ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ
ಮಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಸೆಪ್ಟೆಂಬರ್ 13) ನಿಧನರಾಗಿದ್ದಾರೆ.
ತಮ್ಮ ಮನೆಯಲ್ಲಿ ವ್ಯಾಯಾಮ ಮಾಡುತ್ತಿರುವಾಗ ಕುಸಿದು ಬಿದ್ದು ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ನಿಧನ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಆಘಾತ ಉಂಟು ಮಾಡಿದ್ದು, ಪಕ್ಷದ ನಾಯಕರೆಲ್ಲರೂ ಇಲ್ಲಿಗೆ ಧಾವಿಸುತ್ತಿದ್ದಾರೆ.
ಸರಳತೆ, ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅವರು ಯಾವುದೇ ಕಪ್ಪುಚುಕ್ಕೆ ಇಲ್ಲದ ಪ್ರಾಮಾಣಿಕ ನಾಯಕರಾಗಿದ್ದರು. ಹಮ್ಮು ಬಿಮ್ಮು ಇಲ್ಲದೆ ಎಲ್ಲರಲ್ಲೂ ಒಬ್ಬರಾಗಿ ತಮ್ಮ ಜೀವನವನ್ನು ಜನ ಸೇವೆಗೆ ಮೀಸಲಿಟ್ಟಿದ್ದರು.
1941 ಮಾರ್ಚ್ 27ರಂದು ಜನಿಸಿದ್ದ ಆಸ್ಕರ್ ಫರ್ನಾಂಡಿಸ್ ಅವರು, ಕುಟುಂಬದ ಹನ್ನೆರಡು ಮಕ್ಕಳಲ್ಲಿ ಒಬ್ಬರಾಗಿದ್ದರು. ಆಸ್ಕರ್ ಅವರ ತಂದೆ ರೂಕ್ ಫೆರ್ನಾಂಡಿಸ್ ಅವರು ಇಲ್ಲಿನ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಮುಖ್ಯಸ್ಥರಾಗಿದ್ದರಷ್ಟೇ ಅಲ್ಲದೆ ಮಣಿಪಾಲ ತಾಂತ್ರಿಕ ವಿದ್ಯಾಲಯದ ಮೊದಲ ಅಧ್ಯಕ್ಷರಾಗಿದ್ದರು.
ಕಾಲೇಜು ದಿನಗಳಲ್ಲಿಯೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಆಸ್ಕರ್, 1980ರಲ್ಲಿ 7ನೇ ಲೋಕಸಭೆಗೆ ಉಡುಪಿ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 1984, 1989, 1991, 1996ರಲ್ಲಿ ಸತತವಾಗಿ ಇದೇ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ಬಳಿಕ 1998ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಅವರು, 2004ರಲ್ಲಿ ಮರು ಆಯ್ಕೆಗೊಂಡರು. ಡಾ.ಮನಮೋಹನ್ ಸಿಂಗ್ ಅವರ ಯುಪಿಎ- 1 ಸರಕಾರದಲ್ಲಿ 2004-2009ರವರೆಗೆ ಸಾಂಖ್ಯಿಕ ಹಾಗೂ ಯೋಜನಾ ಜಾರಿ. ಅನಿವಾಸಿ ಭಾರತೀಯರ ವ್ಯವಹಾರ ಖಾತೆ, ಯುವಜನ & ಕ್ರೀಡೆ, ಕಾರ್ಮಿಕ, ಉದ್ಯೋಗ ಖಾತೆಗಳ ಸಚಿವರಾಗಿದ್ದರು. ಯುಪಿಎ-2 ನಲ್ಲಿ ಸಾರಿಗೆ, ರಸ್ತೆ ಹಾಗೂ ಹೆದ್ದಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಅಗಲಿದ ಆಜಾತಶತ್ರುವಿಗೆ ಕಂಬನಿ
ರಾಜಕೀಯದಲ್ಲಿ ಆಸ್ಕರ್ ಫರ್ನಾಂಡೀಸ್ ಅವರು ಅಜಾತಶತ್ರುವಾಗಿದ್ದರು. ಅನೇಕ ಗಣ್ಯರು ಅವರ ನಿಧನಕ್ಕೆ ಕಂಬನಿ ಮಿಡಿದ್ದಾರೆ. ರಾಹುಲ್ ಗಾಂಧಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.