ಸರ್ ಎಂವಿ ಅವರಿಗೆ ಗೌರವ ಸಮರ್ಪಣೆ ಮಾಡಿದ ಜಿಲ್ಲಾಡಳಿತ
by M Krishnappa Chikkaballapura
ಚಿಕ್ಕಬಳ್ಳಾಪುರ: ತಾಲೂಕಿನ ಅಂಗಟ್ಟ ಬಳಿ 14.9 ಕೋಟಿ ರೂ. ವೆಚ್ಚದಲ್ಲಿ ಮಾಸ್ಟರ್ ಟ್ರೈನರ್ಸ್ʼಗಳಿಗೆ ತರಬೇತಿ ನೀಡುವ ಸರ್ ಎಂ.ವಿಶ್ವೇಶ್ವರಯ್ಯ ಇಂಟರ್ʼನ್ಯಾಷನಲ್ ಇನ್ಸಿಟ್ಯೂಟ್ ಫಾರ್ ಸೂಪರ್ ಟ್ರೈನರ್ಸ್ ಸಂಸ್ಥೆ ಸ್ಥಾಪಿಸಲಾಗುತ್ತಿದ್ದು, ಇದು ಏಷ್ಯಾದಲ್ಲೇ ಏಕೈಕ ಹಾಗೂ ಮೊದಲ ಕೌಶಲ್ಯ ತರಬೇತಿ ಸಂಸ್ಥೆಯಾಗಲಿದೆ. ಕಟ್ಟಡ ಕಾಮಗಾರಿ ಭರದಿಂದ ಸಾಗುತ್ತಿದ್ದು 2022ಕ್ಕೆ ಲೋಕಾರ್ಪಣೆ ಆಗಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.
ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣಾರ್ಥ ಮುದ್ದೇನಹಳ್ಳಿಯಲ್ಲಿರುವ ಅವರ ಸಮಾಧಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದ ನಂತರ ಅವರು ಮಾತನಾಡಿದರು.
ಈ ತರಬೇತಿ ಸಂಸ್ಥೆ ಆರಂಭವಾದ ನಂತರ ಜಿಲ್ಲೆಯ ಯುವಜನರಿಗೆ ಹೆಚ್ಚು ಅನುಕೂಲವಾಗಲಿದೆ. ಯಾವುದೇ ಉದ್ಯೋಗ ಮಾಡುವವರಿಗೆ ಇಲ್ಲಿ ಜಾಗತಿಕ ಗುಣಮಟ್ಟದ ತರಬೇತಿ ಕೊಡಲಾಗುತ್ತದೆ ಎಂದು ಅವರು ಹೇಳಿದರು.
ಇದಲ್ಲದೆ ಮುದ್ದೇನಹಳ್ಳಿ ಸಮೀಪ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶಾಖೆಯು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದು, ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗಿದೆ ಎಂದರು ಅವರು.
ಮುದ್ದೇನಹಳ್ಳಿಯಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಅಭಿವೃದ್ಧಿ ಹಾಗೂ ಸರ್ ಎಂ.ವಿ ಅವರ ಜನ್ಮಸ್ಥಳದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರ ಕುಟುಂಬಸ್ಥರಿಂದ ಅಭಿಪ್ರಾಯ ಪಡೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಪ್ರಸ್ತುತ ಇಲ್ಲಿನ ಉಸ್ತುವಾರಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವೇ ನೋಡಿಕೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಭಾರತ ಕಂಡ ಅಪ್ರತಿಮ ಸಾಧಕ ಹಾಗೂ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟಕ್ಕೆ ಎತ್ತರಿಸಿದ ಅಗ್ರಗಣ್ಯ ಅಭಿಯಂತರರಾದ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ಭೂಮಿಯಲ್ಲಿ ನಾವೀದ್ದೀವಿ ಅನ್ನುವುದೇ ಹೆಮ್ಮೆಯ ವಿಚಾರ. ಅವರು ನಮ್ಮ ಜಿಲ್ಲೆಯವರೇ ಆಗಿರುವುದು ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಮ್ಮೆಯ ಸಂಗತಿ ಆರ್.ಲತಾ ಅವರು ಅಭಿಪ್ರಾಯಪಟ್ಟರು.
ಸರ್ ಎಂವಿ ಜನಿಸಿದ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಈ ಮಹಾನ್ ಸಾಧಕರ ಜನ್ಮದಿನದ ಸ್ಮರಣಾರ್ಥ ಎಂಜಿನಿಯರ್ಗಳು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಅಭಿಯಂತರರ ದಿನವನ್ನು ಆಚರಿಸಲಾಗುತ್ತಿದೆ. ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಎಲ್ಲಾ ಪರಿಶ್ರಮಿ ಎಂಜಿನಿಯರ್ಗಳಿಗೆ ಅಭಿಯಂತರರ ದಿನದ ಶುಭಾಶಯಗಳನ್ನು ಜಿಲ್ಲಾಧಿಕಾರಿಗಳು ಕೋರಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಸರ್ ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪುಷ್ಪ ನಮನ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲೂಕು ತಹಸಿಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ, ಶಾಲಾ ಮಕ್ಕಳು ಮತ್ತು ಪ್ರವಾಸಿಗರು ಹಾಜರಿದ್ದರು.