ಇದು ಸಿನಿಮಾ ಮಾತ್ರ! ಜಯಲಲಿತಾ ಬಯೋಪಿಕ್ ಅಲ್ಲ!!
#MovieReview
by HB Dinesh Bengaluru
- ತಮಿಳು ಸಿನಿಮಾ: ತಲೈವಿ
- ನಿರ್ದೇಶನ: ಎ.ಎಲ್.ವಿಜಯ್
- ತಾರಾಗಣ: ಅರವಿಂದ ಸ್ವಾಮಿ, ಕಂಗನಾ ರಣಾವತ್
- ರೇಟಿಂಗ್: ★★★
ನಮ್ಮ ದೇಶದ ರಾಜಕಾರಣದಲ್ಲಿ ಜಯಲಲಿತಾ ಅವರದ್ದು ವರ್ಣರಂಜಿತ ವ್ಯಕ್ತಿತ್ವ ಹಾಗೂ ಉಳಿದೆಲ್ಲ ಮಹಿಳಾ ರಾಜಕಾರಣಿಗಳಿಗಿಂತ ರೋಚಕ, ಸವಾಲಿನದು ಹೌದು. ಕಾರಣವಿಷ್ಟೇ; ಅವರು ಸಿನಿಮಾ ನಟಿಯಾಗಿದ್ದರು. ಜತೆಗೆ ಅಪಾರ ಜನಪ್ರಿಯತೆ ಹೊಂದಿದ್ದರು.
ಮುಂದಿನ ಡಿಸೆಂಬರ್ 5ನೇ ತಾರೀಖು ಬಂದರೆ ಜಯಲಲಿತಾ ನಿಧನರಾಗಿ ಐದು ವರ್ಷವಾಗುತ್ತದೆ. ಅದಕ್ಕೆ ನಾಲ್ಕು ತಿಂಗಳ ಮೊದಲೇ ಬಂದ ʼತಲೈವಿʼ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ಆ ನಿರೀಕ್ಷೆಗೆ ತಕ್ಕಂತೆ ಈಗ ಕೋವಿಡ್ ನಡುವೆಯೂ ನೇರವಾಗಿ ಥಿಯೇಟರ್ʼಗಳಲ್ಲಿಯೇ ಈ ಸಿನಿಮಾ ರಿಲೀಸ್ ಆಗಿದೆ.
ಈ ಸಿನಿಮಾ ನೋಡುವ ಬಗ್ಗೆ ನನಗೆ ಬಹಳ ಕುತೂಹಲವಿತ್ತು. ಕರ್ನಾಟಕದ ಜತೆಗೆ ತಮಿಳುನಾಡು ರಾಜಕೀಯವನ್ನು ಬಲ್ಲ ನನಗೆ ಅಲ್ಲಿನ ರಾಜಕೀಯದ ರೀತಿ-ರಿವಾಜುಗಳ ಬಗ್ಗೆ ಅತೀವ ಆಸಕ್ತಿ. ಅದರಲ್ಲೂ ದೇಶದ ರಾಜಕೀಯವೆಲ್ಲ ಒಂದು ದಿಕ್ಕಾದರೆ, ದ್ರಾವಿಡ ರಾಜಕೀಯವೇ ಇನ್ನೊಂದು ದಿಕ್ಕು. ಈ ಅಂಶವೂ ನನ್ನನ್ನು ʼತಲೈವಿʼ ಸಿನಿಮಾದತ್ತ ಕರೆದೊಯ್ದಿತು.
