ಬಾಗೇಪಲ್ಲಿಯಲ್ಲಿ ಬಂದ್ ಪೂರ್ವಭಾವಿ ಸಭೆ
by Ra Na Gopala Reddy Bagepalli
ಬಾಗೇಪಲ್ಲಿ: ರೈತ ವಿರೋಧಿ ಕೃಷಿ ಕಾಯ್ದೆಗಳ ಅನುಷ್ಠಾನ ವಿರೋಧಿಸಿ ಭಾರತ್ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27ರಂದು ಭಾರತ್ ಬಂದ್ಗೆ ಕರೆ ನೀಡಿದೆ.
ಇದಕ್ಕೆ ಬೆಂಬಲಿಸಿ ಪ್ರಗತಿಪರ ತಾಲೂಕು ಸಂಘಟನೆಗಳು ಅಂದು ಕರ್ನಾಟಕ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ ಎಂದು ಕರ್ನಾಟಕ ಹಸಿರು ಸೇನೆ ಹಾಗೂ ರೈತ ಸಂಘದ ಅಧ್ಯಕ್ಷ ಲಕ್ಷ್ಮಣ್ ರೆಡ್ಡಿ ಹೇಳಿದರು.
ಇಲ್ಲಿನ ಪರಿವೀಕ್ಷಣಾ ಮಂದಿರ ಆವರಣದಲ್ಲಿ ಭಾನುವಾರ ನಡೆದ ಭಾರತ್ ಬಂದ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರೆಯಲಿದೆ. ರಾಜ್ಯದಲ್ಲಿ ಸೆ.27 ರಂದು ಸಂಪೂರ್ಣ ಬಂದ್ ಆಗಬೇಕು. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಅಂಗಡಿ ಮುಗ್ಗಟ್ಟುಗಳು ಬಂದ್ ಆಗಬೇಕು ಎಂದು ಕರೆ ನೀಡಿದರು.
ಭಾರತ್ ಬಂದ್ ಬೆಂಬಲಿಸಿ ಕರ್ನಾಟಕ ಬಂದ್
ಬಾಗೇಪಲ್ಲಿ ತಾಲೂಕಿನ ಪ್ರಜಾ ಸಂಘರ್ಷ ಸಮಿತಿ, ಜೆಡಿಎಸ್, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಜೀವಿಕ ಸಂಘಟನೆ, ಎಸ್.ಎಫ್.ಐ ಹಾಗೂ ಡಿವೈಎಫ್ಐ ಸಂಘಟನೆಗಳು ಹಾಗೂ ಇತರೆ ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದು, ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಇನ್ನೂ ಕೆಲ ಸಂಘಟನೆಗಳೊಂದಿಗೆ ಚರ್ಚೆ ಮಾಡಲು ಸೆ.23ರಂದು ಸಭೆಯನ್ನು ಮತ್ತೆ ಕರೆಯಲಾಗಿದೆ. ಇತರೆ ಸಂಘ ಸಂಸ್ಥೆಗಳ ಅವರೂ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲಾ ಜಿಲ್ಲೆ, ತಾಲೂಕು, ಹೋಬಳಿ ಕೇಂದ್ರಗಳಲ್ಲೂ ಬಂದ್ ಯಶಸ್ವಿಯಾಗಲು ಎಲ್ಲರೂ ಸಹಕಾರ ನಿಡಬೇಕು. ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಪಿ.ಎಸ್.ಎಸ್ ಮುಖಂಡ ಚೆನ್ನರಾಯಪ್ಪ,ಗೋಪಾಲ ಕೃಷ್ಣ, ಜೆ.ಡಿ.ಎಸ್ ಮುಖಂಡ ಮಹಮ್ಮದ್ ನೂರುಲ್ಲಾ, ಸೂರ್ಯನಾರಾಯಣ, ತಾಲೂಕು ಕರವೇ ಹರೀಶ್, ದಲಿತ ಸಂಘರ್ಷ ಸಮಿತಿ ಮೂರ್ತಿ, ಜೀವಿಕ ಸಂಘಟನೆ ಮುಖಂಡ ಆಂಜನಪ್ಪ ಚೌಡಯ್ಯ, ಎಸ್.ಎಫ್.ಐ ಮುಖಂಡ ಸತೀಶ್, ಸಿ.ಉಮಾ, ವೆಂಕಟರಾಮಯ್ಯ, ಟಿ.ರಘುನಾಥ್ ರೆಡ್ಡಿ, ಈಶ್ವರ ರೆಡ್ಡಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.