ತಲೆಕೆಡಿಸಿಕೊಳ್ಳುತ್ತಿದೆ ಬಿಜೆಪಿ!
ಬೆಂಗಳೂರು: ಕೆಲ ಬಿಜೆಪಿ ಸಚಿವರು, ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ನೀಡಿರುವ ಹೇಳಿಕೆ ಆಡಳಿತಾರೂಢ ಬಿಜೆಪಿಯಲ್ಲಿ ತಳಮಳ ಉಂಟು ಮಾಡಿದೆ.
ಒಂದೆಡೆ ದಾವಣಗೆರೆಯಲ್ಲಿ ಕಾರ್ಯಕಾರಿಣಿ ನಡೆಯುತ್ತಿದ್ದ ಸಂದರ್ಭದಲ್ಲೇ ಸ್ಫೋಟಕ ಹೇಳಿಕೆ ನೀಡಿದ ಡಿಕೆಶಿ, ಕಮಲ ಪಾಳೆಯ ತಲ್ಲಣಿಸುವಂತೆ ಮಾಡಿದರಲ್ಲದೆ, ಯಾರು ಯಾರು ಸಂಪರ್ಕದಲ್ಲಿದ್ದಾರೆ ಎಂಬುದನ್ನು ಬಿಜೆಪಿ ಒಳಗೊಳಗೇ ಪರಿಶೀಲನೆ ನಡೆಸುತ್ತಿದೆ.
ಬಿಜೆಪಿ ಸಚಿವರೊಬ್ಬರು ಸೇರಿ ಕೆಲ ಶಾಸಕರು ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ವಿ.ಎಸ್.ಉಗ್ರಪ್ಪ ಅವರ ಸಂಪರ್ಕದಲ್ಲಿದ್ದಾರೆ ಎಂದು ಡಿಕೆಶಿ ಹೇಳಿರುವುದು, ನಿನ್ನೆಯಷ್ಟೇ ಕಾರ್ಯಕಾರಿಣಿ ಸಭೆ ಮುಗಿಸಿಕೊಂಡ ಬಿಜೆಪಿಗೆ ಇರಿಸುಮುರಿಸು ಉಂಟು ಮಾಡಿದ್ದು, ಅವರೆಲ್ಲ ಯಾರಿರಬಹುದು? ಎಂದು ಒಳಗೊಳಗೇ ಗಮನಿಸುತ್ತಿದೆ ಎಂದು ಗೊತ್ತಾಗಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಆಪರೇಷನ್ ಕಮಲದ ಮೂಲಕ ಬಿಜೆಪಿ ತೆಕ್ಕೆಗೆ ಜಾರಿದ್ದವರಲ್ಲಿ ಕೆಲವರು ಹಾಗೂ ಯಡಿಯೂರಪ್ಪ, ಬಸರಾಜ ಬೊಮ್ಮಾಯಿ ಸಂಪಟದಲ್ಲಿ ಸ್ಥಾನ ವಂಚಿತರಲ್ಲಿ ಕೆಲವರು ಡಿಕೆಶಿ ಜತೆ ಟಚ್‌ನಲ್ಲಿ ಇರಬಹುದು ಎಂಬ ಮಾಹಿತಿ ಸಿಕ್ಕಿದೆ.
ಮುಳಬಾಗಿಲಿನ ಎಚ್.ನಾಗೇಶ್ ಹಾಗೂ ರಾಣೆಬೆನ್ನೂರಿನ ಆರ್.ಶಂಕರ್ ಅವರಿಬ್ಬರೂ ಸಚಿವ ಸ್ಥಾನ ಸಿಗದ ಕಾರಣಕ್ಕೆ ಬೇಸರಗೊಂಡಿದ್ದಾರೆ ಎನ್ನಲಾಗಿದ್ದು, ಅವರಿಬ್ಬರೂ ಉಗ್ರಪ್ಪ ಟಚ್ʼನಲ್ಲಿದ್ದಾರೆಂದು ಹೇಳಲಾಗಿದೆ.
ಜತೆಗೆ, ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಮೇಲೆ ಅವರ ಸಂಪುಟ ಸೇರಲು ಹರಸಾಹಸ ನಡೆಸಿ ಕೊನೆಗೂ ಸಚಿವ ಸ್ಥಾನ ಗಿಟ್ಟಿಸಿದ್ದ ಕೆಲ ವಲಸಿಗರು ಕಾಂಗ್ರೆಸ್ ಸಂಪರ್ಕದಲ್ಲಿ ಇರಬಹುದಾ? ಎಂಬ ಅನುಮಾನವೂ ಬಿಜೆಪಿ ನಾಯಕರನ್ನು ಕಾಡುತ್ತಿದೆ.
ಇದೆಲ್ಲ ಹೀಗಿದ್ದರೆ, ಕಾಂಗ್ರೆಸ್ ಪಕ್ಷದ ಬಗ್ಗೆ ನಾವು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು. ಹಾನಗಲ್, ಸಿಂಧಗಿ ಚುನಾವಣೆ ಸುಲಭವಲ್ಲ ಎಂದು ನಿನ್ನೆ ದಾವಣಗೆರೆಯಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಸ್ವಪಕ್ಷೀಯರಿಗೆ ಎಚ್ಚರಿಕೆ ನೀಡಿದ್ದರು.