ಸಾಹಿತಿ ದೊಡ್ಡರಂಗೇಗೌಡ, ಮೈಸೂರಿನ ಲೀಲಾವತಿ ನೇತೃತ್ವದಲ್ಲಿ ಸಮಿತಿ
ಬೆಂಗಳೂರು: ನಾಡಗೀತೆ ಹಾಡುವ ರಾಗ ಸಂಯೋಜನೆ ಹಾಗೂ ಎಷ್ಟು ಸಮಯ ನಿಗದಿಪಡಿಸಬೇಕು ಎಂಬುದರ ಬಗ್ಗೆ ಅಕ್ಟೋಬರ್ 2ರ ಮಹಾತ್ಮಗಾಂಧಿ ಜಯಂತಿಯೊಳಗೆ ನಿರ್ಧಾರ ಮಾಡಲಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ವಿಧಾನಸಭೆಗೆ ತಿಳಿಸಿದರು.
ಶೂನ್ಯವೇಳೆಯಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಸಾಹಿತಿ ದೊಡ್ಡರಂಗೇಗೌಡ ಹಾಗೂ ಮೈಸೂರಿನ ಲೀಲಾವತಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈಗಾಗಲೇ ಒಂದು ಬಾರಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ ಎಂದರು ಸಚಿವರು.
ಈ ಸಮಿತಿಯೂ 15 ದಿನದೊಳಗೆ ಸರ್ಕಾರಕ್ಕೆ ವರದಿ ನೀಡುವ ಸಾಧ್ಯತೆ ಇದೆ. ಅಕ್ಟೋಬರ್ 2ರೊಳಗೆ ಸರಕಾರ ನಾಡಗೀತೆಯ ರಾಗ ಸಂಯೋಜನೆ ಮತ್ತು ಎಷ್ಟು ಸಮಯದೊಳಗೆ ಹಾಡಬೇಕು ಎಂಬ ನಿರ್ಧಾರವನ್ನು ಪ್ರಕಟಿಸುತ್ತದೆ ಎಂದು ಅವರು ಸದನ್ಕಕೆ ತಿಳಿಸಿದರು.
ಈ ಹಿಂದೆ ಹಲವು ಬಾರಿ ಚರ್ಚೆಯಾಗಿದ್ದರೂ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಸರಕಾರ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು ಅವರು.