2018 ಅಗಸ್ಟ್ 7ರಂದು ತಮಿಳುನಾಡಿನ ಬಹುದೊಡ್ಡ ನಾಯಕ ಕರುಣಾನಿಧಿ ಅವರು ನಿಧನರಾದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದರು. ನಾನು ಅವರಿಗೆ ಮಾಧ್ಯಮ ಕಾರ್ಯದರ್ಶಿ ಆಗಿದ್ದೆ. ಕರುಣಾನಿಧಿ ಅವರಿಗೆ ಅಂತಿಮ ನಮನ ಸಲ್ಲಿಸಲು ಸ್ವತಃ ಮುಖ್ಯಮಂತ್ರಿಗಳೇ ಚೆನ್ನೈಗೆ ಹೊರಟಾಗ ನಾನೂ ಅವರ ಜತೆಯಲ್ಲೇ ಇದ್ದೆ. ಆದರೆ, ಕರುಣಾನಿಧಿ ಅವರ ಪಾರ್ಥೀವ ಶರೀರ ಇರಿಸಲಾಗಿದ್ದ ರಾಜಾಜಿ ಹಾಲ್ ಬಳಿಗೆ ನೆರೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ತಲುಪಿದ್ದೇ ಭಾರೀ ಹರಸಾಹಸದಿಂದ ಎಂಬುದು ಉಲ್ಲೇಖನೀಯ. ಅಲ್ಲಿನ ಜನರ ಅಭಿಮಾನ, ಅಕ್ಕರೆ, ಅಗಲಿದ ನಾಯಕನ್ನು ನೋಡಲು ಬರುವ ಧಾವಂತ ನನ್ನನ್ನು ಚಕಿತಗೊಳಿಸಿತ್ತು.
ʼತಲೈವಿʼ ಸಿನಿಮಾ ನೋಡುತ್ತಿದ್ದಂತೆ ಆ ಚಿತ್ರಗಳೆಲ್ಲ ನನ್ನ ಸ್ಮೃತಿಪಟಲದಲ್ಲಿ ಒಮ್ಮೆ ಹಾದುಹೋದವು. ಏಕೆಂದರೆ, ಎಂ.ಜಿ.ರಾಮಚಂದ್ರನ್ (ಎಂಜಿಆರ್) ನಿಧನ, ರಾಜಾಜಿ ಹಾಲ್ ಬಳಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಿದ್ದು, ಅಲ್ಲಿ ನೆರೆದಿದ್ದ ಜನ, ಆ ಜನರ ಭಾವೋದ್ವೇಗ, ಆರ್ತನಾದ, ಉದ್ವೇಗ, ನಟ-ನಟಿಯರ ಶ್ರದ್ಧಾಂಜಲಿ, ಅಂತಿಮ ಯಾತ್ರೆ.. ಇತ್ಯಾದಿಗಳನ್ನು ನೈಜವಾಗಿ ಚಿತ್ರಿಸಿದಂತೆ ಅನಿಸಿತು. ಆ ಇಡೀ ದೃಶ್ಯಗಳನ್ನು ನಿರ್ದೇಶಕರು ರೀ ಕ್ರಿಯೇಟ್ ಮಾಡಿದ್ದಾರೆ. ಇದನ್ನು ಕಣ್ತುಂಬಿಕೊಳ್ಳುವುದೇ ಒಂದು ವಿಶೇಷ ಅನುಭೂತಿ.
ಇನ್ನು, ಇಡೀ ಸಿನಿಮಾ ತಮಿಳು ಜನರ, ಅದರಲ್ಲೂ ಜಯಲಲಿತಾ ಅವರನ್ನು ಅಭಿಮಾನಿಸುವ, ಅವರನ್ನು ʼಅಮ್ಮʼ ಎಂದು ಕರೆಯುವ, ಜತೆಗೆ, ಅವರಿಗೆ ಎಣೆ ಇಲ್ಲದ ಭಕ್ತಿ ತೋರಿಸುತ್ತಿದ್ದ ಎಐಎಡಿಎಂಕೆ ನಾಯಕರ ಭಾವನೆಗಳನ್ನು ಸಮರ್ಥವಾಗಿ ಕ್ಯಾರಿ ಮಾಡಿದೆ.
