣ ಮಾಡುತ್ತಿದ್ದೇವೆ. ನಮ್ಮ ಆರೋಗ್ಯ ಇಲಾಖೆ, ಇಒ ರವೀಂದ್ರ, ಡಾ.ನರಸಿಂಹಮೂರ್ತಿ, ಪೊಲೀಸ್ ಇಲಾಖೆ, ಪಪಂ ಮುಖ್ಯಾಧಿಕಾರಿ ರಾಜಶೇಖರ್, ಫ್ರಂಟ್ʼಲೈನ್ ವಾರಿಯರ್ಸ್ʼಗಳ ಕೆಲಸ ಮೆಚ್ಚಲೇಬೇಕು. ಇನ್ನು, ಜನ ಸ್ವ ಇಚ್ಛೆಯಿಂದ ಮುಂದೆ ಬಂದು ಲಸಿಕೆ ಪಡೆಯಬೇಕು. ಮಹಿಳೆಯರು ಹೆದರುವ ಅಗತ್ಯ ಇಲ್ಲ.
ಸಿಬ್ಗತ್ ವುಲ್ಲಾ, ತಹಸೀಲ್ದಾರ್, ಗುಡಿಬಂಡೆ ತಾಲೂಕು