ಪೊಲೀಸ್ ಠಾಣೆಗೆ ಕೆಲ ಮೀಟರ್ ದೂರದಲ್ಲೇ ದರೋಡೆಗೆ ಸ್ಕೆಚ್; ಸಚಿವ ಡಾ.ಕೆ.ಸುಧಾಕರ್ ಹುಟ್ಟೂರು ಪೆರೇಸಂದ್ರದಲ್ಲೇ ದುಷ್ಕೃತ್ಯ
by GS Bharath Gudibande
ಗುಡಿಬಂಡೆ/ಪೆರೇಸಂದ್ರ: ಇಲ್ಲಿನ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಎಟಿಎಂ ಲಾಕ್ ಮುರಿದು ಲಕ್ಷಾಂತರ ರೂಪಾಯಿ ನಗದು ದೋಚಲೆತ್ನಿಸಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೆರೇಸಂದ್ರ ಠಾಣೆ ವ್ಯಾಪ್ತಿಯಲ್ಲಿರುವ ಪೆರೇಸಂದ್ರ-ಚಿಕ್ಕಬಳ್ಳಾಪುರ ಮಾರ್ಗದಲ್ಲಿರುವ ಈ ಎಟಿಎಂ ದೋಚಲು ಖದೀಮರು ವಿಫಲ ಯತ್ನ ನಡೆಸಿದ್ದಾರೆ.
ಇಬ್ಬರು ಮುಸುಕುಧಾರಿಗಳು ರಾಡುಗಳಿಂದ ಎಟಿಎಂ ಹೊಡೆದು ಈ ಕೃತ್ಯ ಎಸಗಿದ್ದು, ಈ ಘಟನೆ ಕಳೆದ ರಾತ್ರಿ ಸುಮಾರು ಒಂದು ಗಂಟೆ ಸುಮಾರಿನಲ್ಲಿ ನಡೆದಿದೆ.
ಸ್ಥಳಕ್ಕೆ ಪೇರೇಸಂದ್ರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿದ್ದಾರೆ. ಇದೇ ಸಾಕಷ್ಟು ಜನ ಸಂಚಾರವಿರುವ ಹಾಗೂ ಪೊಲೀಸ್ ಠಾಣೆಗೆ ಕೆಲವೇ ಮೀಟರ್ ದೂರದಲ್ಲಿರುವ ಈ ಎಟಿಎಂನಲ್ಲಿ ದರೋಡೆ ಯತ್ನ ನಡೆದಿರುವುದು ಜನರಿಗೆ, ಅಕ್ಕಪಕ್ಕದ ಅಂಗಡಿ ಮಾಲೀಕರಿಗೆ ಆತಂಕ ಉಂಟು ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಹುಟ್ಟೂರು ಪೆರೇಸಂದ್ರದ್ಲಲಿ ಪೊಲೀಸ್ ಪಹರೆ, ಭದ್ರತೆ ಬಗ್ಗೆ ಈಗ ಎಲ್ಲರೂ ಮೂಗು ಮುರಿಯುವಂತೆ ಆಗಿದೆ.
ಸುಮಾರು 15ಲಕ್ಕೂ ಹೆಚ್ಚು ಮೊತ್ತ ದರೋಡೆಯಾಗಿದೆ ಎಂದು ಪೆರೇಸಂದ್ರದಲ್ಲಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದು, ಈ ಬಗ್ಗೆ ಪೊಲೀಸರು ಅಥವಾ ಬ್ಯಾಂಕ್ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.