ಬಾಗೇಪಲ್ಲಿಯಲ್ಲಿ ಖತರ್ನಾಕ್ ಹಗರಣ ಬಯಲಿಗೆ; ಬೆಚ್ಚಿಬಿದ್ದ ಬದುಕಿರುವ ರೈತ
by Ra Na Gopala Reddy Bagepalli
ಬಾಗೇಪಲ್ಲಿ: ಜೀವಂತವಾಗಿರುವ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಮಂಜೂರು ಮಾಡಿಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ 30 ಲಕ್ಷ ರೂ. ಬೆಲೆ ಬಾಳುವ ಕೃಷಿ ಜಮೀನನ್ನು ಮತ್ತೊಬ್ಬರಿಗೆ ಪೌತಿಖಾತೆ ಮಾಡಿ ಅಕ್ರಮವಾಗಿ ಪರಭಾರೆ ಮಾಡಿರುವ ಘಟನೆ ತಾಲೂಕಿನ ಯಗವಬಂಡ್ಲಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ವ್ಯಕ್ತಿಯೋರ್ವ ರಿಯಲ್ ಎಸ್ಟೇಟ್ ಏಜೆಂಟರಿಗೆ ಕಡಿಮೆ ದರದಲ್ಲಿ ಜಮೀನು ಕೊಡುವುದಾಗಿ ಹೇಳಿದ್ದಾನೆ. ಅದರಂತೆ ರಿಯಲ್ ಎಸ್ಟೇಟ್ ಏಜೆಂಟರುಗಳು ಕೆಲವರೊಂದಿಗೆ ಜಮೀನು ನೋಡಲು ಬಂದು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ನಿಜವಾದ ಭೂ ಮಾಲೀಕ ನಾಗಪ್ಪ ಎಂಬಾತ ವಿಚಾರಿಸಿದಾಗ ಜಮೀನು ಮಾರಾಟಕ್ಕಿಟ್ಟಿರುವ ವಿಷಯ ತಿಳಿದು ಗಾಬರಿಯಾಗಿದ್ದ. ತಕ್ಷಣವೇ ತಾಲೂಕು ಕಚೇರಿಗೆ ದೌಡಾಯಿಸಿದ ನಾಗಪ್ಪ, ತಮ್ಮ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ.
ಗೂಳೂರು ಕಂದಾಯ ವೃತ್ತದ ಜಿಲಾಜಿರ್ಲ ಗ್ರಾಮದ ಸರ್ವೇ ನಂ.10/ಪಿ25ರಲ್ಲಿ ಇದೇ ಹೋಬಳಿ ಯಗವಬಂಡ್ಲಕೆರೆ ಗ್ರಾಮದ ನಾಗಪ್ಪ ಬಿನ್ ಪೆದ್ದನ್ನ ಹೆಸರಿನಲ್ಲಿ ಮೂರು ಎಕರೆ ಜಮೀನು ಇದೆ.
ಆದರೆ, ರೈತ ನಾಗಪ್ಪ ಜೀವಂತವಾಗಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಮಗನಲ್ಲದ ಬೇರೊಬ್ಬ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿರುವುದು ಕಂದಾಯ ಇಲಾಖೆಯ ಅಧಿಕಾರಿಗಳ ಖತರ್ನಾಕ್ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಹಸೀಲ್ದಾರ್ ಡಿ.ಎ.ದಿವಾಕರ್ ಅವರನ್ನು ನಾಗಪ್ಪ ವಿಚಾರಿಸಿದಾಗ ಅಕ್ರಮ ನಡೆದಿರುವುದು ಗಮನಕ್ಕೆ ಬಂದಿದೆ. ಆದರೆ, ಖಾತೆ ರದ್ದು ಮಾಡುವ ಅಧಿಕಾರ ನನಗಿಲ್ಲ, ಉಪ ವಿಭಾಗಾಧಿಕಾರಿ ಕಚೇರಿಗೆ ದಾಖಲೆ ಸಮೇತ ದೂರು ಸಲ್ಲಿಸಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.