ʼತಲೈವಿʼ ಸಿನಿಮಾ ಚಿತ್ರಗಳ ಸ್ಲೈಡ್ ಶೋ
ಮುಖ್ಯವಾಗಿ ಜಯಲಿಲತಾ ಪಾತ್ರ ಅನೇಕ ಮಜಲು, ಶೇಡ್ʼಗಳಲ್ಲಿ ಪ್ರೇಕ್ಷಕನನ್ನು ಸೀಟಿಗೆ ಕಟ್ಟಿಹಾಕಿಬಿಡುತ್ತದೆ. ಬಾಲ್ಯದಲ್ಲಿ, ಯೌವ್ವನದಲ್ಲಿ, ಆ ನಂತರ ನಟಿಯಾಗಿ, ಕೊನೆಗೆ ಎಂಜಿಆರ್ ಹಿರೋಯಿನ್ ಆಗಿ, ಅವರ ನೆರಳಾಗಿ, ಆಪ್ತೆಯಾಗಿ, ಫೈನಲಿ ಎಐಎಡಿಎಂಕೆ ಸಾಮ್ರಾಜ್ಞಿಯಾಗಿ ಮೊತ್ತ ಮೊದಲ ಸಲ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡುವ ದೃಶ್ಯಕ್ಕೇ ಈ ಸಿನಿಮಾ ಮುಗಿದುಹೋಗುತ್ತದೆ. ಅದುವರೆಗೂ ಮುಂದೇನಾಗಬಹುದು? ನಂತರ ಯಾವ ಸೀನ್? ಎಂದು ಕುರ್ಚಿಗೆ ಗಮ್ ಹಾಕಿಕೊಂಡು ಕೂತಂತಿದ್ದವರಿಗೆ, “ಅರೆ.. ಛೇ! ಮುಗೀತಾ” ಎನಿಸಿಬಿಡುತ್ತದೆ. ಆ ಮಟ್ಟಿಗೆ ಚಿತ್ರಕಥೆ ಬಿಗಿಯಾಗಿದೆ. ಕಥೆಯ ಬಗ್ಗೆ ಕೆಲ ತಕರಾರುಗಳಿವೆ, ಅವನ್ನು ಮುಂದೆ ಹೇಳುತ್ತೇನೆ.
ಉಳಿದಂತೆ; ತಮಿಳುನಾಡು ರಾಜಕೀಯದ ಮಗ್ಗುಲಗಳನ್ನು ತೋರಿಸುವುದರ ಜತೆಗೆ, ತಮಿಳು ಚಿತ್ರರಂಗದ ಸಾಂಸ್ಕೃತಿಕ ಮತ್ತು ರಾಜಕೀಯದ ನಂಟನ್ನು ಈ ಸಿನಿಮಾ ಸಮರ್ಥವಾಗಿ ಅಭಿವ್ಯಕ್ತಿಗೊಳಿಸುತ್ತದೆ. ಒಂದೊಂದು ಎಳೆಯನ್ನೂ ತರುವ ಪ್ರಯತ್ನ ಮಾಡಲಾಗಿದೆ.
ತಾರಾಗಣಕ್ಕೆ ಬಂದರೆ, ಜಯಲಿಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆ ಇಷ್ಟವಾಗುತ್ತದೆ. ಪಾತ್ರದಲ್ಲಿ ಹದವಾಗಿ ಬೆರೆತಿರುವ ಬಗೆ, ಕ್ಷಣಕ್ಕೊಂದು ಭಾವನೆ ಅಭಿವ್ಯಕ್ತಗೊಳಿಸುವ ಪರಿ, ಕೆಲವೊಮ್ಮೆ ನಿಜವಾಗಿಯೂ ಜಯಲಲಿತಾ ಅವರೇ ಪರದೆಯ ಬಂದುಬಿಟ್ಟರಾ ಅನಿಸುವಷ್ಟರ ಮಟ್ಟಿಗೆ ಅವರು ನಟಿಸಿದ್ದಾರೆ.
ವಿಷಯ ಅದಲ್ಲ. ಹೆಸರಿಗೆ ಇದು ʼತಲೈವಿʼ ಸಿನಿಮಾ ಆದರೂ ಮಿಂಚಿರುವುದು ಮಾತ್ರ ʼತಲೈವಾʼ. ಎಂಜಿಆರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಒಂದು ಕಾಲದ ಲವರ್ ಬಾಯ್ ಅರವಿಂದ ಸ್ವಾಮಿ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಕಂಗನಾರನ್ನು ಸೈಡು ಹೊಡೆದುಬಿಟ್ಟಿದ್ದಾರೆ. ʼರೋಜಾʼ, ʼಬಾಂಬೆʼ ಚಿತ್ರಗಳಷ್ಟೇ ಅಲ್ಲದೆ, ಕೆಲ ದಿನಗಳ ಹಿಂದೆ ಬಂದ ʼನಾನ್ ಒರುವನ್ʼ ಸಿನಿಮಾದಲ್ಲಿ ವಿಲನ್ʼಗಿರಿ ಮಾಡಿದ್ದ ಅವರು ಇವರೇನಾ ಎಂದು ಬೆಕ್ಕಸ ಬೆರಗು ಮೂಡಿಸುವಂತೆ ಅಭಿನಯಿಸಿದ್ದಾರೆ. ಹಾಗೆ ನೋಡಿದರೆ, ಇದಕ್ಕೆ ʼತಲೈವಾʼ ಎಂದಿದ್ದರೆ ಸರಿ ಹೋಗುತ್ತಿತ್ತು.
ಎಂಜಿಆರ್ ಅವರ ನಟನೆ, ಪರ್ಸನಾಲಿಟಿ, ಮಾತಿನ ಲಯ, ಆಂಗಿಕತೆ, ರಾಜಕೀಯ ಕುಶಲತೆ, ಜಯಲಲಿತಾ ಜತೆಗಿನ ಪಯಣ, ಪ್ರಣಯ.. ಇತ್ಯಾದಿ ದೃಶ್ಯಗಳು ಬಂದಾಗ ಪ್ರತಿ ಫ್ರೇಮಿನಲ್ಲೂ ಅರವಿಂದ ಸ್ವಾಮಿಯೇ ಮುಂದೆ. ಕಥೆಯಲ್ಲಿ ಡಾಮಿನೇಟ್ ಮಾಡಿದರೂ ಅಭಿನಯದಲ್ಲಿ ಕಂಗನಾ ಹಿಂದುಳಿದುಬಿಡುತ್ತಾರೆ.
ಉಳಿದ ಪಾತ್ರಗಳ ಆಯ್ಕೆಯಲ್ಲಿ ಬಹಳಷ್ಟು ಜಾಣ್ಮೆ ಮೆರೆದಿರುವ ನಿರ್ದೇಶಕ ಕೆ.ಎಲ್.ವಿಜಯ್, ಕಣ್ಣಿಗೆ ರಾಚುವಂಥ ಕೆಲ ಎಡವಟ್ಟುಗಳನ್ನು ಮಾಡಿದ್ದಾರೆ. ಜಯಾ ವಿರೋಧಿ ಪಾತ್ರಗಳಿಗೆ ಸಮರ್ಥ ನಟರನ್ನೇ ಆಯ್ಕೆ ಮಾಡಿದ್ದರೂ ಆ ಪಾತ್ರಗಳಿಗೆ ʼಉದ್ದೇಶಪೂರ್ವಕ ಅನ್ಯಾಯʼ ಎಸಗಿದ್ದಾರೆ. ಉದಾಹರಣೆಗೆ; ಕರುಣಾನಿಧಿ ಪಾತ್ರಕ್ಕೆ ಹಿರಿಯ ನಟ ನಾಜಿರ್ ಅದ್ಭುತವಾಗಿ ಸೂಟ್ ಆಗಿದ್ದಾರೆ. ಆದರೆ, ಅವರಿಂದ ಸಂಭಾಷಣೆ ಹೇಳಿಸಿದ ರೀತಿ ಬೇಸರ ತರಿಸುತ್ತದೆ. ಆ ಪಾತ್ರಕ್ಕೆ ʼಪೂರ್ವಗ್ರಹಪೀಡಿತʼ ವ್ಯಂಗ್ಯವನ್ನು ತುರುಕಲಾಗಿದೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪಾತ್ರಗಳಿಗೂ ಅದೇ ಆಗಿದೆ. ಇಂದಿರಾ ಗಾಂಧಿ ಸಮಕ್ಷಮದಲ್ಲಿ ರಾಜ್ಯಸಭೆಯಲ್ಲಿ ಜಯಲಲಿತಾ ಭಾಷಣ ಮಾಡುವ ದೃಶ್ಯದಲ್ಲೂ ಇದೇ ತಪ್ಪನ್ನೇ ಎಸಗಲಾಗಿದೆ. ʼಅಮ್ಮʼ ಅವರನ್ನು ವೈಭವೀಕರಿಸುವ ಭರದಲ್ಲಿ ಉಳಿದ ಪಾತ್ರಗಳಿಗೆ ಚ್ಯುತಿ ತರಲಾಗಿದೆ. ಬೇಕೆಂದೇ ಮಾಡಿದಂತಿದೆ ಇದೆಲ್ಲ ಎಂದು ಯಾರಿಗಾದರೂ ಅನಿಸದೆ ಇರದು. ಈ ಬಗ್ಗೆ ನಿರ್ದೇಶಕರು ಎಚ್ಚರ ವಹಿಸಬೇಕಿತ್ತು.
