ಬಾಗೇಪಲ್ಲಿಯಲ್ಲಿ ಸಿರಿಧಾನ್ಯ ಮೇಳ
by Ra Na Gopala Reddy Bagepalli
ಬಾಗೇಪಲ್ಲಿ: ಅಲ್ಲಿ ಅಕ್ಕಿಯ ಗಂಧ ಗಾಳಿಯಿಲ್ಲ. ಗೋಧಿಯ ಬಳಕೆ ಇಲ್ಲ. ಮೈದಾಹಿಟ್ಟು, ಕಡಲೆ ಹಿಟ್ಟುಗಳ ಅಬ್ಬರವೇ ಇಲ್ಲ. ಹೆಸರು, ಬಟಾಣಿ, ಹುರುಳಿ ಇತ್ಯಾದಿ ಬಳಕೆಯೇ ಇಲ್ಲ. ಆದರೂ ಅಲ್ಲಿ ದೋಸೆ ಇತ್ತು, ಇಡ್ಲಿ ಇತ್ತು, ಚಕ್ಕುಲಿ, ಕೋಡುಬಳೆ, ಒಬ್ಬಟ್ಟು ಇದೆ. ಹಲ್ವಾ, ಕಷಾಯ, ಉಂಡೆ ಎಲ್ಲವೂ ಇದೆ!
ಜನ ಸಾಲುಗಟ್ಟಿ ಬಂದು ಖರೀದಿ ಮಾಡಿದರು. ಸವಿಯುಂಡು ಬಾಯಿ ಚಪ್ಪರಿಸಿದರು. ಮೂಲ ವಸ್ತುಗಳನ್ನು ಖರೀದಿಸಿ ಮನೆಗೂ ಒಯ್ದರು. ಇದೆಲ್ಲ ನಡೆದಿದ್ದು ಬಾಗೇಪಲ್ಲಿ ತಾಲೂಕು ಪಾತಪಾಳ್ಯ ಹೋಬಳಿಯ ಗುಟ್ಟುಮೀದಪಲ್ಲಿಯಲ್ಲಿ.
ಬಾಗೇಪಲ್ಲಿ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ.ಸಿ.ಟ್ರಸ್ಟ್ ವತಿಯಿಂದ ಸಿರಿಧಾನ್ಯ ಮೇಳವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಜ್ಞಾನ ವಿಕಾಸ್ ಕಾರ್ಯಕ್ರಮದಡಿಯಲ್ಲಿ ಸಿರಿಧಾನ್ಯಗಳ ಮೇಳವನ್ನು ಯೋಜನಾಧಿಕಾರಿ ಪಿ.ಜಿ.ಗಿರೀಶ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ; ಇಂದಿನ ಆಧುನಿಕ ಆಹಾರ ಪದ್ಧತಿಗಳಿಗೆ ಒಗ್ಗಿಕೊಂಡಿರುವ ಜನರಿಗೆ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗಿ ಕಾಡುತ್ತಿವೆ. ಪ್ರತಿಯೊಬ್ಬರ ರೋಗ್ಯಕ್ಕೆ ರಾಮಬಾಣವಾಗಿರುವ ಸಿರಿಧಾನ್ಯಗಳಾದ ನವಣೆ, ಹಾರಕ, ಊದಲು, ಸಾಮೆ, ಕೊರಲೆ, ಬರಗು, ಜೋಳ, ರಾಗಿ, ಸಜ್ಜೆ ಇವುಗಳಲ್ಲಿ ಹೆಚ್ಚಾಗಿ ನಾರಿನಂಶಗಳು, ಖನಿಜಾಂಶಗಳು, ವಿಟಮಿನ್ಗಳಿರುವ ಕಾರಣ ಆರೋಗ್ಯಕ್ಕೆ ಉತ್ತಮ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾತಪಾಳ್ಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಂ.ವೆಂಕಟರಾಮರೆಡ್ಡಿ, ಆರೋಗ್ಯ ಸಹಾಯಕಿ ನಾಗಮಣಿ ಅಂಗನವಾಡಿ ರಮಾದೇವಿ, ಆಶಾ ಕಾರ್ಯಕರ್ತೆ ಪಿ.ಆರ್.ಲಕ್ಷ್ಮೀ ವಲಯದ ಮೇಲ್ವಿಚಾರಕಿ ಸೀಮಾಜ್ಞಾನ ವಿಕಾಸ್ ಸಮನ್ವಯ ಅಧಿಕಾರಿ ಕೆ.ಆರ್.ಮಂಜುಳಾ, ಸೇವಾ ಪ್ರತಿನಿಧಿ ಮಂಜುಳಾ ಸೇರಿ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.