ವೇಳಾಪಟ್ಟಿಯಂತೆ ಮಕ್ಕಳಿಗೆ ಲಸಿಕೆಗಳನ್ನು ಕೊಡಿಸಿ ಎಂದ ಡಾ.ವಿಜಯ್ ಕುಮಾರ್
by GS Bharath Gudibande
ಗುಡಿಬಂಡೆ: ಕೊರೋನಾ ಮೊದಲ ಮತ್ತು ಎರಡನೇ ಅಲೆಯ ವೇಳೆ ಸೋಂಕು 18 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚು ಕಾಣಿಕೊಂಡಿತ್ತು. ಈಗ ಮೂರನೇ ಅಲೆಯ ಭೀತಿ ಮಕ್ಕಳಿಗಿರುವ ಹಿನ್ನೆಲೆಯಲ್ಲಿ ಪೋಷಕರು ತಾವೂ ಕೋವಿಡ್ ಲಸಿಕೆ ಪಡೆಯುವುದರ ಜತೆಗೆ ತಮ್ಮ ಮನೆಗಳಲ್ಲಿರುವ ಮಕ್ಕಳಿಗೆ ಕಡ್ಡಾಯವಾಗಿ ಕೊಡಸಲೇಬೇಕಾದ ಇತರೆ ಲಸಿಕೆಗಳನ್ನು ಕೊಡಿಸಬೇಕು ಎಂದು ವೈದ್ಯರು ಹೇಳಿದ್ದಾರೆ.
ಪೋಷಕರು ತಮ್ಮ ಮಕ್ಕಳಿಗೆ 1ರಿಂದ 16 ವರ್ಷದ ವರೆಗೂ ಹಾಕಿಸಬೇಕಾಗಿರುವ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು ಎಂದು ಗುಡಿಬಂಡೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ವೈದ್ಯಾಧಿಕಾರಿ ಡಾ.ವಿಜಯ್ ಕುಮಾರ್ ಅವರು ಕಿವಿಮಾತು ಹೇಳಿದ್ದಾರೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅವರು ಪೋಷಕರು ತಮ್ಮ ಮಕ್ಕಳ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದರು.
1ರಿಂದ 16 ವರ್ಷದ ಮಕ್ಕಳು ಪಡೆಯಬೇಕು ಲಸಿಕೆ
ಮಕ್ಕಳು ಹುಟ್ಟಿನಿಂದ 16 ವರ್ಷದ ವರೆಗೂ ವಿವಿಧ ರೀತಿಯ ಲಸಿಕೆಗಳನ್ನು ಪಡೆಯಬೇಕು, ಅವುಗಳನ್ನು ಕಾಲಕಾಲಕ್ಕೆ ನಿರ್ಲಕ್ಷ್ಯ ಮಾಡದೇ ತೆಗೆದುಕೊಳ್ಳುವುದು ಉತ್ತಮ. ಇವುಗಳಲ್ಲಿ ಒಂದು ತಪ್ಪಿದರೂ ಭವಿಷ್ಯದಲ್ಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಸಮಯಕ್ಕೆ ಸರಿಯಾಗಿ ಲಸಿಕೆ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.
ಗುಡಿಬಂಡೆ ತಾಲೂಕಿನಲ್ಲಿ ಇವರೆಗೂ ಕೊರೋನಾ ಸೋಂಕಿಗೆ ಒಳಗಾದ ಮಕ್ಕಳು ಚೇತರಿಸಿಕೊಂಡಿದ್ದಾರೆ. ಅನಗತ್ಯವಾಗಿ ಭಯಪಡುವುದು ಬೇಡ ಎಂದು ಅವರು ತಿಳಿಸಿದರು.
ಮಕ್ಕಳು ಪಡೆಯಬೇಕಿರುವ ಲಸಿಕೆ
ಮಗು ಹುಟ್ಟಿದ ಕೂಡಲೇ ಬಿಜಿಜಿ, ಹೆಪಟೈಟಿಸ್ ಬಿ, 6 ವಾರಗಳಲ್ಲಿ ಓಪಿವಿ, ರೋಟಾ, ಪೆಂಟಾವಲೆಂಟ್, ನೀಡಬೇಕು, 10 ವಾರಗಳಲ್ಲಿ ಓಪಿವಿ, ರೋಟಾಪೆಂಟಾವಲೆಂಟ್, ದಡಾರ ರೂಬೆಲ್ಲ, ಜೆಇ ಇಂಜೆಕ್ಷನ್ ಸೇರಿ 6-9 ತಿಂಗಳು, ಹೀಗೆ ಹುಟ್ಟಿದ 1 ವರ್ಷದಿಂದ 16 ವರ್ಷದವರೆಗೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಡಾ.ವಿಜಯ ಕುಮಾರ್ ತಿಳಿಸಿದರು.
ಮಕ್ಕಳ ಲಸಿಕೆ ಕಾಲಕಾಲಕ್ಕೆ ತೆಗೆದುಕೊಳ್ಳಬೇಕು. ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಹೋಗಿ ಲಸಿಕೆ ಪಡೆಯುಬೇಕು. ಹೋದರೆ ಕೊರೋನಾ ಸೋಂಕು ತಗಲುತ್ತದೆ ಎಂಬ ಭಯದಿಂದ ಮಕ್ಕಳ ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ. ಮಕ್ಕಳ ಪೋಷಣೆ ಅತ್ಯಂತ ಜವಾಬ್ದಾರಿಯುತ ಕೆಲಸ. ಹುಟ್ಟಿದ ಮಕ್ಕಳಿಗೆ ಲಸಿಕೆ ಹಾಕಿಸುವುದನ್ನು ಮರೆಯಬೇಡಿ.
ಡಾ.ವಿಜಯ್ ಕುಮಾರ್, ಮಕ್ಕಳ ವೈದ್ಯರು, ಗುಡಿಬಂಡೆ