ಜಯಾ ಅವರ ತಾಯಿ ಸಂಧ್ಯಾ ಪಾತ್ರದಲ್ಲಿ ಭಾಗ್ಯಶ್ರೀ, ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಪಾತ್ರದಲ್ಲಿ ಮಧುಬಾಲಾ, ಗೆಳತಿ ವಿ.ಕೆ.ಶಶಿಕಲಾ ಪಾತ್ರದಲ್ಲಿ ಪೂರ್ಣ, ಇಂದಿರಾ ಗಾಂಧಿ ಪಾತ್ರದಲ್ಲಿ ಪ್ಲೋರಾ ಜಾಕೋಬ್ ಮುಂತಾದವರು ನಟಿಸಿದ್ದಾರಾದರೂ ಅಮ್ಮನ ವೈಭವೀಕರಣದ ಸುಳಿಯಲ್ಲಿ ಇವರಿಗೆ ಸ್ಕೋಪ್ ಸಿಕ್ಕಿಲ್ಲ.
ಉಳಿದಂತೆ, ನಾನು ತಾಂತ್ರಿಕ ಅಂಶಗಳ ಬಗ್ಗೆ ಬರೆಯಲು ಹೋಗಿಲ್ಲ. ಸಂಗೀತಾ, ಕ್ಯಾಮೆರಾ ಇತ್ಯಾದಿಗಳು ಎಲ್ಲೂ ಸೋತಂತೆ ಅನಿಸಲಿಲ್ಲ.
ಕೊನೆಗೆ; ʼತಲೈವಿʼ ಒಂದು ಒಳ್ಳೆಯ ಪ್ರಯತ್ನವೇನೋ ಸರಿ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಇದನ್ನು ಜಯಲಲಿತಾ ಅವರ ಬಯೋಪಿಕ್ ಎಂದು ಹೇಳಲು ಆಗುವುದೇ ಇಲ್ಲ. ಕೇವಲ ಇದೊಂದು ಸಿನಿಮಾ, ಅಷ್ಟೇ. ಏಕೆಂದರೆ, ಜಯಾ ಅವರ ಸಕಾರಾತ್ಮಕ ಅಂಶಗಳನ್ನಷ್ಟೇ ಹೆಕ್ಕಿ ತೆಗೆದು ಕಥೆ ಪೋಣಿಸಲಾಗಿದೆ. ಪ್ರತಿದೃಶ್ಯಕ್ಕೂ ಸಿನಿಮ್ಯಾಟಿಕ್ ಫಿಕ್ಷನ್ ಟಚ್ ಕೊಟ್ಟು, ಅಮ್ಮನನ್ನು ಆಕಾಶದೆತ್ತರದಲ್ಲಿ ನಿಲ್ಲಿಸುವ ಪ್ರಯತ್ನ ಅನಗತ್ಯ ಎಳೆತದಂತಿದೆ. ರಂಜಿನೀಯ ಅಂಶಗಳ ನಡುವೆ ಸತ್ಯಗಳನ್ನು ಮರೆಮಾಚಲಾಗಿದೆ.
ಈ ಹಿಂದೆ ಕೆಲ ಬಯೋಪಿಕ್ʼಗಳನ್ನು ನೋಡಿದ್ದ ನನಗೆ ʼತಲೈವಿʼಯನ್ನು ಒಮ್ಮೆ ನೋಡಬೇಕೆನಿಸಿತ್ತು. ಈಗಲೂ ಅನಿಸುತ್ತಿದೆ, ಒಮ್ಮೆಯಷ್ಟೇ ನೋಡಿದರೆ ಸಾಕೆಂದು.
ಎಚ್.ಬಿ.ದಿನೇಶ್
- ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಶ್ರಾಂತ ಹಿರಿಯ ಅಧಿಕಾರಿ. ಬರವಣಿಗೆ ಮಾತ್ರವಲ್ಲದೆ ರಾಜಕೀಯ, ಕಲೆ, ಸಾಹಿತ್ಯ ಸಿನಿಮಾ, ಚರ್ಚೆ & ಸಂವಾದ ಇತ್ಯಾದಿಗಳಲ್ಲಿ ಆಸಕ್ತರು. ಸರಕಾರಿ ಸೇವೆಗೆ ಸೇರುವ ಮುನ್ನ ಪತ್ರಕರ್ತರೂ ಆಗಿದ್ದವರು.