ಡಿ.ಜೆ.ನಾಗರಾಜ ರೆಡ್ಡಿ ಬೆಂಬಲಿಗರಲ್ಲಿ ಹೆಚ್ಚಿದ ತಳಮಳ
by Ra Na Gopala Reddy Bagepalli
ಬೆಂಗಳೂರು/ಬಾಗೇಪಲ್ಲಿ: ವರಿಷ್ಠರು ನಂಬಿಕೆ ಇಟ್ಟು ಟಿಕೆಟ್ ಕೊಟ್ಟರೆ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಗೆದ್ದು ತೋರಿಸುವೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರಮೇಶ್ ಗೌಡ ಹೇಳಿದ್ದಾರೆ.
ತಮ್ಮ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿ ತಮಗೆ ಶುಭ ಕೋರಲು ಬಂದಿದ್ದ ಕ್ಷೇತ್ರದ ಜೆಡಿಎಸ್ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು. ನಾನು ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತ. ವಿದ್ಯಾರ್ಥಿ ದೆಸೆಯಿಂದಲೂ ಜನರ ಸೇವೆ ಮಾಡುತ್ತಿದ್ದೇನೆ. ಅವಕಾಶ ನೀಡಿದರೆ ಮುಂದಿನ ವಿಧಾಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು.
ಬಯಲು ಸೀಮೆ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅನೇಕ ಜನೋಪಕಾರಿ ಕೆಲಸಗಳು ಆಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಘೋಷಣೆ ಮಾಡಿದ್ದು ಕುಮಾರಸ್ವಾಮಿ ಅವರೇ. ಇಲ್ಲಿ ಪಕ್ಷಕ್ಕೆ ಉತ್ತಮ ನೆಲೆ ಇದ್ದು, ನಾಯಕರು ಬಯಸಿದರೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಪಕ್ಷ ಕಟ್ಟಲು ಸಿದ್ಧನಿದ್ದೇನೆ ಎಂದು ರಮೇಶ್ ಗೌಡ ಸುಳಿವು ನೀಡಿದರು.
ಬಾಗೇಪಲ್ಲಿಯಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರಲು ನಾನು ಕೆಲಸ ಮಾಡುತ್ತೇನೆ. ಆ ಭಾಗದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ, ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ನಮ್ಮ ಪಕ್ಷದ ಶಕ್ತಿ ಏನು ಎಂಬುದನ್ನು ತೋರಿಸಿ, ನಂತರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬರುತ್ತೇನೆ. ಅದಕ್ಕೆ ಕಾಲ ಕೂಡಿ ಬರಬೇಕಿದೆ. ಎಲ್ಲರೂ ತಾಳ್ಮೆಯಿಂದ ಇರಿ ಎಂದು ತಮ್ಮನ್ನು ಭೇಟಿಯಾದ ಮುಖಂಡರಿಗೆ ರಮೇಶ್ ಗೌಡ ಭರವಸೆ ನೀಡಿದರು.
ಸಂಚಲನ ತಂದ ಹೇಳಿಕೆ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಬಗ್ಗೆ ಸುಳಿವು ನೀಡಿ ಎಂಎಲ್‌ಲ್ಸಿ ರಮೇಶ್ ಗೌಡ ನೀಡಿರುವ ಹೇಳಿಕೆ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ತೀವ್ರ ಕಂಪನ ಉಂಟು ಮಾಡಿದೆ.
ಕೆಲ ದಿನಗಳ ಹಿಂದೆ ಪಕ್ಷದ ವರಿಷ್ಠ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಹಿರಿಯ ಮುಖಂಡ ಡಿ.ಜೆ.ನಾಗರಾಜ ರೆಡ್ಡಿ ಅವರನ್ನು ಮುಂದಿನ ಚುನಾವಣಾ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಆದರೆ, ರೆಡ್ಡಿ ಅವರ ಬಗ್ಗೆ ಆರಂಭದಲ್ಲಿಯೇ ಕೆಲ ಮುಖಂಡರು ಅತೃಪ್ತಿ ವ್ಯಕ್ತಪಡಿಸಿದ್ದು, ತಮ್ಮನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಪಕ್ಷ ಕಟ್ಟುವ ಕೆಲಸ ಮಾಡುತ್ತಿಲ್ಲ ಎಂದು ರಮೇಶ್ ಗೌಡರ ಬಳಿ ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಲ ಮುಖಂಡರು ಮುಂದಿನ ಚುನಾವಣೆಗೆ ಪಕ್ಷದಿಂದ ಕಣಕ್ಕೆ ಇಳಿಯುವಂತೆ ರಮೇಶ್ ಗೌಡರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಅವರು ವರಿಷ್ಠರ ಕಡೆ ಬೆರಳು ತೋರಿಸುತ್ತಿದ್ದಾರೆ. ಹೀಗಾಗಿ ಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.
ಮುಖ್ಯವಾಗಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡರ ಕುಟುಂಬಕ್ಕೆ ರಮೇಶ್ ಗೌಡರು ನಿಕಟವಾಗಿದ್ದು, ಹಾಲಿ ವಿಧಾನ ಪರಿಷತ್ ಸದಸ್ಯರೂ ಹೌದು. ಈ ಹಿನ್ನೆಲೆಯಲ್ಲಿ ಅವರಿಗೇ ಟಿಕೆಟ್ ಸಿಕ್ಕರೂ ಅಚ್ಚರಿ ಇಲ್ಲ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ರೆಡ್ಡಿ (ಬಾಗೇಪಲ್ಲಿ ತಾಲೂಕು), ಜಿಲ್ಲಾ ಉಪಾಧ್ಯಕ್ಷ ವೆಂಕಟರೆಡ್ಡಿ (ಗುಡಿಬಂಡೆ ತಾಲೂಕು), ತಾಲೂಕು ಅಧ್ಯಕ್ಷ ಸೂರ್ಯನಾರಾಯಣ ರೆಡ್ಡಿ, ಕಾರ್ಯಾಧ್ಯಕ್ಷ ಮಹಮ್ಮದ್ ನೂರುಲ್ಲಾ, ‘ಕುಮಾರ ಪಡೆ’ ಜಿಲ್ಲಾಧ್ಯಕ್ಷ ನಾಗರಾಜ, ಗುಡಿಬಂಡೆ ತಾಲೂಕು ಪ್ರಧಾನ ಕಾರ್ಯದರ್ಶಿ ಅಪ್ಸರ್, ಪ್ರಧಾನ ಕಾರ್ಯದರ್ಶಿ ಶೇಖರ್, ಖಜಾಂಚಿ ವೆಂಕಟೇಶ್, ಪಟೇಲ್ ವೆಂಕಟರೆಡ್ಡಿ, ಯುವ ಮುಖಂಡರಾದ ಶಿವಾರೆಡ್ಡಿ, ನಾಗಣ್ಣ, ಲಕ್ಷ್ಮೀಪತಿ ಮತ್ತಿತರರು ಹಾಜರಿದ್ದರು.