ರಕ್ತದಾನ ಸಪ್ತಾಹದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಗುಡಿಬಂಡೆ ಪ್ರಥಮ; 46 ಯೂನಿಟ್ ರಕ್ತ ಸಂಗ್ರಹ
By GS Bharath Gudibande
ಗುಡಿಬಂಡೆ: ತಾಲೂಕಿನ ಯುವಜನತೆ ಹೆಚ್ಚಾಗಿ ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸಬಹುದು. ಹಾಗಾಗಿ ಎಲ್ಲರೂ ರಕ್ತದಾನ ಮಾಡಿ ಮಾನವೀಯತೆ ಮೆರೆಯಬೇಕು ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಆರೋಗ್ಯ ಇಲಾಖೆ, ಕಾರ್ಯನಿರತ ಪತ್ರಕರ್ತ ಸಂಘ, ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ಶಿಬಿರದಲ್ಲಿ ರಕ್ತದಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮಾಂತರ ಭಾಗದ ಯುವ ಜನತೆಯು ಯಾವುದೇ ತಪ್ಪು ಕಲ್ಪನೆಗಳಿಗೆ ಒಳಗಾಗದೆ ರಕ್ತದಾನ ಮಾಡಲು ಮುಂದಾಗಬೇಕು ಆ ಮೂಲಕ ಗರ್ಭಿಣಿ ಮತ್ತು ರಕ್ತ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ನೆರವಾಗಬೇಕೆಂದರು. ನಾಗರಿಕರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುತ್ತಿರುವ ಕೊರೋನ ಆರೋಗ್ಯ ಸೇವಕರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆಗಳನ್ನು ತಿಳಿಸಿದರು.
ಶಿಬಿರದಲ್ಲಿ ಡಾ.ವಿಜಯಲಕ್ಷ್ಮಿ ಮಾತನಾಡಿ, ರಕ್ತದಾನಿಗಳಿಗೆ ಶುಭ ಹಾರೈಸಿ, ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಶಿಬಿರದಲ್ಲಿ ತೊಡಗಿಸಿಕೊಂಡಿದ್ದು ಪ್ರತಿಯೊಬ್ಬ ರಕ್ತದಾನಿಯೂ ನಿಜವಾದ ಹೀರೋ ಎಂದು, ರಕ್ತದಾನ ಮಾಡಿ ಮಾನವೀಯತೆ ಮೆರೆದು ಇನ್ನೊಂದು ಜೀವವನ್ನು ಉಳಿಸುವುದು ಅತ್ಯಂತ ಪುಣ್ಯಕಾರ್ಯವೆಂದರು.
ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಜಿ.ವಿ ವಿಶ್ವನಾಥ್ ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿ ರಕ್ತದ ಸಮಸ್ಯೆಯಿಂದ ತನ್ನ ಜೀವನವನ್ನು ಕಳೆದುಕೊಳ್ಳಬಾರದೆಂಬ ಸದುದ್ದೇಶದಿಂದ ಭಾರತೀಯ ರೆಡ್ ಕ್ರಾಸ್ ಗುಡಿಬಂಡೆ ತಾಲ್ಲೂಕು ಶಾಖೆಯ ಎಲ್ಲ ಪದಾಧಿಕಾರಿಗಳು , ಕೊರೋನಾ ಸೈನಿಕರು ರಕ್ತದಾನ ಶಿಬಿರಗಳನ್ನು ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಮ್ಮಿಕೊಂಡು ನಾಗರಿಕರಿಗೆ ಸಹಾಯಹಸ್ತ ನೀಡಿ ಸಾಕಷ್ಟು ರಕ್ತದ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೆ ನೆರವಾಗಿದ್ದು ಇತರ ಯುವಜನತೆಗೆ ಮಾದರಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಂಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಕ್ಷಯ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ ವಿ.ಕೃಷ್ಣಪ್ಪ, ಕಾಲೇಜಿನ ಪ್ರೊ ವೆಂಕಟರಾಮು, ಸುಮಲತ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಕೆ.ಎನ್.ನವೀನ್ ಕುಮಾರ್, ನಂಜುಂಡಪ್ಪ, ನಯಾಜ್, ಸುಲೇಮಾನ್ ಖಾನ್, ಆದಿನಾರಾಯಣಪ್ಪ ಜಯಕರ್ನಾಟಕ ಸಂಘಟನೆ ಜಿಲ್ಲಾ ಯುವಾಧ್ಯಕ್ಷ ನವೀನ್, ರೈತ ಸಂಘದ ಅಧ್ಯಕ್ಷರ ಮುರಳಿ, ಪತ್ರಕರ್ತ ಸಂಘದ ಅಧ್ಯಕ್ಷರ ಬಿ.ಮಂಜುನಾಥ್ ಸೇರಿದಂತೆ ಹಲವು ಭಾಗವಹಿಸಿದ್ದರು.