ಸದನದಲ್ಲಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಮಾಜಿ ಸಿಎಂ
ಬೆಂಗಳೂರು: ತಮ್ಮ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ನಡೆದ ಅಕ್ಕಿಭಾಗ್ಯದ ಅಸಲಿ ಕಥೆಯನ್ನು ಸದನದಲ್ಲಿ ಬಿಚ್ಚಿಟ್ಟರು ಹೆಚ್.ಡಿ.ಕುಮಾರಸ್ವಾಮಿ.
“ನನ್ನ ಸರಕಾರ ಬಂದಾಗ ಜನರಿಗೆ ಐದು ಕೆಜಿ ಅಕ್ಕಿಯನ್ನು ನೀಡಲಾಯಿತು. ಇದ್ದಕ್ಕಿದ್ದಂತೆ ಕಾಂಗ್ರೆಸ್ ನಾಯಕರು ದೊಡ್ಡ ಹುಯಿಲೆಬ್ಬಿಸಿದರು. ಐದು ಕೆಜಿ ಬದಲು ಏಳು ಕೆಜಿಯನ್ನೇ ಕೊಡಬೇಕು ಎಂದು ಹಠಕ್ಕೆ ಬಿದ್ದರು. ಆದರೆ, ಹಣಕಾಸು ಲಭ್ಯತೆ ನೋಡಿದರೆ ಕೇವಲ ಐದು ಕೆಜಿ ಅಕ್ಕಿಗೆ ಮಾತ್ರ ಹಣ ತೆಗೆದಿರಿಸಲಾಗಿತ್ತು.”
ವಿಧಾನಸಭೆಯಲ್ಲಿಂದು ನಿಯಮ-69ರ ಅಡಿಯಲ್ಲಿ ಬೆಲೆ ಏರಿಕೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು; “ಉಳಿದ ಎರಡು ಕೆಜಿ ಅಕ್ಕಿಗೆ ಹಣ ತರುವುದು ಎಲ್ಲಿಂದ? ಚುನಾವಣೆಗೆ ಹೋಗುವ ಮುನ್ನ ಸಿದ್ದರಾಮಯ್ಯ ಅವರು ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿ ಐದು ಕೆಜಿ ಅಕ್ಕಿಗಷ್ಟೇ ಹಣ ಮೀಸಲಿಟ್ಟು ಹೋಗಿದ್ದರು. ಸಮ್ಮಿಶ್ರ ಸರಕಾರ ಬಂದಾಗ ಇದೇ ಜನ ಏಳು ಕೆಜಿ ಅಕ್ಕಿ ಕೊಡಬೇಕು ಎಂದು ಬೊಬ್ಬೆ ಹೊಡೆದರು. ಕೇವಲ ಚುನಾವಣೆಯಲ್ಲಿ ಮತ ಪಡೆಯುವ ಉದ್ದೇಶದಿಂದ ಮಾಡಿದ ಕೆಲಸಕ್ಕೆ ಜನ ನಮ್ಮನ್ನು ಟೀಕೆ ಮಾಡುವಂತಾಯಿತು” ಎಂದು ಎಚ್ಡಿಕೆ ಹೇಳಿದರು.
“ಆಗ ನನಗೆ ಎಂಥ ಸಂದಿಗ್ಧತೆ ಎಂದರೆ, ಏಳು ಕೆಜಿ ಅಕ್ಕಿ ಕೊಡಲೇಬೇಕು, ಕೊಡೋಕೆ ದುಡ್ಡಿಲ್ಲ. ನಾವು ಘೋಷಣೆ ಮಾಡಿದ್ದೇವೆ, ನಿಲ್ಸಂಗಿಲ್ಲ ಎನ್ನುವ ಒತ್ತಡ ತಂತ್ರ ಬೇರೆ. ರಾಜ್ಯದ ಜನರಿಗೆ ಈ ಸತ್ಯಸಂಗತಿ ಗೊತ್ತಿಲ್ಲ. ಈಗ ಹೇಳುತ್ತಿದ್ದೇನೆ” ಎಂದು ಅವರು ಅಕ್ಕಿಭಾಗ್ಯದ ಅಸಲಿಯೆತ್ತನ್ನು ಬಯಲು ಮಾಡಿದರು.
ಇದಕ್ಕೆ ಸ್ಪಂದಿಸಿದ ಕಂದಾಯ ಸಚಿವ ಆರ್.ಅಶೋಕ ಅವರು, ಈ ಸತ್ಯ ರಾಜ್ಯದ ಜನರಿಗೆ ಗೊತ್ತಾಗಲಿ. ಇದುವರೆಗೂ ಈ ವಿಷಯ ನಮಗೂ ಗೊತ್ತಿರಲಿಲ್ಲ ಎಂದು ಹೇಳಿದರು.
ಈ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ...